Search

ಕಾಂಗ್ರೆಸ್ ಮಾಂಗಲ್ಯಸರ ಕಿತ್ತುಕೊಳ್ಳುತ್ತೆ ಅಂತಾನೆ, ನಾಚಿಕೆಯಾಗಬೇಕು: ಖರ್ಗೆ

66

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಜಿಲ್ಲೆಯ ಅಫಜಲಪುರದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ ಕೈ ನಾಯಕರು ಕಿಡಿ ಕಾರಿದರು. ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಜ್ಯದಲ್ಲಿ ನಾವು ಕೊಟ್ಟಂತೆ ಕೇಂದ್ರದಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ. ಕಾಯ್ದೆ 371ಜೆಯಿಂದ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸಿದ್ದರಾಮಯ್ಯನವರ ಕಾಲದಲ್ಲಿ ಸಮಿತಿ ಮಾಡಿ ಇದನ್ನು ಮಾಡಿದ್ದು ದೊಡ್ಡ ಸಾಧನೆ ಎಂದರು.

ಮೋದಿ ಬರ್ತಾನೆ ಹೋಗ್ತಾನೆ. ನಾವಂತೂ ನಮ್ಮ ಕೈಲಾದಷ್ಟು ನಿಮ್ಮ ಕೆಲಸ ಮಾಡತಕ್ಕಂತವರು. ಬಿಜೆಪಿಗೆ ನೀವು ಮುಖಭಂಗ ಮಾಡಬೇಕು. ಇದು ಮೋದಿಗೂ ಗೊತ್ತಾಗಲಿ. ಕರ್ನಾಟಕಕ್ಕೆ ಮೋದಿ ಕೊಡುಗೆ ಏನೂ ಇಲ್ಲ. ನಾವು ಮಾಡಿದ ಟ್ರೇನ್ ಹಳಿ ಮೇಲೆ ಎರಡು ಟ್ರೇನ್ ಓಡಿ ಹಸಿರು ಝಂಡಾ ತೋರಿಸುತ್ತಾರೆ. 11 ತಿಂಗಳಲ್ಲಿ ನಾವು 37 ಟ್ರೇನ್ ಬಿಟ್ಟಿದ್ದೇವೆ. ಈ ದೇಶದಲ್ಲಿ ಇಬ್ಬರು ಮಾರವರಿದ್ದಾರೆ. ಇಬ್ಬರು ಖರೀದಿಸುವವರಿದ್ದಾರೆ. ಅವರಿಗಾಗಿ ಮೋದಿ ಬದುಕುತ್ತಿದ್ದಾರೆ. ನಿಮಗಾಗಿ ಇಲ್ಲ. ಕಾಂಗ್ರೆಸ್ ಬಂದ್ರೆ ನಿಮ್ಮ ಮಂಗಳಸೂತ್ರ ಕಿತ್ತುಕೊಳ್ತಾರೆ ಅಂತಾ ಹೇಳ್ತಾನೆ. ನಾಚಿಕೆಯಾಬೇಕು. 50 ವರ್ಷ ನಾವು ದೇಶ ಆಳಿದ್ದೇವೆ. ಯಾರಿಂದ ಕಿತ್ತು ಯಾರಿಗೆ ಕೊಟ್ಟಿದ್ದೇವೆ ತೋರಿಸಿ. ಬಡವರಿಗೆ ಉಪಕಾರ ಮಾಡಿದ್ದೇವೆ. ತಾಳಿ ಕಿತ್ತಕೊಳ್ಳೋ ಕೆಲಸ ಮಾಡಿಲ್ಲ. ರಾಜೀವ್ ಗಾಂಧಿ ಕೊಲೆಯಾದ್ಮೇಲೆ ಇಲ್ಲಿಯ ತನಕ ಗಾಂಧಿ ಮನೆಯಲ್ಲಿ ಒಬ್ಬರು ಮಂತ್ರಿಯಾಗಿಲ್ಲ. ಪ್ರಧಾನಿಯಾಗಿಲ್ಲ. ಆದರೂ ಮುಂಜಾನೆಯಿಂದ ಸಂಜಿತನಕ ಮೋದಿ ಗಾಂಧಿ ಕುಟುಂಬ ಅಂತಾನೆಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಗುಲಬುರ್ಗಾದಲ್ಲಿ ರಾಧಾಕೃಷ್ಣ ಅವರು ನೂರಕ್ಕೆ ನೂರರಷ್ಟು ಗೆದ್ದು ಲೋಕಸಭೆಗೆ ಹೋಗುತ್ತಾರೆ ಎನ್ನುವ ಮಾಹಿತಿ ಇದೆ. ಬಡವರ, ದೀನ ದಲಿತರು, ರೈತರು, ಮಹಿಳೆಯರ ಪರವಾಗಿ ಮಲ್ಲಿಕಾರ್ಜುನ್ ಖರ್ಗೆ ಸುದೀರ್ಘವಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದ ಧ್ವನಿಯಾಗಿ ಲೋಕಸಭೆ, ರಾಜ್ಯಸಭೆಯಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಮೋದಿ ಹೇಳಿದಂತೆ 15 ಲಕ್ಷ ಹಾಕಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದರು. ಇಲ್ಲಿಯವರೆಗೂ 20 ಲಕ್ಷ ಉದ್ಯೋಗನೂ ಸೃಷ್ಟಿ ಮಾಡಲಿಲ್ಲ. ಯುವಕರು ಉದ್ಯೋಗ ಕೇಳಿದರೆ, ಪ್ರಧಾನಿ ಎನ್ನುವುದು ಮರೆತು ಬೇಜವಾಬ್ದಾರಿಯಿಂದ ಪಕೋಡಾ ಮಾರಕ್ಕೆ ಹೋಗಿ ಎಂದರು. ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದರೂ 10 ವರ್ಷದಲ್ಲಿ ಖರ್ಚು ಹೆಚ್ಚಾಯ್ತು. ಮುಂದಿನ ವರ್ಷದ ಬಜೆಟ್ ನಲ್ಲಿ ಗ್ಯಾರಂಟಿಗಾಗಿ 52 ಸಾವಿರದ 9 ಕೋಟಿ ಇಟ್ಟಿದ್ದೇವೆ. ಬಿಜೆಪಿಗರು ಸುಳ್ಳುಗಾರರು ಎನ್ನುವುದು ಗೊತ್ತಾಗಿದೆ. ಸ್ವಾತಂತ್ರ್ಯ ನಂತರ ಪ್ರಧಾನಿಯಾದವರು ಯಾರಾದರೂ ಅತಿ ಹೆಚ್ಚು ಸುಳ್ಳು ಹೇಳಿದವರು ಇದ್ದರೆ ಅದು ಮೋದಿ ಎಂದು ಕಿಡಿ ಕಾರಿದರು.

ಈ ವೇಳೆ ಸಚಿವರು, ಮಾಜಿ ಸಚಿವರು, ಮುಖಂಡರು ಮಾತನಾಡಿದರು. ಶರಣ ಪ್ರಕಾಶ ಪಾಟೀಲ, ಎಂ.ಐ ಪಾಟೀಲ, ಬಾಬುರಾವ್ ಚಿಂಚನಸೂರು, ಎಚ್.ಎಂ ರೇವಣ್ಣ, ಅಜಯ್ ಸಿಂಗ್, ಯಶವಂತರಾಯಗೌಡ, ಖನೀಜಾ ಫಾತೀಮಾ, ತಿಪ್ಪಣ್ಣ ಕಮಕನೂರ, ಮಾಲೀಕಯ್ಯ ಗುತ್ತೇದಾರ, ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕರಿದ್ದರು.




Leave a Reply

Your email address will not be published. Required fields are marked *

error: Content is protected !!