ಬಸವಣ್ಣನವರ ಪ್ರಜಾಪ್ರಭುತ್ವ ಹಾಗೂ ಮಾನವೀಯ ಮೌಲ್ಯಗಳ ಪರಿಕಲ್ಪನೆ

1596

ಯುವ ಬರಹಗಾರ ಹಾಗೂ ಅಂಕಣಕಾರರಾದ ಬೀದರ ಜಿಲ್ಲೆ ಕೊಡಂಬಲದ ಶರಣ ಸಂಗಮೇಶ ಎನ್ ಜವಾದಿ ಅವರು ಬರೆದ ವಿಶೇಷ ಲೇಖನ..

12ನೇ ಶತಮಾನದ ಬಸವಾದಿ ಪ್ರಥಮರ ಅಂತಃಕರಣದ ಅನುಭವ ಮತ್ತು ಅನುಭಾವದ ನಡೆ ನುಡಿಗಳ ಮೂಲಕ ಹೊರಬಂದ ಸಾಹಿತ್ಯವೇ ವಚನ ಸಾಹಿತ್ಯ. ಈ ವಚನ ಸಾಹಿತ್ಯವು ವಿಶ್ವ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯ ಕಾಣಿಕೆ ಅಂದರೆ ತಪ್ಪಾಗಕ್ಕಿಲ್ಲ. ವಚನ ಸಾಹಿತ್ಯವು ಪ್ರಜಾಪ್ರಭುತ್ವ ಹಾಗೂ ಮಾನವೀಯ ಮೌಲ್ಯಗಳ ವೈಚಾರಿಕ ಹಾಗೂ ವೈಜ್ಞಾನಿಕ ನಿಲುವುಗಳನ್ನು ಸಾರುವ ವಿಶ್ವ ಶ್ರೇಷ್ಠ ಸಾಹಿತ್ಯವಾಗಿದೆ.

ಪ್ರಪಂಚಕ್ಕೆ ಸಮಾನತೆ ಸಂದೇಶ ಸಾರುವ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊಟ್ಟ ಮೊದಲು ಬಾರಿ ಜಾಗತಿಕ ಸಮುದಾಯಕ್ಕೆ ದಾರೆಯರೆದು ಕೊಟ್ಟವರು ಅಣ್ಣ ಬಸವಣ್ಣನವರು. ಅನುಭವ ಮಂಟಪದ ಮೂಲಕ ಇಡೀ ಮನುಕುಲದ ಉದ್ಧಾರಕ್ಕಾಗಿ, ಸರ್ವರ ಕಲ್ಯಾಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಮತ್ತು ಶ್ರೇಯಸ್ಸು ಬಸವಣ್ಣನವರ ಆದಿಯಾಗಿ ಇಡೀ ಶರಣ ಸಂಕುಲಕ್ಕೆ ಸಲ್ಲುತ್ತದೆ. ಮೌಲ್ಯಾಧಾರಿತ ಸಾಮರಸ್ಯ ಸಮಾಜ ಕಟ್ಟುವ ಕನಸು ಕಂಡ ಬಸವಣ್ಣನವರು ಅದೇ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಜಾಗತಿಕ ಮಟ್ಟದಲ್ಲಿ ಸಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಹಿತ್ಯ, ದಾಸೋಹ, ಕಲೆ, ಕೃಷಿ, ಕಾಯಕ, ದಯೆ, ಮಾನವೀಯ ಮೌಲ್ಯಗಳು ಸೇರಿದಂತೆ ವಿವಿಧ ಬಗೆಯ ಮೌಲ್ಯಾಧಾರಿತ ನಿಸ್ವಾರ್ಥ ಸೇವೆಗಳನ್ನು ಪ್ರತಿಪಾದಿಸಿದ್ದಾರೆ.

ವಚನ ಸಾಹಿತ್ಯ ಮತ್ತು ಭಾರತ ಸಂವಿಧಾನ:

