ಯಾರಿಗಾಗಿ ಮಾಧ್ಯಮ ಈ ರಿಸ್ಕ್ ತೆಗೆದುಕೊಳ್ಳಬೇಕಾಗಿದೆ?

614

ಕಳೆದೊಂದು ವಾರದಿಂದ ರಾಜ್ಯ ರಾಜಕೀಯ ವಾತಾವರಣ ನೋಡಿದ್ರೆ, ಕರ್ನಾಟಕದ ರಾಜಕೀಯ ಇತಿಹಾಸಕ್ಕೆ ಕಪ್ಪು ಮಸಿ ಎರಚುವ ಪ್ರಯತ್ನವನ್ನ ಎಲ್ಲ ಪಕ್ಷಗಳು ಮಾಡ್ತಿವೆ. ದೇಶದಲ್ಲಿ ನಾಡಿನ ಮಾನ ಕಳೆಯಲು ಉತ್ತರದ ನಾಯಕರು ನಡೆಸಿರುವ ಹುನ್ನಾರಕ್ಕೆ ಎಲ್ಲರೂ ಬಲಿಯಾಗ್ತಿದ್ದಾರೆ. ಈ ಕಲುಷಿತ ರಾಜಕೀಯ ವಾತಾವರಣವನ್ನ ಜನರ ಮುಂದೆ High speed ನಲ್ಲಿ ತೋರಿಸುವ ಧಾವಂತದಲ್ಲಿ ಮೀಡಿಯಾ ಸಂಸ್ಥೆಗಳು, ತಮ್ಮ ಸಿಬ್ಬಂದಿ ಬಗೆಗಿನ ಕಾಳಜಿಯನ್ನ ಮರೆಯುತ್ತಿವೆಯಾ ಅನ್ನೋ ಪ್ರಶ್ನೆ ಮೂಡಿದೆ.

ಇಲ್ಲೊಬ್ಬ ವರದಿಗಾರ ಉಕ್ಕಿ ಹರಿಯುವ ನೀರಿನ ಮಧ್ಯೆ ನಿಂತು ವರದಿ ಮಾಡಿದ್ದಾನೆ. ಇದು ಜೀವಕ್ಕೆ ಅಪಾಯ ಅನ್ನೋದು ಆತನಿಗೆ ಗೊತ್ತು . ಆದರೂ, ನೀರಿಗಿಳಿದು ಸುದ್ದಿ ನೀಡಿದ. ಕಾರಣ, ಬೇರೆ ಮಾಧ್ಯಮಗಳಿಗಿಂತ ನಾವು ಹೇಗೆ ಭಿನ್ನ ಮತ್ತು ಎಷ್ಟೊಂದು ವಿಶೇಷವಾಗಿ ತೋರಿಸುತ್ತೇವೆ ಅನ್ನೋದು ಹೇಳಬೇಕಾಗಿದೆ. ಇತ್ತೀಚೆಗಷ್ಟೆ ಮಹಾರಾಷ್ಟ್ರದಲ್ಲಿ ನೆರೆಹಾವಳಿ ಬಂದಾಗ ಮಾಡಿದ ಸುದ್ದಿ ಎನ್ನಲಾಗ್ತಿದೆ. ಇದು ಈತನ ಪ್ಲಾನ್ ಆಗಿದ್ಯಾ? ಮೇಲಿನವರು ಏನಾದ್ರೂ ಐಡಿಯಾ ಕೊಟ್ಟಿದ್ದಾರಾ ಗೊತ್ತಿಲ್ಲ. ಇಷ್ಟೊಂದು Risk ಬೇಕಾಗಿತ್ತಾ ಅನಿಸುತ್ತೆ.

