ಬಡವರ ಸೇವೆಯಲ್ಲಿ ತೃಪ್ತಿ ಕಾಣುವ ಡಾಕ್ಟರ್

902

ಹಣ ಮಾಡುವುದಕ್ಕಾಗಿಯೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟುವ ವೈದ್ಯರ ನಡುವೆ ಬಡವರಿಗಾಗಿ ತಮ್ಮ ವೈದ್ಯಕೀಯ ವೃತ್ತಿಯನ್ನ ಮೀಸಲಿಟ್ಟಿರುವ ಹುಬ್ಬಳ್ಳಿಯ ವೈದ್ಯರೊಬ್ಬರ ಬಗ್ಗೆ ಶಿಕ್ಷಕರು ಹಾಗೂ ಸಾಹಿತಿ ವಿ.ಎಂ ಜಲ್ಲಿ ಅವರು ಬರೆದ ಲೇಖನ ಇಲ್ಲಿದೆ.

ದುಡ್ಡು ಮಾಡುವುದಕ್ಕಾಗಿಯೇ ದೊಡ್ಡ ದೊಡ್ಡ ಡಿಗ್ರಿಗಳೊಂದಿಗೆ ಧನದಾಹಿ ವೈದ್ಯರಿರುವ ಈ ಕಾಲದಲ್ಲಿ ಬಡವರ ಬದುಕು ಹೇಗೆ? ಸರ್ಕಾರಿ ಆಸ್ಪತ್ರೆಗಳು ಇವೆಯಾದರೂ ಅಲ್ಲಿನ ವ್ಯವಸ್ಥೆ ಮತ್ತು ಚಿಕಿತ್ಸೆ ದೇವರಿಗೆ ಪ್ರೀತಿ. ಹಣ ಇಲ್ಲದೆ ಹೆಣವನ್ನೂ ಕೊಡದ ಕೆಲ ಸರ್ಕಾರಿ ಆಸ್ಪತ್ರೆಗಳನ್ನು ನಾವೆಲ್ಲರೂ ಕಂಡಿರುತ್ತೇವೆ. ಕೆಲವು ಧನದಾಹಿ ವೈದ್ಯರುಗಳ ಇಂತಹ ಪ್ರವೃತ್ತಿಯಿಂದಾಗಿಯೇ ಕೆಲವು ಸಂದರ್ಭಗಳಲ್ಲಿ ಬಡವರಿಗೆ ಒಮ್ಮೆಯೂ ನೋಡದ ಯಮಧರ್ಮರಾಯ ಪ್ರತಿದಿನ ತಮಗೆ ದರ್ಶನ ನೀಡುತಿದ್ದಾನೇನೋ ಅನಿಸಿಬಿಡುತ್ತದೆ.(ಎಲ್ಲ ವೈದ್ಯರೂ ಹಾಗೆ ಇರಲಿಕ್ಕಿಲ್ಲವಾದರೂ ನಾವು ಕಂಡಿರುವ ಹಲವಾರು ವೈದ್ಯರು ಇದಕ್ಕೆ ಹೊರತಾಗಿಲ್ಲ.) ಇದೆಲ್ಲವನ್ನೂ “ನೋಡಿದರೆ ವೈಧ್ಯೋ ನಾರಾಯಣೋ ಹರಿ” ಎಂಬ ಮಾತು ಸುಳ್ಳೆ? ಎನಿಸಿಬಿಡುತ್ತದೆ.

ಭಗವಂತ ಅಷ್ಟು ಕಟುಕನಲ್ಲ, ಬಡವರಿಗಾಗಿಯೇ ಕೆಲವು ‘ದೇವರಂತ ಡಾಕ್ಟರುಗಳನ್ನು’ ಧರೆಗೆ ಕಳಿಸಿರುತ್ತಾನೆ. ದುಡ್ಡು ಮಾಡುವ ಹಂಬಲದಿಂದ ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಬಹುತೇಕರ ನಡುವೆ “ಪರೋಪಕಾರಾರ್ಥಾಯ ಇದಂ ಶರೀರಂ” ಎಂದರಿತು ದುಃಖ ದುಮ್ಮಾನಗಳಿಗೆ ಸಾಂತ್ವಾನ ಹೇಳುತ್ತಾ ಸೇವಾ ಮನೋಭಾವನೆಯೊಂದಿಗೆ ತಮ್ಮ ವೃತ್ತಿಯಲ್ಲಿ ಆತ್ಮಸಂತೃಪ್ತಿ ಕಾಣುತ್ತಿರುವ ಕೆಲವು ಹೃದಯವಂತ ವೈದ್ಯರುಗಳೂ ಇದ್ದಾರೆ. ಅಂತಹ ಕೆಲವೇ ಕೆಲವು ಹೃದಯವಂತ ಡಾಕ್ಟರುಗಳಲ್ಲಿ ಡಾ.ರಾಮಚಂದ್ರ ಕಾರಟಗಿಯವರೂ ಒಬ್ಬರು.

