ಒಂದು ಶಿಕಾರಿಯ ಕಥೆ

889

ಡಾ.ವಿನಯ ನಂದಿಹಾಳ ಅವರ ಮೂವಿ ಮಾತು ಅಂಕಣ ಬರಹ ಭಾಗ-6

ಮನುಷ್ಯನ ಮನಸ್ಸಿನ ಸಂಕೀರ್ಣತೆಯನ್ನು ಆಳವಾಗಿ ಶೋಧಿಸುವ ಮತ್ತು ಅದು ಹೊಂದಿರುವ ವಿವಿಧ ಆಯಾಮಗಳನ್ನು ‘ಒಂದು ಶಿಕಾರಿಯ ಕಥೆ’ ಚಿತ್ರದಲ್ಲಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಎಲ್ಲ ಆಸೆಗಳನ್ನು ತೊರೆದು ವೈರಾಗ್ಯ ತಾಳಿ ಆಧ್ಯಾತ್ಮಿಕ ಉನ್ನತಿಯನ್ನು ತಲುಪಲು ಪ್ರಯತ್ನಿಸುವ ವ್ಯಕ್ತಿತ್ವ ಒಂದಾದರೆ, ಇನ್ನೊಂದು ತನ್ನ ಆಸೆಗಳನ್ನು ಹೇಗಾದರೂ, ಅದು ಅಪರಾಧ ಕೃತ್ಯವಾದರು ಸರಿ ಮಾಡಿ ಈಡೇರಿಸುವಕೊಳ್ಳುವ ವ್ಯಕ್ತಿತ್ವ. ಇಂತಹ ವ್ಯಕ್ತಿತ್ವಗಳ ಮಧ್ಯ ಸಿಕ್ಕಿ ಹಾಕಿಕೊಳ್ಳುವ ಪ್ರೇಮಿಗಳು ಅನುಭವಿಸುವ ಯಾತನೆಗಳು ಈ ಚಿತ್ರದಲ್ಲಿವೆ. ಶಂಭು ಶೆಟ್ಟಿ ಎನ್ನುವ ಕಾದಂಬರಿಕಾರ ಹೊರಗಿನ ಪ್ರಪಂಚಕ್ಕೆ ದೊಡ್ಡ ಕಾದಂಬರಿಕಾರನಾಗಿದ್ದರೂ ಸಹ ತನ್ನ ಊರಿನ ಜನ ಅವನನ್ನು ಅರೆಹುಚ್ಚ ಎಂದು ತಿಳಿದಿರುತ್ತಾರೆ. ಸಹಜ ಜೀವನಕ್ಕಿಂತಲೂ ವಿಶಿಷ್ಟವಾಗಿ ವರ್ತಿಸುವ ಮತ್ತು ನಡೆದುಕೊಳ್ಳುವರನ್ನು ಜನರು ಗ್ರಹಿಸಿವುದು ಹೀಗೆಯೇ. ಇವನು ಅಹಿಂಸಾವಾದಿ. ಎಲ್ಲ ಭೌತಿಕ ಸುಖಗಳನ್ನು ತೊರೆಯಬೇಕು ಎನ್ನುವ ಹಂತದಲ್ಲಿ ಇರುವವನು. ಈ ಹಂತದಲ್ಲಿ ಇದ್ದಾಗ ತನ್ನ ಅಭಿಮಾನಿಗಳಿಂದ ಆತ್ಮಕಥೆಯನ್ನು ಬರೆಯಲು ಒತ್ತಾಯ ಮತ್ತು ವಿನಂತಿಗಳು ಬರುತ್ತವೆ. ಅವುಗಳನ್ನು ಸ್ವೀಕರಿಸಿ ಆತ್ಮಕತೆಯನ್ನು ಬರೆಯಲು ಪ್ರಾರಂಭಿಸಿದಾಗ ತನ್ನ ಬಾಲ್ಯದ ನೆನಪುಗಳು ಬರುತ್ತವೆ. ಅಲ್ಲಿ ತಾನು ಅಪ್ಪನೊಂದಿಗೆ ಹೊಂದಿದ ಸಂಬಂಧದ ಆಯಾಮಗಳು ಫ್ಲ್ಯಾಸ್ ಬ್ಯಾಕ್ ರೂಪದಲ್ಲಿ ಗೋಚರಿಸುತ್ತವೆ.