ವಚನ ಮತ್ತು ಸಂವಿಧಾನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅಂದರೆ ಅವು ಎರಡೂ ಒಂದೇ ಎಂದರ್ಥ. ವಚನಗಳಲ್ಲಿರುವ ಅಂಶಗಳು ಸಂವಿಧಾನದಲ್ಲಿವೆ. ಸಂವಿಧಾನದಲ್ಲಿರುವ ಎಲ್ಲಾ ಪ್ರಜಾಪ್ರಭುತ್ವ ಅಂಶಗಳು ವಚನ ಸಾಹಿತ್ಯದಲಿವೆ ಎನ್ನವದಂತು ನೂರಕ್ಕೆ ನೂರರಷ್ಟು ಸತ್ಯ. ಹಾಗಾಗಿ ದೇಶದ ಪ್ರಗತಿಗೆ ವಚನ ಸಾಹಿತ್ಯ ಎಷ್ಟು ಪ್ರಮುಖ್ಯವೋ, ಅಷ್ಟೇ ಮುಖ್ಯ ನಮ್ಮ ಭಾರತ ದೇಶದ ಸಂವಿಧಾನ. ಈ ಎರಡು ತತ್ವಗಳಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎನ್ನುವುದು ನಾವ್ಯಾರು ಮರೆಯಬಾರದು. ದೇಶದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ, ಸ್ವಾತಂತ್ರ್ಯ ನೀಡಿದೆ. ಪ್ರತಿಯೊಬ್ಬ ಪ್ರಜೆಗೂ ಸ್ವಚಂದವಾಗಿ ಬದುಕಲು ಅವಕಾಶ ನೀಡಿದೆ. ಇದರಂತೆ ವಚನ ಸಾಹಿತ್ಯವೂ ಪ್ರತಿ ಪ್ರಜೆಗೂ ಸಾಮರಸ್ಯ, ಸಹಬಾಳ್ವೆ, ಸ್ನೇಹದಿಂದ ಬದುಕುವಂತೆ ಹಾಗೂ ಸಕಲ ಜೀವಾತ್ಮರಿಗೂ ಲೇಸನೇ ಬಯಸುವಂತೆ ಕರೆ ನೀಡಿದೆ.

ಮಾನವೀಯ ಮೌಲ್ಯಗಳ ಹರಿಕಾರ ಮತ್ತು ಪ್ರಜಾಪ್ರಭುತ್ವದ ಪಿತಾಮಹ:

ಬಸವಣ್ಣನವರು ಒಬ್ಬ ಸಮಾಜವಾದಿಯಾಗಿ, ಪ್ರಜಾವಾದಿಯಾಗಿ, ಸಾಮಾಜಿಕ ನ್ಯಾಯ ಪರಿಪಾಲಕರಾಗಿ ಮತ್ತು ಮಾನವ ಹಕ್ಕುಗಳ ಪ್ರತಿಪಾದಕರಾಗಿ ಈ ನಾಡಿನ ಶ್ರೇಯೋಅಭಿವೃದ್ದಿಗಾಗಿ ಹಗಲಿರುಳು ದುಡಿದಾರೆ. ಹಾಗೆಯೇ ವಿಶ್ವದ ಮೊದಲ ಮಾನವೀಯ ಮೌಲ್ಯಗಳ ಹರಿಕಾರ ಜೊತೆಗೆ ಪ್ರಜಾಪ್ರಭುತ್ವದ ಪಿತಾಮಹರಾಗಿ ವಿಶ್ವದ ಶ್ರೇಯಸ್ಸು ಬಯಸಿದ ಮೊದಲ ಮೇಧಾವಿ ಪುರುಷ ಅಣ್ಣ ಬಸವಣ್ಣನವರು. ಅವರು ಅಂದಿನ ಜನರ ಕಷ್ಟಗಳಿಗಾಗಿ ನೊಂದಿದ್ದಾರೆ. ಕಣ್ಣಿರು ಹಾಕಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದನೆ ಮಾಡಿದ್ದಾರೆ. ಹೀಗೆ ಜನಪರ ಕಾಳಜಿ ಕೆಲಸಗಳನ್ನು ಅತ್ಯಂತ ಶ್ರದ್ಧಾ ಭಕ್ತಿ ಭಾವದಿಂದ ಮಾಡಿ, ಜನಸಾಮಾನ್ಯರ  ಸೌಹಾರ್ದತೆಯ ಸ್ನೇಹವನ್ನು ಸಂಪಾದನೆ ಮಾಡಿರುತ್ತಾರೆ. ಈ ಎಲ್ಲಾ ಹಿನ್ನಲೆಯಲ್ಲಿ ಬಸವಣ್ಣನವರು ಮ್ಯಾಗ್ನಕಾರ್ಟ್‌ ಒಪ್ಪಂದಕ್ಕಿಂತ ಅರ್ಧ ಶತಮಾನದ ಹಿಂದೆಯೇ ಕಲ್ಯಾಣದಲ್ಲಿ ಅನುಭವ ಮಂಟಪವೆಂಬ ವಿಶ್ವಮಾನ್ಯ ಪ್ರಜಾಪ್ರಭುತ್ವದ ಕಲ್ಪನೆಯಾದ ಸಂಸತ್ತ ಭವನವನ್ನು ನಿರ್ಮಿಸಿ,ಜಾಗತಿಕ ಲೋಕಕ್ಕೆ ಸಮತಾವಾದ ಸಮಾನತೆಯ ಸಂದೇಶವನ್ನು ಸಾರುವ, ಎತ್ತಿ ಹಿಡಿಯುವ ಕೆಲಸಗಳನ್ನು ನಿಟ್ಟಾಗಿ ಮಾಡುವ ಮೂಲಕ ಆ ತತ್ವಗಳನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಈ ಮಾಹಾನುಭಾವರಿಗೆ ಸಲ್ಲಬೇಕು. ಅದಕ್ಕಾಗಿ ಇವರಿಗೆ ವಿಶ್ವಗುರು ಎಂಬ ಬಿರುದು ಸಹ ಬಂದಿದೆ.

