ಚಿಮಣಿ ಬೆಳಕಿನ ಬದುಕು, ನವಭಾರತ ಜನನಿಯ ತನುಜಾತೆ ಕೃತಿಗಳ ಲೋಕಾರ್ಪಣೆ

341

ಪ್ರಜಾಸ್ತ್ರ ಸುದ್ದಿ

ಮೈಸೂರು: ಆಧುನಿಕ ಯುಗಕ್ಕೆ ಮಾರು ಹೋಗುತ್ತಿರುವ ಯುವಕರು ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಮೊಬೈಲ್ ಗೀಳು ಹಚ್ಚಿಕೊಂಡಿರುವ ಮಕ್ಕಳಲ್ಲಿಯೂ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಎಂ.ಆರ್.ಗಂಗಾಧರ ಕಳವಳ ವ್ಯಕ್ತಪಡಿಸಿದರು.

ಸ್ವಜನ್ಯ ಕಲಾ ವೇದಿಕೆ ಮೈಸೂರು, ಮಾಧ್ಯಮರಂಗ ಫೌಂಡೇಶನ್ ಸಿಂದಗಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಮೈಸೂರು ಸಹಯೋಗದಲ್ಲಿ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಲೇಖಕರಾದ ನಾಗೇಶ ತಳವಾರ ಅವರ ಚಿಮಣಿ ಬೆಳಕಿನ ಬದುಕು (ನಾಟಕ) ಹಾಗೂ ಎಸ್. ಶಿಶಿರಂಜನ್ ಅವರ ನವಭಾರತ ಜನನಿಯ ತನುಜಾತೆ(ಕವನ ಸಂಕಲನ) ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇಂದು ಸಾಹಿತ್ಯ ಕ್ಷೇತ್ರದಲ್ಲಿಯೂ ಝೇರಾಕ್ಸ್ ಸಂಸ್ಕೃತಿ ಒಕ್ಕರಿಸಿದ್ದು, ಅದರಿಂದ ಯುವಕರಲ್ಲಿ ಓದುವ ಮತ್ತು ಬರೆಯುವ ಆಸಕ್ತಿ ಕಡಿಮೆಯಾಗುತ್ತಿದೆ.ಯುವಕರು ಹೆಚ್ಚೆಚ್ಚು ಓದು ಮತ್ತು ಬರಹದಲ್ಲಿ ತೊಡಗಿಕೊಂಡಾಗ ಮಾತ್ರ ಸಾಹಿತ್ಯ ಕ್ಷೇತ್ರ‌ದ ಉಳಿವು ಹಾಗೂ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ಯುವ ಲೇಖಕರಾದ ನಾಗೇಶ ತಳವಾರ ಮತ್ತು ಶಿಶಿರಂಜನ್ ರಚಿಸಿದ ಎರಡು ಕೃತಿಗಳು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿವೆ. ನಾಡಿನ ಕಲೆ, ಸಾಹಿತ್ಯ , ಸಂಸ್ಕೃತ ಬೆಳೆಸಲು ಈ ಎರಡು ಕೃತಿಗಳು ಸಹಕಾರಿಯಾಗಿವೆ. ಲೋಕಾರ್ಪಣೆಗೊಂಡ “ಚಿಮಣಿ ಬೆಳಕಿನ ಬದುಕ” ಕೃತಿ ಆದಷ್ಟು ಬೇಗ ರಂಗ ಪ್ರದರ್ಶನ ಕಾಣುವಂತಾಗಲಿ ಎಂದು ಶುಭ ಹಾರೈಸಿದರು.

