ಕೀ.ರಂ ಶಿಷ್ಯೆ ಕಾರಾಗೃಹದ ಮೊದಲ ಮಹಿಳಾ ಅಧೀಕ್ಷಕಿ

830

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕರಾದ ಚಂದ್ರಕಾಂತ ಸೊನ್ನದ ಅವರು ಬರೆದ ವಿಶೇಷ ಲೇಖನ.

ಹೆಣ್ಣು ಗಂಡಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಅನ್ನೋದನ್ನ ಅನಾದಿ ಕಾಲದಿಂದ ನೋಡಿಕೊಂಡು ಬಂದಿದ್ದೇವೆ. ಹೀಗಿದ್ದರೂ ಪುರುಷ ಪ್ರಧಾನ ಸಮಾಜ ಅವಳನ್ನ ಹಿಡಿತದಲ್ಲಿಟ್ಟುಕೊಳ್ಳಲು ನೋಡುತ್ತೆ. ಆದ್ರೆ, ಕೆಲವರು ಅದನ್ನು ಮೀರಿ ಬೆಳೆದು ಹಲವರಿಗೆ ಮಾದರಿಯಾಗಿದ್ದಾರೆ. ಇತಿಹಾಸದ ಪುಟಗಳಿಂದ ಹಿಡಿದು ಆಧುನಿಕ ಜಗತ್ತಿನವರೆಗೂ ಸ್ತ್ರೀ ಸಾಧಿಸುತ್ತಲೇ ಬಂದಿದ್ದಾಳೆ. ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದ್ದಾಳೆ.

ಅಡುಗೆ ಮನೆಗೆ ಸೀಮಿತವಾಗಿದ್ದ ಹೆಣ್ಣು ಇಂದು ಫೈಟರ್ ಪೈಲೆಟ್ ಆಗಿ ಯುದ್ಧಭೂಮಿಗೆ ಕಾಲಿಡುವ ಮೂಲಕ ಇತಿಹಾಸದ ವೀರ ವನಿತೆಯರನ್ನ ನೆನಪಿಸುತ್ತಿದ್ದಾರೆ. ಹೀಗೆ ಹಲವು ಮೊದಲುಗಳಿಗೆ ಸಾಕ್ಷಿಯಾಗುತ್ತಿರುವ ಹೆಣ್ಮಕ್ಕಳಲ್ಲಿ ನಾಡಿನ ಆರ್.ಲತಾ ಕೂಡ ಒಬ್ಬರು. ಇವರು ಕರ್ನಾಟಕದ ಮೊದಲ ಮಹಿಳಾ ಜೈಲು ಅಧೀಕ್ಷಕಿ ಅನ್ನೋ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರೌಡಿಗಳು, ಕ್ರೈಂ ದುನಿಯಾದ ಪಂಟರು, ಭೂಗತ ಜಗತ್ತಿನ ನಂಟು ಹೊಂದಿರುವವರ ಸೆರೆವಾಸವಾಗಿರುವ ಪರಪ್ಪನ ಅಗ್ರಹಾರದಲ್ಲಿ ತಮ್ಮದೆ ಛಾಪು ಮೂಡಿಸಿದ ಪ್ರಪ್ರಥಮ ಜೈಲು ಅಧೀಕ್ಷಕಿ ಇವರು.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೇರಿ ಎಂಬ ಚಿಕ್ಕ ಗ್ರಾಮದಲ್ಲಿ ಆರ್.ಲತಾ ಜನಿಸಿದರು. ತಂದೆ ರಾಮಯ್ಯ, ತಾಯಿ ಬಸಮ್ಮ. ಬಾಲ್ಯವನ್ನ ಕಷ್ಟದಲ್ಲಿ ಕಳೆದ ಇವರು, ಚಿಕ್ಕನಾಯಕನಹಳ್ಳಿಯಲ್ಲಿ ಪಿಯುಸಿ ಮುಗಿಸಿ ತಂದೆಯ ಆಸೆಯಂತೆ ಬೆಂಗಳೂರಿಗೆ ಪದವಿ ಓದಲು ಬಂದರು. ಎಲ್ಲರನ್ನು ಸಲಹುವ ಸಿಲಿಕಾನ್ ಸಿಟಿ ಆರ್.ಲತಾ ಅವರಿಗೆ ಸಾಕಷ್ಟು ಜೀವನಾನುಭವ ನೀಡಿತು. ಪದವಿ ಮುಗಿದ ಮೇಲೆ ಮುಂದೆನು ಎಂಬ ಪ್ರಶ್ನೆ  ಕಾಡಿತು. ಆಗ ಉತ್ತರವಾಗಿ ಕಂಡದ್ದು ಬೆಂಗಳೂರು ವಿಶ್ವವಿದ್ಯಾಲಯ. ತಡ ಮಾಡದೆ ಎಂ.ಎ ಕನ್ನಡ ಅಡ್ಮಿಷನ್ ಮಾಡಿದರು. ಕೀ.ರಂ ನಾಗರಾಜ ಅನ್ನೋ ಮಹಾನ್ ಚೇತನದ ಶಿಷ್ಯರಾದರು. ಅವರು ಪಾಠ ಮಾಡುತ್ತಾ “ಕನ್ನಡ ಎಂ.ಎ ಕಲಿತು ಬರಿ ಉಪನ್ಯಾಸಕರಾಗಬೇಡಿ. ಬೇರೆ ಬೇರೆ ಅವಕಾಶಗಳು ಇದ್ದಾವೆ ನೋಡಿ” ಅಂತ ಹೇಳುತ್ತಿದ್ದ ಮಾತು ಆರ್.ಲತಾ ಅವರಿಗೆ ಸ್ಪೂರ್ತಿಯಾಯ್ತು.

