ಹಿಂದುಳಿದವರನ್ನು ಮತ್ತಷ್ಟು ತುಳಿಯುವ ಯತ್ನವೇ..?

241

ಪ್ರಜಾಸ್ತ್ರ ಡೆಸ್ಕ್

ರಾಜ್ಯ ರಾಜಕೀಯ ಅಂಗಳದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಜಾತಿ ಗಣತಿ ವರದಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ವರದಿ ಬಿಡುಗಡೆಗೂ ಮೊದಲೇ ಪ್ರಬಲ ಸಮುದಾಯಗಳ ನಾಯಕರು, ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿಚಿತ್ರ ಅಂದರೆ ಸರ್ಕಾರದ ಭಾಗವಾಗಿರುವ ಉಪ ಮುಖ್ಯಮಂತ್ರಿ, ಸಚಿವರು, ಶಾಸಕರಿಂದಲೇ ವಿರೋಧ ವ್ಯಕ್ತವಾಗುತ್ತಿರುವುದು.

ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಮೀಕ್ಷೆ ಅವೈಜ್ಞಾನಿಕವಾಗಿದೆ. ಮತ್ತೊಮ್ಮೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕೆಂದು ಒಕ್ಕಲಿಗರ ಸಂಘ ಈಗಾಗ್ಲೇ ಮನವಿ ಸಲ್ಲಿಸಿದೆ. ಇದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ ಹೆಚ್.ಡಿ ದೇವೇಗೌಡ, ಕುಮಾರಸ್ವಾಮಿ, ಎಸ್.ಎಂ ಕೃಷ್ಣ, ಡಿ.ವಿ ಸದಾನಂದಗೌಡ, ಆರ್.ಅಶೋಕ್, ಅಶ್ವತ್ಥನಾರಾಯಣ, ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಪಕ್ಷಗಳಲ್ಲಿರುವ ಘಟಾನುಘಟಿ ಒಕ್ಕಲಿಗ ನಾಯಕರು ಸಹಿ ಮಾಡಿ ಸಿಎಂಗೆ ಸಲ್ಲಿಸಿದ್ದಾರೆ.

ಈಗ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸಹ ಸಿಎಂಗೆ ಮನವಿ ಸಲ್ಲಿಸಿದೆ. ಇದರಲ್ಲಿ ಇರುವವರೆಲ್ಲ ಬಹುತೇಕರು ಕಾಂಗ್ರೆಸ್ ನಾಯಕರೆ. ಮಹಾಸಭಾದ ಅಧ್ಯಕ್ಷ, ಶಾಸಕ ಶಾಮನೂರ ಶಿವಶಂಕರಪ್ಪ, ಸಚಿವರಾದ ಎಂ.ಬಿ ಪಾಟೀಲ, ಈಶ್ವರ್ ಖಂಡ್ರೆ, ಶರಣಪ್ರಕಾಶ ಪಾಟೀಲ, ಶಿವಾನಂದ ಪಾಟೀಲ, ಅಶೋಕ ಎಂ. ಪಟ್ಟಣ, ಎಂ.ವೈ ಪಾಟೀಲ, ಸಿ.ಸಿ ಪಾಟೀಲ, ಲಕ್ಷ್ಮಣ ಸವದಿ ಸೇರಿ ಅನೇಕರು ಸಹಿ ಮಾಡಿದ್ದಾರೆ.

ಕಾಂತರಾಜ್ ಆಯೋಗದ ವರದಿ ತಿರಸ್ಕರಿಸುತ್ತಿರುವ ಒಕ್ಕಲಿಗ, ವೀರಶೈವ-ಲಿಂಗಾಯತ ಸಮುದಾಯದ ಬಲಿಷ್ಠ ರಾಜಕೀಯ ನಾಯಕರ ಉದ್ದೇಶ ಏನು ಅನ್ನೋದು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರಿಗೆ ತಿಳಿಯದಾಗಿದೆ. ಸಿಎಂ ಸಿದ್ದರಾಮಯ್ಯ, ವರದಿ ಬಿಡುಗಡೆಗೂ ಮೊದಲೇ ವಿರೋಧ ಸರಿಯಲ್ಲ ಎಂದಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ವರದಿ ಸಲ್ಲಿಕೆಗೂ ಮೊದಲೇ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಹ, ತಮ್ಮದೆ ಪಕ್ಷದ ಸರ್ಕಾರದ ಡಿಸಿಎಂ ನಡೆಯನ್ನು ಲೋಕಸಭೆಯಲ್ಲಿ ವಿರೋಧಿಸಿದ್ದಾರೆ.