ಮರಳಿ ರಾಜ್ಯ ರಾಜಕೀಯ ಹೈಡ್ರಾಮಾಗೆ ಬಂದ್ರೆ, ಸಿಎಂ ಅಮೆರಿಕಾದಿಂದ ಬಂದು ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಹೋಗುವ ಟೈಂನಲ್ಲಿ ಮತ್ತು ಅತೃಪ್ತ ಶಾಸಕರು, ಸುಪ್ರೀಂ ಸೂಚನೆ ಮೇರೆಗೆ ಸ್ಪೀಕರ್ ಅವರನ್ನ ಭೇಟಿ ಮಾಡುವ ಟೈಂನಲ್ಲಿ ಮಾಧ್ಯಮಗಳ ಕ್ಯಾಮೆರಾ ಕಣ್ಣು ಹಿಂಬಾಲಿಸಿಕೊಂಡು ಬಂದ್ವು. ಅದು ಜೀರೋ ಟ್ರಾಫಿಕ್ ರೋಡಿನಲ್ಲಿ ಹೈಸ್ಪೀಡ್ ನಲ್ಲಿ ಹೋಗುವ ಸರ್ಕಾರಿ ವಾಹನಗಳನ್ನ Follow ಮಾಡೋದು ಇದೆಯಲ್ಲ, ಅದು ನಿಜಕ್ಕೂ Challenging. ಕ್ಯಾಬ್ ಡ್ರೈವರ್ ಎಲ್ಲ ಗಾಡಿಗಳನ್ನ ಹಿಂದಿಕ್ಕಿ, ತನ್ನ ಟಾರ್ಗೆಟ್ ಯಾವುದೋ ಅದನ್ನ ಹಿಂಬಾಲಿಸುವುದು. ಅದೇ ರೀತಿ ಕ್ಯಾಮೆರಾಮನ್ ಶೂಟ್ ಮಾಡುವುದು. ಆಫೀಸ್ ನಲ್ಲಿ ಕುಳಿತು ಹೇಳಿದಷ್ಟು ಸುಲಭವಾಗಿರಲ್ಲ.

ಕ್ಷಣಕ್ಷಣದ ಸುದ್ದಿ ನೀಡುವ ಭರದಲ್ಲಿ ಕೆಲ ಪ್ರಮುಖ ಹಾಗೂ ಸೂಕ್ಷ್ಮ ವಿಷಯಗಳನ್ನೇ ನಾವು ಮರೆಯುತ್ತಿದ್ದೇವೆ. ಅತ್ಯಂತ ವೇಗವಾಗಿ ವಾಹನಗಳನ್ನ ಹಿಂಬಾಲಿಸುವುದು ಎಷ್ಟು ಸರಿ. ಸಿಎಂ ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ನೀಡಿದ Escort force ಇರುತ್ತೆ. ಪೊಲೀಸ್ ವಾಹನಗಳು ಇರುತ್ತವೆ. ಹೀಗೆ ಹತ್ತು ಹಲವು ಭದ್ರತಾ ವಾಹನಗಳ ಜೊತೆ ಪೈಪೋಟಿಗೆ ಇಳಿದು ದೃಶ್ಯ ಸೆರೆ ಹಿಡಿಯುವುದು ನಮ್ಮಿಬ್ಬರಿಗೂ ತೊಂದರೆ ಅಲ್ವಾ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ಹಿಂಸೆ ಆಗುತ್ತೆ. ನಾವು ಮಾಡುವ ವೃತ್ತಿ ಮೇಲೆ ಪ್ರೀತಿ ಬರಬೇಕು. ಆದ್ರೆ, ಕೆಲವೊಮ್ಮೆ Media ಸಂಸ್ಥೆಗಳು ಮಾಡುವ ಅವಾಂತರಕ್ಕೆ ಅಲ್ಲಿನ ಸಿಬ್ಬಂದಿ ಬಲಿಪಶು.

ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾ, ಸ್ಟಾರ್ ಹೋಟೆಲ್ ಗಳಲ್ಲಿ, ರೆಸಾರ್ಟ್ ಗಳಲ್ಲಿ ಮಜಾ ಮಾಡುತ್ತಾ, ಅಲ್ಲಿಂದ ಇಲ್ಲಿ. ಇಲ್ಲಿಂದ ಅಲ್ಲಿ ಹಾರಾಡುವ ಜನಪ್ರತಿನಿಧಿಗಳ Pin to pin ಮಾಹಿತಿ ನೀಡಲು ಓಡಾಡುವ ವರದಿಗಾರ, ಕ್ಯಾಮೆರಾಮನ್, ಕ್ಯಾಬ್ ಡ್ರೈವರ್ ಗಳು ನಾಸ್ಟಾ ಮಾಡಿದ್ರಾ.. ಊಟ ಮಾಡಿದ್ರಾ ಅಂತಾ ಯಾರೊಬ್ಬರು ಕೇಳೋದಿಲ್ಲ. ಅದು ಯಾರಿಗೂ ಬೇಕಾಗಿಲ್ಲ. ಸುದ್ದಿಯಷ್ಟೆ ಮುಖ್ಯ. ಉಳಿದಿದ್ದು ನಗಣ್ಯ. ಹೌದು, ಮಾಧ್ಯಮಕ್ಕೆ ಸುದ್ದಿ ಅತೀ ಮುಖ್ಯ. ಆದ್ರೆ, ಯಾವುದು ಮುಖ್ಯ. ಯಾವುದಕ್ಕೆ ನಾವು ಎಷ್ಟು ಪ್ರಾಮುಖ್ಯತೆ ಕೊಡಬೇಕು ಅನ್ನೋದರಲ್ಲಿ ಯಡವುತ್ತಿದ್ದೇವೆ. ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ, ಜನರಿಗೆ ಕೊಟ್ಟ ಭರವಸೆಗಳನ್ನ ಈಡೇರಿಸುವ ಸಲುವಾಗಿ ಪ್ರಾಮಾಣಿಕವಾಗಿ ಹೋರಾಡುವ ಜನನಾಯಕರ ಸುದ್ದಿಗಳನ್ನ ನೀಡುವಾಗ Risk ತೆಗೆದುಕೊಳ್ಳೋಣ. ಆಗ ಅದ್ಕೊಂದು ಅರ್ಥವಿರುತ್ತೆ. ಇಲ್ದೇ ಹೋದ್ರೆ, ನಾಳೆ ಏನಾದ್ರೂ ಅನಾಹುತವಾದ್ರೆ ನಮ್ಮ ಕುಟುಂಬಕ್ಕೆ ನಮ್ಮ ಸ್ಥಾನವನ್ನ ತುಂಬಿಸಲು ಯಾರಿಂದಲೂ ಸಾಧ್ಯವಿಲ್ಲ.

ಮಾಧ್ಯಮದಲ್ಲಿ ಕೆಲಸ ಅಂದ್ಮೇಲೆ ಗೆರೆ ಹೊಡೆದು ಮಾಡಲು ಬರೋದಿಲ್ಲ. ಹಾಗೆ ಕೆಲಸ ಮಾಡುವವನು ಪತ್ರಕರ್ತನಾಗಲು ಯೋಗ್ಯನಲ್ಲ. ಆದ್ರೆ, ಇಂಥಾ ಹುಚ್ಚು ಸಾಹಸಕ್ಕೆ ಇಳಿಯುವಾಗ ಅದು ಆ ಕ್ಷಣಕ್ಕೆ ಒಳ್ಳೆಯ ಅನುಭವ ಅನಿಸಬಹುದು. ಆದ್ರೆ, ಅದರ ಮಾನಸಿಕ ಪರಿಣಾಮ ವಾರಗಟ್ಟಲೆ ಇರುತ್ತೆ. ಇಷ್ಟೆಲ್ಲ ಕಷ್ಟಪಟ್ಟಿದ್ದಕ್ಕೆ ಸಮಾಜಕ್ಕೆ ಒಂದೊಳ್ಳೆ ಕೆಲಸ ಆಯ್ತು ಅನ್ನೋ ತೃಪ್ತಿ ಸಹ ಇರೋದಿಲ್ಲ. ಯಾಕಂದ್ರೆ, ನಾವು ಹಿಂಬಾಲಿಸಿಕೊಂಡು ಹೋಗಿದ್ದು ತಮ್ಮ ಸ್ಥಾನಮಾನ ಮರೆತ ಜನಪ್ರತಿನಿಧಿಗಳ ಹಿಂದೆ. ಹೀಗಿರುವಾಗ ರಾಜಕಾರಣಿಗಳಿಂದಾಗ್ಲಿ ಮಾಧ್ಯಮದಿಂದಾಗ್ಲಿ ಜನರ ಕಣ್ಣೀರು ಒರೆಸಲು ಸಾಧ್ಯವಿಲ್ಲ.