ಇವನ ಅಪ್ಪನಿಗೆ ಶಿಕಾರಿಯ ಹುಚ್ಚು. ಅವನು ಶಿಕಾರಿ ಮಾಡಿದಾಗೊಮ್ಮೆ ಹೆಮ್ಮೆಯಿಂದ ಬೀಗುವ. ಆದರೆ ಶಂಭು ಹಿಂಸೆಯ ವಿರೋಧಿ. ಅಪ್ಪ ಶಿಕಾರಿಗೆ ಹೋಗಿ ಬಂದಾಗಲೊಮ್ಮೆ ಇವನು ಮಂಕಾಗುವವನು. ಮುಂದೆ ‘ಈ ಶಿಕಾರಿಯ ಹುಚ್ಚು ಒಮ್ಮೆ ಹಿಡಿದರೆ ಮುಗಿಯಿತು’ ‘ಶಿಕಾರಿ ತಪ್ಪಲ್ಲ ಆದರೆ ನಾಲಿಗೆ ಚಪಲಕ್ಕೆ ಮೋಜು ಮಾಡುವುದು ತಪ್ಪು’ ಯಾರ ಮೇಲಿಯೂ ದರ್ಪ ತೋರಬಾರದು ಎಂದು ಹೇಳಿ ಅಪ್ಪನನ್ನು ವಿರೋಧಿಸುತ್ತಾನೆ. ಅಪ್ಪನ ಕೊನೆಯ ಆಸೆ ಇವನು ಶಿಕಾರಿ ಮಾಡಬೇಕು ಎನ್ನುವುದು ಆಗಿರುತ್ತದೆ. ಜಮೀನ್ದಾರನೊಬ್ಬ ಸ್ವಲ್ಪ ನಕ್ಕರೆ ಸಾಕು ಗೇಣಿ ಕೊಡುವವರು ಮುಂದೆ ಹಾಕುತ್ತಾರೆ ಎನ್ನುವ ಮನೋಭಾವವನ್ನು ಉಳ್ಳವವನು ಅಪ್ಪ ಆಗಿರುತ್ತಾನೆ. ಶಂಭು ಗಟ್ಟಿ ಗಂಡು ಎನಿಸಬೇಕಾದರೆ ಶಿಕಾರಿ ಮಾಡಲೇಬೇಕು ಎಂಬುದು ಅವನ ಆಸೆ ಆಗಿರುತ್ತದೆ. ಆದರೆ ಶಂಭು ಶೆಟ್ಟಿಯ ಮನಸ್ಥಿತಿ ಇದಕ್ಕೆ ಭಿನ್ನವಾಗಿದೆ. ‘ಆ ದಿನ ಅಪ್ಪನ ಮುಖದಲ್ಲಿ ಯುದ್ಧ ಗೆದ್ದ ಹೆಮ್ಮೆ ಕಾಣಿಸುತಿತ್ತು. ಎಲ್ಲರ ಮನಸ್ಸಿನಲ್ಲಿಯೂ ಕರುಣೆ, ಮಾನವೀಯತೆ ಸುಪ್ತವಾಗಿರುತ್ತದೆ. ಆದರೆ ಅವು ಅಪ್ಪನಲ್ಲಿ ಸೋತು ಹೋಗಿದ್ದವು. ಕ್ರೌರ್ಯ ಹಿಂಸೆ ಇವು ನಿಜವಾದ ಗೆಲುವಲ್ಲ’ ಎನ್ನುವ ಶಂಭು ಶೆಟ್ಟಿ ಮನಸ್ಸಿನ ಒತ್ತಡದಿಂದಾಗಿ ಅಪ್ಪನ ಆಸೆ ಈಡೇರಿಸಲು ಮುಂದಾಗುತ್ತಾನೆ. ಇಂತಹ ವ್ಯಕ್ತಿತ್ವದವನು ಶಿಕಾರಿ ಮಾಡುತ್ತಾನೆಯೇ, ಆ ಶಿಕಾರಿಗೆ ಹೋದಾಗ ನಡೆದ ಒಂದು ಅಪಘಾತ ಅವನ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದು ಚಿತ್ರದ ಜೀವಾಳವಾಗಿದೆ. ಈ ಶಿಕಾರಿಯ ಪ್ರಸಂಗ ಯಶೋಧರ ಚರಿತೆಯ ಹಿಟ್ಟಿನ ಹುಂಜದ ಪ್ರಸಂಗವನ್ನು ನೆನಪಿಗೆ ತರುತ್ತದೆ.

