ಖರ್ಗೆ ವಿರುದ್ಧ ವಿವಾದಾತ್ಮಕ ಹೇಳಿಕೆ, ಆರಗ ಜ್ಞಾನೇಂದ್ರ ಕ್ಷಮೆ

183

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಜೆಪಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು, ಖರ್ಗೆ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಅರಣ್ಯವೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗಿರುವುದು ನಮ್ಮ ದುರಾದೃಷ್ಟ. ಬೀದರ ಮೂಲದ ಅವರಿಗೆ ಮರ, ಗಿಡ ಅಂದರೆ ಏನು? ನೆರಳು ಅಂದರೆ ಏನು ಅಂತಾ ಗೊತ್ತಿಲ್ಲ. ಕಸ್ತೂರಿ ರಂಗನ್ ಪರಿಸರ ತಜ್ಞ ಅಲ್ಲ ಎಂದಿದ್ದರು.

ಮಲೆನಾಡಿನ ಬದುಕು, ಪಶ್ಚಿಮ ಘಟ್ಟದವರ ಸಮಸ್ಯೆ ಬಗ್ಗೆ ಗೊತ್ತಿಲ್ಲ. ಆ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆ ಅವರನ್ನು ನೋಡಿದರೇ ಅಲ್ಲಿನ ಸ್ಥಿತಿ ಗೊತ್ತಾಗುತ್ತೆ. ತಲೆ ಕೂದಲು ಮುಚ್ಚಿಕೊಂಡಿರುವುದರಿಂದ ಪಾಪ ಉಳಿದಿದ್ದಾರೆ. ಅದೇ ಅವರ ನೆರಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಕಾಂಗ್ರೆಸ್ ನಾಯಕರು ಖಂಡಿಸಿ, ಖರ್ಗೆ ಅವರನ್ನು ಸೈದ್ದಾಂತಿಕವಾಗಿ ಎದುರಿಸಲಾಗದೆ ಈ ರೀತಿಯ ಕೀಳು ಮಾತುಗಳನ್ನಾಡುತ್ತಿದ್ದಾರೆ ಎಂದು ಮಾಜಿ ಎಂಎಲ್ಸಿ, ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ ಬಾಬು ಕಿಡಿ ಕಾರಿದ್ದಾರೆ.

ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಆರಗ ಜ್ಞಾನೇಂದ್ರ ಅವರು ಕ್ಷಮೆ ಕೇಳಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರಯವರನ್ನು ಟೀಕಿಸುವ ಭರದಲ್ಲಿ ಬೇರೆಯವರ ಹೆಸರು ತಪ್ಪಾಗಿ ಉಚ್ಚರಿಸಿದ್ದು, ಇದಕ್ಕಾಗಿ ವಿಷಾದಿಸುತ್ತೇನೆ. ರಾಷ್ಟ್ರ ರಾಜಕಾರಣದಲ್ಲಿ ಉಲ್ಲೇಖಾರ್ಹ ಸಾಧನೆ ಮಾಡಿರುವ ಶ್ರೀಯುತ ಖರ್ಗೆ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ನನ್ನ ಬಗ್ಗೆ ಅನ್ಯಥಾ ಭಾವಿಸಬಾರದು ಎಂದು ವಿನಂತಿಸುತ್ತೇನೆ ಅಂತಾ ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!