ಅಭದ್ರತೆ ವೃತ್ತಿ ಬದುಕಿನ ಅಲೆಮಾರಿಗಳು…

620

ಪ್ರಸಿದ್ಧ ಇತಿಹಾಸಕಾರ ಡೇನಿಯಲ್ ಬೂರ್ಸ್ ಟಿನ್ ನ ‘ದಿ ಇಮೇಜ್’ ಕೃತಿಯಲ್ಲಿನ(ಎಚ್.ಎಸ್ ಈಶ್ವರ ಅವರ ಲೇಖನದಿಂದ) ಸಾಲುಗಳು ಹೀಗಿವೆ, ‘ಸ್ನೇಹಿತೆಯೊಬ್ಬಳು ಮಗುವಿನ ತಾಯಿಗೆ ಹೇಳುತ್ತಾಳೆ. ಆಹಾ ನಿನ್ನ ಮಗು ಅದೆಷ್ಟು ಮುದ್ದಾಗಿದೆ. ಅದಕ್ಕೆ ಮಗುವಿನ ತಾಯಿ ಕೊಡುವ ಉತ್ತರ, ನೀನು ಅವಳ ಫೋಟೋ ನೋಡಬೇಕು. ಇನ್ನೂ ಸುಂದರವಾಗಿದ್ದಾಳೆ. ಇದು ನಮ್ಮ ಮಾಧ್ಯಮ ಜಗತ್ತಿಗೆ ಸೂಕ್ತವಾದ ಮಾತು. ವಾಸ್ತವಕ್ಕಿಂತ ಭ್ರಮೆಯ ಲೋಕವನ್ನ ಸೃಷ್ಟಿಸುವ ಕೆಲಸ ಮಾಡಲಾಗ್ತಿದೆ. ಇದರ ಒಂದು ಭಾಗವಾಗಿರುವ ನಾನು, ಇದನ್ನ ತುಂಬಾ ನೋವಿನಿಂದ ಹೇಳ್ತಿದ್ದೇನೆ.

1980ರ ದಶಕದ ಮಧ್ಯೆ ಟಿವಿ ಮಾಧ್ಯಮ ಶುರುವಾಯ್ತು. 1990ರಲ್ಲಿ ಸ್ವಲ್ಪ ವೇಗ ಪಡೆದುಕೊಂಡಿತು. 1995ರಲ್ಲಿ ಹೊಸ ಕ್ರಾಂತಿಯಾಯ್ತು. ಸ್ಯಾಟ್ ಲೈಟ್ ಟೆಕ್ನಾಲಜಿ ಬಂದ್ಮೇಲೆ ಎಲೆಕ್ಟ್ರಾನಿಕ್ ಮೀಡಿಯಾ ಹೊಸ ಲೋಕ ಸೃಷ್ಟಿಸಿತು. ನೋಡು ನೋಡ್ತಿದ್ದಂತೆ ಜನರನ್ನ ತನ್ನತ್ತ ಸೆಳೆದುಕೊಂಡು ಬಿಡ್ತು. ಮೊದ್ಲೇ ಮಾಯಾಡಬ್ಬಿಯೆಂದು ಕರೆಸಿಕೊಂಡಿತ್ತು ಅಲ್ವೆ. ಹೀಗಾಗಿ ಎಲ್ಲರನ್ನೂ ಮರಳು ಮಾಡಿತು. ಆದ್ರೆ, ಕೇವಲ ಎರಡೂವರೆ ದಶಕಗಳಲ್ಲಿಯೇ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದ್ರಿಂದಾಗಿ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಕೆಲಸ ಮಾಡುವ ಸಂಗಾತಿಗಳಿಗೆ ವೃತ್ತಿಯ ಭದ್ರತೆ ಅನ್ನೋದೇ ಇಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗ್ತಿದೆ.

