ಮನುಷ್ಯತ್ವ ಪ್ರಕ್ರಿಯೆಯ ನಿರಂತರ ಚಲನೆ

715

ಡಾ.ವಿನಯ ನಂದಿಹಾಳ ಅವರ ಮೂವಿ ಮಾತು ಅಂಕಣ ಬರಹ ಭಾಗ-4

ಮನುಷ್ಯ ಇತರ ಪ್ರಾಣಿಗಳಿಗಿಂತಲೂ ಭಿನ್ನವಾಗುವುದು ತನ್ನ ಯೋಚನಾ ಶಕ್ತಿಯಿಂದ ಮತ್ತು ಆ ಮೂಲಕ ಬೆಳೆಸಿಕೊಂಡ ಮನುಷ್ಯತ್ವದಿಂದ. ಮನುಷ್ಯತ್ವಕ್ಕೆ ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಆದರೆ ಅದು ನಿರಂತರ ಅನುಭಕ್ಕೆ ಬರುವಂತದಾಗಿದೆ. ಹೀಗಾಗಿ ನಿರಂತರವಾಗಿ ಅಪ್ಡೇಟ್ ಹೊಂದುವ ಕ್ರಿಯೆಯಾಗಿದೆ. ಮೃಗತ್ವ ಭಾವವನ್ನು ಅಳಿಸುವ ಈ ಕ್ರಿಯೆ ಒಂದೊಂದು ಹಂತ ಮತ್ತು ಸಂದರ್ಭದಲ್ಲಿ ಒಬ್ಬೊಬ್ಬರಲ್ಲಿ ಜಾಗೃತವಾಗುತ್ತ ಮನುಷ್ಯ ಸಮುದಾಯವನ್ನು ಆವರಿಸುವ ಗುಣ ಹೊಂದಿದೆ. ಮೂಲತ: ಈ ಪ್ರವೃತ್ತಿ ಮನುಷ್ಯನಲ್ಲಿದ್ದರು ಹಣ, ಅಧಿಕಾರ, ಜಾತಿ, ಧರ್ಮ, ಲಿಂಗ, ವರ್ಗ ಎಂಬ ತಾರತಮ್ಯದ ಮುಸುಕು ಕವಿದಿರುತ್ತದೆ. ಅದು ಸರಿದು ಸಹಜ ಮನುಷ್ಯ ಚೇತನ ಜಾಗೃತಗೊಳ್ಳಲು ಕೆಲವು ಘಟನೆಗಳು ಘಟಿಸಬೇಕು. ಆಗ ಮನುಷ್ಯತ್ವದ ಅರಿವು ಆಗುತ್ತದೆ. ಇಂತಹ ಮನುಷ್ಯತ್ವದ ಶೋಧದ ಪ್ರಯತ್ನವೇ ‘ಹರಿವು’ ಚಿತ್ರವಾಗಿದೆ.

ಮಂಸೋರೆ ನಿರ್ದೇಶಿಸಿದ ಅಪ್ಪಟ ಕನ್ನಡ ದೇಶಿಯ ಚಿತ್ರ ಇದು ಎಂದರೆ ಉತ್ಪ್ರೇಕ್ಷೆಯಾಗಲಾರದು. ಈ ಚಿತ್ರದಲ್ಲಿ ಎಲ್ಲ ಅಂಶಗಳು ನನ್ನವೆ ಎಂದು ಪ್ರೇಕ್ಷಕನಿಗೆ ಎನಿಸದಿರದು. ಒಂದು ಆಪ್ತ ನಿರೂಪಣೆಯ ಮೂಲಕ ಮನುಷ್ಯತ್ವ ಭಿನ್ನ ಆಯಾಮಗಳನ್ನು ಪ್ರತಿನಿಧಿಸುವ ಈ ಚಿತ್ರ ಸಂಬಂಧಗಳ ಮಹತ್ವ, ಪ್ರತಿಯೊಬ್ಬರ ಅಂತರಂಗ ಭ್ರಷ್ಟಗೊಂಡ ಬಗೆ ಹಾಗೂ ಭ್ರಷ್ಟಗೊಂಡ ಅಂತರಂಗಕ್ಕೆ ಮದ್ದನ್ನು ಸಹ ಸೂಚಿಸುತ್ತದೆ.