ಮೂಲತಃ ಗಂಗಾವತಿಯವರಾದ ಡಾ.ಕಾರಟಗಿಯವರು ಪ್ರಸ್ತುತ ಹುಬ್ಬಳ್ಳಿಯ ಕಿಮ್ಸನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬರೀ ಸರ್ಕಾರಿ ಸೇವೆ ಸಲ್ಲಿಸಿ ತಾವಾಯ್ತು ತಮ್ಮ ಸಂಸಾರವಾಯ್ತು ಎಂದುಕೊಂಡು ಇದ್ದಿದ್ದರೆ ನಾನಿವರ ಬಗ್ಗೆ ಬರೆಯುವ, ನೀವಿದನ್ನು ಓದುವ ಅವಶ್ಯಕತೆಯೇ ಇರುತ್ತಿರಲಿಲ್ಲ. ತಮ್ಮ ಸರ್ಕಾರಿ ಸೇವೆಯ ನಂತರ ಸಮಾಜಕ್ಕಾಗಿ ಬದುಕನ್ನು ನಡೆಸುತ್ತಿದ್ದಾರೆ. ಸದಾಕಾಲ  ಸಮಾಜಮುಖಿ ಚಿಂತನೆಗಳನ್ನು ಮಾಡುವ ಡಾಕ್ಟರಿಗೆ ಸೈನಿಕನಾಗಬೇಕೆಂಬ ಮಹದಾಸೆ ಇತ್ತಂತೆ. ಅದು ಸಾಧ್ಯವಾಗದೆ ಇರುವುದಕ್ಕೆ ನಮ್ಮ ಹೆಮ್ಮೆಯ ಸೈನಿಕರಿಗೆ, ನಿವೃತ್ತ ಯೋಧರಿಗೆ ಮತ್ತವರ ಕುಟುಂಬದವರಿಗೆ ಉಚಿತ ಚಿಕಿತ್ಸೆ ನೀಡುತ್ತ ದೇಶ ಸೇವೆ ಮಾಡುತ್ತಿದ್ದಾರೆ. ಈ ಮೂಲಕ “ಯೋಧರ ಡಾಕ್ಟರ್” ಎಂದೇ ಚಿರಪರಿಚಿತರಾಗಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಸುಮಾರು 500ಕ್ಕೂ ಹೆಚ್ಚು ಉಚಿತ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಅಶಕ್ತರಿಗೆ, ಬಡವರಿಗೆ, ರೈತರು ಮತ್ತು ಕೂಲಿಕಾರ್ಮಿಕರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದು, ಹಿರಿಯ ನಾಗರಿಕರ ಮನೆಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಿರುವುದು ಇವರ ಸೇವಾ ಮನೋಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ. ಬುಡುಕಟ್ಟು ಪ್ರದೇಶಗಳಲ್ಲಿ ವಾಸಿಸುವವರಿಗೆ, ಗುಡ್ಡಗಾಡಿನ ಹಿಂದುಳಿದ ವರ್ಗಗಳ ನಿವಾಸಿಗಳಿಗೆ, ಅಶಕ್ತರು ಹಾಗೂ ವಿಕಲಚೇತನರ ಆಶ್ರಮಗಳಲ್ಲಿ ವಿಶೇಷ ಶಿಬಿರಗಳನ್ನು ಏರ್ಪಡಿಸುವುದಲ್ಲದೆ ಪ್ರತಿ 15 ದಿನಗಳಿಗೊಮ್ಮೆ ಉಚಿತ ಆರೋಗ್ಯ ಸೇವೆ ನೀಡುತ್ತಾ ಬಂದಿದ್ದಾರೆ.

