ನನ್ನವ್ವ ಎಂದೂ ಬತ್ತದ ಸಿಹಿನೀರಿನ ಚಿಲುಮೆ…

361

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ದಾವಣಗೆರೆ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಪ್ಪ ಬೀ ಕಕ್ಕಳಮೇಲಿ ಅವರು ಬರೆದ ಲೇಖನ.

ಜಗತ್ತಿನಲ್ಲಿ ಪ್ರತಿಯೊಂದು ಪ್ರಾಣಿಗೂ ಹುಟ್ಟು ಸಾವು ಇರುವುದು ಸಹಜ. ಆದರೆ ಹುಟ್ಟು ಮಾತ್ರ ತಾಯಿಯಿಂದಾಗಿ ಬದುಕಿನ ಕೊನೆಯವರೆಗೂ ಬಾಳಿ ಜಗವನ್ನು ಗೆಲ್ಲುವ ಎಲ್ಲ ಗುಣಗಳು ಹೆತ್ತವರ ಬಳುವಳಿಯಾಗಿರುತ್ತವೆ. ಹಾಗೆ ನನ್ನ ತಾಯಿಯೂ ಕೂಡಾ ಜಗದ ನಿಯಮದಂತೆ ಬದುಕಿ ಬಾಳುತ್ತಿರುವ ನನ್ನ ದೈವ. ಇಂದು ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರ ಸಾಧನೆ, ಸಂಕೋಲೆ, ಕಷ್ಟ ಕಾರ್ಪಣ್ಯಗಳ ಅವಲೋಕನದ ದಿನವಾಗಿದೆ. ಮಹಿಳಾ ದಿನಾಚರಣೆಯ ದಿನವಾದ ಇಂದು ನನಗೆ ನನ್ನ ತಾಯಿಯು ಜಗತ್ತಿನ ಸರ್ವ ಶ್ರೇಷ್ಟ ಹೆಣ್ಣು ಎಂದು ಹೆಳಲು ಬಹಳ ಸಂತೋಷವೆನಿಸುತ್ತದೆ.

ನನ್ನ ತಾಯಿಗೆ ನಾವು ಹದಿನಾಲ್ಕು ಜನ ಮಕ್ಕಳು,(ಈಗ ಬದುಕಿರುವವರು ಒಂಬತ್ತು ಜನ) ಅತೀ ಬಡತನ. ದಿನದ ಊಟಕ್ಕೂ ಕಷ್ಟಪಟ್ಟಿರುವುದು ನನ್ನ ಕಣ್ಣೆದುರಿಗೆ ಬರುತ್ತದೆ. ಹಾಗಿರುವಾಗ ವೈದ್ಯಕೀಯ, ಸಾರಿಗೆ, ವಿದ್ಯುತ್ ಸಮಸ್ಯೆಗಳಿರುವ ಆ ಕಾಲದಲ್ಲಿಯೇ ಜೀವನ ಸಾಗಿಸಿ ಬೀಸುವ ಕಲ್ಲಿನಲ್ಲಿ ಬೀಸಿ ರೊಟ್ಟಿ ಮಾಡಿ ಅಷ್ಟೊಂದು ಮಕ್ಕಳನ್ನು ಸಲುಹಿ ಸಾಕ್ಷರರನ್ನಾಗಿಸಿ (ಕೆಲವರನ್ನು) ಮಾಡಿದ ಸಾಧನೆ ಜಗತ್ತಿನ ಎಲ್ಲ ಸಾಧನೆಗಳ ಮುಂದೆ ನನ್ನ ತಾಯಿಯ ಸಾಧನೆ ಹೆಚ್ಚು. ಎಪ್ಪತ್ತರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಕಂಡ ಬರಗಾಲ ನಿಜಕ್ಕೂ ಭಯಾನಕ. ಊಟಕ್ಕೆ ಹುರಿದ ಪುಂಡಿ ಬೀಜಗಳನ್ನು, ಜೋಳದ ಕಾಳಿನ ಗುಗ್ಗರಿ, ಗುಗ್ಗರಿಗಸದ (ಕಾಳುದಂಟಿನ ಹಾಗಿರುವ ಕಸ) ಕಾಳುಗಳನ್ನು ತಿಂದು ಬದುಕಿ ಮಕ್ಕಳೆಲ್ಲರನ್ನು ಬದುಕಿಸುವ ಹೋರಾಟದಲ್ಲಿ ನನ್ನ ತಾಯಿಯ ಹೋರಾಟ ಕಡಿಮೆ ಏನಲ್ಲ. ರೈತಳಾಗಿ ದುಡಿದು ನಸುಕಿನಲ್ಲಿಯೆ ಎದ್ದು ಮಕ್ಕಳಿಗಾಗಿ ಅಂಬಲಿಯನ್ನು ಮಾಡಿಟ್ಟು ತಂದೆಯವರೊಂದಿಗೆ ಹರಿದಾರಿ(ದೂರ) ನಡೆದು ತರಕಾರಿಯನ್ನು ಮಾರಿ ಬಂದ ಧಾನ್ಯಗಳಲ್ಲಿಯೇ ಜೀವನ ನಡೆಸಿ ಪಟ್ಟ ಕಷ್ಟವು ಎಲ್ಲ ಹೆಣ್ಣುಮಕ್ಕಳಿಗೂ ಮಾದರಿ.

