ವಿಜಯೇಂದ್ರಗೆ ಟಿಕೆಟ್ ವಿಚಾರ, ಸಿ.ಟಿ ರವಿ ಹೀಗಾ ಹೇಳೋದು?

237

ಪ್ರಜಾಸ್ತ್ರ ಸುದ್ದಿ

ವಿಜಯಪುರ: ರಾಜ್ಯದಲ್ಲಿ ಈಗ ಚುನಾವಣೆ ಪರ್ವ ಶುರುವಾಗಿದೆ. ರಾಜಕೀಯ ಪಕ್ಷಗಳ ಮತಬೇಟೆ ಕೆಲಸ ನಡೆದಿದೆ. ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಾಗಿ ನಾಯಕರು ಸಾಕಷ್ಟು ಸರ್ಕಸ್ ನಡೆಸಿದ್ದಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮಾಜಿ ಸಿಎಂ ಯಡಿಯೂರಪ್ಪನವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಇಷ್ಟು ದಿನ ಅವರನ್ನು ಬಳಸಿಕೊಂಡು ಇದೀಗ ಉದ್ದೇಶಪೂರ್ವಕವಾಗಿಯೇ ಕಡೆಗಣಿಸುವ ಕೆಲಸ ನಡೆದಿದೆಯಂತೆ. ಹೀಗಾಗಿ ಅವರ ಪುತ್ರ ವಿಜಯೇಂದ್ರಗೆ ಟಿಕೆಟ್ ಕೊಡಿಸಲು ಸಹ ಹರಸಾಹಸ ಪಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ ಮಾತು ವಿಪಕ್ಷಗಳಿಗೆ ಅಸ್ತ್ರವಾಗಿದೆ. ಯಡಿಯೂರಪ್ಪನವರೆ ಸಿ.ಟಿ ರವಿ ನಿಮ್ಮ ಅಸ್ತಿತ್ವಕ್ಕೆ ಸವಾಲು ಹಾಕುವಂತಹ ಸ್ಥಿತಿಗೆ ಬರಬಾರದಿತ್ತು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ವಿಜಯಪುರದಲ್ಲಿ ಮಾತನಾಡಿದ ಸಿ.ಟಿ ರವಿ, ವಿಜಯೇಂದ್ರಗೆ ಟಿಕೆಟ್ ವಿಚಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ನಮ್ಮ ಪಕ್ಷದಲ್ಲಿ ನಿರ್ಣಯ ಕಿಚನ್ ನಲ್ಲಿ ಆಗುವುದಿಲ್ಲ. ಕೇವಲ ಮಕ್ಕಳು ಅನ್ನೋ ಕಾರಣಕ್ಕೆ ಟಿಕೆಟ್ ಸಿಗಲ್ಲ. ಟಿಕೆಟ್ ಕೊಡುವ ನಿರ್ಣಯ ಅವರ ಮನೆಯಲ್ಲಿ ಆಗಲ್ಲ. ಟಿಕೆಟ್ ಕೊಡಬೇಕೊ, ಬೇಡವೋ ಅನ್ನೋದು ಸಂಸದೀಯ ಮಂಡಳಿ ತೀರ್ಮಾನ ತೆಗೆದುಕೊಳ್ಳುತ್ತೆ. ಸರ್ವೇ ನಡೆಸಿ ಟಿಕೆಟ್ ನೀಡುತ್ತೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಕುಟುಂಬದವರಿಗೆ ಪರೋಕ್ಷವಾಗಿ ಸವಾಲು ಹಾಕಿದಂತಾಗಿದೆ.

ಬಿಜೆಪಿಯಲ್ಲಿ ಶೆಟ್ಟರ್, ನಿರಾಣಿ, ಜೊಲ್ಲೆ, ಕತ್ತಿ, ತೇಜಸ್ವಿ ಸೂರ್ಯ ಕುಟುಂಬಗಳಿಗೆ ಇರುವ ಮುಕ್ತ ಅವಕಾಶ ಯಡಿಯೂರಪ್ಪ ಕುಟುಂಬಕ್ಕೆ ಇಲ್ಲದಾಯ್ತೆ ಎಂದು ಪ್ರಶ್ನಿಸಲಾಗಿದೆ. ಒಟ್ಟಿನಲ್ಲಿ ಸಿ.ಟಿ ರವಿ ಹೇಳಿದ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ.




Leave a Reply

Your email address will not be published. Required fields are marked *

error: Content is protected !!