ಪಾಳುಬಿದ್ದ ‘ಮಲಘಾಣ’ ದೇಗುಲಗಳು…

1315

ಲೇಖನ: ನಾಗೇಶ ತಳವಾರ

ವಿಜಯಪುರ ಜಿಲ್ಲೆಯಲ್ಲಿಯೇ ದೊಡ್ಡ ತಾಲೂಕು ಅನ್ನೋ ಖ್ಯಾತಿಯನ್ನ ಸಿಂದಗಿ ಪಡೆದಿದೆ. ಇಂಥಾ ಊರಿಗೆ ಸಾಕಷ್ಟು ಐತಿಹಾಸಿಕ ಹಿನ್ನೆಲೆಯಿದೆ. ಅದೇ ರೀತಿ ಈ ತಾಲೂಕಿನ ಸುತ್ತಲಿನ ಕೂಗಳತೆಯ ಗ್ರಾಮಗಳಲ್ಲಿ ಐತಿಹಾಸಿಕ ಪ್ರಸಿದ್ಧ ದೇಗುಲಗಳಿವೆ. ಅಂಥಾ ಗ್ರಾಮಗಳಲ್ಲಿ ಮಲಘಾಣ ಸಹ ಒಂದು. ಪಟ್ಟಣದಿಂದ ಕೇವಲ 13 ಕಿಲೋ ಮೀಟರ್ ಅಂತರದಲ್ಲಿರುವ ಗ್ರಾಮಕ್ಕೆ ಆಧುನಿಕತೆ ಸ್ಪರ್ಶವಾಗಿ ಬಹುವರ್ಷಗಳಾಗಿವೆ. ಇಂಥಾ ಊರಿನಲ್ಲಿ ನಾಲ್ಕು ಐತಿಹಾಸಿಕ ಸುಂದರ ದೇಗುಲಗಳಿವೆ.

ಜಕಣೇಶ್ವರ ಕಲ್ಯಾಣಿ

ಇಲ್ಲಿರುವ ದೇಗುಲಗಳ ವಾಸ್ತುಶಿಲ್ಪ ಶೈಲಿ, ಇಲ್ಲಿನ ಶಾಸನ, ಅವುಗಳ ಮೇಲಿನ ಕೆತ್ತನೆ, ಕಲ್ಯಾಣಿ ಸೇರಿದಂತೆ ಹಲವು ಕುರುಹುಗಳ ಆಧಾರದ ಮೇಲೆ, ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ದೇಗುಲಗಳು ಅನಿಸ್ತವೆ. ಅತ್ಯಂತ ಸುಂದರವಾಗಿ ನಿರ್ಮಿಸಿರುವ ನಾಲ್ಕು ದೇಗುಲಗಳು ಕೇವಲ 20-30 ಮೀಟರ್ ಅಂತರದೊಳಗಿವೆ. ಈ ನೆಲದ ಸಂಸ್ಕೃತಿಯ ಪ್ರತೀಕವಾಗಿರುವ ಪ್ರಾಚೀನ ದೇವಾಸ್ಥನಗಳು ಪಾಳುಬಿದ್ದು ಗ್ರಾಮಸ್ಥರ ಗೋದಾಮಾಗಿ ಪರಿವರ್ತನೆಯಾಗಿವೆ.!

ರಾಮಲಿಂಗ ದೇಗುಲ

ಕೆಲ ಮಾಹಿತಿ ಪ್ರಕಾರ ಮಲೆ ಅಂದ್ರೆ ಬೆಟ್ಟ. ಘಾಣ, ಠಾಣ ಅಂದ್ರೆ ಸ್ಥಾನ. ಬೆಟ್ಟದ ಮೇಲೆ ನಿರ್ಮಾಣವಾದ ಸ್ಥಾನಕ್ಕೆ ಮಲಘಾಣ ಅಂತಾ ಕರೆದಿರಬಹುದು. ಕಾಲ ಉರುಳಿದಂತೆ ಜನರ ಬಾಯಿಯಲ್ಲಿ ಬದಲಾಗಿ ಮಲಘಾಣವಾಗಿರಬಹುದು. ಆದ್ರೆ, ಸದ್ಯ ಇಲ್ಲಿ ಯಾವ ಬೆಟ್ಟವಿಲ್ಲ. ಈ ಊರಿನಲ್ಲಿ ದೊರೆತ ಶಾಸನಗಳ ಪ್ರಕಾರ, ತರ್ದವಾಡಿ ಸಾಸಿರ ನಾಡಿನ ಕುಮಸಿಗೆ ಮೂವತ್ತರ ವಿಭಾಗದ ಅಗ್ರಹಾರ ಮಲ್ಲಗಾಣ ಅಂತಾ ಉಲ್ಲೇಖವಿದೆ.