ಸಂಸಾರ ಭಾರವೆಂದೊ, ಮಕ್ಕಳ ಸಂಖ್ಯೆ ಹೆಚ್ಚೆಂದೊ, ಎದೆಗುಂದದೆ, ಧೈರ್ಯದಿಂದ ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದಂತಹ ರಾಜ್ಯಗಳಿಗೆ ಕೂಲಿಗೆಂದು ಹೋಗಿ ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನವನ್ನೆ ಸವೆಸಿದವರು. ಅಲ್ಲದೆ ಅವರೆಂದೂ ಸಂತೋಷದ ದಿನಗಳಿಗಾಗಿ ಕಾಯಲಿಲ್ಲ. ಸಂಸಾರ ಸಾಗಿಸುವುದೇ ಸಂಭ್ರಮವೆಂದು ಜೀವನ ನಡೆಸಿದ ನನ್ನ ತಾಯಿಗೆ ರೋಗರುಜಿನಗಳೆಂದೂ ಕಾಡಲಿಲ್ಲ. ಪ್ಲೇಗ್ ನಂತಹ ಮಾಹಾಮಾರಿಯೂ ಸುಳಿಯಲಿಲ್ಲ ಅವರ ಆತ್ಮವಿಶ್ವಾದ ಮುಂದೆ. ದುಡಿಮೆಯಲ್ಲಿಯೇ ನಿರತರಾದ ಅವರಿಗೆ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಅವರ ಆಯುಷ್ಯವನ್ನು, ಆತ್ಮಸ್ಥೈರ್ಯ ಹೆಚ್ಚಿಸಿತೆ ಹೊರತು ಅವರೆಂದು ಕುಗ್ಗಲಿಲ್ಲ. ಅವರಿಗೀಗ 90 ವರ್ಷ. ಅಡಿಕೆಯನ್ನು ಹಲ್ಲಿನಲ್ಲಿ ಒಡೆಯುತ್ತಾರೆ. ಕಿಲೋಮೀಟರ್ಗಟ್ಟಲೆ ಆಯಾಸವಿಲ್ಲದೆ ನಡೆಯುತ್ತಾರೆ. ಸಾವಿರ ಕಷ್ಡ ಬಂದರೂ ಸಾಸಿವೆಯಷ್ಟೂ ಅಂಜದೆ ಬದುಕಿದ ನನ್ನ ತಾಯಿ ಯಾವ ಸಾಧಕರಿಗಿಂತಲೂ ಕಡಿಮೆಯೇನಲ್ಲ.

ನಾ ಹೆಮ್ಮೆಯಿಂದ ಹೇಳಬಲ್ಲೆ ಹಸಿದಾಗ ಹಸಿದಂಟು ತಿಂದು (ಜೋಳದ ದಂಟು) ಕುದಿಸಿದ ಗುಗ್ಗರಿಯನುಂಡು ನಮ್ಮ ಬಾಳು ಬೆಳಗಿದ ದೈವ. ಅನಕ್ಷರಸ್ಥರಾದರೂ ನಮ್ಮನ್ನು ಓದಿಸಿ ಸಾಧಿಸಿ ತೋರುವ ಹಾಗೆ ಮಾಡಿದ ನನ್ನ ತಾಯಿ ಶ್ರೇಷ್ಠಳೆಂದು. ಮಹಿಳಾ ದಿನಾಚರಣೆಯ ಅಂಗವಾಗಿ ನೀಡುವ ಯಾವ ಪ್ರಶಸ್ತಿಗಳಿದ್ದರೂ ಎಲ್ಲ ಪ್ರಶಸ್ತಿಗಳು ಅವಳಿಗೆ ಸಲ್ಲುತ್ತವೆಂದು ಹೆಮ್ಮೆಯಿಂದ ಹೇಳುವೆ. ದೂರದ ಊರು ಧಾರವಾಡದಲ್ಲಿ ಓದುವ ನನಗೆ ಸಾಕಿದ ಕುರಿ ಮಾರಿ ಬಂದ ಹಣವನ್ನೆಲ್ಲ ನನ್ನ ಕೈಯಲ್ಲಿಟ್ಟು ಊರಿಗೆ ಹೋಗಲು ಬಸ್ಸ್‍ ಖರ್ಚು ಕೊಡು ಎಂದು ಕೇಳುತ್ತಿದ್ದ ತ್ಯಾಗಮಯಿ ನನ್ನ ತಾಯಿ. ಅವರ ಆಶೀರ್ವಾದದಿಂದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದೇನೆ. ಇದಲ್ಲವೇ ನನ್ನ ತಾಯಿಯ ಸಾಧನೆ? ಇದಕ್ಕಿಂತ ಇನ್ನೇನು ಮಾಡಬೇಕು ಒಬ್ಬ ಹೆಣ್ಣು ಮಗಳು? ಇವಳಲ್ಲವೇ ಶ್ರೇಷ್ಟ ತಾಯಿ? ಮಹಿಳಾ ದಿನಾಚರಣೆಯ ಅಂಗವಾಗಿ ನನ್ನ ತಾಯಿಯಂತೆಯೆ ಸಾಧನೆ ಮಾಡಿದ ಎಲ್ಲ ತಾಯಿಯರ ಪರವಾಗಿ ಹೇಳುತ್ತೇನೆ ಜಗತ್ತಿನ ಯಾವ ಹೋರಾಟ, ಪ್ರಶಸ್ತಿ, ತ್ಯಾಗಗಳಿದ್ದರೂ ನಮ್ಮ ತಾಯಿಯರ ಮುಂದೆ ಅವೆಲ್ಲ ಗೌಣ. ನಾನು ಬದುಕಿರುವವರೆಗೆ ನಿಮ್ಮ ಈ ತ್ಯಾಗಕ್ಕೆ ಋಣಿಯಾಗಿದ್ದೇನೆ.




Leave a Reply

Your email address will not be published. Required fields are marked *

error: Content is protected !!