‘ಹೋಮ’ಕ್ಕೆ ಮಳೆ ಬರುತ್ತಾ?

1143

ರಾಜ್ಯದ ಬರೋಬ್ಬರಿ 34 ಸಾವಿರಕ್ಕೂ ಹೆಚ್ಚು ದೇಗುಲಗಳಲ್ಲಿ ಮಳೆಗಾಗಿ ಪರ್ಜನ್ಯ ಹೋಮ ಮಾಡುವ ತೀರ್ಮಾನಕ್ಕೆ ಮುಜರಾಯಿ ಇಲಾಖೆ ಸಚಿವರು ಬಂದಿದ್ದಾರೆ. ಇದಕ್ಕೆ ಎಷ್ಟು ಕೋಟಿ ಖರ್ಚಾಗುತ್ತೆ ಅನ್ನೋದು ಮುಂದೆ ತಿಳಿಯುತ್ತೆ. ಹೋಮಕ್ಕೆ ಮಳೆ ಬರುತ್ತೋ ಇಲ್ವೋ ಗೊತ್ತಿಲ್ಲ. ಮಳೆ ಕೊರತೆಗೆ ಕಾರಣ, ಏನು ಮಾಡಿದರೆ ಮಳೆ ಬರುತ್ತೆ ಅನ್ನೋ ವಿಶೇಷ ಲೇಖನ ‘ಪ್ರಜಾಸ್ತ್ರ’ದಲ್ಲಿ…

ಕರುನಾಡಿಗೆ ಇದೀಗ ‘ಬರ’ ಸಿಡಿಲು ಬಡೆದಿದೆ. ಇದರಿಂದಾಗಿ 176 ತಾಲೂಕುಗಳಲ್ಲಿ 156 ತಾಲೂಕುಗಳು ಬರಗಾಲ ಎದುರಿಸ್ತಿವೆ. ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದ ಜನರ ಬವಣೆ ಅತ್ಯಂತ ಕಠಿಣವಾಗಿದೆ. ಸೂರ್ಯನ ಕಡು ತಾಪಕ್ಕೆ ಬಲಿಯಾಗುತ್ತಿರುವ ಈ ಭಾಗದ ಜಿಲ್ಲೆಗಳು ಹನಿ ನೀರಿಗೂ ಹರಸಾಹಸ ಪಡುತ್ತಿವೆ. ಇದಕ್ಕೆ ಕಾರಣ ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗ್ತಿರೋದು.

ನೀರಿನ ಕ್ಷಾಮಕ್ಕೆ ‘ಎಲ್ ನೀನೂ’ ಕಾರಣವೇ?

ಶಾಂತ ಸಾಗರದ ಪೂರ್ವ ಹಾಗೂ ಕೇಂದ್ರ ಭಾಗದಲ್ಲಿ ತಾಪಮಾನ ಹೆಚ್ಚಳವಾಗಿ, ನೀರು ಬಿಸಿಯಾಗುತ್ತೆ. ಇದರ ಜೊತೆಗೆ ಉತ್ತರ ಫೆಸಿಫಿಕ್ ಸಾಗರದಲ್ಲಿನ ನೀರು ಸಹ ಬಿಸಿಯಾಗುತ್ತದೆ. ಇದನ್ನೇ ‘ಎಲ್ ನೀನೂ’ ಅಂತಾ ಕರೆಯಲಾಗುತ್ತೆ. ಇದರಿಂದ ಬಿಸಿಗಾಳಿ ಬೀಸುತ್ತೆ. ಇದು ವಾತಾವರಣದ ಮೇಲೆ ಪರಿಣಾಮವಾಗುತ್ತೆ. ಹೀಗಾಗಿ ಈ ಬಾರಿ ವಾಡಿಕೆಗಿಂತ ಮುಂಗಾರು ಮಳೆ ಕಡಿಮೆಯಾಗುತ್ತೆ ಅಂತಾ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಯಾದ ಸ್ಕೈಮೆಟ್ ಎಚ್ಚರಿಕೆ ನೀಡಿದೆ.

ನೀರಿನ ಮೂಲಕ್ಕೆ ಹೊಡೆತ

ವಾತಾವರಣದಲ್ಲಿ ಆಗುತ್ತಿರುವ ಏರುಪೇರಿನಿಂದ ಮಳೆ ಕೊರತೆಯಾಗುತ್ತಿದೆ ಅಂತಾರೆ ತಜ್ಞರು. ನೀರಿನ ಮೂಲಗಳು ಬತ್ತಿ ಹೋಗುತ್ತಿವೆ. ಕಾರಣ, ನಾವು ಬಳಕೆ ಮಾಡುವ ಪ್ರಮಾಣ ಹೆಚ್ಚಾಗ್ತಿದ್ದು, ಇಂಗಲ್ಪಡುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೃಷಿ ಸೇರಿದಂತೆ ಉದ್ಯಮ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ನೀರಿನ ಬಳಕೆಯಾಗುತ್ತಿದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನ Over exploitation ಎಂದು ಕರೆಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನೀರಿನ ಮೂಲಗಳಾದ ಬಾವಿ, ಹಳ್ಳ, ಕೊಳ್ಳ, ಕೆರೆ, ನದಿಗಳು ಬತ್ತಿ ಹೋಗುತ್ತಿವೆ. ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ.

