ಹೆಚ್ಚಾಗುತ್ತಿದೆ ಸಿಂದಗಿ ಜಿಲ್ಲೆಯ ಕೂಗು

229

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಿಂದಗಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಭಾನುವಾರ ಸಂಜೆ ಪಟ್ಟಣದ ಬಸವ ಮಂಟಪದಲ್ಲಿ ಸರ್ವಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು, ಸಾಹಿತಿಗಳು, ಸಾರ್ವಜನಿಕರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಶಾಸಕ ಅಶೋಕ ಮನಗೂಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, 10-12 ಜನರ ನಿಯೋಗವೊಂದನ್ನು ಜನವರಿ 11ರಂದು ಸಿಎಂ ಭೇಟಿಗಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಕುರಿತು ತೀರ್ಮಾನಿಸಲಾಯಿತು. ಸಿಂದಗಿಯನ್ನು ಜಿಲ್ಲೆ ಮಾಡಲು ಏನೆಲ್ಲ ಅನುಕೂಲಗಳಿವೆ, ಈ ಭಾಗದ ಹಿನ್ನಲೆ ಏನು ಅನ್ನೋದರ ಕುರಿತು ಸಮಗ್ರ ಮಾಹಿತಿ ಇರುವ ಮನವಿ ಪತ್ರ ಸಿದ್ಧಪಡಿಸಲಾಗುತ್ತಿದೆ. ಜೊತೆಗೆ ಬಹುಮುಖ್ಯವಾಗಿ ಸಿಂದಗಿಗೆ ರೈಲು ಸಂಪರ್ಕ ಕಲ್ಪಿಸಬೇಕು ಎನ್ನುವ ಅಂಶವನ್ನು ಇದರಲ್ಲಿ ಸೇರಿಸಲಾಗುತ್ತಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕಂದಾಯ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಜಿಲ್ಲೆಯ ಬೇಡಿಕೆ ಸಲ್ಲಿಸುವ ಕುರಿತು ನಿರ್ಧಾರಕ್ಕೆ ಬರಲಾಯಿತು.

ಶಾಸಕರ ನೇತೃತ್ವದ ನಿಯೋಗದಲ್ಲಿ ತಾಲೂಕಿನ ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್ ಸದಸ್ಯರು, ವಿವಿಧ ಸಂಘಟನೆಯ ಮುಖಂಡರು, ಸಾಹಿತಿಗಳು, ಪತ್ರಕರ್ತರನ್ನು ಒಳಗೊಂಡಂತೆ 10-12 ಜನರ ತಂಡ ಇರಲಿದೆ. ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಾಹಪೂರ, ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರ, ಬಿಎಸ್ಪಿ ರಾಜ್ಯ ಘಟಕದ ಪ್ರಮುಖ ದಸ್ತಗೀರ ಮುಲ್ಲಾ, ದಸಂಸ ಜಿಲ್ಲಾ ಸಂಚಾಲಕ ವೈ.ಸಿ ಮಯೂರ, ರಣದೀರ ಪಡೆಯ ಸಂಚಾಲಕ ಸಂತೋಷ ಮಣಿಗಿರಿ, ಕರವೇ ರಾಜ್ಯ ಘಟಕದ ಸಂಚಾಲಕ ಸಂತೋಷ ಪಾಟೀಲ ಡಂಬಳ, ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾ ಕುದರಗೊಂಡ, ಜೆಡಿಎಸ್ ನಾಯಕಿ ಶೈಲಜಾ ಸ್ಥಾವರಮಠ ಸೇರಿ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!