ಡಾ.ಆಶಾ ಬೆನಕಪ್ಪ ಅವರ ಬರಹವೊಂದು ಈ ಚಿತ್ರಕ್ಕೆ ಮೂಲವಾಗಿದೆ. ನೈಜ ಘಟನೆಯೊಂದನ್ನು ಅಷ್ಟೆ ನೈಜವಾಗಿ ಚಿತ್ರಿಸುವುದು ನಿರ್ದೇಶಕನಿಗೆ ದೊಡ್ಡ ಸವಾಲು. ಆ ಸವಾಲನ್ನು ಅತ್ಯಂತ ಯಶಸ್ವಿಯಾಗಿ ಮಂಸೂರೆಯವರು ಮೊದಲ ಪ್ರಯತ್ನದಲ್ಲೇ ನಿರ್ವಹಿಸಿದ್ದಾರೆ. ಮುಖ್ಯವಾಗಿ ಈ ಚಿತ್ರದಲ್ಲಿ ಎರಡು ಕಥನಗಳು ಸಾಗುತ್ತವೆ. ಶರಣಪ್ಪ ಎನ್ನುವ ಉತ್ತರ ಕರ್ನಾಟಕದ ಬಡ ರೈತನೊಬ್ಬ ಹೃದಯ ಕಾಯಿಲೆಯಿಂದ ಬಳಲುತ್ತಿರುವ ತನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ತನ್ನ ಒಂದು ಎಕರೆ ಹೊಲವನ್ನು ಮಾರಿ ಬೆಂಗಳೂರಿಗೆ ಬರುವುದು. ಇನ್ನೊಂದು ಸೂರಿ ಎನ್ನುವ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವ ವ್ಯಕ್ತಿಯ ಕಥೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಅವರನ್ನು ನೋಡಿಕೊಳ್ಳುವುದು ಅನಿವಾರ್ಯ ಕರ್ಮ ಎಂಬುವಂತೆ ವರ್ತಿಸುವವನು. ಇದು ಇಂದಿನ ಟಿವಿ ಮಾಧ್ಯಮದಲ್ಲಿರುವವರ ಬದುಕನ್ನ ಸೂಕ್ಷ್ಮವಾಗಿ ಕಟ್ಟಿ ಕೊಡುತ್ತೆ. ವೃತ್ತಿ ಬದುಕಿನ ಧಾವಂತದಲ್ಲಿ ನಿಜ ಬದುಕಿನ ಸಂಬಂಧಗಳ ಜೊತೆಗಿನ ಕೊಂಡಿ ಅದ್ಹೇಗೆ ಕಳಚಿಕೊಳ್ಳುತ್ತಿದೆ ಅನ್ನೋದಕ್ಕೆ ಸಾಕ್ಷಿಯಂತಿದೆ. ಗ್ರಾಮ್ಯ-ನಗರದವರು ಸಂಧಿಸಿದಾಗ ಒಡಮೂಡುವ ಪ್ರಕ್ರಿಯೆ ಏನು ಎನ್ನುವುದು ಚಿತ್ರದ ಜೀವಾಳ. ಯಾಕೆಂದರೆ ಶರಣ್ಣಪ್ಪನಿಗೆ ಮಗನೆ ಜೀವ ಹೀಗಾಗಿ ಅವನನ್ನು ಅವಶ್ಯವಾಗಿ ಉಳಿಸಿಕೊಳ್ಳಲೇಬೇಕೆಂಬ ಪ್ರಾಮಾಣಿಕ ಮತ್ತು ಮುಗ್ಧ ಪ್ರಯತ್ನವಾದರೆ. ಇನ್ನೊಬ್ಬನದು ಅನಿವಾರ್ಯವಾಗಿ ತನ್ನ ತಂದೆಯನ್ನು ಉಳಿಸಿಕೊಳ್ಳಬೇಕೆಂಬ ಕ್ರಿಯೆ. ಇಲ್ಲಿ ಸರಿ ತಪ್ಪುಗಳು ಯಾವವು ಇಲ್ಲ. ಅವರದೇ ದೃಷ್ಟಿಕೋನದಲ್ಲಿ ಅವರದೇ ಸರಿ. ಆದರೆ ಮನುಷ್ಯತ್ವ ಮತ್ತು ಸಂಬಂಧ ಎಂದು ಬಂದಾಗ ಮತ್ತೆ ಮತ್ತೆ ಪುನವಿಮರ್ಶಿಸಿಕೊಳ್ಳುವ ಹಾಗೆ ಈ ಚಿತ್ರ ಮಾಡುತ್ತದೆ.

ಮಗನನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸೋತ ಶರಣಪ್ಪನಿಗೆ, ಮಗನ ಶವವನ್ನು ಊರಿಗೆ ತೆಗೆದುಕೊಂಡು ಹೋಗಿ ಕೊನೆಯ ಬಾರಿಗೆ ತನ್ನ ಹೆಂಡತಿಗೆ ಅಂದರೆ ಮಗನ ತಾಯಿ ಮುಖವನ್ನು ತೋರಿಸಬೇಕೆಂಬ ಪ್ರಯತ್ನವೇ ಆ ಮಗುವನ್ನು ಟ್ರಂಕಿನಲ್ಲಿ ಹಾಕಿಕೊಂಡು ಊರಿಗೆ ಹೊರುಡುವಂತೆ ಮಾಡುತ್ತದೆ. ಮಗನ ಶವವನ್ನ ಗಾಡಿಯಲ್ಲಿ ಸಾಗಿಸಲೂ ಸಹ ಅವನ ಬಳಿ ದುಡ್ಡು ಇರುವುದಿಲ್ಲ. ಮನುಷ್ಯತ್ವಕ್ಕಿಂತ ಮನಿಗೆ ಬೆಲೆ ಕೊಡುತ್ತಿರುವ ಬೆಂಗಳೂರು ನಗರದಲ್ಲಿ ಯಾರ ಬಳಿಯೂ ಕರುಣೆ ಉಳಿದಿಲ್ಲ ಎನ್ನುವಂತೆ ಇಲ್ಲಿನ ಕೆಲವು ಪಾತ್ರಗಳು ಕಣ್ಣಿಗೆ ರಾಚುತ್ತವೆ. ಹೀಗಾಗಿ ಶರಣಪ್ಪನ ಪಾತ್ರಧಾರಿ ನಟ ಸಂಚಾರಿ ವಿಜಯ ತನ್ನ ಕುಡಿಯನ್ನ ಟ್ರಂಕಿನಲ್ಲಿ ತುಂಬಿ ತಲೆ ಮೇಲಿಟ್ಟುಕೊಂಡು ಹೆಜ್ಜೆ ಹಾಕುತ್ತಾನೆ. ಈ ವೇಳೆ ಅನಿವಾರ್ಯವಾಗಿ ಬಿಜಾಪುರ ಕಡೆಗೆ ಸಾಗುವ ಸೂರಿ ಮತ್ತು ಅವನ ಮಾಧ್ಯಮ ತಂಡ ಇವನಿಗೆ ಎದುರಾಗುತ್ತೆ. ಅವರನ್ನ ಕಾಡಿಬೇಡಿ ಅವರೊಂದಿಗೆ ಗಾಡಿಯಲ್ಲಿ ಕರೆದುಕೊಂಡು ಹೋಗುವಂತೆ ಮಾಡುತ್ತಾನೆ.