ಇದಷ್ಟೇ ಅಲ್ಲದೆ ಹಲವು ಪ್ರಮುಖ ಟಿವಿ ಮಾಧ್ಯಮಗಳು, ಪತ್ರಿಕೆಗಳು, ಆಕಾಶವಾಣಿ (ಧಾರವಾಡ ಮತ್ತು ಚಿತ್ರದುರ್ಗ), ಎಫ್ಎಮ್ ರೇಡಿಯೋ ಚಾನೆಲ್ ಗಳಲ್ಲಿ ವೈದ್ಯಕೀಯ ಸೇವೆ ಕುರಿತು ಲೇಖನಗಳು ಹಾಗೂ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಕೇವಲ ವೈದ್ಯಕೀಯ ರಂಗಕ್ಕಷ್ಟೇ ತಮ್ಮ ಸೇವೆಯನ್ನು ಸೀಮಿತಗೊಳಿಸದೆ, ಪರಿಸರದ ಅರಿವು, ಶಿಕ್ಷಣದ ಅರಿವು ಹಾಗೂ ಸ್ವಚ್ಛತೆಯ ಅರಿವನ್ನು ಮೂಡಿಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮ ಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ.

ಬೆಚ್ಚನೆಯ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು ತನ್ನಿಚ್ಚೆ ಅರಿತು ನಡೆವ ಸತಿ ಇರಲು  ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎನ್ನುವಂತೆ ಡಾ.ಕಾರಟಗಿಯವರ ಧರ್ಮಪತ್ನಿ ಡಾ.ವೀಣಾ ಕಾರಟಗಿಯವರೂ ಕೂಡಾ ಪತಿ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವುದು ಅವರ ಸ್ಪೂರ್ತಿಯ ಸೆಲೆ ಎನ್ನಬಹುದು.

ಇಂತಹ  ಹೃದಯ ವೈಶಾಲತೆಯ ವೈದ್ಯರನ್ನು ಮತ್ತವರ ನಿಸ್ವಾರ್ಥ ಸೇವೆಯನ್ನು ಗುರ್ತಿಸಿದ ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ದಾವಣಗೆರೆಯ ಶಿವಯೋಗಾಶ್ರಮದಲ್ಲಿ ದಿನಾಂಕ 20-01-2019 ರಂದು ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಡಾ.ಮುರುಘಾ ಶರಣರಿಂದ “ವೈದ್ಯರತ್ನ” ಪ್ರಶಸ್ತಿ ದೊರೆತಿರುವುದು ಇವರ ಸಮಾಜ ಸೇವೆಗೆ ಸಂದ ಗೌರವವೇ ಸರಿ.

ನವಲಗುಂದ ನಾಗಲಿಂಗ ಮಠದ ಪರಮಪೂಜ್ಯ ಶ್ರೀ ವೀರೇಂದ್ರ ಮಹಾಸ್ವಾಮಿಗಳಿಂದ, ಪಂಚಮಸಾಲಿ ಮಹಾ ಪೀಠದ ಜಗದ್ಗುರು ಜಯ ಮೃತ್ಯುಂಜಯ ಮಹಾಸ್ವಾಮಿಗಳು ಸೇರಿ ಅನೇಕ ಕಡೆಯಿಂದ ಗೌರವ ಸನ್ಮಾನಗಳು ದೊರೆತಿವೆ. ಬರುವ ಜುಲೈನಲ್ಲಿ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯಿಂದ ಕೊಡಲ್ಪಡುವ “ಭಾರತ ಸೇವಾ ರತ್ನ” ರಾಷ್ಟ್ರ ಪ್ರಶಸ್ತಿಗೂ ಕೂಡ ಆಯ್ಕೆಯಾಗಿರುವುದು ಇವರ ಹೆಮ್ಮೆಯೇ ಸರಿ.

ಇಷ್ಟೆಲ್ಲ ಸಾಧನೆ ಮಾಡಿದರೂ ಅಹಂಕಾರವಿಲ್ಲದ ಹೃದಯವಂತ ಡಾಕ್ಟರು ಸಮಾಜಸೇವೆಯಲ್ಲಿ ಇನ್ನೂ ಅತೃಪ್ತರೇನೋ ಅನಿಸುತ್ತದೆ. ಇದುವರೆಗೂ ಬಾಡಿಗೆ ಕಟ್ಟಡದಲ್ಲಿಯೇ ಇಷ್ಟೆಲ್ಲ ಉತ್ತಮ ಕಾರ್ಯ ಮಾಡುತ್ತ ಬಂದಿರುವ ಇವರು ಈಗ ಸಮಾಜ ಮುಖಿ ಕಾರ್ಯಕ್ಕಾಗಿಯೇ ಹೊಸ ಕಟ್ಟಡದೊದಿಗೆ, ಹೊಸ ಹುರುಪಿನಿಂದ ಇನ್ನಷ್ಟು ಕೆಲಸ ಮಾಡಲು ಮುಂದಾಗಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ.


TAG


Leave a Reply

Your email address will not be published. Required fields are marked *

error: Content is protected !!