‘ಗುಂಡಿಕ್ಕಿ ಕೊಲ್ಲಿ’ ಎನ್ನುವವರ ಮಧ್ಯೆ ಮಾನವೀಯತೆ…

689

ಕೋವಿಡ್-19 ವೈರಸ್ ಇಡೀ ವಿಶ್ವವನ್ನೇ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಏಪ್ರಿಲ್ 7 ರಂದು ದಾವಣಗೆರೆಯಲ್ಲಿ ಕೊರೊನಾ ‘ಚಿಕಿತ್ಸೆಗೆ ಸಹಕರಿಸದ ತಬ್ಲೀಗಿಗಳಿಗೆ ಗುಂಡಿಕ್ಕಿದರೂ ತಪ್ಪಲ್ಲ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತು ಶಾಸಕ ಬಸನಗೌಡಪಾಟೀಲ ಯತ್ನಾಳ ಹೇಳಿಕೆ ಇಡೀ ಮನುಕುಲವೆಂಬ ಹಾಲಿನ ಪಾತ್ರೆಗೆ ಹುಳಿ ಹಿಂಡುವ ಕಾರ್ಯವೇ ಸರಿ.

ಅವರ ಹೇಳಿಕೆ ನಂತರ ದೇಶದಲ್ಲಿ ಎರಡು ಘಟನೆಗಳು ನಡೆದವು. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಲೋಯೈತೊಲದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳ ನಡುವೆ ವಾಸಿಸುತ್ತಿರುವ ಏಕೈಕ ಹಿಂದೂ ಕುಟುಂಬದ ಹಿರಿಯ ಜೀವ ವಿನಯ ಸಾಹಾ (90) ವಯೋಸಹಜ ಅನಾರೋಗ್ಯದಿಂದ ಮೃತಪಟ್ಟರು. ಲಾಕ್ ಡೌನ್ ಇರುವ ಸಂದರ್ಭದಲ್ಲಿ ಅಂತ್ಯ ಸಂಸ್ಕಾರ ಮಾಡುವುದು ಹೇಗೆಂದು ಮಕ್ಕಳು ಚಿಂತಿಸುತ್ತಿರುವ ಸಂದರ್ಭದಲ್ಲಿ ನೆರೆಮನೆಯ ಸದ್ದಾಂ ಶೇಖ ಸೇರಿದಂತೆ ಅನೇಕ ಮುಸ್ಲಂ ಸಹೋದರರು ನೆರವಾಗಿ ಹೆಗಲುಕೊಟ್ಟು ‘ರಾಮನಾಮ ಸತ್ಯ ಹೇ’ ಎಂದು ಜಪಿಸಿ ಸೌಹಾರ್ದ ಮೆರೆದರು.

ಇದೇ ರೀತಿ ಮುಂಬೈನಲಿ ಜೈನ ಸಮುದಾಯಕ್ಕೆ ಸೇರಿದ ಪ್ರೇಮಚಂದ ಬುದ್ಧಲಾಲ ಮಹಾವೀರ (68) ಮೃತಪಟ್ಟಾಗ ಲಾಕ್‍ ಡೌನ್‍ ನಿಂದ ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅಕ್ಕಪಕ್ಕದ ಮನೆಯ ಮುಸ್ಲಿಂ ಜನಾಂಗದ ವ್ಯಕ್ತಿಗಳೇ ಅಂತ್ಯಕ್ರ್ರಿಯೆಯಲ್ಲಿ ಭಾಗವಹಿಸಿ ಸಹಾಯ ಮಾಡಿದ್ದರು. ಈ ಎರಡೂ ಘಟನೆಗಳು ‘ಮನುಷ್ಯ ಜಾತಿ ತಾನೊಂದೆ ಒಲಂ’ ಎಂದು ಪಂಪ ಹೇಳಿದ ಮಾತಿಗೆ ಸಾಕ್ಷಿಯಾಯಿತು.