ನವಭಾರತ ಜನನಿಯ ತನುಜಾತೆ ಕೃತಿ ಪರಿಚಯಿಸಿದ ಡಾ.ಎಚ್.ಎಸ್.ಸತ್ಯನಾರಾಯಣ ಮಾತನಾಡಿ, ಯುವ ಬರಹಗಾರ ನಾಗೇಶ ತಳವಾರ ಮೊದಲಿನಿಂದಲೂ ಕಥೆ ಹಾಗೂ ಕಾದಂಬರಿ ರಚನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಈಗ ಮೊಟ್ಟಮೊದಲ ಬಾರಿಗೆ ನಾಟಕ ಕೃತಿಯ ಮೂಲಕ ಅದ್ಬುತ ನಾಟಕವನ್ನು ಓದುಗರಿಗೆ ನೀಡಿದ್ದಾರೆ. ನಮ್ಮ ರಂಗಭೂಮಿ ಕಲೆ ಇಂದು ಬೆಳವಣಿಗೆ ಹೊಂದುತ್ತಿಲ್ಲ. ಹಳೆಯ ತಲೆಮಾರಿನ ನಾಟಕಗಳನ್ನೇ ನಾವು ಪ್ರದರ್ಶನಕ್ಕೆ ಬಳಸುತ್ತಿದ್ದೇವೆ. ಯುವ ನಾಟಕಕಾರರ ಮತ್ತು ಬರಹಗಾರರ ಕೊರತೆ ಕಂಡು ಬರುತ್ತಿದೆ. ಇಬ್ಬರು ಯುವ ಬರಹಗಾರರು ಕವನ ಸಂಕಲನ ಹಾಗೂ ನಾಟಕ ಕೃತಿ ರಚಿಸಿದ್ದು, ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ನವಭಾರತ ಜನನಿಯ ತನುಜಾತೆ ಹಾಗೂ ಚಿಮಣಿ ಬೆಳಕಿನ ಬದುಕು ಎಂಬ ಎರಡು ಕೃತಿಗಳು ನನ್ನನ್ನು ಬಹಳಷ್ಟು ಸೆಳೆದವು. ಚಿಕ್ಕದಾದ ಮತ್ತು ಚೊಕ್ಕದಾದ ಎರಡು ಪುಸ್ತಕಗಳು ಅದ್ಭುತವಾಗಿವೆ. ಇಂದು ಕನ್ನಡ ಓದುವವರು, ಆರಾಧಿಸುವವರು ಬಹಳಷ್ಟು ಕಡಿಮೆ ಆಗುತ್ತಿದ್ದಾರೆ.‌ ಕನ್ನಡ ಮಾತ್ರವಲ್ಲ ಇಡೀ ಭಾರತೀಯ ಪುಸ್ತಕ ಕ್ಷೇತ್ರದಲ್ಲಿ ಇಂದು ಬಹಳಷ್ಟು ಕುಸಿತಕ್ಕೆ ಕಾರಣವಾಗಿದೆ.‌  ಇಂದು ಕವನ ಸಂಕಲನ ಸೇರಿ ವರ್ಷಕ್ಕೆ 6 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಉತ್ತಮ ಬರಹಗಾರರು ಇದ್ದಾರೆ, ಆದರೆ ಓದುವವರು ವರ್ಷದಿಂದ ವರ್ಷಕ್ಕೆ‌ ಕಡಿಮೆ ಆಗುತ್ತಿರುವುದು ವಿಷಾದನೀಯ ಸಂಗತಿ. ಲೇಖಕ ಶಿಶಿರಂಜನ್ ಅವರು ಅತ್ಯಂತ ಸರಳ ಭಾಷೆಯಲ್ಲಿ ಕವಿತೆ ಬರೆದಿರುವುದು ಹೆಚ್ಚು ಇಷ್ಟವಾಯಿತು. ಸಾಮಾನ್ಯವಾದ ಚಿಂತನೆ ಹಾಗೂ ಶಬ್ದಗಳ ಮೂಲಕ ಅವರ ಕವಿತೆ ಓದುಗರ ಮನಮುಟ್ಟುವಂತೆ ಇವೆ ಎಂದು ಶ್ಲಾಘಿಸಿದರು.

”ಚಿಮಣಿ ಬೆಳಕಿನ ಕೃತಿ ಪರಿಚಯಿಸಿದ ಡಾ.ವಿಜಯಕುಮಾರಿ ಕರಿಕಲ್‌ ಮಾತನಾಡಿ, ಇಂದು ಪ್ರಕಾಶನ ಹಾಗೂ ಲೇಖಕರ ಸಂಖ್ಯೆ ಹೆಚ್ಚಾಗಿದೆ. ಆದರೆ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಬೇರೆ ಬೇರೆ ಮೂಲಗಳಿಂದ‌ ಇಂಟರ್ನೆಟ್, ವಾಟ್ಸ್ ಆಪ್, ಫೆಸ್ ಬುಕ್ ಹಾವಳಿಯಿಂದ‌  ಸಂವಹನ ನಡೆಯುತ್ತಿರುವುದರಿಂದ ಎಲ್ಲರು ಅದರಲ್ಲಿ ಕಳೆದು ಹೋಗಿದ್ದೇವೆ. ಆಧುನಿಕತೆ ಸಾಹಿತ್ಯ ಕ್ಷೇತ್ರದ ಹಿನ್ನಡೆಗೆ ಕಾರಣವಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಕವಿ ಹಾಗೂ ಕವಿತೆಗಳು ಮಾಡಬೇಕಿದೆ. ನಾಗೇಶ ಅವರ ಚಿಮಣಿ ಬೆಳಕಿನ ಬದುಕು ಕೃತಿ ಅದ್ಭುತವಾಗಿದೆ. ಎಲ್ಲಿ ಬರಗಾಲ ಇದೆಯೋ ಅಲ್ಲಿ ಯಾವಾಗಲೂ ಹೆಚ್ಚೆಚ್ಚು ಸಾಹಿತ್ಯ, ಕಲೆ ಹುಟ್ಟಿಕೊಂಡಿರುತ್ತದೆ ಎಂಬುದಕ್ಕೆ ನಾಗೇಶ ತಳವಾರ ಮಾದರಿ ಎಂದರು”