ಮಲ್ಲಿಕಾರ್ಜುನ ದೇವಸ್ಥಾನ

ಮೊದಲಿಗೆ ರಾಮಲಿಂಗ ದೇಗುಲವಿದೆ. ಗರ್ಭಗುಡಿಯಲ್ಲಿ ಶಿವಲಿಂಗ, ಬಾಗಿಲಿಗೆ ಶೈವ ದ್ವಾರಪಾಲಕರು, ಗಜಲಕ್ಷ್ಮಿ ಸೇರಿ ವಿವಿಧ ಕೆತ್ತನೆಗಳಿವೆ. ಸಭಾ ಮಂಟಪ ಸೇರಿದಂತೆ ಕಲ್ಯಾಣಿ ಚಾಲುಕ್ಯರ ವಾಸ್ತುಶಿಲ್ಪವನ್ನ ಕಂಬಗಳು ಮೈತುಂಬಿಕೊಂಡಿವೆ. ಈ ದೇಗುಲದಿಂದ ಕಲ್ಯಾಣಿಗೆ ಮೆಟ್ಟಿಲು ಸಂಪರ್ಕವಿತ್ತು. ದ್ವಾದಶ ಕೋನಾಕಾರದ ಕಲ್ಯಾಣಿಯನ್ನ ಜಕಣೇಶ್ವರಿ ಬಾವಿ ಎನ್ನಲಾಗುತ್ತೆ. ಶ್ರಾವಣ ಮಾಸದ ಹಬ್ಬದಂದು ಕಲ್ಯಾಣಿಯಲ್ಲಿ ಮಣ್ಣಿನ ಕೊಡಗಳನ್ನ ಬಿಡಲಾಗುತ್ತೆ. ಕೊಡಗಳು ತುಂಬಿ ಮೇಲೆ ಬಂದರೆ ಒಳ್ಳೆಯ ಕಾಲ ಬರುತ್ತೆ ಅನ್ನೋದು ಗ್ರಾಮಸ್ಥರ ನಂಬಿಕೆಯಾಗಿದೆ. ಈಗ್ಲೂ ಇದನ್ನ ಆಚರಿಸಲಾಗ್ತಿದೆ. ಮಧ್ಯದಲ್ಲಿ ರಸ್ತೆ ಬಂದು ಮೆಟ್ಟಿಲುಗಳು ಮುಚ್ಚಲಾಗಿದೆ.

ತಗ್ಗಿನ ದೇಗುಲ

ರಾಮಲಿಂಗ ದೇಗುಲದ ಹಿಂಭಾಗದಲ್ಲಿ ತಗ್ಗಿನ ಮಲ್ಲಯ್ಯನ ದೇಗುಲವಿದೆ. ಪೂರ್ತಿ ಮಣ್ಣಿನಲ್ಲಿಯೇ ಹುದುಗಿ ಹೋಗಿದೆ. ನೆಲದಿಂದ ಕೆಳಮಟ್ಟದಲ್ಲಿಯೇ ನಿರ್ಮಿಸಲಾಗಿದೆಯೋ ಅಥವಾ ಮುಚ್ಚಿದೆಯೋ ಗೊತ್ತಿಲ್ಲ. ಇದೊಂದು ಸ್ವಯಂಭೋ ದೇವಾಲಯವಾಗಿದೆಯಂತೆ. ಇಲ್ಲಿನ ಕ್ರಿ.ಶ 1133ರ ಶಾಸನದ ಪ್ರಕಾರ, ಮಹಾಮಂಡಲೇಶ್ವರ ಸಿಂಗರಸನು, ಭೂಲೋಕಮಲ್ಲ 3ನೇ ಸೋಮೇಶ್ವರನ ತಂದೆಗೆ ಒಳ್ಳೆಯದಾಗ್ಲಿ ಎಂದು ವಿವಿಧ ಧಾನಗಳನ್ನ ಈ ದೇಗುಲಕ್ಕೆ ನೀಡಿದ ಅಂತಾ ಶಾಸನ ಹೇಳುತ್ತೆ. ಇದಕ್ಕೆ ಚಿಕ್ಕದಾದ ಕಿಂಡಿಯಿದೆ. ಗರ್ಭಗೃಹ, ಅಂತರಾಳ, ನವರಂಗ ನಿರ್ಮಿಸಲಾಗಿದೆ.