ಈ ಸುದ್ದಿಯನ್ನು ಓದಿದಾಗ ಸುಮಾರು 17 ವರ್ಷಗಳ ಹಿಂದೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಮ್ಮ ಸ್ನೇಹಿತರೇ ಬಣ್ಣ ಹಚ್ಚಿದ ನಾಟಕ ‘ರಾವಿನದಿಯ ದಂಡೆಯಲ್ಲಿ’ ನೋಡಿದ ಪ್ರಸಂಗಗಳು ನೆನಪಾದವು. ಭಾರತ-ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಭಾರತದ ಗಡಿಭಾಗದ ಮುಸ್ಲಿಂ ಸಹೋದರರು ಪಾಕಿಸ್ತಾನಕ್ಕೆ, ಪಾಕಿಸ್ತಾನದಲ್ಲಿದಲ್ಲಿನ ಹಿಂದೂಗಳು ಭಾರತಕ್ಕೆ ವಲಸೆಹೋಗುತ್ತಾರೆ. ಪಾಕಿಸ್ತಾನದಲ್ಲಿದ್ದ ಹಿಂದೂ ವೃದ್ಧೆ ರತನ್ ತಾಯಿ ಅಲ್ಲಿಯೇ ಉಳಿದುಕೊಂಡು ತನ್ನ ಮಾನವೀಯ ಸ್ಪರ್ಶದಿಂದ ಅಲ್ಲಿನ ಇಸ್ಲಾಂ ಜನರ ಹೃದಯವನ್ನು ಗೆಲ್ಲುತ್ತಾಳೆ. ಆ ವೃದ್ಧೆಗೆ ವಯೋಸಹಜ ಕಾರಣಗಳಿಂದ ಮೃತಪಟ್ಟಾಗ ಮಕ್ಕಳು, ಸಂಬಂಧಿಕರು ಇಲ್ಲದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸಿಖಂದರ್ ಮಿರ್ಜಾ ಸೇರಿದಂತೆ ಅನೇಕ ಇಸ್ಲಾಂ ಧರ್ಮದ ಜನರು ಹಿಂದೂ ವಿಧಿ ವಿಧಾನದಂತೆ ‘ರಾಮನಾಮ ಸತ್ಯ ಹೇ’ ಎಂದು ಪಠಿಸಿ ಅಂತ್ಯಕ್ರಿಯೆ ಮಾಡುವ ಪಾತ್ರವು ಪ್ರೀತಿ ಅನುಕಂಪವನ್ನು ತುಂಬಿಕೊಂಡು ಬರುತ್ತದೆ. ಎಲ್ಲಾ ಧರ್ಮಗಳ ಸಾರ ಒಂದೇ ಎಂದು ಈ ನಾಟಕ ಬಿಂಬಿಸುತ್ತದೆ. ಶಾಂತವಾಗಿ ನಮ್ಮೊಳಗೊಂದು ಚಿಂತನೆಯನ್ನು ಬಿತ್ತುವ ಕೆಲಸವನ್ನು ಹಿಂದಿ ಲೇಖಕ ಅಸಗರ್ ವಹಾಜೀತ್ ಅವರು ರಚಿಸಿದ್ದಾರೆ. ಕನ್ನಡದಲ್ಲಿ ಡಾ. ತಿಪ್ಪೇಸ್ವಾಮಿ ತರ್ಜುಮೆ ಮಾಡಿದ್ದಾರೆ. ರಾಜ್ಯದ ಅನೇಕ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಾಟಕ ರಾವಿನದಿಯ ದಂಡೆಯಲ್ಲಿ… ಧರ್ಮ, ಸೀಮೆಗಳನ್ನು ಮೀರಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.