ಬಸವಣ್ಣನವರ ಪ್ರಜಾಪ್ರಭುತ್ವ, ಮಾನವೀಯ ಮೌಲ್ಯಗಳ ಕಲ್ಪನೆ:

ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ ಎನ್ನುವ ಮಾತುಗಳು ಇಲ್ಲಿ ವ್ಯಕ್ತಪಡಿಸುತ್ತಾ, ಅವರ ಒಂದು ವಚನದ ಸಾರ ಇಲ್ಲಿ ಪ್ರಸ್ತುತ ಪಡಿಸಿರುವೆ. ಕಳಬೇಡ, ಕೊಲಬೇಡ ಎಂಬ ಸಪ್ತಶೀಲದ ವಚನವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅಪರಾಧಗಳು ಈ ಜಗತ್ತಿನಲ್ಲಿ ನಡೆಯಲು ಸಾಧ್ಯವಿಲ್ಲ. ಹಾಗಾಗಿ ಈ ವಚನ  ನಮ್ಮಲ್ಲರ ಬಾಳಿಗೆ ಹಿಡಿದ ಕೈಗನ್ನಡಿ. ಬಸವಣ್ಣನವರ ಅನುಭಾವದ ಅಕ್ಷರರೂಪ. ಶರಣರ ಪಥದಲ್ಲಿ ಸಾಗ ಬಯಸುವ ಪ್ರತಿಯೊಬ್ಬ ಪಥಿಕನ ದಾರಿ ದೀಪಗಳು. ಅಂಧಕಾರ, ಕಂಧಾಚಾರ, ಕಳ್ಳತನ, ದರೋಡೆ, ಮೋಸ, ಕೊಲ್ಲುವುದು, ಸುಳ್ಳು ಹೇಳುವುದು ಸೇರಿದಂತೆ ಮೌಡ್ಯದ  ಕೊಳೆಯನ್ನು ತೊಳೆಯುವ, ಅಂಧಕಾರದ ಮನಕ್ಕೆ ಅಂಟಿದ ಕಿಲುಬನ್ನು ತೊಳೆದು ಸ್ವಚ್ಚಗೊಳಿಸಿ ಫಳಫಳ ಹೊಳೆಯುವಂತೆ ಮಾಡಬಲ್ಲ ವಿಚಾರ ತರಂಗಿಣಿಗಳು ಈ ವಚನದಲ್ಲಿ ಕಾಣಬಹುದು.

ಈ ವಚನದ ಆಶಯವನ್ನೇ ನಮ್ಮ ಸಂವಿಧಾನ ತಿಳಿಸುತ್ತದೆ. ಹಾಗೆಯೇ ಸಮಾನತೆ ತತ್ವ ಸಾರಿದ ಬಸವಣ್ಣನವರು ಜಾತಿಯತೆ ಹೋಗಲಾಡಿಸಬೇಕೆಂದು ಕರೆ ನೀಡಿ ಅದರಂತೆ ಹೋರಾಟ ಮಾಡಿದರು. ಆದರೆ ಇಂದಿಗೂ ಅದು ಹೋಗಿಲ್ಲ. ಇನ್ನು ಸಮಾಜದಲ್ಲಿ ಬೇರೂರಿ ಹೆಚ್ಚಾಗುತ್ತಿದೆ ಎಂಬುದೇ ನೋವಿನ ಸಂಗತಿ. 900 ವರ್ಷಗಳು ಕಳೆದರೂ ವಚನ ಸಾಹಿತ್ಯ ತತ್ವದ ಮೇಲೆ ಸಮಾಜ ದ್ರೋಹಿಗಳು ಹಾಗೂ ಪುರೋಹಿತಷಾಹಿಗಳಿಂದ ದಬ್ಬಾಳಿಕೆ ನಡೆದುಕೊಂಡು ಬರುತ್ತಲೇ ಇದೆ.