ಯಾವುದೇ ಮಾಧ್ಯಮ ಸಂಸ್ಥೆ ಇರ್ಲಿ, ಅದರ ಜೀವಾಳ ಇರೋದು ಜಾಹೀರಾತಿನಲ್ಲಿ. ಹೀಗಾಗಿ ಸಮೂಹ ಮಾಧ್ಯಮದಲ್ಲಿ ಲಕ್ಷಾಂತರ ಜನರು ಕೆಲಸ ಮಾಡ್ತಿದ್ದಾರೆ. ಕರ್ನಾಟಕದಲ್ಲಿ 18 ಸ್ಯಾಟ್ ಲೈಟ್ ನ್ಯೂಸ್ ಚಾನೆಲ್ ಗಳಿವೆ. ಇನ್ನೂ ಒಂದಿಷ್ಟು ಬರ್ತಿವೆ. ಇದರಲ್ಲಿ 7 ಚಾನೆಲ್ ಗಳು ಮೂರ್ನಾಲ್ಕು ವರ್ಷಗಳ ಅಂತರದಲ್ಲಿಯೇ ಮುಚ್ಚಿವೆ. ಒಂದು ಚಾನೆಲ್ ನಲ್ಲಿ ಸಾಮಾನ್ಯವಾಗಿ 300 ಜನ ಕೆಲಸ ಮಾಡ್ತಿದ್ರೂ 2,100 ಜನ ಕೆಲಸ ಕಳೆದುಕೊಂಡ್ರು. ಅದರಲ್ಲಿ ಎಷ್ಟು ಜನಕ್ಕೆ ಮರಳಿ ಕೆಲಸ ಸಿಕ್ಕಿರುತ್ತೆ?

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ 2016ರ ಮಾಹಿತಿ ಪ್ರಕಾರ ದೇಶದಲ್ಲಿ 1031 ಚಾನೆಲ್ ಗಳಿಗೆ ಅನುಮತಿ ನೀಡಲಾಗಿದೆ. ಅದರಲ್ಲಿ ವಿವಿಧ ಕಾರಣಗಳಿಂದಾಗಿ 139 ಚಾನೆಲ್ ಗಳಿಗೆ ನೀಡಿದ ಪರ್ಮಿಷನ್ ಕ್ಯಾನ್ಸಲ್ ಮಾಡಲಾಗಿದೆ. 489 ಮನರಂಜನೆಯ ಚಾನೆಲ್ ಗಳಿವೆ. 2015ರ ಮಾಹಿತಿ ಪ್ರಕಾರ 1 ಲಕ್ಷದ 5 ಸಾವಿರದ 443 ದಿನಪತ್ರಿಕೆಗಳಿವೆ. 2013ರಲ್ಲಿ 100 ಮಿಲಿಯನ್ ಕಾಪಿ ಇದ್ರೆ 2018ರ ವೇಳೆಗೆ 240 ಮಿಲಿಯನ್ ಕಾಪಿ ಪ್ರತಿದಿನ ಮಾರಾಟವಾಗ್ತಿವೆ. ವಿಶ್ವದ ಎರಡನೇ ಅತೀ ಹೆಚ್ಚು ನ್ಯೂಸ್ ಪೇಪರ್ ಮಾರ್ಕೆಟ್ ಹೊಂದಿದ್ದು ಭಾರತ. ಇಷ್ಟೊಂದು ಸುದ್ದಿ ಸಂಸ್ಥೆಗಳು ಬದುಕಿರೋದು ಜಾಹೀರಾತು ಪ್ರಪಂಚದ ಮೇಲೆ. ಪತ್ರಿಕೆಗಳು ಪ್ರಸಾರ ಸಂಖ್ಯೆಯ ಮೇಲೆ, ಟಿವಿಗಳು ಟಿಆರ್ ಪಿ ರೇಟಿಂಗ್ ಮೇಲೆ ಜಾಹೀರಾತು ಮೌಲ್ಯ ಹೆಚ್ಚಿಸಿಕೊಂಡು ಕಾರ್ಯನಿರ್ವಹಿಸ್ತಿವೆ. ಇದನ್ನೇ ನಂಬಿಕೊಂಡು ಬಂದ ಕೆಲವು ಚಾನೆಲ್ ಗಳು ಬಂದಷ್ಟೇ ವೇಗದಲ್ಲಿ ಮುಚ್ಚಿದ್ವು. ಇಲ್ಲಿ ಹೆಚ್ಚು ನೋವು ಅನುಭವಿಸೋದು ಪತ್ರಕರ್ತ. ಬಂಡವಾಳ ಹೂಡಿದ ಮಾಲೀಕನಲ್ಲ.!