ಎನ್ ಸಿಸಿಯಲ್ಲಿ ಸಿ ಸರ್ಟಿಫಿಕೇಟ್ ಪಡೆದಿದ್ದ ಇವರು ಏನಾದರೂ ಸಾಧಿಸಬೇಕು ಅನ್ನೋ ಹಠಕ್ಕೆ ಬಿದ್ದಿದ್ದರು. ಹೀಗಿರುವಾಗ 2006ರಲ್ಲಿ ಕರ್ನಾಟಕದ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ಪರೀಕ್ಷೆ ನಡೆಸಲಾಯಿತು. ಅದನ್ನು ಬರೆದು ಪ್ರಥಮ ಪ್ರಯತ್ನದಲ್ಲಿಯೇ ಪಾಸ್ ಆದರು. ಆಗ ಇವರು ಆಯ್ಕೆ ಮಾಡಿಕೊಂಡಿದ್ದು ಜೈಲರ್ ಹುದ್ದೆ. ಇವರ ನಿರ್ಧಾರಕ್ಕೆ ಹೆತ್ತವರಿಂದ ವಿರೋಧ ವ್ಯಕ್ತವಾಯ್ತು. ಹೆಣ್ಮಗಳಾಗಿ ಜೈಲಿನಲ್ಲಿ ಕೆಲಸ ಮಾಡುವುದು ಅವರಿಗೆ ಭಯ ಮೂಡಿಸಿತು. ಆದ್ರೆ, ಏನಾದ್ರೂ ಸಾಧಿಸಬೇಕು ಎನ್ನುತ್ತಿದ್ದ ಆರ್.ಲತಾ ಅವರು ಹೆತ್ತವರನ್ನ ಒಪ್ಪಿಸಿ ಜೈಲರ್ ಆದರು. 2008ರಲ್ಲಿ ತುಮಕೂರಿನಲ್ಲಿ ಸೇವೆ ಪ್ರಾರಂಭವಿಸಿದರು. ಮುಂದೆ ಚಾಮರಾಜನಗರ, ಶಿವಮೊಗ್ಗ, ರಾಮನಗರ ಹೀಗೆ ಹಲವು ಜೈಲಲ್ಲಿ ಸೇವೆ ಸಲ್ಲಿಸಿ, ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧೀಕ್ಷಕಿ ಆಗಿ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಕರ್ನಾಟಕದ ಮೊದಲ ಮಹಿಳಾ ಜೈಲು ಅಧೀಕ್ಷಕಿ ಅನ್ನೋ ಹೆಸರು ಮಾಡಿದರು. ಅಪರಾಧ ಕೃತ್ಯದಲ್ಲಿ ತೊಡಗಿರುವವರ ನಡುವೆ ಧೈರ್ಯದಿಂದ ಕೆಲಸ ಮಾಡುತ್ತಾ ಅವರ ಮನಸ್ಸನ್ನು ಪರಿವರ್ತಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕಾರ್ಯಕ್ಕೆ ಬೆಂಬಲವಾಗಿ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಪೋಲಿಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ಸರ್ ಹಾಗೂ ಮುಖ್ಯ ಅಧೀಕ್ಷಕರಾದ ಶೇಶುಮೂರ್ತಿ ಸರ್ ಅವರಿದ್ದಾರೆ ಎಂದು ಆರ್.ಲತಾ ಅವರು ಹೇಳುತ್ತಾರೆ.

ಇಷ್ಟೆಲ್ಲ ಸಾಧನೆ ಮಾಡಿರುವ ಇವರು ಖಾಕಿ ತೊಡುವುದಕ್ಕೂ ಮೊದ್ಲು ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡವರು. ಇವರ ನಟನೆಗೆ ಡಾ.ರಾಜಕುಮಾರ ಅವರ ತಂದೆಯ ಹೆಸರಿನಲ್ಲಿ ನಾಟಕ ಅಕಾಡಮಿ ನೀಡುವ ‘ಸಿಂಗಾನಲ್ಲೂರ ಪುಟ್ಟಸ್ವಾಮಯ್ಯ ಪರ್ಯಾಯ ಪಾರಿತೋಷಕ’ ಪಡೆದವರು. ಪತ್ರಿಕೋದ್ಯಮ ಡಿಪ್ಲೋಮಾ ಕೋರ್ಸ್ ಸಹ ಮಾಡಿದವರು. ಹೆಣ್ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲರು ಅನ್ನೋದನ್ನು ತೋರಿಸಿದ ಇವರ ಪತಿ ಡಾ.ಮಂಜುನಾಥ ಸರಕಾರಿ ವೈದ್ಯರು. ಇಬ್ಬರು ಹೆಣ್ಣುಮಕ್ಕಳ ಸುಖಿ ಕುಟುಂಬ. ಇವರು ಇನ್ನಷ್ಟು ಸಾಧಿಸಲಿ. ಇವರ ಸಾಧನೆ ಎಲ್ಲ ಹೆಣ್ಮಕ್ಕಳಿಗೂ ಸ್ಪೂರ್ತಿ ತುಂಬಲಿ ಅನ್ನೋದೇ ನಮ್ಮ ಆಶಯ.

ಲೇಖಕ ಚಂದ್ರಕಾಂತ ಸೊನ್ನದ



Leave a Reply

Your email address will not be published. Required fields are marked *

error: Content is protected !!