ಅರ್ಧ ಫೀಸ್ ಅಭಿಯಾನಕ್ಕೂ ಮೊದ್ಲು ಸರ್ಕಾರಿ ಶಾಲೆ ಕಥೆಯೇನು?

393

ಪ್ರಜಾಸ್ತ್ರ ವಿಶೇಷ

ಬೆಂಗಳೂರು: ಇದೀಗ ರಾಜ್ಯದಲ್ಲಿ ಅರ್ಧ ಫೀಸ್ ಅಭಿಯಾನ ಶುರುವಾಗಿದೆ. ಅಂದ್ರೆ, ಕರೋನಾ ಲಾಕ್ ಡೌನ್ ನಿಂದಾಗಿ ಪ್ರತಿಯೊಬ್ಬರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಖಾಸಗಿ ಶಾಲಾ, ಕಾಲೇಜುಗಳ ಫೀಸ್ ನ್ನ ಅರ್ಧ ತೆಗೆದುಕೊಳ್ಳಬೇಕು ಅನ್ನೋ ಅಭಿಯಾನ ಶುರುವಾಗಿದೆ. ಇದರ ನಡುವೆ ಅನೇಕರು ಸರ್ಕಾರಿ ಶಾಲೆ ಬಗ್ಗೆ ಚರ್ಚಿಸ್ತಿದ್ದಾರೆ.

ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಲಕ್ಷ ಲಕ್ಷ ಫೀಸ್ ಕಟ್ಟಿ ಖಾಸಗಿ ಶಾಲೆ ಕಳಿಸುವ ಜನರು ಇದೀಗ ಅರ್ಧ ಫೀಸ್ ಎಂದು ಹೇಳ್ತಿದ್ದಾರೆ. ಇದಕ್ಕೆ ಅಭಿಯಾನ ಬೇರೆ ಶುರು ಮಾಡ್ತಿದ್ದಾರೆ. ಆದ್ರೆ, ಯಾವತ್ತಾದ್ರೂ ಸರ್ಕಾರಿ ಶಾಲೆಗಳನ್ನ ಉಳಿಸುವ, ಅವುಗಳ ಅಭಿವೃದ್ಧಿಗಾಗಿ ಅಭಿಯಾನವನ್ನ ಮಾಡಲಾಗಿದ್ಯಾ? ಅರ್ಧ ಫೀಸ್ ಬಗ್ಗೆ ಮಾಧ್ಯಮಗಳಲ್ಲಿ ಮಾಡ್ತಿರುವ ಭಾಷಣವನ್ನ, ಸರ್ಕಾರಿ ಶಾಲೆ ಬಗ್ಗೆ ಮಾಡಲಾಗಿದ್ಯಾ ಅನ್ನೋ ಪ್ರಶ್ನೆಗಳನ್ನ ಕೆಲ ವರ್ಗದ ಜನರು ಕೇಳ್ತಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ಅನ್ನೋದು ಮಾಲ್ ಆಗಿವೆ. ಮಕ್ಕಳಿಗೆ ಒಂದು ಪೆನ್ಸಿಲ್ ನಿಂದ ಹಿಡಿದು ಶೂ, ಬಟ್ಟೆ, ಬುಕ್ಸ್, ಟಿಫಿನ್, ಊಟ, ಸಾಲದಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಿನಲ್ಲಿ ವರ್ಷದಲ್ಲಿ ಮೂರ್ನಾಲ್ಕು ಬಾರಿ ದುಡ್ಡು ವಸೂಲಿ ಮಾಡ್ತಿವೆ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಪೋಷಕರನ್ನ ಸೂಲಿಗೆ ಮಾಡ್ತಿದ್ರೂ ಯಾರೂ ಪ್ರಶ್ನೆ ಮಾಡ್ತಿಲ್ಲ. ಸರ್ಕಾರ ಸಹ ಇಂಥವರ ಬೆನ್ನಿಗೆ ನಿಂತಿದೆ. ಸರ್ಕಾರಿ ಶಾಲೆಗಳ ಕುರಿತು ಚಿಂತಿಸುವ, ಅಭಿವೃದ್ಧಿ ಪಡಿಸುವ, ಇನ್ಮುಂದೆ ಎಲ್ಲರೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನ ಸೇರಿಸುವ ಬಗ್ಗೆ ವಿಚಾರ ಮಾಡುವಂತೆ ಮಾಡಿ ಎನ್ನುತ್ತಿದ್ದಾರೆ.

