‘ರಾಷ್ಟ್ರಪತಿ, ಪ್ರಧಾನಿ ಮಾಡ್ತೀನಿ ಅಂದ್ರೂ ನಾನು ಬಿಜೆಪಿ ಕಡೆ ತಲೆ ಹಾಕಲ್ಲ’

65

ಪ್ರಜಾಸ್ತ್ರ ಸುದ್ದಿ

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮುಖಂಡರು ಹಾಗೂ ಕರ್ಯಕರ್ತರ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನನ್ನು ರಾಷ್ಟ್ರಪತಿ, ಪ್ರಧಾನಿ ಮಾಡ್ತೀನಿ ಅಂದ್ರೂ ಬಿಜೆಪಿ ಕಡೆ ತಲೆ ಹಾಕಲ್ಲ. ನಮಗೆ ಸೈದ್ಧಾಂತಿಕ ಸ್ಪಷ್ಟತೆ ಇದ್ದಾಗ ಮಾತ್ರ ರಾಜಕೀಯ ಶಕ್ತಿ ಬರುತ್ತೆ ಎಂದರು.

ಬಿಜೆಪಿ ಆರ್.ಎಸ್.ಎಸ್ ಸಾಮಾಜಿಕ ನ್ಯಾಯದ ವಿರೋಧಿಯಾಗಿವೆ. ಹೀಗಾಗಿ ಅವರು ಮೀಸಲಾತಿಯನ್ನು ಇಷ್ಟಪಡುವುದಿಲ್ಲ. ಮೀಸಲಾತಿ ಎನ್ನುವುದು ಭಿಕ್ಷೆಯಲ್ಲ, ಅದು ಶೋಷಿತ ಜನ ಸಮುದಾಯಗಳ ಹಕ್ಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಮೀಸಲಾತಿ ಇದ್ದೇ ಇರಬೇಕು ಎಂಬುದು ನನ್ನ ಅಭಿಪ್ರಾಯ. ಭಾರತಕ್ಕೆ ಬ್ರಿಟಿಷರು ಬರುವ ಮೊದಲು ಓದುವ ಹಕ್ಕು ನಮಗೆ ಅಂದರೆ ಶೂದ್ರರಿಗೆ ಇತ್ತಾ? ಮಹಿಳೆಯರಿಗೆ ಇತ್ತಾ? ಪತಿ ಮೃತಪಟ್ಟ ತಕ್ಷಣ ಪತ್ನಿ ಕೂಡ ಬೆಂಕಿಗೆ ಆಹುತಿ ಆಗಬೇಕಿತ್ತು. ಇಂಥಾ ಮನುಸ್ಮೃತಿ ಪ್ರೇರಿತ ಅಮಾನವೀಯ ಪದ್ಧತಿ ರದ್ದಾಗಿದ್ದು ನಮ್ಮ ಸಂವಿಧಾನದಿಂದ. ಹೀಗಾಗಿ ಈ ಸಂವಿಧಾನ ಬದಲಾಯಿಸಿ ಮತ್ತೆ ಮನುಸ್ಮೃತಿ ತರಬೇಕು ಎನ್ನುವುದು ಅವರ ಹುನ್ನಾರ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.

ಶೂದ್ರರಿಗೆ, ದಲಿತರಿಗೆ ಮತ್ತು ಮಹಿಳೆಯರಿಗೆ ಗರ್ಭಗುಡಿಯೊಳಗೆ ಬಿಟ್ಟುಕೊಳ್ಳಲ್ಲ. ನಂಜೇಗೌಡರು ಅಂತ ಹಿರಿಯ ಬಿಜೆಪಿ ನಾಯಕರು ಮತ್ತು ಈಗಿನ ಬಿಜೆಪಿ ಕರ್ನಾಟಕ ನಾಯಕ ಗೂಳಿಹಟ್ಟಿ ಶೇಖರ್ ಅವರು ಕೂಡ ತಮ್ಮನ್ನು ಆರ್.ಎಸ್.ಎಸ್ ಗರ್ಭಗುಡಿಯೊಳಗೆ ಬಿಟ್ಟುಕೊಳ್ಳಲಿಲ್ಲ ಅಂತ ಬಹಿರಂಗವಾಗಿ ಹೇಳಿದ್ದಾರೆ. ಇದು ಸತ್ಯ. ಹೀಗಾಗಿ ಶೂದ್ರರನ್ನು ಕೇವಲ ಬಳಸಿಕೊಳ್ತಾರೆ. ಆದ್ದರಿಂದ ಬಿಜೆಪಿ, ಆರ್.ಎಸ್.ಎಸ್ ಕಡೆ ಶೂದ್ರರು, ದಲಿತರು, ಮಹಿಳೆಯರು ತಲೆ ಕೂಡ ಹಾಕಬಾರದು.

ಸಂವಿಧಾನ ವಿರೋಧಿ ಆರ್.ಎಸ್.ಎಸ್ ಜತೆ ಜೆಡಿಎಸ್ ಈಗ ಸೇರಿಕೊಂಡಿದೆಯಲ್ಲಾ, ಇವರನ್ನು ಟೀಕಿಸಬಾರದಾ ಎಂದರು.

ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಹಣ ಮೀಸಲಿಡುವ ಕಾನೂನನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಅಭಿವೃದ್ಧಿ ಹಣದಲ್ಲಿ ಶೇ24.1% ಹಣ ಮೀಸಲಿಡಬೇಕು ಎನ್ನುವ ಕಾನೂನನ್ನು ಜಾರಿ ಮಾಡಿದ್ದು ನಮ್ಮ ಸರ್ಕಾರ. ಈ ಪ್ರಗತಿಪರ ಕಾನೂನನ್ನು ಇಡಿ ದೇಶದಲ್ಲಿ ಬಿಜೆಪಿಯ ಯಾವ ಸರ್ಕಾರವೂ ಜಾರಿ ಮಾಡಿಲ್ಲ. ಮಾಡಿರುವುದು ನಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ. ಇದನ್ನೆಲ್ಲಾ ಜನ ಸಮುದಾಯ ತಿಳಿದುಕೊಳ್ಳಬೇಕು. ಗುತ್ತಿಗೆಯಲ್ಲಿ ದಲಿತರಿಗೆ ಮೀಸಲಾತಿ ತಂದಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಮಂಡಲ್ ವರದಿಯನ್ನು ವಿರೋಧಿಸಿದ್ದು, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ವಿರೋಧಿಸಿದ್ದು ಇದೇ ಬಿಜೆಪಿ ತಾನೇ? ಎಸ್.ಸಿ.ಪಿ / ಟಿ.ಎಸ್.ಪಿ ಕಾಯ್ದೆಯನ್ನು ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನಿಮ್ಮ‌ಜೊತೆ ನಿಂತಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ. ಹೀಗಾಗಿ ನಿಮ್ಮನ್ನು ಭಾವನಾತ್ಮಕವಾಗಿ ಕೆರಳಿಸಿ, ನಿಮ್ಮ ಬದುಕಿಗೆ ಕೊಳ್ಳಿ ಇಡುವವರ ಜತೆ ಸೇರದೆ, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸಿ ಎಂದು ಕೈಮುಗಿದು ಮನವಿ ಮಾಡುತ್ತೇನೆ ಅಂತಾ ಕೇಳಿಕೊಂಡರು.




Leave a Reply

Your email address will not be published. Required fields are marked *

error: Content is protected !!