ಇತ್ತಿಚೇಗೆ ಪತ್ರಿಕಾ ಮಾಧ್ಯಮ ರಂಗದಿಂದ ಬಂದಿರುವವರೆ ಹೆಚ್ಚು ಸಾಹಿತ್ಯ ಮತ್ತು ಕೃತಿ ರಚಿಸುತ್ತಿದ್ದಾರೆ. ಇಂದಿನ ಯುವ ಬರಹಗಾರರಲ್ಲಿ ಬರವಣಿಗೆ ಕಡಿಮೆಯಾಗುತ್ತಿದೆ. ಇದರಿಂದ ಭಾವನಾತ್ಮಕ ಹಾಗೂ ಸೃಜನಶೀಲತೆ ಕುಂಠಿತಕ್ಕೆ ಕಾಣವಾಗಿದೆ. ನಾವು ವೈಚಾರಿಕತೆಯ ಬೆನ್ನು ಬಿದ್ದು ಭಾವನೆಗೆ ಕೊಡಲಿ ಪೆಟ್ಟು ನೀಡುತ್ತಿದೆ. ನಾಟಕ, ಸಾಹಿತ್ಯ ಸೇರಿದಂತೆ ಅನೇಕ ರಂಗಭೂಮಿ ಕೆಲಸಗಳನ್ನು ಮಾಧ್ಯಮ ರಂಗ ಮಾಡುತ್ತಿದೆ. ಅದರಿಂದ ಮತ್ತಷ್ಟು ಕೃತಿಗಳು ಹೊರ ಬರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಡಾ.ಎಸ್.ಬಿ.ಎಂ.ಪ್ರಸನ್ನ ಮಾತನಾಡಿ,  ಪರೀಕ್ಷೆಯಲ್ಲಿ ಪ್ರಬಂಧ ಮಾದರಿ ಬರವಣಿಗೆ ಹೋಗಿ ಅಬ್ಜೇಕ್ಟಿವ್ ಮಾದರಿ ಬಂದ ಪರಿಣಾಮ ಓದುವ ಮತ್ತು ಬರೆಯುವ ಸಂಸ್ಕೃತಿ ಕಡಿಮೆ ಆಗುತ್ತಿದೆ. ಯುವ ಪೀಳಿಗೆ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಚಲ್ಲೂರ ಚಂದ್ರಶೇಖರ್ ಮಾತನಾಡಿದರು. ಲೇಖರಾದ ಶಿಶಿರಂಜನ್ ಹಾಗೂ ನಾಗೇಶ ತಳವಾರ ತಮ್ಮ ಅನಿಸಿಕೆ ಹಂಚಿಕೊಂಡರು. ಮಾಧ್ಯಮರಂಗ ಫೌಂಡೇಶನ್ ಉಪಾಧ್ಯಕ್ಷ ಪ್ರಕಾಶ ಏಳುಗುಡ್ಡ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕನ್ನಡಪ್ರಭ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನ್ ಕುಮಾರ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಈ ವೇಳೆ ನಾ.ದಿವಾರಕ್, ವಿಜಯಕುಮಾರ್ ಎಸ್.ಪಿ, ಲಕ್ಷ್ಮಣ ಬೆಳಗಾವಿ, ಶಬ್ಬೀರ್ ಸೂಡಿ, ರಾಕೇಶ್, ಶ್ರೇಯಸ್.ಎಲ್, ಸಮೀರ್ ಆಚಾರ್ಯ, ಕೆ.ಪಿ ಮಹಾದೇವಯ್ಯ, ಪ್ರಿಯಾಂಕಾ ಕುಲಕುರ್ಣಿ ಅನೇಕರು ಉಪಸ್ಥಿತರಿದ್ದರು. ನಿವೇದಿತಾ ಪ್ರಾರ್ಥಿಸಿದರು. ಭವಾನಿ ನಿರೂಪಿಸಿದರು.




Leave a Reply

Your email address will not be published. Required fields are marked *

error: Content is protected !!