ಗೃಹ ಸಚಿವರ ಗೃಹವೇ ಈಗ ಕೋವಿಡ್ ಆಸ್ಪತ್ರೆ..

238

ಪ್ರಜಾಸ್ತ್ರ ವಿಶೇಷ

ಶಿಗ್ಗಾವಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗ್ತಿದೆ. ಈ ಮೂಲಕ ರಾಜ್ಯದಲ್ಲಿ ಕರೋನಾ ಕರ್ಮೋಡ ಮುಂದುವರೆದಿದೆ. ಹೀಗಾಗಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗ್ತಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯು ಸ್ಥಿತಿ ಇದೆ. ಸಿಲಿಕಾನ್ ಸಿಟಿಯಂತಹ ನಗರಗಳಲ್ಲಿ ಒಂದಿಷ್ಟು ವ್ಯವಸ್ಥೆಯಾಗಬಹುದು. ಆದ್ರೆ, ಪಟ್ಟಣ, ತಾಲೂಕು, ಹಳ್ಳಿಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಇದನ್ನ ಅರಿತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಮ್ಮ ಮನೆಯನ್ನೇ ಕೋವಿಡ್ ಆರೈಕೆ ಕೇಂದ್ರ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ತಮ್ಮ ಮತಕ್ಷೇತ್ರವಾದ ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿರುವ ಮನೆಯಲ್ಲಿನ ಸಭಾ ಭವನವನ್ನ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವ ಮೂಲಕ ಕ್ಷೇತ್ರದ ಜನರ ಸಮಸ್ಯೆಗೆ ಮಿಡಿಯುವ ಕೆಲಸ ಮಾಡಿದ್ದಾರೆ. 50 ಬೆಡ್ ಗಳ ಅತ್ಯುತ್ತಮ ಕೋವಿಡ್ ಕೇಂದ್ರ ನಿರ್ಮಾಣವಾಗಿದೆ. ಇದರ ಜೊತೆಗೆ ಇನ್ನಷ್ಟು ಹಾಸಿಗೆಗಳ ವ್ಯವಸ್ಥೆ ಮಾಡುವದರೊಂದಿಗೆ ಆಕ್ಸಿಜನ್ ಪೂರೈಕೆ ಕೆಲಸ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಸದಾ ಒಂದಲ್ಲ ಒಂದು ಜನಪರ ಕಾರ್ಯಗಳನ್ನ ಮಾಡುವ ಮೂಲಕ ಇತರೆ ಶಾಸಕರಿಗೆ, ಸಚಿವರಿಗೆ ಮಾದರಿಯಾಗಿದ್ದಾರೆ. ಶೈಕ್ಷಣಿಕ, ರಾಜಕೀಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ಮೂಲಕ ಹಾವೇರಿ ಜಿಲ್ಲೆಯನ್ನ ಅಭಿವೃದ್ಧಿಯತ್ತ ತೆಗೆದುಕೊಂಡು ಹೊರಟಿದ್ದಾರೆ. ನಂಜುಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ಜಿಲ್ಲೆಗಳಲ್ಲಿ ಹಾವೇರಿಯೂ ಒಂದಾಗಿತ್ತು. ಸಚಿವ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ಷಮತೆಯಿಂದ ನಿಧಾನವಾಗಿ ಆ ಕಳಂಕ ತೊಳೆದುಕೊಂಡು ಹೋಗ್ತಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ಕೆ ಎಲ್ಲಡೆಯಿಂದ ಶ್ಲಾಘನೆ ವ್ಯಕ್ತವಾಗ್ತಿದೆ. ಉಳಿದ ರಾಜಕಾರಣಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಈ ರೀತಿಯ ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಿದ್ರೆ, ರಾಜ್ಯವನ್ನ ಅಲುಗಾಡಿಸ್ತಿರುವ ಕರೋನಾವನ್ನ ಆದಷ್ಟು ಬೇಗ ಮೆಟ್ಟಿ ನಿಲ್ಲಬಹುದು.




Leave a Reply

Your email address will not be published. Required fields are marked *

error: Content is protected !!