ಎಲ್ಲರಿಂದ, ಎಲ್ಲವುಗಳಿಂದ ಬಿಡಿಸಿಕೊಳ್ಳಬೇಕು, ಗೊತ್ತು ಗುರಿಯಿಲ್ಲದೆ ಸುತ್ತಬೇಕು, ಹೊಸತನ ಸೃಷ್ಟಿ ಮಾಡಬೇಕು ಎನ್ನುವ ಶಂಭು ಶೆಟ್ಟರು ಹಲವು ವೈರುಧ್ಯಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಂಡಿದ್ದಾರೆ. ಅವೆಲ್ಲವುಗಳನ್ನು ಅವರು ಹೇಗೆ ಮೀರುತ್ತಾರೆ ಎನ್ನುವುದನ್ನು ಅತ್ಯಂತ ಸುಂದರವಾಗಿ ಮನಗಾಣಿಸಲು ಪ್ರಯತ್ನಿಸಿದ್ದಾರೆ. ಈ ಶಂಭು ಶೆಟ್ರ ಜೊತೆ ಇನ್ನು ನಾಲ್ಕೈದು ಪಾತ್ರಗಳಿದ್ದು ಪ್ರತಿ ಪಾತ್ರಗಳು ತಮ್ಮದೆಯಾದ ಚಾಪನ್ನು ಹೊಂದಿವೆ. ಮೋಹನ ಮತ್ತು ಹರ್ಷ ಎಂಬ ಇಬ್ಬರ ಸ್ನೇಹಿತರ ನಡುವೆ ಸಂಭವಿಸುವ ಬಿಕ್ಕಟುಗಳು. ಹರ್ಷ ಮತ್ತು ಉಮಾಳ ಮುಗ್ಧ ಮತ್ತು ಆಳವಾದ ಪ್ರೇಮ. ಮೋಹನನ ದುರಾಸೆ. ಅವನ ತಂಗಿಯ ಅಸಹಾಯಕತೆ ಇವೆಲ್ಲವು ಮನುಷ್ಯ ಮನಸ್ಸಿನ್ನು ಪ್ರತಿನಿಧಿಸುವಂತೆ ವ್ಯಕ್ತವಾಗಿವೆ. ಗುಲಾಬಿ ಮತ್ತು ಹರಿಯ ಪ್ರೇಮ, ದಾಂಪತ್ಯವನ್ನು ಒಂದು ಚಿಕ್ಕ ಅನುಮಾನ ಬಲಿ ಪಡೆಯುವುದು ಮನುಷ್ಯ ಮನುಷ್ಯ ನಡುವಿನ ಶಿಕಾರಿಯಂತೆ ಕಾಣುತ್ತದೆ. ಅದಕ್ಕೆ ಅನುಮಾನ ಪ್ರೇರಣೆಯಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಎಂದು ಸಾರುವ ವ್ಯಕ್ತಿಯೊಬ್ಬ ತಾನೇ ಆತ್ಮಹತ್ಯೆಗೆ ಪ್ರಯತ್ನಿಸುವುದು ಅಸಾಹಕತೆ ಮತ್ತು ವೈರುಧ್ಯವನ್ನು ಸೂಚಿಸುತ್ತದೆ. ಇವರೆಲ್ಲರೂ ಹೇಗೆ ಶಂಭು ಶೆಟ್ಟರೊಂದಿಗೆ ಸಂಬಂಧ ಸ್ಥಾಪಿಸಿರುತ್ತಾರೆ ಎನ್ನುವುದೇ ಮುಖ್ಯ. ಒಂದು ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಕಥೆಯನ್ನು ಹೆಣೆದಿರುವ ಪರಿ, ಒಮ್ಮೆಯೂ ಭೇಟೆಯಾಗದ ಪಾತ್ರಗಳ ನಡೆವೆಯೂ ಸಹ ಸಂಬಂಧ ಉಂಟಾಗುವಂತೆ ಮಾಡುತ್ತದೆ. ಇಂತಹ ಒಂದು ಕಥೆಯನ್ನು ಹೇಳಲು ಕರಾವಳಿ ಪ್ರದೇಶವನ್ನು ಆಯ್ದುಕೊಂಡಿದ್ದು ಸೂಕ್ತವಾಗಿದೆ. ಭಾಷೆ ಈ ಪ್ರದೇಶದ್ದು ಅಂತ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಕಥೆಗೆ ಪೂರಕವಾಗಿ ಯಕ್ಷಗಾನವನ್ನು ಬಳಸಿಕೊಂಡಿದ್ದು ನಿರ್ದೇಶಕ ಸಚಿನ ಶೆಟ್ಟಿಯವರ ಸೃಜನಶೀಲತೆಯನ್ನು ತೋರಿಸುತ್ತದೆ. ಬುದ್ದ, ಬಾಹುಬಲಿಯ ರೆಪ್ರಿನಸಿಸ್, ಕೊನೆಗೆ ಶಂಭು ಶೆಟ್ರು ದಿಗಂಬರನಾಗುವ ಮುಂಚೆ ಗೊಮ್ಮಟನನ್ನು ತೋರಿಸುವುದು, ಗುಲಾಬಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮಗುವೊಂದು ಗುಲಾಬಿ ಹೂವನ್ನು ಕಿತ್ತುವುದನ್ನು ತೋರಿಸುವುದು ಇವೆಲ್ಲ ನಿರ್ದೇಶಕನ ಜಾಣ್ಮೆಗೆ ಹಿಡಿದ ಕೈಗನ್ನಡಿಗಳಾಗಿವೆ.

