ಚಿಮಣಿ ಬೆಳಕಿನ ಬದುಕು ಕೃತಿಯ ಮುಖಪುಟ ಬಿಡುಗಡೆ

234

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ಹಾಗೂ ಯುವ ಬರಹಗಾರ ನಾಗೇಶ ತಳವಾರ ಅವರ ‘ಚಿಮಣಿ ಬೆಳಕಿನ ಬದುಕು’ ಅನ್ನೋ ನಾಟಕ ಕೃತಿಯ ಮುಖಪುಟವನ್ನು ಪಟ್ಟಣದಲ್ಲಿ ಗುರುವಾರ ಸಂಜೆ ಬಿಡುಗಡೆಗೊಳಿಸಲಾಯಿತು. ಹಿರಿಯ ಜಾನಪದ ವಿದ್ವಾಂಸರಾದ ಡಾ.ಎಂ.ಎಂ ಪಡಶೆಟ್ಟಿ, ಹಿರಿಯ ಕಥೆಗಾರರಾದ ಡಾ.ಚನ್ನಪ್ಪ ಕಟ್ಟಿ ಅವರು ಮುಖಪುಟ ಬಿಡುಗಡೆಗೊಳಿಸಿದರು.

ಅಲೆಮಾರಿ ಜನಾಂಗದವರು ಬದುಕು ಕಟ್ಟಿಕೊಳ್ಳಬೇಕು ಎನ್ನುವ ಹಿನ್ನಲೆಯಲ್ಲಿ ಅಲ್ಲಿಯ ಭಾಷೆ, ಭಾವನೆ, ಬದುಕು, ಬವಣೆಯನ್ನು ಚಿಮಣಿ ಬೆಳಕಿನ ಬದುಕು ಕೃತಿಯಲ್ಲಿ ಕಟ್ಟಿ ಕೊಡಲಾಗಿದೆ. ಕಾಡು ಕಥೆಯನ್ನು ಈಗಾಗಲೇ ರಂಗದ ಮೇಲೆ ತೆಗೆದುಕೊಂಡು ಬರಲಾಗಿದೆ. ಅದು ಈಗ ಪುಸ್ತಕ ರೂಪದಲ್ಲಿ ಬಿಡುಗಡೆಗೊಳ್ಳುತ್ತಿದೆ ಎಂದು ಹಿರಿಯ ಜಾನಪದ ವಿದ್ವಾಂಸರಾದ ಡಾ.ಎಂ.ಎಂ ಪಡಶೆಟ್ಟಿ ಹೇಳಿದರು.

ಈಗಾಗ್ಲೇ ಕಥೆ, ಕವಿತೆ ಬರೆಯುತ್ತಿರುವ ನಾಗೇಶ ತಳವಾರ, ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಮಣಿ ಬೆಳಕಿನ ಬದುಕು ಕೃತಿಯ ಮೂಲಕ ನಾಟಕಕಾರರಾಗಿ ಹೊರಹೊಮ್ಮಿದ್ದಾರೆ ಎಂದು ಹಿರಿಯ ಕಥೆಗಾರರಾದ ಡಾ.ಚನ್ನಪ್ಪ ಕಟ್ಟಿ ಹೇಳಿದರು. ಪುಸ್ತಕದ ಮುಖಪುಟ ಬಿಡುಗಡೆ ಮಾಡುವುದು ಇತ್ತೀಚಿನ ಹೊಸ ಟ್ರೆಂಡ್ ಆಗಿದೆ. ಸಿನಿಮಾ ಬಿಡುಗಡೆಗೂ ಪೂರ್ವದಲ್ಲಿ ಟೀಸರ್ ಬಿಡುಗಡೆಯ ರೀತಿಯಲ್ಲಿ ಪುಸ್ತಕದ ಮುಖಪುಟ ಬಿಡುಗಡೆ ಮೂಲಕ ಹೆಚ್ಚು ಜನರಿಗೆ ತಲುಪಲು ಇದೊಂದು ಪ್ರಕ್ರಿಯೆಯಾಗಿದೆ ಎಂದರು.

ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಸಿಂದಗಿಯ ಮಾಧ್ಯಮರಂಗ ಫೌಂಡೇಶನ್, ಮೈಸೂರಿನ ಸ್ವಜನ್ಯ ಕಲಾ ವೇದಿಕೆ ಜಂಟಿಯಾಗಿ, ಫೆಬ್ರವರಿ 10, 2024ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿವೆ. ಯುವ ಕವಿ ಶಿಶಿರಂಜನ್ ಅವರ ನವಭಾರತ ಜನನಿಯ ತನುತಾಜೆ ಕವನ ಸಂಕಲನ ಸಹ ಇದೇ ವೇಳೆ ಬಿಡುಗಡೆಯಾಗುತ್ತಿದೆ. ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ಆರ್ ಗಂಗಾಧರ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿಕೊಳ್ಳುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ವಿಜಯಲಕ್ಷ್ಮಿ ಕರಿಕಲ್ ‘ಚಿಮಣಿ ಬೆಳಕಿನ ಬದುಕು’ ಕೃತಿ ಕುರಿತು ಮಾತನಾಡಲಿದ್ದಾರೆ. ಸಾಹಿತಿ ಡಾ.ಎಚ್.ಎಸ್ ಸತ್ಯನಾರಾಯಣ ನವಭಾರತ ಜನನಿಯ ತನುತಾಜೆ ಪುಸ್ತಕದ ಕುರಿತು ಮಾತನಾಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!