ಹಳ್ಳಿಯನ್ನ ಕಾಯುವ ಸರ್ಪಗಳು…!

1460

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು.. ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಅಂತಾ ಅಣ್ಣ ಬಸವಣ್ಣನವರು ಹೇಳ್ತಾರೆ. ಆದ್ರೆ, ಇಲ್ಲೊಂದು ಊರು ಇದೆ. ಇಲ್ಲಿ ಹಾವುಗಳೆ ಇವರ ದೈವ. ಪ್ರತಿಯೊಂದು ಮನೆಯಲ್ಲಿ ಮೂರ್ನಾಲ್ಕು ಹಾವುಗಳನ್ನ ಸಾಕಲಾಗ್ತಿದೆ. ಅವುಗಳನ್ನ ಪೂಜೆ ಮಾಡಿಕೊಂಡು ಬರಲಾಗ್ತಿದೆ. ಹೀಗಾಗಿ ಇದನ್ನ ಹಾವಿನ ಊರು ಅಂತಾ ಕರೆಯಲಾಗ್ತಿದೆ.

ಪಕ್ಕದ ಮಹಾರಾಷ್ಟ್ರದ ಸೋಲಾಪುರದ ಬಳಿ ಶೆಟ್ಟಲ್ ಅನ್ನೋ ಹಳ್ಳಿ ಇದೆ. ಈ ಹಳ್ಳಿಯಲ್ಲಿ ಎಲ್ಲಿ ನೋಡಿದ್ರೂ ಹಾವುಗಳು ಕಾಣಸಿಗುತ್ತವೆ. ದೊಡ್ಡವರಿಂದ ಹಿಡಿದು ಸಣ್ಣವರ ತನಕ ವಿವಿಧ ತಳಿಯ ಹಾವುಗಳು ಹಿಡಿದುಕೊಂಡು ನಿಂತಿರ್ತಾರೆ. ಹೀಗಾಗಿ ಈ ಊರಿಗೆ ಬರಲು ಅನೇಕರಿಗೆ ಭಯ. ಹೆಜ್ಜೆ ಹೆಜ್ಜೆಗೂ ಹಾವುಗಳನ್ನ ನೋಡಿದ್ರೆ ಯಾರಿಗೆ ತಾನೆ ಭಯವಾಗುವುದಿಲ್ಲ ಹೇಳಿ. ಆದ್ರೆ, ಶೆಟ್ಟಲ್ ಗ್ರಾಮದ ಜನರು ಮಾತ್ರ, ಅವುಗಳನ್ನ ಮನೆ ಮಕ್ಕಳಂತೆ ಸಾಕ್ತಾರೆ.

ಈ ಗ್ರಾಮದಲ್ಲಿ ಸರ್ಪವಿಲ್ಲದೆ ಬದುಕೆ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ತುಂಬಿಕೊಂಡಿವೆ. ಹೀಗಾಗಿ ಇಲ್ಲಿ ಸಾಕು ಪ್ರಾಣಿಗಳನ್ನ ಸಾಕಿದಂತೆ ಹಾವುಗಳನ್ನ ಸಾಕಲಾಗ್ತಿದೆ. ಇದು ವೈಜ್ಞಾನಿಕವಾಗಿಯೂ ವಿಚಿತ್ರ ಅನಿಸಿದ್ರೂ ಸತ್ಯ. ಸಣ್ಣಪುಟ್ಟ ಹಾವುಗಳು ಸೇರಿದಂತೆ ಭಯಂಕರ ವಿಷಪೂರಿತ ಹಾವುಗಳನ್ನ ಸಹ ಇವರು ಸಾಕಿದ್ದಾರೆ. ಮಕ್ಕಳು ಹಾವುಗಳ ಜೊತೆಯೇ ಆಟವಾಡ್ತವೆ.

ಮನೆ ಮೇಲೆ ಸರ್ಪಗಳಿಗೆ ಜಾಗ

ಪ್ರತಿಯೊಬ್ಬರ ಮನೆ ಮೇಲೆ ಸರ್ಪಗಳಿಗೆ ಜಾಗ ಮಾಡಿಕೊಡಲಾಗಿದೆ. ಆ ಜಾಗವನ್ನ ದೇವರ ಸನ್ನಿಧಿ ಎಂದು ಜನರು ಅದನ್ನು ಸ್ವಚ್ಛವಾಗಿಟ್ಟುಕೊಳ್ತಾರೆ. ಕಾರಣ ಕೇಳಿದ್ರೆ, ಹಿಂದೂಗಳ ಪ್ರಕಾರ ನಾಗಗಳು ಪೂಜನೀಯವಾಗಿವೆ. ಹೀಗಾಗಿ ಜೀವಂತ ಸರ್ಪಗಳನ್ನು ಇಲ್ಲಿ ಪೂಜಿಸಿಕೊಂಡು ಬರಲಾಗುತ್ತಿದೆ.

ನಾಗರ ಪಂಚಮಿ ದಿನ ನಮ್ಮಲ್ಲಿ ಹುತ್ತಗಳಿಗೆ ಹಾಲು ಎರೆದು ಬಂದ್ರೆ, ಶೆಟ್ಟಲ್ ಗ್ರಾಮದ ಜನರು ನಿಜವಾದ ಹಾವುಗಳಿಗೆ ಹಾಲಿನ ಅಭಿಷೇಕ ಮಾಡ್ತಾರೆ. ಅಷ್ಟರ ಮಟ್ಟಿಗೆ ಇವರು ಆತ್ಮೀಯ ಸಂಬಂಧವನ್ನ ಬೆಳಸಿಕೊಂಡಿದ್ದಾರೆ. ಇದಕ್ಕೆ ನಿಜವಾದ ಕಾರಣ ಏನು ಅನ್ನೋದು ಗೊತ್ತಿಲ್ಲ.

ಇದುವರೆಗೂ ಯಾರಿಗೂ ಹಾವು ಕಚ್ಚಿಲ್ಲ

ಇಡೀ ಗ್ರಾಮದಲ್ಲಿರುವ ಮನೆ, ರಸ್ತೆ, ಶಾಲೆ, ಬಯಲು ಜಾಗ ಸೇರಿದಂತೆ ಎಲ್ಲಂದರಲ್ಲಿ ಕಾಣಿಸಿಕೊಳ್ಳುವ ಹಾವುಗಳು ಇದೂವರೆಗೂ ಯಾರಿಗೂ ಕಚ್ಚಿಲ್ಲವಂತೆ. ಇದು ಹೇಗೆ ಸಾಧ್ಯ ಅನ್ನೋದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಇದೊಂದು ನಿಜಕ್ಕೂ ವಿಸ್ಮಯ ಅಂತಾ ಹೇಳಬಹುದು. ಈ ಕಾರಣದಿಂದ ಬೇರೆ ಊರಿನ ಜನ ಈ ಊರಿಗೆ ಬರಲು ಹೆದರುವುದ್ರಿಂದ ಸರ್ಪಗಳು ಹಳ್ಳಿಯನ್ನ ಕಾಯುತ್ತಿವೆ ಅನ್ನೋ ಮಾತಿದೆ.




Leave a Reply

Your email address will not be published. Required fields are marked *

error: Content is protected !!