ಈ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದ್ದು ಯೋಗೇಶ ಗೌಡ ಅವರ ಸಿನಿಮಾಟೋಗ್ರಾಫಿ. ಏರಿಯಲ್ ಶಾಟ್‌ ನಲ್ಲಿ ಕಾಡು ತೋರಿಸಿದ್ದು, ನದಿ, ಸಮುದ್ರಗಳನ್ನು ಸೆರೆ ಹಿಡಿದಿದ್ದು ಒಳ್ಳೆಯ ಪೇಟಿಂಗ್‌ ನಂತೆ ಕಾಣುತ್ತವೆ. ಸಹಜವಾದ ಬೆಳಕನ್ನು ಬಳಸಿದ್ದು ಚಿತ್ರದ ದೃಶ್ಯಗಳು ನ್ಯಾಚುರಲ್ ಆಗಿ ಕಾಣುತ್ತವೆ. ಸಂಗೀತ ಕೆಲವು ಕಡೆ ಇಲ್ಲವೇನು ಅನಿಸಿದರು, ಕೊನೆಗೆ ಹರ್ಷ ಓಡಿ ಬರುವಾಗ ಮದ್ದಳೆ ಎಫೆಕ್ಟ್ ಅವನ ಮತ್ತು ನೋಡುಗರ ಚೈತನ್ಯವನ್ನು ಅರಿಯುವಂತೆ ಮಾಡುತ್ತದೆ. ‘ಕೊಲೆ ಮಾಡಿದವನಿಗೆ ಬದುಕುವ ಹಕ್ಕಿಲ್ಲ’ ‘ಹಸಿವು ಅಂದರೆ ಹಣ’ ‘ಒಪ್ಪಿಗೆ ಇಲ್ಲದ ಮೇಲೆ ಬಲವಂತ ಮಾಡುವವರು ಮನುಷ್ಯರಲ್ಲ ರಾಕ್ಷಸರರು’ ಎನ್ನುವಂತಹ ಸಂಭಾಷಣೆಗಳು ಕಥೆಗೆ ಪೂರಕವಾಗಿವೆ. ಶಂಭು ಶೆಟ್ಟಿಯ ಪಾತ್ರವನ್ನು ಪ್ರಮೋಧ ಶೆಟ್ಟಿ ಅದ್ಭುತವಾಗಿ ನಿರ್ವಹಿಸಿದ್ದಾರೆ. ಕೆಲವು ಕಡೆ ತುಂಬ ಸಪ್ಪೆ ಅನಿಸುತ್ತಾರೆ. ಹಾಗೆ ಮಾಡಿದ್ದು ಉದ್ದೇಶಪೂರ್ವಕವಾಗಿಯೋ ತಿಳಿಯದು. ಭೌದ್ದಿಕವಾಗಿ ಅಷ್ಟೊಂದು ಪ್ರಭುತ್ವ ಸಾಧಿಸಿದ ವ್ಯಕ್ತಿಯಲ್ಲಿ ಚಿಂತನೆ ಕಾಣಬೇಕಿತ್ತು. ಆದರೆ ಚಿಂತೆಯೇ ಹೆಚ್ಚಾಗಿ ಕಾಣುತ್ತದೆ. ಅಭಿಮನ್ಯು ಪ್ರಜ್ವಲ, ಪ್ರಸಾದ, ಸಿರಿ ಪ್ರಹ್ಲಾದ, ಸುಪ್ರಿಯಾ, ಎಂ.ಕೆ ಮಠ ಇವರೆಲ್ಲ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಂದು ಶಿಕಾರಿ ಕಥೆ ಪ್ರತಿಯೊಬ್ಬರ ಮನಸ್ಸಿನೊಳಗೆ ಸದಾ ನಡೆಯುತ್ತಲೇ ಇರುತ್ತದೆ. ಇದೆ ಬದುಕು..

ನಿಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು vinay99164@gmail.com




Leave a Reply

Your email address will not be published. Required fields are marked *

error: Content is protected !!