ಗುಣಮಟ್ಟದ ಶಿಕ್ಷಣ ಕೊಡುವುದು ಸರ್ಕಾರದ ಕೆಲಸ. ಅದಕ್ಕಾಗಿ ಲೆಕ್ಕವಿಲ್ಲದಷ್ಟು ಯೋಜನೆಗಳನ್ನ ತರಲಾಗಿದೆ. ಆದ್ರೆ, ಅದೆಲ್ಲವೂ ಬರೀ ಆದೇಶ ಪತ್ರದಲ್ಲಿವೆ. ಇದರ ಜೊತೆಗೆ ನೌಕರಿ ಮಾತ್ರ ಸರ್ಕಾರಿ ಶಾಲೆಯಲ್ಲಿ ಬೇಕು. ತಮ್ಮ ಮಕ್ಕಳು ಮಾತ್ರ ಖಾಸಗಿ ಶಾಲೆಯಲ್ಲಿ ಓದಬೇಕು ಅನ್ನೋ ಶಿಕ್ಷಕರ ವಿಚಾರದಲ್ಲಿಯೂ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿದೆ. ಅಲ್ದೇ, ಸರ್ಕಾರಿ ನೌಕರಿ ಮಾಡುವ ಪ್ರತಿಯೊಬ್ಬರ ಮಕ್ಕಳು ಸರ್ಕಾರಿ ಶಾಲೆಯಲ್ಲಿ 10ನೇ ತರಗತಿವರೆಗೂ ಓದಬೇಕು ಅನ್ನೋ ಕಾನೂನು ಜಾರಿಗೆ ಬರಲಿ. ಆಗ ಸರ್ಕಾರಿ ಅಧಿಕಾರಿಗಳು ತಮ್ಮ ಮಕ್ಕಳ ಸಲುವಾಗಿಯಾದ್ರೂ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ನೀಡುವುದು, ಅತ್ಯಾಧುನಿಕ ಉಪಕರಣಗಳ ಬಳಕೆ, ಸರ್ಕಾರ ನೀಡುವ ಸೌಲಭ್ಯಗಳನ್ನ, ಯೋಜನೆಗಳನ್ನ ತಲುಪಿಸಲು ಸಾಧ್ಯವಾಗುತ್ತೆ ಅನ್ನೋ ಸಲಹೆಗಳನ್ನ ಇನ್ನೊಂದ್ಕಡೆಯಿಂದ ನೀಡಲಾಗ್ತಿದೆ.

ಇನ್ನು ರಾಜಕಾರಣಿಗಳ ಮಕ್ಕಳು ಸಹ ಸರ್ಕಾರಿ ಶಾಲೆಗೆ ಪ್ರವೇಶ ಪಡೆಯಬೇಕು. ಹೈಸ್ಕೂಲ್ ನಂತರದ ವಿದ್ಯಾಭ್ಯಾಸ ಬಂದಾಗ ಸರ್ಕಾರಿ ಅಥವ ಖಾಸಗಿ ಕಾಲೇಜುಗಳ ಬಗ್ಗೆ ಆಯ್ಕೆ ನೀಡಿ. ಒಳ್ಳೆಯ ಶಿಕ್ಷಣ ಪಡೆಯುವುದು, ಕೊಡಿಸುವುದು ಮಕ್ಕಳ, ಹೆತ್ತವರ ಹಕ್ಕು ಎನ್ನುವುದಾದ್ರೆ, ಉಳ್ಳವರ ಮಕ್ಕಳ ಸಮನಾಗಿ ಓದಿಸಲು ಮಧ್ಯಮ, ಬಡ ವರ್ಗದ ಜನರು ಪಡ್ತಿರುವ ಕಷ್ಟಕ್ಕೆ ಯಾರು ಹೊಣೆ? ಆರ್ಥಿಕವಾಗಿ, ಸಾಮಾಜಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿರುವವರು ಯಾರು? ಬರುವ ಆದಾಯವೆಲ್ಲ ಮಕ್ಕಳ ಶಿಕ್ಷಣಕ್ಕೆ ಎನ್ನುತ್ತಾ ಹೋದ್ರೆ, ಉತ್ತಮ ಬದುಕು ಕಟ್ಟಿಕೊಳ್ಳುವುದು ಯಾವಾಗ? ಹೀಗಾಗಿ ಕಡ್ಡಾಯವಾಗಿ ರಾಜ್ಯದಲ್ಲಿ ಪ್ರತಿಯೊಬ್ಬರೂ ಸರ್ಕಾರಿ ಶಾಲೆಯಲ್ಲಿ ಓದಬೇಕು ಅನ್ನೋ ಕುರಿತು ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎನ್ನಲಾಗ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮೂಗುದಾರ ಹಾಕಲು ಇದೀಗ ಒಳ್ಳೆಯ ಸಮಯವೆಂದು ಅನೇಕರು ತಮ್ಮ ಅಭಿಪ್ರಾಯಗಳನ್ನ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸ್ತಿದ್ದಾರೆ. ಶಿಕ್ಷಣ ಸಚಿವರು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ.




Leave a Reply

Your email address will not be published. Required fields are marked *

error: Content is protected !!