ಪ್ರಧಾನಿ ಉದ್ಘಾಟಿಸಿದ ಹೆದ್ದಾರಿ ಇದೀಗ ರಣರಂಗ

243

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ ಭಾನುವಾರವಷ್ಟೇ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಂಡಿರುವ ಬೆಂಗಳೂರು-ಮೈಸೂರು ಹೆದ್ದಾರಿ ಇದೀಗ ರಣರಂಗವಾಗಿದೆ. ಯಾಕಂದರೆ, ಟೋಲ್ ಪ್ಲಾಜಾಗಳು ಅಕ್ಷರಶಃ ರಣರಂಗವಾಗಿ ಬದಲಾಗಿವೆ. ಕಾರಣ ಅತಿಯಾದ ಟೋಲ್ ಶುಲ್ಕ.

400ಕ್ಕೂ ಅಧಿಕ ರೂಪಾಯಿಯನ್ನು ಟೋಲ್ ರೂಪದಲ್ಲಿ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಟೆಂಪೊ, ಲಾರಿ, ಟ್ರಕ್, ಕಾರ್, ಬಸ್ ಡ್ರೈವರ್ ಗಳು ಇಲ್ಲಿನ ಸಿಬ್ಬಂದಿಯೊಂದಿಗೆ ಜಗಳ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ವಿಪಕ್ಷಗಳು ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದು, ನೂತನ ಹೆದ್ದಾರಿ ಈಗ ಯುದ್ಧ ಭೂಮಿಯಂತೆ ಆಗಿದೆ.

ಶೇಷಗಿರಿಹಳ್ಳಿ ಟೋಲ್ ನಲ್ಲಿ ಟೆಂಪೋ ಚಾಲಕನೊಬ್ಬ ಇಲ್ಲೆ ಬಿಡದಿಯಿಂದ ಬಂದಿದೀನಿ. ಇದಕ್ಕೆ 400 ರೂಪಾಯಿ ಕಟ್ಟಬೇಕಾ ಎಂದು ಜಗಳ ತೆಗೆದಿದ್ದಾನೆ. ಈ ಗಲಾಟೆ ನಿಲ್ಲಿಸಲು ಪೊಲೀಸರು ಸಹ ಹರಸಾಹಸ ಪಡಬೇಕಾಗಿದೆ. ಇನ್ನು ಕೆಎಸ್ಆರ್ ಟಿಸಿ ಬಸ್ ಚಾಲಕ ಸಹ ಟೋಲ್ ಸಂಗ್ರಹದ ವಿರುದ್ಧ ಕಿಡಿ ಕಾರಿದ್ದು, ಟೋಲ್ ಕಟ್ಟುವುದಿಲ್ಲವೆಂದು ಹೇಳಿದ್ದಾನೆ. ಬಸ್ಸಿನಲ್ಲಿ ಇದ್ದವರು ಸಹ ಅವನಿಗೆ ಸಾಥ್ ನೀಡಿದ್ದಾರೆ. ಪ್ಲಾಜಾ ಅಧಿಕಾರಿಗಳು ಟೋಲ್ ಪಡೆಯದೆ ಬಸ್ ನ್ನು ಕಳಿಸಿದ್ದಾರೆ.

ನೂತನವಾಗಿ ಶುರುವಾಗಿರುವ ಹೆದ್ದಾರಿ ಅಕ್ಷರಶಃ ಜನರ ರಕ್ತ ಹೀರುತ್ತಿದೆ. ಟೋಲ್ ಶುಲ್ಕದ ಹೆಸರಿನಲ್ಲಿ ಬರೋಬ್ಬರಿ 400 ರೂಪಾಯಿಗೂ ಅಧಿಕ ಹಣ ಪಡೆಯಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಿಬ್ಬಂದಿ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ. ಯಾವಾಗ ಏನಾಗುತ್ತೆ ಅನ್ನೋದು ತಿಳಿಯದಾಗಿದೆ.




Leave a Reply

Your email address will not be published. Required fields are marked *

error: Content is protected !!