ದಿಢೀರ್ ಅಂತಾ ವಾಹಿನಿಗಳು ಬಂದ್ ಆದ್ಮೇಲೆ ಮತ್ತೆ ಕೆಲಸಕ್ಕೆ ಅಲೆಯೋದು ಇದೆಯಲ್ಲ ಅದು ನಿಜಕ್ಕೂ ಯಾತನೆ. ಮನೆ ಕಡೆ ಸ್ಥಿತಿವಂತರು ಇದ್ರೆ ಬದುಕಿಕೊಳ್ತಾರೆ. ಇದೇ ಕೆಲಸ ನಂಬಿಕೊಂಡಿರುವವರ ಪಾಡು ಯಾರಿಗೂ ಹೇಳೋದು ಬೇಡ. ಅಷ್ಟೊಂದು ಕೆಟ್ಟದಾಗಿರುತ್ತೆ. ಹೀಗಾಗಿ ಕೆಲ ಸುದ್ದಿ ವಾಹಿನಿಗಳ ಮೇಲೆ ಸಿಬ್ಬಂದಿ ಕೇಸ್ ಮಾಡಿದ್ದಾರೆ. ಆದ್ರೆ, ತಿಂಗಳ ಸಂಬಳ ನಂಬಿಕೊಂಡು ಬದುಕುವ ಪತ್ರಕರ್ತರು ದೊಡ್ಡವರ ಜೊತೆ ಹೋರಾಡಲು ಸಾಧ್ಯವೆ? ಒಂದು ವೇಳೆ ಅದಕ್ಕೂ ಸೈ ಅಂದ್ರೆ ಎಷ್ಟು ದಿನ? ಮುಂದಿನ ಬದುಕು ಕಟ್ಟಿಕೊಳ್ಳುವುದು ಇರ್ಲಿ, ಈಗಿರುವ ಜೀವನ ಕಾಪಾಡಿಕೊಂಡ್ರೆ ಸಾಕು ಎನಿಸಿಬಿಡುತ್ತೆ.

ಕಳೆದ ಒಂದೆರಡು ವರ್ಷಗಳಲ್ಲಿ ರಾಜ್ಯದ ಟಿವಿ ಮಾಧ್ಯಮದಲ್ಲಿ ನಡೆದ ಘಟನೆಗಳು, ಎಲೆಕ್ಟ್ರಾನಿಕ್ ಮೀಡಿಯಾ ಬುಡವನ್ನೇ ಅಲುಗಾಡಿಸಿದಂತೆ ಮಾಡಿವೆ. ದಿಢೀರ್ ಅಂತಾ ಮುಚ್ಚುವ ಸುದ್ದಿ ವಾಹಿನಿಗಳಿಂದಾಗಿ ಬೀದಿಗೆ ಬರುವ ಸಾವಿರಾರು ಪತ್ರಕರ್ತರಿಗೆ ಕೆಲಸ ಎಲ್ಲಿಂದ ಸಿಗಬೇಕು. ಸಿಗುವ ನೂರಾರು ಜನರಿಗೂ ಮೊದಲಿದ್ದ ಸಂಬಳಕ್ಕಿಂತ ಕಡಿಮೆ ಸ್ಯಾಲರಿಗೆ ಸೇರಿಕೊಳ್ಳಬೇಕು. ಮೊದ್ಲೇ ಹಾಸಿ ಹೊದ್ದುಕೊಳ್ಳುವ ಜೀವನದಲ್ಲಿ ಮತ್ತಷ್ಟು ಕಷ್ಟಗಳು ಸೇರಿಕೊಳ್ಳುತ್ತವೆ. ಹೀಗಿದ್ರೂ ಮಾಧ್ಯಮದಲ್ಲಿ ಏನಾದ್ರೂ ಮಾಡಬೇಕು ಅಂತಾ ಬಂದಿರುವ ಅದೆಷ್ಟೋ ಜನರಿಗೆ ಇದರಾಚೆಗೆ ಯೋಚನೆ ಮಾಡಲು ಬರೋದಿಲ್ಲ. ಸಂಸ್ಥೆಯಿಂದ ಸಂಸ್ಥೆಗೆ ಅಲೆಯೋದು ತಪ್ಪಲ್ಲ. ಹೀಗಾಗಿ ಪತ್ರಕರ್ತರನ್ನ ನಾನು ಅಭದ್ರತೆಯ ವೃತ್ತಿ ಬದುಕಿನ ಅಲೆಮಾರಿಗಳು ಅಂತಾ ಹೇಳ್ತಿರೋದು.

