ರಾಕೆಟ್, ವಿಮಾನ ಮಾತ್ರ ವಿಜ್ಞಾನ ಅಲ್ಲ: ಡಾ.ಸಂಜೀವ ಕುಲ್ಕರ್ಣಿ

311

ಪ್ರಜಾಸ್ತ್ರ ಸುದ್ದಿ

ಧಾರವಾಡ: ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ವತಿಯಿಂದ ನಡೆದ ನಾಡಿನ ಸಾಹಿತಿಗಳಿಗೆ ಮೂರು ದಿನ ಮಕ್ಕಳ ವಿಜ್ಞಾನ ನಾಟಕ ರಚನಾ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಡಾ.ಸಂಜೀವ ಕುಲಕರ್ಣಿ ಮಾತನಾಡಿ, ಇಂದು ವಿಜ್ಞಾನ ಎಂದರೇ ದೊಡ್ಡ ದೊಡ್ಡ ವಿಜ್ಞಾನಿಗಳು, ಅತ್ಯಾಧುನಿಕ ರಾಕೆಟ್ ಗಳು ಹಾಗೂ ದೊಡ್ಡ ಶಹರಗಳು ಎಂಬಂತಾಗಿದೆ. ಇಂದು ಪ್ರಶ್ನೆ ಮಾಡುವ ವಿಚಾರ ಅತ್ಯಂತ ತುರ್ತು ಅಗತ್ಯವಾಗಿದೆ. ಶಾಲೆ-ಕಾಲೇಜಿನ ವಾರ್ಷಿಕೋತ್ಸವದಲ್ಲಿ ಇಂದು ಒಂದೇ ಒಂದು ವಿಜ್ಞಾನ ನಾಟಕ ಇಲ್ಲದಿರುವುದು ವಿಷಾದನೀಯ ಸಂಗತಿ ಎಂದರು.

ನಮ್ಮಲ್ಲಿರುವ ವಿಜ್ಞಾನವನ್ನು ಹಾಗೂ ಅದರಲ್ಲಿನ ಅಂಶಗಳನ್ನು ಬರವಣಿಗೆ ಮೂಲಕ ಹಾಗೂ ನಾಟಕದ ಮೂಲಕ ತಿಳಿಸಿಕೊಡುವುದು ಒಂದು ಸವಾಲಾಗಿದೆ. ಕನ್ನಡದ ಎಲ್ಲ ಪ್ರಸಿದ್ಧ ಸಾಹಿತಿಗಳು ಮಕ್ಕಳ ಸಾಹಿತ್ಯ ಬಗ್ಗೆ ಬಹಳಷ್ಟು ಸೇವೆ ಸಲ್ಲಿಸಿದ್ದಾರೆ. ಆದರೆ ಇಂದು ಅದು ಸಂಪೂರ್ಣ ನಶಿಸಿ ಹೋಗುವ ಸಂಭವ ಹೆಚ್ಚಾಗಿರುವುದು ಆತಂಕದ ಸಂಗತಿಯಾಗಿದೆ. ಮಕ್ಕಳ ವಿಜ್ಞಾನ ನಾಟಕ ರಚನೆ ಯಾರೊಬ್ಬ ಯುವ ಸಾಹಿತಿಗಳು ಮುಂದಾಗದಿರುವುದು ಕಳವಳಕಾರಿ ಬೆಳವಣಿಗೆ ಆಗಿದೆ ಎಂದರು. ಮಕ್ಕಳನ್ನು ಚಿಂತನೆಗೆ ಹಚ್ಚುವ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ನಾಟಕಗಳು ಬರುವ ದಿನಗಳಲ್ಲಿ ಶಿಬಿರಾರ್ಥಿಗಳಿಂದ ಹೊರ ಹೊಮ್ಮಲಿ ಎಂದು ಶುಭ ಹಾರೈಸಿದರು.

ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಮಾತನಾಡಿ, ಮಕ್ಕಳ ವಿಜ್ಞಾನದ ಬಗ್ಗೆ ನಮ್ಮಲ್ಲಿರುವ ಬಿನ್ನವಿಭಿನ್ನ ವಿಚಾರಗಳನ್ನು ಪರಸ್ಪರ ಹಂಚಿಕೊಂಡು, ಉತ್ತಮ ವಿಜ್ಞಾನ ನಾಟಕ ರಚನೆಗೆ ಮುಂದಾಗಬೇಕಿದೆ. ಬಾಲವಿಕಾಸ ಅಕಾಡೆಮಿ ರಾಜ್ಯದಲ್ಲಿ ಹಲವಾರು ಮಕ್ಕಳ ಸಾಹಿತ್ಯ ಚಟುವಟಿಕೆ ಮೂಲಕ ಹೆಸರು ಮಾಡಿದೆ. ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಭಾಗವಹಿಸಿ, ಉತ್ತಮ ಮಕ್ಕಳ ವಿಜ್ಞಾನ ನಾಟಕಕಾರರಾಗಿ ಹೊರಹೊಮ್ಮಿ ಎಂದು ಸಲಹೆ ನೀಡಿದರು.
ಸಾಹಿತಿ ನಿಂಗು ಸೋಲಗಿ ಮಾತನಾಡಿ, ಸಾಹಿತ್ಯದಲ್ಲಿ ತರಬೇತಿ ಕೊಡುವ ಮತ್ತು ತೆಗೆದುಕೊಳ್ಳುವ ಭಾವನೆ ಎಂಬುದು ಇಲ್ಲ. ಒಟ್ಟಿಗೆ ಕುಳಿತುಕೊಂಡು ಸಾಹಿತ್ಯ ಮತ್ತು ನಾಟಕ ರಚನೆಯ ಬಗ್ಗೆ ಚರ್ಚಿಸುವುದಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವಿತದ ಕೊನೆಯವರೆಗೂ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದೆ. ಅದೇರೀತಿ ಮಕ್ಕಳ ವಿಜ್ಞಾನ ನಾಟಕ ರಚನೆ ಬಗ್ಗೆ ನಮ್ಮಲ್ಲಿರುವ ಚಿಂತನೆ ಹಾಗೂ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳೋಣ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಅಕಾಡೆಮಿ ಯೋಜನಾ ಅಧಿಕಾರಿ ಭಾರತಿ ಶೆಟ್ಟರ್ ಮಾತನಾಡಿ, ಅಕಾಡೆಮಿಯು ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಾಗಾರ ಮಾಡಲಾಗಿದೆ. ಸಾಹಿತ್ಯ ಉಳಿವಿಗೆ ಮಕ್ಕಳ ಪಾತ್ರ ಅತೀ ಅವಶ್ಯಕವಾಗಿದೆ‌. ಮಕ್ಕಳ ನಾಟಕದ ಕಾರ್ಯಾಗಾರದಲ್ಲಿ ಬಹುತೇಕ ಎಲ್ಲ ಮಕ್ಕಳು ಉತ್ತಮ ಅಭಿನಯ ಮಾಡಿದ್ದಾರೆ. ಕಾರ್ಯಾಗಾರ ಮುಗಿಸಿಕೊಂಡು ಹೋಗುವಾಗ ಸ್ವತಃ ಸಣ್ಣಪುಟ್ಟ ಕಥೆ ಹಾಗೂ ನಾಟಕಗಳನ್ನು ರಚಿಸಿದ ಉದಾಹರಣೆ ಸಾಕಷ್ಟಿವೆ. ಮಕ್ಕಳಲ್ಲಿ ಮತ್ತಷ್ಟು ಆಸಕ್ತಿ ಮೂಡಿಸುವ ಕೆಲಸವನ್ನು ಯುವ ಸಾಹಿತಿಗಳು ಮಾಡಬೇಕಿದೆ ಎಂದು ಸಲಹೆ ನೀಡಿದರು.

ಮಹಾಭಾರತ, ರಾಮಾಯಣದ ಐತಿಹಾಸಿಕ ಕಥೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಕಾರ್ಯಾಗಾರದಲ್ಲಿ ವಿವಿಧ ಜಿಲ್ಲೆಯ 50ಕ್ಕೂ ಹೆಚ್ಚು ಯುವ ಸಾಹಿತಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಕೃಷ್ಣ ಮೂರ್ತಿ, ನಾಟಕಕಾರ ಮೌನೇಶ ವಿಶ್ವಕರ್ಮ ಸೇರಿದಂತೆ ಅನೇಕರು ಇದ್ದರು.




Leave a Reply

Your email address will not be published. Required fields are marked *

error: Content is protected !!