ಕ್ರಿಕೆಟ್ ಕಲಿಸಿದವರಿಗೆ ಒಲಿಯುತ್ತಾ ಚೊಚ್ಚಲ ವಿಶ್ವಕಪ್?

365

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಇಂದು ಎರಡು ಬಲಿಷ್ಟ ತಂಡಗಳು ನಡುವೆ ವರ್ಲ್ಡ್ ಚಾಂಪಿಯನ್ಸ್ ಸಲುವಾಗಿ ಕಾದಾಟ ನಡೆಯಲಿದೆ. ಈ ಪಂದ್ಯದ ಗೆಲುವು ಹೊಸ ಇತಿಹಾಸ ಬರೆಯಲಿದೆ. ಹೀಗಾಗಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಟೀಂನ ಕ್ಯಾಪ್ಟನ್ ಹಾಗೂ ಉಳಿದ ಸದಸ್ಯರಿಗೆ ಮಾಡು ಇಲ್ಲವೆ ಮಡಿ ಪಂದ್ಯ.

ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸ್ ಹಾಗೂ ಇಂಗ್ಲೆಂಡ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಹೊಸ ದಾಖಲೆ ಬರೆಯಲು ಸಿದ್ಧರಾಗಿದ್ದಾರೆ. ತವರು ನೆಲದಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ಮೊದಲ ಬಾರಿಗೆ ವರ್ಲ್ಡ್ ಚಾಂಪಿಯನ್ಸ್ ಆಗಲು ನೋಡ್ತಿದೆ, ಕ್ರಿಕೆಟ್ ಕಲಿಸಿದ ಇಂಗ್ಲೆಂಡ್. ಅದು ಅಲ್ದೇ, 27 ವರ್ಷಗಳ ಬಳಿಕ ಫೈನಲ್ ತಲುಪಿದೆ. 1992ರ ನಂತ್ರ ಇಂಗ್ಲೆಂಡ್ ಫೈನಲ್ ಗೆ ಬಂದಿದ್ದು, ಆತಿಥೇಯ ತಂಡಕ್ಕೆ ಭರ್ಜರಿ ಬೆಂಬಲ ಸಿಕ್ಕಿದೆ.

ಇನ್ನೂ ಸೆಮಿಫೈನಲ್ ನಲ್ಲಿ ಬಲಿಷ್ಟ ಭಾರತವನ್ನ ಸೋಲಿಸಿದ ನ್ಯೂಜಿಲೆಂಡ್ 2ನೇ ಬಾರಿಗೆ ಫೈನಲ್ ತಲುಪಿದೆ. ಕಳೆದ 2015ರ ವರ್ಲ್ಡ್ ಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್ ನಲ್ಲಿ ಸೋಲುವ ಮೂಲಕ ರನ್ನರ್ ಅಪ್ ಆಗಿತ್ತು. ಅಲ್ದೇ ಐದು ಬಾರಿ ಸೆಮಿಫೈನಲ್ ನಲ್ಲಿ ಬಂದು ಸೋತಿದೆ. ಹೀಗಾಗಿ ನ್ಯೂಜಿಲೆಂಡ್ ಗೂ ಚೊಚ್ಚಲ ವಿಶ್ವಕಪ್ ಜಯಿಸುವ ತವಕ ಮತ್ತು ಸವಾಲು.

ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತೋರಿದ ಪ್ರದರ್ಶನದ ಆಧಾರದ ಮೇಲೆ ಗೆಲ್ಲುವ ನೆಚ್ಚಿನ ತಂಡವಾಗಿದೆ. ಜೊಪ್ರಾ ಮತ್ತು ಕ್ರಿಸ್ ವೋಕ್ಸ್, ಆಸ್ಟ್ರೇಲಿಯಾ 14 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ತೆಗೆದಿದ್ರು. ಇನ್ನು ಮಧ್ಯಮದಲ್ಲಿ ರಶಿದ್ ಸಹ ಮೂರು ವಿಕೆಟ್ ಪಡೆದು ಆಸೀಸ್ ರನ್ ಓಟಕ್ಕೆ ಬ್ರೇಕ್ ಹಾಕಿದ್ರು. ಹೀಗಾಗಿ ಕೇವಲ 223ರನ್ ಗಳಿಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟ್ ಮಾಡಿದ ಇಂಗ್ಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು 32.1 ಓವರ್ ಗಳಲ್ಲಿಯೇ 226ರನ್ ಗಳಿಸಿ ಗೆಲುವು ಸಾಧಿಸಿತ್ತು.

ರಾಯ್ 85, ರೂಟ್ 49, ಮಾರ್ಗನ್ 45 ಹಾಗೂ ಬ್ರೆಸ್ಟೋ 34 ರನ್ ಗಳಿಸಿದ್ರು. ಹೀಗಾಗಿ ಇಂಗ್ಲೆಂಡ್ ಬ್ಯಾಟಿಂಗ್ ಹಗೂ ಬೌಲಿಂಗ್ ನಲ್ಲಿ ಬಲಿಷ್ಠವಾಗಿದ್ದು, ಗೆಲ್ಲುವ ನೆಚ್ಚಿನ ತಂಡವಾಗಿದೆ.

ಇತ್ತ ನ್ಯೂಜಿಲೆಂಡ್ ಸಹ ಸ್ಟ್ರಾಂಗ್ ತಂಡವಾಗಿದೆ. ಭಾರತದ ವಿರುದ್ಧ 239ರನ್ ಗಳಿಸಿದ್ರೂ ಬೆಸ್ಟ್ ಬೌಲಿಂಗ್ ಮೂಲಕ 18ರನ್ ಗಳ ಅಂತರದಿಂದ ಭಾರತವನ್ನ ಸೋಲಿಸಿತು. ಇದರಲ್ಲಿ ಹೆನ್ರಿ ಹಾಗೂ ಬೌಲ್ಟ್ ಮಾರಕ ಬೌಲಿಂಗ್ ದಾಳಿಗೆ ಭಾರತ 5ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಮುಂದೆ ಮಿಚೆಲ್ ಸ್ಯಾಂಟ್ನರ್ ಸಹ ಉತ್ತಮ ಬೌಲಿಂಗ್ ಮಾಡಿ ಭಾರತದ ಬ್ಯಾಟ್ಸ್ ಮನ್ ಗಳನ್ನ ಕಾಡಿದ.

ಬ್ಯಾಟಿಂಗ್ ವಿಭಾಗದಲ್ಲಿ ಕ್ಯಾಪ್ಟನ್ ವಿಲಿಯಮ್ಸ್, ರಾಸ್ ಟೇಲರ್, ಮಾರ್ಟಿನ್ ಗುಪ್ಟಿಲ್, ಲಥಾಮ್, ನಿಕೋಲ್ಸ್ ಹಾಗೂ ಜೇಮ್ಸ್ ನಿಶಾಮ್ ಆಟ ಭರ್ಜರಿಯಾಗಿದೆ. ಫೀಲ್ಡಿಂಗ್ ನಲ್ಲಿಯೂ ಮಿಂಚಿರುವ ನ್ಯೂಜಿಲೆಂಡ್ ಚೊಚ್ಚಲ ವರ್ಲ್ಡ್ ಕಪ್ ಗೆಲ್ಲಲು ಎಲ್ಲ ರೀತಿಯ ರಣತಂತ್ರ ರೂಪಿಸಿದೆ. ಈ ಪಂದ್ಯದಲ್ಲಿ ಯಾರೆ ಗೆದ್ದರೂ ಹೊಸ ಇತಿಹಾಸ ನಿರ್ಮಾಣವಾಗೋದು ಪಕ್ಕಾ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3ಗಂಟೆಗೆ ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!