224 ವಿಧಾನಸಭಾ ಕ್ಷೇತ್ರ, 28 ಲೋಕಸಭಾ ಕ್ಷೇತ್ರಗಳಲ್ಲಿನ ಶಾಸಕರ ಸಮುದಾಯಗಳ ಪಟ್ಟಿ ನೋಡಿದರೆ ತಿಳಿಯುತ್ತೆ ಯಾವ ಸಮುದಾಯದವರು ಹೆಚ್ಚಿದ್ದಾರೆ ಎಂದು. ಆ ಎಲ್ಲ ರಾಜಕೀಯ ನಾಯಕರ ಹಿನ್ನಲೆ ಅಧ್ಯಯನ ಮಾಡಿದರೆ ನೂರಾರು ಕೋಟಿಯಿಂದ ಸಾವಿರಾರು ಕೋಟಿ ತನಕ ಸಿರಿವಂತರು. ಜೊತೆಗೆ ತಮ್ಮ ಸಮುದಾಯಗಳನ್ನು ಎಷ್ಟರ ಮಟ್ಟಿಗೆ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕವಾಗಿ ಬಲಾಢ್ಯರಾಗಿ ಮಾಡಿದ್ದಾರೆ ಅನ್ನೋದು ಪ್ರತಿ ಊರಿನಲ್ಲಿರುವ ತಳಸಮುದಾಯದ ಜನರಿಗೆ ಗೊತ್ತು. ಹೀಗಿದ್ದರೂ ಈ ವರದಿಯಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತೆ ಎಂದು ಹೇಳುತ್ತಿರುವುದು ನೋಡಿದರೆ ಇದರ ಹಿಂದಿನ ಲೆಕ್ಕಾಚಾರ ಏನಿರಬಹುದು ಅನ್ನೋ ದೊಡ್ಡ ಪ್ರಶ್ನೆ ಮೂಡುತ್ತಿದೆ.

ಬಸವಣ್ಣನ ಅನುಯಾಯಿಗಳು ಎಂದು ಹೇಳುವ ನಾಯಕರಿಂದಲೇ ಇಂತಹ ನಡೆ ಕಂಡು ಬರುತ್ತಿರುವುದು ನೋಡಿದರೆ ಅಲಕ್ಷಿತ ಸಮುದಾಯಗಳು ಮುಂದೆ ಬರುವುದು ಜಾತಿ ಶ್ರೇಷ್ಠತೆಯ ಅಟ್ಟದ ಮೇಲೆ ಕುಳಿತಿರುವವರಾರಿಗೂ ಬೇಡವಾಗಿದೆ. ಪುರೋಹಿತಶಾಹಿಯಿಂದ ಅಸಮಾನತೆ ಸೃಷ್ಟಿಯಾಗಿದೆ ಎಂದು ಬರೀ ಬ್ರಾಹ್ಮಣ ಸಮುದಾಯವನ್ನು ವಿರೋಧಿಸುವುದಲ್ಲ. ಅವರಂತೆ ನಾವೂ ಶ್ರೇಷ್ಠರು ಎನ್ನುವ, ಸಮಾಜದಲ್ಲಿ ಮೇಲ್ವರ್ಗದವರೆಂದು ಕರೆಸಿಕೊಳ್ಳಬೇಕು, ಎಲ್ಲರನ್ನೂ ಆಳಬೇಕು ಎನ್ನುವ ಗುಣ ಯಾವೆಲ್ಲ ಸಮುದಾಯದಲ್ಲಿದೆಯೋ ಅದೇ ಇಂದು ಇಲ್ಲಿಗೆ ತಂದು ನಿಲ್ಲಿಸಿದೆ. ಇಂತಹ ಮನಸ್ಥಿತಿ ಸಮಸಮಾಜಕ್ಕಾಗಿ ಹೋರಾಡಿದ ಮಹಾನ್ ಪುರುಷರ ಆಶಯಗಳಿಗೆ ಕೊಳ್ಳಿ ಇಡುವ ಪ್ರಯತ್ನ ಎನ್ನುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!