ಇದು ಅತ್ಯಂತ ಡೇಂಜರ್

ಮುಂಗಾರು ಮಳೆ ಕೊರತೆಗೆ ಹಸಿರು ಮನೆ ಅನಿಲ ದುಷ್ಪರಿಣಾಮಕ್ಕಿಂತ, ವಾಹನಗಳ ಹೊಗೆ, ಧೂಳು, ರಾಸಾನಿಕ ತಾಜ್ಯಗಳೇ ಮುಖ್ಯ ಕಾರಣ ಅಂತಾ ಅಧ್ಯಯನದಿಂದ ತಿಳಿದಿದೆ. ಇದರ ಪರಿಣಾಮ ದಶಕಗಳಲ್ಲಿ ಇನ್ನಷ್ಟು ಮುಂಗಾರು ಪ್ರಮಾಣ ಕಡಿಮೆಯಾಗುತ್ತೆ ಅಂತಾ ಹವಾಮಾನಶಾಸ್ತ್ರಜ್ಞ ಆರ್.ಕೃಷ್ಣನ್ ನೇತೃತ್ವದ ಪುಣೆಯ ಭಾರತೀಯ ಉಷ್ಣವಲಯದ ಹವಾಮಾನಶಾಸ್ತ್ರ ಸಂಸ್ಥೆ ಎಚ್ಚರಿಕೆ ನೀಡಿದೆ. ವಾಯು ಮಾಲಿನ್ಯ, ಅರಣ್ಯ ನಾಶ, ಹಾಗೂ ಕೃಷಿ ನಾಶಕ್ಕೆ ಮುಂಗಾರು ಕೊರತೆಯಾಗಲು ಪ್ರಮುಖ ಕಾರಣ ಎನ್ನುತ್ತಾರೆ. ಹೀಗಾಗಿ ಸೂರ್ಯನ ಕಿರಣಗಳಿಂದ ಭೂಮಿಗೆ ಧೂಳುಮಯ ಮೋಡ ತಡೆಯುತ್ತದೆ. ಇದರ ಪರಿಣಾಮ ಉಷ್ಣಾಂಶ ಮತ್ತು ಭೂಮಿಯ ತಾಪ ಹೆಚ್ಚಾಗಿ, ಮಳೆ ಕೊರತೆಗೆ ಕಾರಣವಾಗುತ್ತದೆ ಅಂತಾ ಅವರು ಹೇಳಿದ್ದಾರೆ. ಈ ಬಗ್ಗೆ 2015ರಲ್ಲಿಯೇ ‘ಕ್ಲೈಮೇಟ್ ಡೈನಾಮಿಕ್’ ಅನ್ನೋ ಪತ್ರಿಕೆಯಲ್ಲಿ ಬರೆದಿದ್ದಾರೆ.

ಉತ್ತಮ ಮಳೆಗಾಗಿ ಏನು ಮಾಡಬೇಕು?

ನದಿ, ಹಳ್ಳ, ಕೊಳ್ಳಗಳಿಂದ ಉದ್ಯಮಗಳು ಬಳಸುತ್ತಿರುವ ನೀರಿಗೆ ಮಿತಿ ಹೇರಬೇಕು. ಅವರಿಗೆ ಮಳೆ ನೀರು ಸಂಗ್ರಹದ ವ್ಯವಸ್ಥೆ ಮಾಡಿಕೊಳ್ಳಲು ಹೇಳಬೇಕು. ಕರಾವಳಿ ಭಾಗದಲ್ಲಿ ಒಂದು ಚದರ ಮೀಟರ್ ವಿಸ್ತೀರ್ಣದಲ್ಲಿ 4000 ಸಾವಿರ ಲೀಟರ್ ಸಂಗ್ರಹವಾಗುತ್ತದೆ. ಅಂದ್ರೆ, 1 ಎಕರೆ ಜಾಗದಲ್ಲಿ 1 ಕೋಟಿ 60 ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತೆ. ಇದು ಹಳ್ಳದ ಮೂಲಕ ಸಮುದ್ರಕ್ಕೆ ಹೋಗುತ್ತಿದೆ. ಇದನ್ನ ತಡೆಯಬೇಕು. ಇದರ ಜೊತೆ ಬಹುಮುಖ್ಯವಾಗಿ ಕೆರೆಗಳ ಪುನರುಜ್ವೀವನ ಆಗಬೇಕು. ಕಲ್ಯಾಣಿಗಳ ಮರು ಬಳಕೆಯಾಗಬೇಕು. ಅರಣ್ಯ ಸಂಪತ್ತು ಕಾಪಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚೆಚ್ಚು ಗಿಡಗಳನ್ನು ಬೆಳಸಬೇಕು. ಇಂಗುಗುಂಡಿಗಳ ನಿರ್ಮಾಣವಾಗಬೇಕು. ಕೊಳಚೆ ನೀರನ್ನ ಶುದ್ಧೀಕರಿಸುವ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚಾಗಬೇಕು. ಮಂತ್ರಕ್ಕೆ ಮಾವಿನಕಾಯಿ ಉದುರಲ್ಲ ಅನ್ನೋ ಹಾಗೇ ಹೋಮಕ್ಕೆ ಮಳೆ ಬರುತ್ತೆ ಅನ್ನೋದು ಸುಳ್ಳು..! ಮುಜರಾಯಿ ಇಲಾಖೆಯ ಸಚಿವರ ಈ ನಿರ್ಧಾರ ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಮೂಡಿದೆ.


TAG


Leave a Reply

Your email address will not be published. Required fields are marked *

error: Content is protected !!