ಕ್ಲಿಷ್ಟದ ಹೊತ್ತಿನಲ್ಲಿ ಅಭಿವೃದ್ಧಿ ಭಾರತದ ಕನಸು ನನಸು ಮಾಡೋದೇಗೆ?

506

ಪೊಲೀಸ್ ಇಲಾಖೆಯ ಡಿಜಿ-ಐಜಿಪಿ ಕಚೇರಿಯ ನಿವೃತ್ತ ಸಹಾಯಕ ಆಡಳಿತ ಅಧಿಕಾರಿಯಾಗಿರುವ ಎಸ್.ಎಲ್ ಶ್ರೀಧರಮೂರ್ತಿ ಅವರು ಬರೆದ ವಿಶೇಷ ಲೇಖನ ಇಲ್ಲಿದೆ..

ಭಾರತ ಮೊದಲಿನಿಂದಲೂ ಆರ್ಥಿಕರಂಗ, ತಾಂತ್ರಿಕರಂಗ, ವ್ಯವಸಾಯರಂಗ, ಉದ್ಯೋಗ ಕಲ್ಪಿಸುವ ಇಂತಹ ಅನೇಕ ರಂಗಗಳಲ್ಲಿ ಅಭಿವೃದ್ಧಿ ಹೊಂದಲು ಅನೇಕ ರೀತಿಯಲ್ಲಿ ಶ್ರಮವಹಿಸುತ್ತಲೇ ಇದೆ. 1951ರಿಂದ ಪಂಚವಾರ್ಷಿಕ ಯೋಜನೆ ಜಾರಿಗೊಳಿಸಿದ ಭಾರತ ಹಂತ-ಹಂತವಾಗಿ ಅಭಿವೃದ್ಧಿ ಸಾಧಿಸುವಲ್ಲಿ ದಾಪುಗಾಲು ಹಾಕುತ್ತಾ ಕಷ್ಟಪಟ್ಟು ತನ್ನದೇ ಆದ ಯೋಜನೆಗಳೊಂದಿಗೆ ಉನ್ನತ ಸ್ಥಾನಕ್ಕೇರಿದೆ.

ಇದೀಗ ಕೋವಿಡ್-19 ರೋಗವು ಪ್ರಪಂಚದಾದ್ಯಂತ ಆವರಿಸಿ, ಭಾರತವನ್ನು ಅಭಿವೃದ್ಧಿಯ ಮಟ್ಟದಿಂದ ಮುಂದಕ್ಕೆ ಹೋಗದಂತೆ ಕಟ್ಟಿಹಾಕಿದೆ. ಜೊತೆಗೆ ಪಾಕ್ ಉಗ್ರರ ಕಾಟ, ಚೈನಾ ಗಡಿತಂಟೆ ಭಾರತವನ್ನು ಕಂಗಾಲಾಗುವಂತೆ ಮಾಡುತ್ತಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕಾರ್ಮಿಕರು ಉದ್ಯೋಗವಿಲ್ಲದೇ ಜೀವನ ನಡೆಸುವುದೇ ದುಸ್ತರವಾಗಿದೆ.

ಹಾಗಾದರೆ ತಕ್ಷಣ ಕರ್ತವ್ಯವೇನು? ನಷ್ಟದಲ್ಲಿರುವ ಕೈಗಾರಿಕೆಗಳು, ಕಾರ್ಖಾನೆಗಳಿಗೆ ಪುನಃ ಚೈತನ್ಯ ನೀಡಬೇಕು. ಕಾರ್ಮಿಕ ವರ್ಗವನ್ನು ಇಲ್ಲಿ ಪೂರ್ಣ ಪ್ರಮಾಣದ ಕೆಲಸಗಳಿಗೆ ತೊಡಗಿಸಿಕೊಳ್ಳುವಂತೆ ಮಾಡಿ, ಅವರನ್ನು ಚೈತನ್ಯವಂತರನ್ನಾಗಿ ಮಾಡಬೇಕು. ನಮ್ಮ ದೇಶದಲ್ಲಿ ವ್ಯವಸಾಯೋತ್ಪನ್ನಗಳು, ಹಣ್ಣು, ತರಕಾರಿ, ಅಕ್ವಾ (Acqua) ಉತ್ಪನ್ನಗಳು ಹೇರಳವಾಗಿವೆ. ಆದರೆ ಇದಕ್ಕೆ ಹೊಂದಿಕೊಂಡಂತೆ ‘ಆಹಾರ ಶುದ್ಧೀಕರಣ’ದ ಕೈಗಾರಿಕೆಗಳ ಸ್ಥಾಪನೆ ಅಭಿವೃದ್ಧಿ ಆಗುತ್ತಿಲ್ಲ. ಆಂಟಿ-ವೈರಲ್, ಆಂಟಿ ಬ್ಯಾಕ್ಟೀರಿಯಲ್ ವಸ್ತುಗಳು ತಯಾರಿಸಲು ಹೊಸ ಸಂಶೋಧನೆಗಳು ಹೈದರಾಬಾದ್, ಕೊಯಮತ್ತೂರಿನಲ್ಲಿ ನಡೆಸುತ್ತಿರುವುದು ಒಳ್ಳೆಯ ಸುದ್ದಿ. ಇದರಿಂದ ತಯಾರಿಸಿದ ವಸ್ತ್ರಗಳು ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಲ್ ಆಗಿದ್ದು, ಇಂತಹ ಕೈಗಾರಿಕೆಗಳಿಗೆ ಹೊಸದಾಗಿ ಬಂಡವಾಳ ಹೂಡಿ, ಈ ಕೈಗಾರಿಕೆಗಳಲ್ಲಿ ಸಾಧನೆ ಮಾಡಿದಲ್ಲಿ ಅಭಿವೃದ್ಧಿ ಆಗುತ್ತದೆ. ಈ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಶೀತಲೀಕರಣ, ರವಾನೆ, ಪ್ಯಾಕೇಜಿಂಗ್ ಇಂತಹ ಪೂರಕ ಕಾರ್ಖಾನೆಗಳನ್ನು ಸ್ಥಾಪಿಸಿದಲ್ಲಿ ಉದ್ಯೋಗ ರಂಗ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.

