ಅಫ್ಘನ್ ವಿರುದ್ಧ ಆಸೀಸ್ ಗೆ ಭರ್ಜರಿ ಜಯ

163

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಇಲ್ಲಿನ ವಾಖಂಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ನ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ್ ನಡುವಿನ ಪಂದ್ಯದಲ್ಲಿ ಕಾಂಗೂರು ಪಡೆ ಭರ್ಜರಿ ಜಯ ಸಾಧಿಸಿದೆ. ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್ ಅಬ್ಬರದ ಆಟದ ಮುಂದೆ ಅಫ್ಘನ್ ಪಡೆ ಸೈಲೆಂಟ್ ಆಗಿದೆ.

ಸ್ನಾಯು ಸೆಳೆತ, ಬೆನ್ನು ನೋವಿನ ನಡುವೆಯೇ ಮ್ಯಾಕ್ಸ್ ವೆಲ್ ಭರ್ಜರಿ ಅಜೇಯ 201 ರನ್ ಗಳಿಸುವ ಮೂಲಕ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. 128 ಎಸೆತಗಳಲ್ಲಿ 10 ಸಿಕ್ಸ್, 21 ಫೋರ್ ಗಳ ಸುರಿಮಳೆ ಸುರಿಸಿ ಸೋಲಿನ ದವಡೆಯಿಂದ ತಂಡವನ್ನು ಪಾರು ಮಾಡಿ ವಿಜಯದ ಮಾಲೆ ಹಾಕಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳನ್ನು ಮಾಡಿದರು.

ಏಕದಿನ ಕ್ರಿಕೆಟ್ ಆಟದಲ್ಲಿ ಚೇಸಿಂಗ್ ವೇಳೆ ಬಾರಿಸಿದ ಮೊದಲ ದ್ವಿಶತಕವಿದು. ಆಸ್ಟ್ರೇಲಿಯಾ ಆಟಗಾರ ಗಳಿಸಿದ ಮೊದಲ ದ್ವಿಶತಕ. ಆಸೀಸ್ ಮಾಜಿ ಆಟಗಾರ ಶೇನ್ ವಾಟ್ಸನ್ 2011ರಲ್ಲಿ 185 ರನ್ ಗಳಿಸಿದ್ದು ಗರಿಷ್ಠ ರನ್ ಆಗಿತ್ತು. 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್ ನ ಫಖಾರ್ ಖಾನ್ ಚೇಸಿಂಗ್ ವೇಳೆ 193 ರನ್ ಗಳಿಸಿದ್ದು ದಾಖಲೆಯಾಗಿತ್ತು. ಇದನ್ನು ಮ್ಯಾಕ್ಸ್ ವೆಲ್ ಮುರಿದರು. ಇನ್ನು 6ನೇ ಕ್ರಮಾಂಕದಲ್ಲಿ ಬಂದು 194 ರನ್ ಗಳಿಸಿದ್ದ ಜಿಂಬಾಬ್ವೆಯ ಚಾರ್ಲ್ ಕಾವೆಂಟ್ರಿ ರೆಕಾರ್ಡ್ ಸಹ ಉಡೀಸ್ ಮಾಡಿದರು.

ಇನ್ನು ವಿಶ್ವಕಪ್ ನಲ್ಲಿ ದ್ವಿಶತಕ ಗಳಿಸಿದ 3ನೇ ಆಟಗಾರನಾದರು. 2015ರಲ್ಲಿ ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್(215 ರನ್), ಇದೇ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ (237 ರನ್) ಗಳಿಸಿದ್ದಾರೆ. ಇನ್ನು 128 ಎಸೆತಗಳಲ್ಲಿ 200 ರನ್ ಗಳಿಸಿ ವೇಗದ ದ್ವಿಶತಕ ಮಾಡಿದರು. ಆದರೆ, ಭಾರತದ ಇಶಾನ್ ಕಿಶನ್ 126 ಬೌಲ್ ಗಳಲ್ಲಿ ಗಳಿಸಿದ ದ್ವಿಶತಕದ ರೆಕಾರ್ಡ್ ಮುರಿಯಲು ಆಗಲಿಲ್ಲ. ಇದರ ಜೊತೆಗೆ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ 3ನೇ ಆಟಗಾರನಾದರು. ಮೊದಲು ಕ್ರಿಸ್ ಗೇಲ್(49 ಸಿಕ್ಸ್), ನಂತರ ರೋಹಿತ್ ಶರ್ಮಾ(43 ಸಿಕ್ಸ್) ಇದ್ದಾರೆ.

ಒಟ್ಟಿನಲ್ಲಿ ಅಫ್ಘನ್ ನೀಡಿದ್ದ 291 ರನ್ ಗಳ ಗುರಿಯನ್ನು ಮುಟ್ಟಿದ ಆಸ್ಟ್ರೇಲಿಯಾ 3 ವಿಕೆಟ್ ಅಂತರದಿಂದ ಗೆಲುವು ಸಾಧಿಸಿತು. ಮ್ಯಾಕ್ಸ್ ವೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.




Leave a Reply

Your email address will not be published. Required fields are marked *

error: Content is protected !!