ಒಂದು ಪಯಣ ಇಡೀ ವ್ಯಕ್ತಿತ್ವವನ್ನೆ ಬದಲಿಸಿ ಬಿಡುವ ಪರಿ ಮನುಷ್ಯತ್ವದ ಭಾಗವಾಗಿರುತ್ತದೆ. ‘ಏ ಹಳ್ಳಿ ಗಮಾರ’ ಎನ್ನುವ ಡೈಲಾಗವೊಂದು ನಗರದ ಜನ ಹಳ್ಳಿಯ ಜನರ ಬಗ್ಗೆ ಹೊಂದಿದ್ದ ಭಾವನೆಯನ್ನು ಸೂಚಿಸುತ್ತದೆ. ಆ ರೀತಿಯಾಗಿ ಶರಣಪ್ಪನನ್ನು ಎಲ್ಲರು ನೋಡುತ್ತಾರೆ. ಅವನ ಬಗ್ಗೆ ಅಸಡ್ಡೆ ತೋರುವ ದೃಶ್ಯಗಳು ಬಂದಾಗ ಮನಸ್ಸು ಕಸವಿಸಿಕೊಳ್ಳುವುದು. ಆದರೆ ಅವನ ನಿಜ ಸ್ಥಿತಿ ತಿಳಿದಾಗ ಅದಕ್ಕೆ ಮಿಡಿಯುವುದು ಮನುಷ್ಯತ್ವದ ಸಂಕೇತವಾಗಿ ಗೋಚರವಾಗುತ್ತದೆ. ಈ ಚಿತ್ರದ ಕಥೆ ಗಟ್ಟಿಯಾಗಿದೆ. ಹೀಗಾಗಿ ನಿರ್ದಿಷ್ಟವಾಗಿ ಈ ಜಾನರನ ಸಿನಿಮಾ ಇದು ಎಂದು ಹೇಳಲು ಆಗುವುದಿಲ್ಲ. ಈ ಚಿತ್ರದಲ್ಲಿನ ಸಂಭಾಷಣೆಗಳು ಕೆಲವು ಕಡೆ ತುಂಬ ಫಿಲಾಸಫಿಕಲ್ ಅನಿಸಿದರು, ಇಂತಹ ವಿಷಯವನ್ನು ನಿರ್ವಹಿಸಲು ಅವಶ್ಯ ಎನಿಸುತ್ತದೆ. ನಾಲ್ಕು ಸಮಾಧಾನನ ಮಾತಿಗೂ ‘ಲಂಚ’ ಎಂದು ಶರಣಪ್ಪ ಹೇಳುವ ಮಾತು ನಮ್ಮ ಭ್ರಷ್ಟ ವ್ಯವಸ್ಥೆಯನ್ನು ಸೂಚಿಸುತ್ತದೆ. ‘ಹಳ್ಳಿ ಗಮಾರಾ’ ಎಂದಾಗ ‘ನೋಡಿದಾ’ ಎಂದು ಶರಣ್ಣಪ್ಪನ ಪಾತ್ರದಾರಿ ನೀಡುವ ಪ್ರಕ್ರಿಯೆ ಶ್ರೀಮಂತರ ಅಹಂಕಾರ, ಓದಿದವರೆಂಬ ಸೊಕ್ಕು, ನಗರವರೆಂಬ ಕೊಬ್ಬನ್ನು ಹೇಳುತ್ತದೆ. ಶರಣ್ಣಪ್ಪನ ದೋತರದ ಚುಂಗು ರಸ್ತೆಯಲ್ಲಿ ಎಳೆಯುವುದು, ಮನುಷ್ಯತ್ವದಕ್ಕೆ ಹತ್ತಿದ ಕಸವನ್ನು ಗೂಡಿಸಿದಂತೆ ಗೋಚರವಾಗುತ್ತದೆ. ಸಂಚಾರಿ ವಿಜಯ ಅವರಿಗೆ ಆ ಕಾಸ್ಟ್ಯೂಮ್ ಅಷ್ಟೊಂದು ಹತ್ತಿಕೊಂಡು ನೇರ ಎದೆಯಾಳಕ್ಕೆ ಇಳಿಯುತ್ತದೆ. ಜಂಗಮ, ಸ್ಥಿತ ಪ್ರಜ್ಞೆ, ಮೂಲಗುಣ, ವೈಚಾರಿಕತೆ, ಭಾವನಾತ್ಮಕತೆ, ಸ್ವಾನುಭವ ಎನ್ನುವಂತಹ ಪದಗಳು ಸಂಭಾಷಣೆಯಲ್ಲಿ ಬರುವಾಗ ನಿರ್ದೇಶಕ ಪ್ರೇಕ್ಷಕರ ಜೊತಗೆ ಬೌದ್ದಿಕ ಸಂವಾದದಲ್ಲಿ ತೊಡಗವಂತೆ ಪ್ರೇರೆಪಿಸಲು ಪ್ರಯತ್ನಿಸಿದಂತೆ ಕಂಡು ಬರುತ್ತದೆ.