‘ಇವನಾರವ, ಇವನಾರ, ಇವನಾರವನೆಂದೆನಿಸದಿರಯ್ಯ,. ಇವ ನಮ್ಮವ, ಇವ ನಮ್ಮವ ಇವನಮ್ಮವನೆಂದೆನಿಸಯ್ಯ ಕೂಡಲಸಂಗಮದೇವಯ್ಯ. ನಿಮ್ಮ ಮನೆಯ ಮಗನೆಂದೆನಿಸಯ್ಯ’ ಎಂದು 12ನೇ ಶತಮಾನದಲ್ಲೇ ಬಸವಣ್ಣವರು ವಚನದ ಮೂಲಕ ಸಮಾಜದ ಜನರಿಗೆ ಒಳಿತನ್ನು ಹೇಳಿದ್ದರು. ‘ಇಲ್ಲಿ ಯಾರು ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ. ಎಲ್ಲರೂ ವಿಶ್ವಮಾನವರಾಗಿ ಬಾಳಿ’ ಎಂದು ಕುವೆಂಪು ಕರೆಕೊಟ್ಟರು. ಮಹಾತ್ಮ ಗಾಂಧಿಯವರು, ಮನುಷ್ಯ ಮತ್ತು ಪ್ರಾಣಿಗಳಿಗೆ ಇರುವ ಅಂತರವೆಂದರೆ ವಿಚಾರಶೀಲತೆ. ಆದರೆ ವಿಚಾರ ಶುದ್ಧಿಯನ್ನು ಕಾಪಾಡಿಕೊಳ್ಳಿ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು. ಪ್ರವಾದಿ ಮುಹಮ್ಮದ್‍ ರು ಹೇಳಿದಂತೆ ‘ಓ ಮಾನವರೇ, ಅರಬರು ಅರಬರೇತರಿಗಿಂತ, ಬಿಳಿಯರು, ಕರಿಯರಿಗಿಂತ ಅಥವಾ ಕರಿಯರು ಬಿಳಿಯರಿಗಿಂತ ಶ್ರೇಷ್ಠರಲ್ಲ. ದೈವ ನಿಷ್ಠೆಯೊಂದೇ ಶ್ರೇಷ್ಠತೆಗೆ ಮಾನದಂಡ’ ಮಾನವೀಯತೆ ಒಂದೇ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ, ಜೈನ, ಪಾರ್ಸಿ ಧರ್ಮಗಳೆಲ್ಲವೂ ಬೋಧಿಸುವುದೊಂದೇ ಅದೇ ಮಾನವ ಧರ್ಮ. ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಾಣುವಿನ ಉಪಟಳದಿಂದ ದಿನದಿಂದ ದಿನಕ್ಕೆ ವಿಶ್ವವನ್ನೇ ಸ್ತಬ್ಧಗೊಳಿಸುತ್ತಿರುವಾಗ ಇಂತಹ ಸಂದಿಗ್ದ ಸಮಯದಲ್ಲಿ ರಾಜಕಾರಣಿಗಳು ನಿಷ್ಕಾಮ ಕರ್ಮಗಳನ್ನು ಮಾಡುತ್ತಾ ಹೋದಹಾಗೆಲ್ಲ ಮನುಷ್ಯನ ಸಂಕಲ್ಪ ಶಕ್ತಿಯು ಉತ್ತರೋತ್ತರವಾಗಿ ಬೆಳೆಯುತ್ತಾ ಹೋಗಿ ಬಾಹ್ಯ ಕರ್ಮಗಳೆಲ್ಲವೂ ಕಡಿಮೆಯಾಗತೊಡಗುತ್ತವೆ.

