ಕುಡಿಯುವ ಉದ್ದೇಶಕ್ಕಾಗಿ 1.8 ಟಿಎಂಸಿ ನೀರು ಬಿಡುಗಡೆ: ಡಿಸಿ ಟಿ.ಭೂಬಾಲನ್

122

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಆಲಮಟ್ಟಿ ಜಲಾಶಯದಿಂದ ಫೆ.19ರಿಂದ ಮಾರ್ಚ 10ರವರೆಗೆ ಮುಳವಾಡ ಏತ ನೀರಾವರಿಯ  ಹಾಗೂ ಚಿಮ್ಮಲಗಿ ಏತ ನೀರಾವರಿ ಕಾಲುವೆ ವ್ಯಾಪ್ತಿಯ 96 ಕೆರೆಗೆಳಿಗೆ 1.8 ಟಿಎಂಸಿ ನೀರು ಕುಡಿಯುವ ಉದ್ಧೇಶಕ್ಕಾಗಿ ಹರಿಸಲಾಗುತ್ತಿದ್ದು, ಕೊನೆಯಂಚಿನವರೆಗೆ ಸಮರ್ಪಕವಾಗಿ ನೀರು ಹರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ನೀರು ನಿರ್ವಹಣೆ ಸಭೆಯಲ್ಲಿ ಮಾತನಾಡಿದ ಅವರು, ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದ್ದು, ಅನ್ಯ ಉದೇಶಕ್ಕಾಗಿ ಬಳಸದೇ ಇರುವಂತೆ ನೋಡಿಕೊಂಡು ಕಾಲುವೆ ಜಾಲದ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಪೂರ್ಣ ಭರ್ತಿಗೆ ಕ್ರಮವಹಿಸಬೇಕು ಎಂದು ಹೇಳಿದರು.

ಕಾಲುವೆಯ ಮಾರ್ಗಗಳ ನಿರ್ವಹಣೆಯನ್ನು ಆಯಾ ತಾಲೂಕಿನ ತಹಶೀಲ್ದಾರ್ ಗಳು ತಂಡಗಳನ್ನು ರಚಿಸಿಕೊಂಡು ನಿಗಾವಹಿಸಬೇಕು. ಪಾಳಿಯಲ್ಲಿ ಸಿಬ್ಬಂದಿ ನಿಯೋಜಿಸಿ ವಾಚ್ ಮತ್ತು ವಾರ್ಡ್ ಮಾಡಬೇಕು. ಇಲಾಖೆಯವರು ಸಮನ್ವಯದಿಂದ ಕಾರ್ಯನಿರ್ವಹಿಸಿ ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಸಲು ಆದ್ಯತೆ ಮೇಲೆ ಭೂತನಾಳ ಕೆರೆ ತುಂಬಿಸಲು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.

ಒಟ್ಟು 96 ಕೆರೆಗಳಿಗೆ ನೀರಿನ ಅವಶ್ಯಕತೆ ಇದೆ. ಅವುಗಳನ್ನು ತುಂಬಿಸುವಲ್ಲಿ ಗ್ರಾಮ ಪಂಚಾಯತ್ ಅಧಿಕಾರಿ, ಸಣ್ಣ ನೀರಾವರಿ ಇಲಾಖೆ, ತಾಲೂಕು ಪಂಚಾಯತ್ ಇಓ, ಪೊಲೀಸ್ ಇಲಾಖೆಗಳು ಕೆಲಸ ಮಾಡಬೇಕು. ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಆಯಾ ಪ್ರದೇಶದ ಮಾಹಿತಿ ಹೊಂದಿರುವ ಹಿನ್ನಲೆಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಸಿಇಒ ರಿಷಿ ಆನಂದ, ಎಸ್ಪಿ ಋಷಿಕೇಶ್ ಸೋನಾವಣೆ, ಪ್ರೋಬೇಷನರ್ ಐಪಿಎಸ್ ಅಧಿಕಾರಿ ಶಾಲೂ, ಡಿವೈಎಸ್ಪಿ ಬಸವರಾಜ್ ಎಲಿಗಾರ, ಅಪರ ಎಸ್ಪಿ ಶಂಕರ ಮಾರಿಹಾಳ, ಅಪರ ಡಿಸಿ ಮಹಾದೇವ ಮುರಗಿ, ವಿಜಯಪುರ ಎಸಿ ಶ್ವೇತಾ ಬೀಡಿಕರ, ಇಂಡಿ ಎಸಿ ಅಬೀದ್ ಗದ್ಯಾಳ ಸೇರಿ ವಿವಿಧ ತಾಲೂಕಿನ ತಹಶೀಲ್ದಾರ, ತಾಲೂಕಿನ ಇಒ ಉಪಸ್ಥಿರಿದ್ದರು.




Leave a Reply

Your email address will not be published. Required fields are marked *

error: Content is protected !!