‘ಈ ನೇಗಲಕ್ಕ ನೋಡ ಹಗ್ಗ ಇರುವುದು ಕಡೆ ದಾರಿ, ಸಪಾಟ ಇರುವುದನೆಲ್ಲ ರೋಡ ಅನ್ನಾಕ ಆಗಲ್ಲ ಮಗನ, ಆದರ ಎದ್ಕ ರೋಡ ಅಂತಿವೊ ಅದು ಸಪಾಟ ಇರುತ್ತದ ನೋಡ’, ‘ಮೊಬೈಲ್ ಬಂದಾಗಿನಿಂದ ಮಾತು ಮಾತಾಗಿಯೇ ಉಳಿದಿಲ್ಲ ಸಂಬಂಧಗಳು ಸಂಬಂಧದಿಂದ ಭಿನ್ನ ಎನಿಸುತ್ತದೆ’, ‘ಅಂವ ಬದುಕಿರೋಷ್ಟು ದಿನ ಆರಾಮ ಆರಮಾಗಿರೊದಕ್ಕಿಂತ ನಾನ ಬದುಕಿರುವಷ್ಟು ದಿನ ಅಂವ ಆರಾಮ ಇರಾಂಗ ಮಾಡಕ್ಕಾಗಲ್ಲ ರಿ ಡಾಕ್ಟರ್’, ‘ಹೋಗ ಮುಂದ ಹೆಗಲ ಮ್ಯಾಲ ಹೊತ್ತಕೊಂಡ ಹೊಂಟವ, ಈಗ ತಲಿಮ್ಯಾಲಿ ಹೊತ್ತಕೊಂಡ ಹೊಂಟಿನಿ ನೋಡ್ರಿ’, ‘ಮನುಷ್ಯ ಅನ್ನುವ ಕ್ರೇಡಿಟ್ ಕಾರ್ಡನ್ನು ಸಮಯ ಸಿಕ್ಕಾಗ ಚಲಾಯಿಸಿಕೊಂಡು ಬಿಡಬೇಕು’ ಎನ್ನವಂತಹ ಸಂಭಾಷಣೆಗಳು ಚಿತ್ರ ತಂಡ ಬರವಣಿಗೆಗೆ ನೀಡಿದ ಪ್ರಾಧಾನ್ಯತೆ ತಿಳಿಯುತ್ತದೆ. ಆ ಮೂಲಕ ತಾವು ಹೇಳುವ ವಿಷಯವನ್ನು ಮನಸ್ಸಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಧ್ಯಮ ಲೋಕದಲ್ಲಿ ಕಾರ್ಯ ನಿರ್ವಹಿಸುವವರು ಸ್ಟೋರಿಗಾಗಿ ಕೆಲವರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿರುತ್ತಾರೆ. ಅದು ಸಹಜ ಕೂಡ, ಆದರೆ ಇದರಲ್ಲಿ ಬರುವ ‘ಹೆಣ ತೋರಿಸಿ ಹಣ ಮಾಡುವುದು ಬೇಡ’ ಎನ್ನುವ ಮಾತು ಬಹಳ ಜನರಿಗೆ ಹೇಳುವ ಬುದ್ದಿ ಮಾತಿನಂತಿದೆ, ಅರ್ಥ ಮಾಡಿಕೊಳ್ಳಬೇಕಷ್ಟೆ.