ಪ್ರಚಾರ ಗಿಟ್ಟಿಸಿಕೊಳ್ಳಲು ನಾಲಿಗೆ ಹರಿಬಿಟ್ಟು ಕೀಳುಮಟ್ಟದ ಮಾತುಗಳನ್ನಾಡಿ ರಾಜಕೀಯ ಮಾಡುವ ಬದಲು  ಕಣ್ಣಿಗೆ ಕಾಣದ ಕೋವಿಡ್-19 ಅನ್ನು ದೂರಮಾಡಲು ಯೋಜನೆಗಳನ್ನು ರೂಪಿಸಿ. ಸಾಮಾಜಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಅಧೀರಾಗಿರುವ ನಮ್ಮ ಜನರಿಗೆ ಮನೋಸ್ಥೈರ್ಯ ತುಂಬು ಕಾರ್ಯಮಾಡಿದರೆ ಮನುಕುಲಕ್ಕೆ ಅರ್ಥ ಬಂದೀತು. ನಿಮಗೆ ವೋಟ್ ಹಾಕಿರುವ ಜನರಿಗೆ ನ್ಯಾಯ ಒದಗಿಸುವ ಕಾರ್ಯ ನಿಮ್ಮಿಂದಾಗಬೇಕು. ಅದು ಬಿಟ್ಟು ಬೇಕಾಬಿಟ್ಟು ಮಾತುಗಳನ್ನು ಹರಿಬಿಟ್ಟು ಮನುಷ್ಯತ್ವದ ವಿರುದ್ಧವಾಗಿ ನಡೆದುಕೊಂಡರೆ ಅದು ಶೋಭೆತರುವಂತದ್ದಲ್ಲ. ಇಂತಹ ಸಂದರ್ಭದಲ್ಲಿ ಜನಾಭಿಪ್ರಾಯವನ್ನು ಧಿಕ್ಕರಿಸುವ ಸರ್ಕಾರವನ್ನು ಮುಂದೊಂದು ದಿನ ಜನರೂ ಧಿಕ್ಕರಿಸುತ್ತಾರೆ ಎನ್ನುವ ಅರಿವು ನಿಮ್ಮಲ್ಲಿದ್ದರೆ ಒಳ್ಳೆಯದು.

ಅನೇಕ ರಾಜಕಾರಣಿಗಳು ಕೋವಿಡ್-19 ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆರವಾಗಲು ಅಕ್ಕಿ, ಬೇಳೆ ಇತರೆ ಅಗತ್ಯ ವಸ್ತುಗಳನ್ನು ಕೊಡವುದು ಸರಿ. ಆದರೆ ಆ ಪ್ಯಾಕೇಟ್‍ಗಳ ಮೇಲೆ ತಮ್ಮ ಫೋಟೋವನ್ನು ಹಾಕಿ ಪ್ರಚಾರಕ್ಕೋಸ್ಕರ ಜನರಿಗೆ ಸಹಾಯ ಮಾಡುವುದು ಜನನಾಯಕನ ಲಕ್ಷಣವೇ? ಕೊರೋನಾ ವೈರಸ್ ಜಗತ್ತನ್ನೇ ಬಾಧಿಸುತ್ತಿರುವ ಹೊತ್ತಿನಲ್ಲಿ ಮನುಷ್ಯ ಕೆಲ ಘಟನೆಗಳು ಮನುಷ್ಯನ ಮಧ್ಯೆ ಮಾನವೀಯ ಸಂಬಂಧಗಳನ್ನು ವೃದ್ಧಿಸುತ್ತಿದೆ. ಒಂದು ಸಮುದಾಯವನ್ನು ಗುರಿಯಾಗಿರಿಸಿ ಸುಳ್ಳು ಸುದ್ದಿ ಹಬ್ಬಿಸುವುದು, ಪ್ರಚೋದನಾಕಾರಿ ಮಾತನಾಡುವುದು ಶೋಭೆತರುವಂತದ್ದಲ್ಲ. ಮನುಷ್ಯ ಎಷ್ಟರಮಟ್ಟಿಗೆ ಇತರರ ಒಳ್ಳೆಯದಕ್ಕೆ ದುಡಿಯುತ್ತಾನೋ ಅಷ್ಟರ ಮಟ್ಟಿಗೆ ಅವನು ದೊಡ್ಡವನಾಗುತ್ತಾನೆ. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸುವುದು ದೊಡ್ಡದಲ್ಲ. ನಮ್ಮನ್ನು ದ್ವೇಷಿಸುವವರನ್ನು ಪ್ರೀತಿಸುವುದು ದೊಡ್ಡತನ. ಪ್ರೇಮದ ಚೂರಿಯಿಂದ ಶಾಂತಿ ಸ್ಥಾಪನೆಯಾಗಬೇಕೇ ವಿನಃ ಗುಂಡಿನ ಬಲದಿಂದಲ್ಲ.

ಪತ್ರಕರ್ತ, ಲೇಖಕ ಸೋಮನಗೌಡ ಎಸ್.ಎಂ



Leave a Reply

Your email address will not be published. Required fields are marked *

error: Content is protected !!