ಬಸವಣ್ಣನ ದೇವಾಲಯ

ಈ ಎರಡು ದೇಗುಲಗಳ ಪಕ್ಕದಲ್ಲಿಯೇ ಶ್ರೀಮಲ್ಲಿಕಾರ್ಜುನ ದೇವಸ್ಥಾನವಿದೆ. ಇದು ಸಹ ಗರ್ಭಗುಡಿ, ಸಭಾಮಂಟಪ, ಮುಖಮಂಟಪ, ತೆರೆದ ಅಂತಾರಳವಿದೆ. ಮುಖಮಂಟಪದ ಕಕ್ಷಾಸನದಲ್ಲಿ ಕ್ರಿ.ಶ 1148ರ ಶಾಸನವಿದೆ. ಇದು ಮಾಧವ ಘಾಯಿಸಾಸನ ನಿರ್ಮಿಸಿದ ಮಾಧವೇಶ್ವರ ದೇವಾಲಯ ಎಂದು ಸೂಚಿಸುತ್ತೆ. ಇದೀಗ ಇದರ ಸುತ್ತು ಚರಂಡಿ ನೀರು ಹರಿಯುತ್ತಿದೆ. ದೇಗುಲದ ಒಳಗೆ ಕಟ್ಟಿಗೆ, ಕುಳ್ಳ(ಸಗಣಿ ಭರಣಿ) ಇಡಲಾಗಿದೆ.

ಶಾಸನ

ಇಲ್ಲಿಂದ ಹತ್ತು ಹಜ್ಜೆ ಹಿಂದೆ ಹೋದ್ರೆ ತ್ರಿಕೋಟ ದೇವಸ್ಥಾನವಿದೆ. ಇದನ್ನ ಬಸವಣ್ಣನ ದೇವಸ್ಥಾನ ಅಂತಾ ಕರೆಯಲಾಗುತ್ತೆ. ಇಲ್ಲಿ ಬಿದ್ದಿರುವ ಸುಮಾರು ಕ್ರಿ.ಶ 1100ರ ಕಾಲದ ಶಾಸನದಲ್ಲಿ, ದಿವಾಕರ ಭಟ್ಟೋಪಾಧ್ಯಯ ಎನ್ನುವವರು ಅಗ್ರಹಾರ ಮಲ್ಲಗಾಣ ಗ್ರಾಮದಲ್ಲಿ ಆದಿತ್ಯದೇವ, ಕೇಶವದೇವ ಹಾಗೂ ಪಾರಮೇಶ್ವರ ಅನ್ನೋ ಮೂರು ದೇವರುಗಳ ಪೂಜೆಗಾಗಿ ಸ್ಥಾಪಿಸಿದ ದೇವಸ್ಥಾನ ಎನ್ನುತ್ತೆ. ಇಲ್ಲಿ ಮೂರು ಗರ್ಭಗೃಹ, ತೆರೆದ ಅಂತರಾಳ, ನವರಂಗ, ಮುಖಪಂಟಪ, ಜೋಡಿ ನಂದಿಮೂರ್ತಿಗಳಿವೆ. ದೇವಸ್ಥಾನದ ಮುಂದೆಯಿದ್ದ ದ್ವಾರಸ್ತಂಭ ಬಿದ್ದು ಹೋಗಿದೆ.

ಗರ್ಭಗುಡಿಯಲ್ಲಿರುವ ಲಿಂಗ

ಈ ನಾಲ್ಕು ದೇಗುಲಗಳ ವಾಸ್ತು ಶಿಲ್ಪ ತನ್ನ ಸೌಂದರ್ಯದಿಂದ ನೋಡುಗರ ಕಣ್ಮನ ಸೆಳೆಯುತ್ತವೆ. ಆದ್ರೆ, ಕಾಲದ ಹೊಡೆತಕ್ಕೆ ಸಿಕ್ಕು ಪಾಳುಬಿದ್ದಿವೆ. ಪ್ರತಿಯೊಂದು ದೇಗುಲಗಳ ಮೇಲೆ ಗಿಡಗಂಟಿಗಳು ಬೆಳೆದಿವೆ. ಸ್ಥಳೀಯರು ಆಗಾಗ ಸ್ವಚ್ಛ ಮಾಡಿದ್ರೂ ಪ್ರಯೋಜನವಾಗಿಲ್ಲ. ಇಂಥಾ ಐತಿಹಾಸಿಕ ಸ್ಥಳಗಳು ಮೈಸೂರು ಭಾಗದಲ್ಲಿ ಇದ್ದಿದ್ರೆ ಪ್ರಸಿದ್ಧ ಪ್ರವಾಸಿ ತಾಣವಾಗಿರೋದು. ಮೊದ್ಲೇ ಈ ಭಾಗವನ್ನ ನಿರ್ಲಕ್ಷ್ಯ ಮಾಡ್ತಿರುವ ಸರ್ಕಾರಗಳು ಇಲ್ಲಿನ ಐತಿಹಾಸಿಕ ದೇಗುಲಗಳನ್ನ ಜೀರ್ಣೋದ್ಧಾರ ಮಾಡಬೇಕಿದೆ.

ಗರ್ಭಗುಡಿ ಬಾಗಿಲು
ಜಕಣೇಶ್ವರ ಕಲ್ಯಾಣಿ



Leave a Reply

Your email address will not be published. Required fields are marked *

error: Content is protected !!