ಕಲಾತ್ಮಕ ಚಿತ್ರಗಳನ್ನ ನೋಡುಗರ ಎದೆಯೊಳಗೆ ಇಳಿಸುವಲ್ಲಿ ನಿರ್ದೇಶಕ ಮಂಸೋರೆ ಎತ್ತಿದ ಕೈ. ಅದನ್ನ ಮೊದಲ ಚಿತ್ರದಲ್ಲಿ ತೋರಿಸಿದರು. ಅವರ ಮುಡಿಗೆ ರಾಷ್ಟ ಪ್ರಶಸ್ತಿ ಗರಿ ಏರಿತು. ನಂತರ ಬಂಧ ನಾತಿಚರಾಮಿ, ಆಕ್ಟ್ 1978 ಚಿತ್ರಗಳು ಮಂಸೋರೆ ಒಳಗಿನ ನಿರ್ದೇಶಕ ಎಂಥವನು ಅನ್ನೋದು ಸಾಬೀತು ಮಾಡಿದವು. ಇನ್ನು ನಟ ಸಂಚಾರಿ ವಿಜಯ ಅದ್ಭುತ ನಟ. ನಾನು ಅವನಲ್ಲ ಅವಳು ಚಿತ್ರಕ್ಕಾಗಿ ರಾಷ್ಟ ಪ್ರಶಸ್ತಿ ಪಡೆದ ನಟ ಹರಿವು ಚಿತ್ರವನ್ನ ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಅಲ್ಲಿ ಸಂಚಾರಿ ವಿಜಯ ಕಾಣಿಸುವುದಿಲ್ಲ. ಒಬ್ಬ ಅಪ್ಪಟ ಉತ್ತರ ಕರ್ನಾಟಕದ ಬಡ ರೈತ ಕಾಣಿಸುತ್ತಾನೆ. ಇನ್ನು ಶ್ವೇತಾ ದೇಸಾಯಿ, ಅರವಿಂದ ಕುಪ್ಲಿಕರ್, ಮಧುಶ್ರೀ, ಮಾಸ್ಟರ್ ಶೋಹಿಬ್, ಚೇತನ ಸೇರಿದಂತೆ ಪ್ರತಿಯೊಂದು ಪಾತ್ರಗಳು ಚಿತ್ರದ ಜೀವಾಳ. ಚರಣ್ ರಾಜ್ ಸಂಗೀತ, ಆನಂದ ಸುಂದರೇಶ ಕ್ಯಾಮೆರಾ ವರ್ಕ್ ಮಂಸೋರೆ ಕನಸಿಗೆ ಜೀವ ತುಂಬಿವೆ. ಹರಿವು ಚಿತ್ರ ನೋಡಿದ ಪ್ರತಿಯೊಬ್ಬರ ಎದೆಯೊಳಗೆ ನಿರಂತರವಾಗಿ ಗುಪ್ತಗಾಮಿನಿಯಂತೆ ಸಂಚರಿಸುತ್ತಲೇ ಇರುತ್ತೆ.

ನಿಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು vinay99164@gmail.com




Leave a Reply

Your email address will not be published. Required fields are marked *

error: Content is protected !!