ಹಣ ಡಬಲ್ ಹೆಸರಿನಲ್ಲಿ 72 ಜನರಿಗೆ ಪಂಗನಾಮ

256

ಪ್ರಜಾಸ್ತ್ರ ಅಪರಾಧ ಸುದ್ದಿ

ಹುಬ್ಬಳ್ಳಿ: ಎರಡು ವರ್ಷದ ಹಿಂದೆ ಹಣ ದ್ವಿಗುಣಗೊಳಿಸುವ ಹಾಗೂ ಮನೆ ಜಾಗ ನೀಡುವ ಆಮಿಷವೊಡ್ಡಿ ನಗರದ 72ಕ್ಕೂ ಹೆಚ್ಚಿನವರಿಂದ ಕೋಟ್ಯಂತರ ರೂ. ಸಂಗ್ರಹಿಸಿ ಪರಾರಿಯಾಗಿದ್ದ ಗರೀಮಾ ಹೋಮ್ಸ್ ಆ್ಯಂಡ್ ಫಾರ್ಮ್ ಹೌಸಸ್ ಲಿಮಿಟೆಡ್ ಸಂಸ್ಥೆಯ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಂಸ್ಥೆಯ ಮುಖ್ಯ ಏಜೆಂಟ್‌ಗಳಲ್ಲಿ ಒಬ್ಬನಾಗಿದ್ದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಸಾತಿಹಾಳ ಗ್ರಾಮದ ರಾಮಯ್ಯ ಗಂಗಯ್ಯ ಹಿರೇಮಠ (33) ಎಂಬುವವನನ್ನು ಬಂಧಿಸಲಾಗಿದೆ. ಈತ ಪ್ರಕರಣದ ೨ನೇ ಆರೋಪಿಯಾಗಿದ್ದು, ಸೋಮವಾರ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.

ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಗರೀಮಾ ಹೋಮ್ಸ್ ಆ್ಯಂಡ್ ಫಾರ್ಮ್ ಹೌಸಸ್ ಲಿಮಿಟೆಡ್ ಹೆಸರಿನಲ್ಲಿ ವಂಚಕರು ಶಾಖಾ ಕಚೇರಿ ತೆರೆದಿದ್ದರು. ಈ ಸಂಸ್ಥೆಯಿಂದ ಹುಬ್ಬಳ್ಳಿ ಮಾತ್ರವಲ್ಲದೆ, ಧಾರವಾಡ, ಶಿರಸಿ, ದಾಂಡೇಲಿ, ಯಾದಗಿರಿ, ರಾಯಚೂರಿನಲ್ಲಿಯೂ ವಂಚಿಸಿರುವ ಶಂಕೆ ಇದೆ ಎಂದು ಮೂಲಗಳು ತಿಳಿಸಿದ್ದು, ತನಿಖೆ ಮುಂದುವರಿದಿದೆ.

2018ರಲ್ಲಿ ಇವರ ಕುರಿತು ಗೋಕುಲ ರಸ್ತೆೆ ನಿವಾಸಿ ಚೆನ್ನಬಸಯ್ಯ ವೀರಯ್ಯ ಹಿರೇಮಠ ಎಂಬುವವರು ಈ ಬಗ್ಗೆ ದೂರು ಸಲ್ಲಿಸಿದ್ದರು. ತಮ್ಮಿಂದ 3.75 ಲಕ್ಷ ರೂ. ಹಣ ಪಡೆದು ಮ್ಯಾಚುರಿಟಿ ಆದ ಬಳಿಕ ದ್ವಿಗುಣ ಹಣ ನೀಡುವುದಾಗಿ ಸಂಸ್ಥೆಯವರು ವಂಚಿಸಿ ಪರಾರಿಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.

ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಉಪನಗರ ಪೊಲೀಸರು ಗರೀಮಾ ಹೋಮ್ಸ್ ಆ್ಯಂಡ್ ಫಾರ್ಮ್ ಹೌಸಸ್ ಲಿಮಿಟೆಡ್ ಮೊದಲ ಆರೋಪಿ ಸ್ಥಾನದಲ್ಲಿ ಇಟ್ಟಿದ್ದರು. ರಾಮಯ್ಯ ಗಂಗಯ್ಯ ಹಿರೇಮಠ, ಎ.ಆರ್.ಚಾಕಲಬ್ಬಿ, ಸುನೀತಾ ಹೊಸಪೇಟ ಕ್ರಮವಾಗಿ ಇತರ ಆರೋಪಿಗಳಾಗಿದ್ದರು.

ಹಣ ದ್ವಿಗುಣ ಮಾಡಿಕೊಡಲಾಗುವುದು. ಅಲ್ಲದೆ, ಕಮೀಷನ್ ಆಧಾರದಲ್ಲಿಯೂ ಹಣ ನೀಡುತ್ತ, ಬೈಕ್, ಮನೆ, ನಿವೇಶನ ನೀಡುವುದಾಗಿ ಹಣ ಪಡೆದು ವಂಚಿಸಿದ್ದಾರೆ. ಸುಮಾರು 72 ಜನರಿಂದ ಹೇಳಿಕೆ ಪಡೆದಿತ್ತು. ಇದರಿಂದ ಸಂಸ್ಥೆಯು ಹುಬ್ಬಳ್ಳಿಯಲ್ಲಿ ಗ್ರಾಾಹಕರು ಹಾಗೂ ಏಜೆಂಟರಿಂದ 73080685 ರೂಪಾಯಿ ವಹಿವಾಟು ನಡೆಸಿದ್ದು ಬೆಳಕಿಗೆ ಬಂದಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ವರದಿ ನೀಡಿದ್ದರು.

ಬಳಿಕ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ನಿರಂತರ ಎರಡು ವರ್ಷ ಕಾರ್ಯಾಚರಣೆ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ವಿಷಯ ತಿಳಿದ ವಂಚನೆಗೆ ಒಳಗಾದ ಕೆಲ ಗ್ರಾಹಕರು ಪೊಲೀಸ್ ಠಾಣೆ ಬಳಿ ಬಂದು ಹಣವನ್ನು ಪಡೆದು ದ್ವಿಗುಣಗೊಳಿಸುವುದಾಗಿ ನಂಬಿಸಿ ವಂಚಿಸಿದ್ದಾರೆ. ನಮಗೆ ನ್ಯಾಾಯ ಒದಗಿಸಿ ಎಂದು ಕೇಳಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!