ತುತ್ತೂರಿ ಹೋಗಿ ಕಹಳೆ ಬಂತು.. ಮಡಿಕೆ ಹೋಗಿ ಸಿಲಿಂಡರ್ ಆಯ್ತು..

283

ಪ್ರಜಾಸ್ತ್ರ ಸುದ್ದಿ

ಕಲಬುರಗಿ/ಬಳ್ಳಾರಿ: ಈಗಾಗ್ಲೇ ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಗೆ ಮೊದಲ ಹಂತದ ಮತದಾನ ನಡೆದಿದೆ. ಎಂದಿನಂತೆ ಒಂದಿಷ್ಟು ಯಡವಟ್ಟು ಮುಂದುವರೆದಿದೆ. ಜಿದ್ದಾಜಿದ್ದಿಯ ಲೋಕಲ್ ಫೈಟ್ ನಲ್ಲಿ ಚಿಹ್ನೆ ಬದಲಾದ ಪರಿಣಾಮ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್ ಗ್ರಾಮ ಪಂಚಾಯ್ತಿಯ 7ನೇ ವಾರ್ಡ್ ಮತಗಟ್ಟೆಯಲ್ಲಿ ನೀಡಿದ್ದ ಚಿಹ್ನೆ ಒಂದಾದ್ರೆ ಮತಪತ್ರದಲ್ಲಿ ಇರೋ ಚಿಹ್ನೆನೇ ಬೇರೆಯಾಗಿದೆ. ಪರಿಶಿಷ್ಟ ಜಾತಿ ಸಾಮಾನ್ಯ ಸ್ಥಾನಕ್ಕೆ ಜರಾಜ ಹಲಗಿ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ತುತ್ತೂರಿ ಚಿಹ್ನೆ ನೀಡಲಾಗಿದೆ. ವೋಟ್ ಮಾಡಲು ಹೋದಾಗ ಮತಪತ್ರದಲ್ಲಿ ಕಹಳೆ ಚಿಹ್ನೆ ಮುದ್ರಣಗೊಂಡಿದೆ. ಇದ್ರಿಂದಾಗಿ ಗಲಾಟೆಯಾಗಿದೆ.

ತಕ್ಷಣ ಮತದಾನ ಸ್ಥಗಿತಗೊಳಿಸಲಾಗಿದೆ. ಅಭ್ಯರ್ಥಿ ಕಣ್ಣೀರು ಹಾಕ್ತಿದ್ರೆ ಚುನಾವಣಾಧಿಕಾರಿ ತಪ್ಪಾಗಿದೆ ಕ್ಷಮಿಸಿ ಅಂತಿದ್ದಾರೆ. 7ನೇ ವಾರ್ಡಿನಲ್ಲಿ 3 ಸ್ಥಾನಗಳಿದ್ದು 10 ಜನರು ಕಣದಲ್ಲಿದ್ದಾರೆ.

ಇನ್ನು ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮ ಪಂಚಾಯ್ತಿ 7ನೇ ವಾರ್ಡಿನ ತೊಲಮಾಮಿಡಿ ಗ್ರಾಮದ ಅಭ್ಯರ್ಥಿ ಪದ್ಮಾವತಿ ಅವರಿಗೆ ಮಡಿಕೆ ಚಿಹ್ನೆ ನೀಡಲಾಗಿದೆ. ಆದ್ರೆ, ಮತಪತ್ರದಲ್ಲಿ ಸಿಲಿಂಡರ್ ಮುದ್ರಣವಾಗಿದೆ. ಈ ಬಗ್ಗೆ ತಿಳಿದ ಅಭ್ಯರ್ಥಿ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದು ಸಧ್ಯಕ್ಕೆ ಮತದಾನ ನಿಲ್ಲಿಸಲಾಗಿದೆ.

ಆದ ಪ್ರಮಾದ ಬಗ್ಗೆ ಚುನಾವಣಾ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. 2ನೇ ಹಂತದ ಮತದಾನದ ವೇಳೆ ಅಥವ ಬೇರೆ ದಿನಾಂಕ ನಿಗಿದಿ ಮಾಡಿ ವೋಟಿಂಗ್ ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.ಎಸ್ ನಕುಲ್ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!