ಹೊಸ ಹೊಸ ಸುದ್ದಿ ವಾಹಿನಿಗಳು ಹುಟ್ಟುಕೊಳ್ಳತ್ತಲೇ ಇವೆ. ಆದ್ರೆ, ಗಟ್ಟಿಯಾಗಿ ಬೇರೂರಿ ನಿಲ್ಲುವ ಮೊದ್ಲೇ ಬಿದ್ದು ಹೋಗ್ತಿವೆ. ಇದ್ರಿಂದಾಗಿ ಮಾಧ್ಯಮದವರ ಬದುಕು ಇಂದು ಅತಂತ್ರವಾಗಿದೆ. ಬೆಂಗಳೂರು, ಜಿಲ್ಲೆ ಹಾಗೂ ತಾಲೂಕಿನಲ್ಲಿರುವ ಕೆಲ ವರದಿಗಾರರು ಇರೋ ಸ್ಟೈಲ್ ನೋಡಿದ ಜನ, ಇದ್ದರೆ ಇವರ ತರ ಲೈಫ್ ಇರಬೇಕು ಅಂತಾರೆ. ಯಾಕೆ ಅನ್ನೋ ಸತ್ಯ ಗುಟ್ಟಾಗಿ ಉಳಿದಿಲ್ಲ. ಅಧಿಕಾರಿಗಳ, ಜನಪ್ರತಿನಿಧಿಗಳ ಹೊಗಳುಭಟ್ಟರಾಗಿ ತಮ್ಮ ಬದುಕನ್ನ ಸುಭದ್ರವಾಗಿ ಕಟ್ಟಿಕೊಂಡಿರುವ ಜರ್ನಲಿಸ್ಟ್ ಗಳು ಸಹ ಸಿಗ್ತಾರೆ. ಆದ್ರೆ, ಶೇಕಡ 90ರಷ್ಟು ಪತ್ರಕರ್ತರು ನಂಬಿರೋದು ಸಂಸ್ಥೆ ಮತ್ತು ಸ್ಯಾಲರಿಯನ್ನ.

ಹೊತ್ತು ಗೊತ್ತು ಇಲ್ಲದೆ ದುಡಿಯುವ ಪತ್ರಕರ್ತರ ನೌಕರಿಯ ಸ್ಥಿತಿಯಿದು. ನೀವು ಯಾವುದೇ ಪತ್ರಕರ್ತನ ಬಳಿ ಹೋಗಿ ನಿಮ್ಮ ಕೆಲಸ ಹೇಗಿದೆ ಅಂತಾ ಕೇಳಿ. ಚೆನ್ನಾಗಿದೆಯಂತ ಹೇಳುವವರ ಸಂಖ್ಯೆಯೇ ಹೆಚ್ಚು. ಯಾಕಂದ್ರೆ, ನಮ್ಮ ಮರ್ಯಾದೆಯನ್ನ ನಾವೇ ತೆಗೆದುಕೊಳ್ಳುವುದು ಬೇಡ ಅಂತಾರೆ. ಒಡಲೊಳಗೆ ನಿಗಿನಿಗಿ ಸುಡುವ ಕೆಂಡವನ್ನ ಇಟ್ಟುಕೊಂಡು ಯಾವ ಟೈಂನಲ್ಲಿ ಗೆಟ್ ಔಟ್ ಅಂತಾರೆ ಅನ್ನೋ ಭಯದಲ್ಲಿಯೇ ವೃತ್ತಿ ಮಾಡುವ ನಾವುಗಳು ನಿಜಕ್ಕೂ ಅಲೆಮಾರಿಗಳು. ಅಭದ್ರತೆಯ ವೃತ್ತಿ ಬದುಕಿನ ಅಲೆಮಾರಿಗಳು…




Leave a Reply

Your email address will not be published. Required fields are marked *

error: Content is protected !!