ಬಸವಣ್ಣನವರು ಕಲ್ಯಾಣದಲ್ಲಿ ಮಾಡಿದ ಎಲ್ಲಾ ಪ್ರಜಾಪ್ರಭುತ್ವ ಪ್ರಯೋಗಗಳಲ್ಲಿ ಬಹಳಷ್ಟು ಪ್ರಯೋಗಗಳು ಜಗತ್ತಿನಲ್ಲಿ ನಡೆದ ಮೊದಲ ಪ್ರಯೋಗಗಳೇ ಆಗಿವೆ. ಬಸವಣ್ಣನವರು ಎಲ್ಲದಕ್ಕೂ ಸಮಾಜಮುಖಿ ಸೇವೆಗಳ ಕಾರ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದರು. ರಾಜ್ಯಸಿಂಹಾಸನವನ್ನು ಅವರು ಕೆಣಕಲಿಲ್ಲ. ಆದರೆ ಶೂನ್ಯಸಿಂಹಾಸನ ಸೃಷ್ಟಿಸಿ ಪ್ರಜಾಪ್ರಭುತ್ವದ ಕನಸು ಬಿತ್ತಿದರು. ಅವರ ಅನುಭವ ಮಂಟಪದ ಅಮರಗಣಂಗಳಲ್ಲಿ ಎಲ್ಲಾ ಜಾತಿ ಜನಾಂಗದವರಿದ್ದರು. ಮಹಿಳೆಯರಿದ್ದರು. ಅವರೆಲ್ಲ ಆ ಅನುಭವ ಮಂಟಪ ಎಂಬ ಸಮಜೋ ಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದವರಾಗಿದ್ದರು. ಸ್ವತಂತ್ರ ಸರ್ವಸಮಾನತೆಯ ವಿಚಾರಧಾರೆಯನ್ನು ಜಗತ್ತಿನಲ್ಲಿ ಪಸರಿಸಿದವರಲ್ಲಿ ಬಸವಣ್ಣನವರು ಪ್ರಥಮರು. ಅವರು ಪ್ರಾರಂಭಿಸಿದ ಚಳವಳಿಯಿಂದಾಗಿ ಮಹಿಳೆಯರು ಮತ್ತು ಅಸ್ಪೃಶ್ಯರು ಕೂಡ ಶರಣರಾದರು. ಅಕ್ಷರ ಕಲಿತರು. ಶಿಕ್ಷಣ ಕಲಿಸಿ, ವಚನಗಳನ್ನು ರಚನೆ ಮಾಡುವಂತೆ ಪ್ರೋತ್ಸಾಹ ಮಾಡಿದ ಕೆಲಸ ಸಣ್ಣದಲ್ಲ. ಅದಕ್ಕಾಗಿ ಇದರ ಕೀರ್ತಿ ಮತ್ತು ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲಲೇಬೇಕು.

ಗೌರವದ ಮಾತು:

ಫ್ರಾನ್ಸ್ ದೇಶವು 18ನೇ ಶತಮಾನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿಯಿಂದ ಇತಿಹಾಸ ಸೃಷ್ಟಿಸಿತು. ಆದರೆ ನಮ್ಮ ಬಸವಣ್ಣನವರ ಶರಣ ಸಂಸ್ಕೃತಿಯು 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ, ಮಾನವೀಯ ಮೌಲ್ಯಗಳು, ಸೌಹಾರ್ದತೆ, ದಯೆ, ಭಕ್ತಿ , ಸಾಹಿತ್ಯ, ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಮಾನತೆ ಸೇರಿದಂತೆ ಹಲವು ಅದ್ಭುತ ಚಿಂತನೆಗೆ ಮುನ್ನುಡಿ ಬರೆದಿವೆ. ಬಸವಣ್ಣನವರ ವಚನಗಳಲ್ಲಿ ವಿಶ್ವಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳ ವಿಚಾರಗಳೆಲ್ಲವೋ ಸೇರಿವೆ. ಸ್ಥಾವರ ಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಗುಡಿಗೆ ಪರ್ಯಾಯವಾಗಿ ಅನುಭವ ಮಂಟಪ, ದಾನಕ್ಕೆ  ಸಮನಾಗಿ ದಾಸೋಹ, ಕರ್ಮ ಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತ. ಹೀಗೆ ಎಲ್ಲ ರೀತಿಯಿಂದಲೂ  ಬಸವಣ್ಣನವರು ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳನ್ನು ಎತ್ತಿ  ಹಿಡಿದಿದ್ದಾರೆ. ಹೀಗಾಗಿ ಬಸವ ತತ್ವವನ್ನು ಜನಸಾಮಾನ್ಯರಿಗೆ ತಿಳಿಸುವ, ಪ್ರಚಾರ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಬಸವಾಭಿಮಾನಿಗಳ ಮೇಲಿದೆ.




Leave a Reply

Your email address will not be published. Required fields are marked *

error: Content is protected !!