ನಮ್ಮ ವೃತ್ತಿ ಸಂಗಾತಿಗಳ ಬಗ್ಗೆ ನಾವು ಕಾಳಜಿ ತೋರಿಸ್ಲಿಲ್ಲಂದ್ರೆ ಮತ್ಯಾರು ತೋರಿಸ್ತಾರೆ ಹೇಳಿ. ಸಿನಿಮಾದವರ ಹಾಗೆ Doop ಮಾಡಿ ತೋರಿಸಲು ಆಗುತ್ತಾ. ಎಲ್ಲವೂ Live ಆಗಿರುತ್ತೆ ಅಂದ್ಮೇಲೆ ಅದಕ್ಕಾಗಿ ಮುನ್ನೆಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ಯಾಕಂದ್ರೆ ಜೀವ ಅನ್ನೋದು ಅಮೂಲ್ಯವಾದದ್ದು. ಒಂದು ವೇಳೆ ನಾವು ಮಾಡುವ ಸುದ್ದಿಯಿಂದ ನಮ್ಮಗೆ ಏನಾದ್ರೂ ದೈಹಿಕವಾಗಿ ಹಿಂಸೆಯಾದ್ರೆ, ಪ್ರಾಣ ಕಳೆದುಕೊಂಡ್ರೆ ಅದು ಸಮಾಜದ ಒಂದೊಳ್ಳೆ ಕೆಲಸಕ್ಕಾಗಿ ಆಗ್ಲಿ. ಈ ರೀತಿ ಹಣ, ಅಧಿಕಾರ, ಸ್ವಾರ್ಥ ರಾಜಕಾರಣಿಗಳಿಗಾಗಿ ಬೇಡ. ಇದನ್ನ ಸುದ್ದಿ ಸಂಸ್ಥೆಯ ಮುಖ್ಯಸ್ಥರು ಗಮನ ಹರಿಸಬೇಕಿದೆ. ಯಾಕಂದ್ರೆ, ಪತ್ರಕರ್ತರು ಅಂದ್ರೆ ಜೀತದಾಳುಗಳಲ್ಲ.

ನಾಡಿನಲ್ಲಿ Anarchy ಪರಿಸ್ಥಿತಿ ಉಂಟಾದಾಗ ಜನರನ್ನ, ಸರ್ಕಾರವನ್ನ ಎಚ್ಚರಿಸುವ ಕೆಲಸ ಮಾಡಬೇಕು. ಜನರಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳನ್ನ ಪ್ರಶ್ನಿಸಬೇಕು. ನಿಮ್ಮ ಈ ಹುಚ್ಚಾಟದಿಂದ ನಿಮ್ಮ ಕ್ಷೇತ್ರದಲ್ಲಿ ಎಷ್ಟೊಂದು ಸಮಸ್ಯೆಯಾಗ್ತಿದೆ. ನೀವು ಮಾಡಬೇಕಾದ ಕೆಲಸಗಳು ಇಷ್ಟಿವೆ. ಇದನ್ನ ಮಾಡೋದ್ಯಾರು ಅಂತಾ ಪ್ರಶ್ನೆ ಮಾಡಬೇಕು. ಆಗ ಅವರಿಂದ ಬರುವ ಉತ್ತರವನ್ನ ಜನರ ಮುಂದೆ ಇಟ್ಟಾಗ, ಅವರು ತೀರ್ಮಾನ ತೆಗೆದುಕೊಳ್ತಾರೆ. ಇವರು ನಮ್ಗೆ ಬೇಕಾ ಬೇಡ್ವಾ ಅನ್ನೋದು. ಇಂಥಾ ಸುದ್ದಿಗಾಗಿ ನಾವು ಎಷ್ಟು ಬೇಕೋ ಅಷ್ಟು Risk ತೆಗೆದುಕೊಳ್ಳೋಣ. ಮೂರು ಬಿಟ್ಟವರು ಊರಿಗೆ ದೊಡ್ಡವರು ಅಂತಾ ಕರೆಸಿಕೊಂಡವರ ಹುಚ್ಚಾಟಕ್ಕೆ ಬೇಡ.




Leave a Reply

Your email address will not be published. Required fields are marked *

error: Content is protected !!