ಈ ಹಿಂದೆ ದೇಶದಲ್ಲಿ ಕ್ಷಾಮ ತಾಂಡವಾಡುವಾಗ ‘ಹಸಿರುಕ್ರಾಂತಿ’ ಹುಟ್ಟಿತ್ತು. 1991ರ ನಂತರವೇ ಸಾಕಷ್ಟು ಜನ ಬಂಡವಾಳ ಹೂಡಿ, ‘ಸಾಪ್ಟ್ವೇರ್’ ವಿಭಾಗವನ್ನು ಸ್ಥಾಪಿಸಿದ ನಂತರ ಅಭಿವೃದ್ಧಿ ಸಾಧ್ಯವಾಯಿತು. ಇದೇ ವಿಷಯವನ್ನೇ ಜಾಗತಿಕ ಉದ್ಯಮಶೀಲತೆ ಉಸ್ತುವಾರಿ (GEM) ರವರ ಸಂಶೋಧನೆಯಲ್ಲಿ ತಿಳಿದು ಬಂದಿದೆ. ಈ ಸಂಸ್ಥೆಯು ವಿಶ್ವದಾದ್ಯಂತ ಇರುವ 115 ದೇಶಗಳಲ್ಲಿ ಸಂಶೋಧನೆ ನಡೆಸಿ, ಆಯಾ ದೇಶಗಳ ವ್ಯವಸ್ಥಾಪನೆಯ ಸ್ಥಿತಿ-ಗತಿಗಳನ್ನು ತಿಳಿದುಕೊಂಡು ಅದರ ಶೇಕಡಾವಾರು ವಿವರಗಳನ್ನು ಪ್ರಕಟಿಸುತ್ತದೆ. ಇದರಂತೆ ಭಾರತವು 2019ರ ನಂತರ ಮುಂದಿನ ಮೂರು ವರ್ಷಗಳಲ್ಲಿ ಶೇಕಡ 20 ರಷ್ಟು ಭಾರತೀಯರು ವಿವಿಧ ಬಗೆಯ ಕಾರ್ಖಾನೆ, ಕೈಗಾರಿಗೆಗಳನ್ನು ಸ್ಥಾಪಿಸಲು ಉತ್ಸುಕತೆಯಿಂದ ಇದ್ದಾರೆಂದು ವರದಿಯಲ್ಲಿ ನಿವೇದಿಸಲಾಗಿರುತ್ತದೆ.

ಭಾರತವು 2006ನೇ ಸಾಲಿನಲ್ಲಿ ಗುಡಿ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು ಮತ್ತು ಪೂರಕವಾಗಿರುವ ಮಧ್ಯಮ ರೀತಿಯ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸುವ ಕಾನೂನು ಜಾರಿಗೆ ತಂದ ಮೇಲೆ, ಕೈಗಾರಿಕೆಗಳ ಸ್ಥಾಪನೆಗೆ ಸರಳೀಕೃತವಾದ ವಾತಾವರಣ ಕಲ್ಪಿಸಲಾಯಿತು. ಇದರಿಂದಾಗಿ 6.50 ಕೋಟಿಗಳಷ್ಟು ಚಿಕ್ಕ-ಪುಟ್ಟ ವ್ಯಾಪಾರಗಳು, ಸಣ್ಣ ಕೈಗಾರಿಕೆಗಳು, ಮಧ್ಯಮ ರೀತಿಯ ಕಾರ್ಖಾನೆಗಳು ಸ್ಥಾಪನೆಯಾಗಿ ಸುಮಾರು 12 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿರುವುದು ಮರೆಯುವಂತಿಲ್ಲ. ನಮ್ಮ ದೇಶದಲ್ಲಿ ವ್ಯವಸಾಯ ರಂಗದ ನಂತರ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಲಭ್ಯವಾಗಿರುವುದು ಈ ರಂಗದಲ್ಲೇ. ಇದರಲ್ಲಿ ಶೇಕಡ 62ರಷ್ಟು ಜನ 15 ರಿಂದ 59 ವರ್ಷ ವಯಸ್ಸಿನವರು ಎನ್ನುವುದು ವಿಶೇಷವಾಗಿದೆ.

ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೊಂಡಂತೆ, ಹೊಸ-ಹೊಸ ವಸ್ತುಗಳಿಗೆ, ಸಾರ್ವಜನಿಕ ಹಾಗೂ ಈಗಿನ ಬೇಡಿಕೆಯಂತೆ ಪೂರೈಕೆ ಮಾಡುವ, ಕಾರ್ಖಾನೆಗಳು, ಸಣ್ಣ-ಅತಿಸಣ್ಣ, ಗುಡಿ ಕೈಗಾರಿಕೆಗಳನ್ನು ಪ್ರಾರಂಭಿಸಿ, ಉದ್ಯೋಗಾವಕಾಶಗಳನ್ನು ಕಲ್ಪಿಸಿ, ಕೊರೊನಾ ಜಯಿಸಿ, ಭಾರತವನ್ನು ಅಭಿವೃದ್ಧಿಯೆಡೆಗೆ ಸಾಗಿಸುವ ಗುರಿ ಹೊಂದಿರಬೇಕಿದೆ.

ಲೇಖಕನಕಾರರು



Leave a Reply

Your email address will not be published. Required fields are marked *

error: Content is protected !!