ಹಿಂಗೂ ಮ್ಯಾಚ್ ಗೆಲ್ಲಬಹುದಾ?

499

2020ರ ಮೊದಲ ಅತ್ಯಂತ ರೋಚಕ ಪಂದ್ಯವಿದು. ಕ್ರಿಕೆಟ್ ಅಂಗಳದಲ್ಲಿ ಗೆಲುವು ಯಾವ ಟೈಂನಲ್ಲಿ ಯಾರಿಗೆ ಒಲಿಯುತ್ತೆ ಅನ್ನೋದೇ ಗೊತ್ತಾಗುವುದಿಲ್ಲ. ವಿಜಯಲಕ್ಷ್ಮಿ ನಮ್ಮ ಮನೆಯಲ್ಲಿ ಬಂದು ಕುಂತಿದ್ದಾಳೆ ಅನ್ನುವಷ್ಟರಲ್ಲಿ ಎದ್ದು ಹೋಗ್ತಾಳೆ. ಎದುರಾಳಿ ಪಡೆ ಸೇರಿಕೊಂಡ್ಳು ಅನ್ನುವಷ್ಟರಲ್ಲಿ ನಡುವೆ ನಿಂತು ನೋಡುಗರ ಎದೆಯಲ್ಲಿ ಕುತೂಹಲ ಅನ್ನೋ ಪದಕ್ಕೆ ಸಾಕ್ಷಿಯಾಗ್ತಾಳೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಟಿ-20 ಪಂದ್ಯ ಅಕ್ಷರಶಃ ಕ್ರಿಕೆಟ್ ಪ್ರೇಮಿಗಳು ಉಸಿರು ಬಿಗಿಹಿಡಿದು ನೋಡಿದ ಆಟ. ಟಿ-20 ಕ್ರಿಕೆಟ್ ದುನಿಯಾದಲ್ಲಿ ಇಷ್ಟೊಂದು ರೋಚಕ ಆಟ ಮತ್ತೊಂದು ಇರ್ಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ನೋಡಗರಿಗೆ ಥ್ರಿಲ್ ನೀಡಿತು. ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ ಆಟಕ್ಕೆ ಕ್ರಿಕೆಟ್ ಪ್ರೇಮಿಗಳು ಬೋಲ್ಡ್ ಆಗಿದ್ದಾರೆ.

ಟಾಸ್ ಗೆದ್ದು ಟೀಂ ಇಂಡಿಯಾಗೆ ಬ್ಯಾಟಿಂಗ್ ನೀಡಿದ ನ್ಯೂಜಿಲೆಂಡ್ ತಂಡಕ್ಕೆ ಭಾರತ 180 ರನ್ ಗಳ ಟಾರ್ಗೆಟ್ ನೀಡಿತ್ತು. ಈ ವೇಳೆ ರೋಹಿತ ಶರ್ಮಾ 3 ಸಿಕ್ಸ್, 6 ಫೋರ್ ಗಳ ಮೂಲಕ ಭರ್ಜರಿ 65 ರನ್ ಬಾರಿಸಿದ್ದ. ಕೊಹ್ಲಿ 38 ಹಾಗೂ ಕೆ.ಎಲ್ ರಾಹುಲ 28 ರನ್ ಬಾರಿಸಿದ್ರು.

ಬಳಿಕ 180 ರನ್ ಗಳ ಗುರಿ ಬೆನ್ನು ಹತ್ತಿದ ಕಿವೀಸ್ ಪಡೆ ಗೆಲುವನ್ನ ಬಹುತೇಕ ತನ್ನ ಉಡಿಗೆ ಹಾಕಿ ಕೊಂಡಿತ್ತು. ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಅಬ್ಬರಿಸಿ ಕೇವಲ 48 ಬೌಲ್ ಗಳಲ್ಲಿ ಭರ್ಜರಿ 95 ರನ್ ಬಾರಿಸಿದ್ದ. ಇನ್ನೊಂದ್ಕಡೆ ರಾಸ್ ಟೇಲರ್ ಅಬ್ಬರಿಸಲು ಶುರು ಮಾಡಿದ್ದ. ಟೀಂ ಇಂಡಿಯಾದ ಕೈಯಿಂದ ಪಂದ್ಯವನ್ನ ಕಸಿದುಕೊಳ್ಳುವ ಟೈಂನಲ್ಲಿ ಮೊಹಮ್ಮದ ಶೆಮಿ ಕಮಾಲ್ ಮಾಡಿದ. ಹೀಗಾಗಿ ವಿಲಿಯಮ್ಸನ್ ಔಟ್ ಆದ. ಆದ್ರೂ ಭಾರತ ತಂಡಕ್ಕೆ ಗೆಲುವು ಸುಲಭವಾಗಿರ್ಲಿಲ್ಲ. ಇನ್ನೇನು ಕಿವೀಸ್ ಗೆಲುವು ದಾಖಲಿಸಿತು ಅನ್ನುವಷ್ಟರಲ್ಲಿ ಶೆಮಿ ಮತ್ತೆ ಜಾದು ಮಾಡಿ ಟೇಲರ್ ಬೋಲ್ಡ್ ಮಾಡುವ ಮೂಲಕ ಪಂದ್ಯ ಟೈ ಮಾಡಿದ.

2 ಬೌಲ್ ಗಳಿಗೆ 2 ರನ್ ಬೇಕಿದ್ದ ಕಿವೀಸ್ ಪಡೆಯನ್ನ ಶೆಮಿ ಕಟ್ಟಿ ಹಾಕಿದ. ಇದರ ಪರಿಣಾಮ ಮ್ಯಾಚ್ ಟೈ ಆಯ್ತು. ಆಗ ಟಿವಿ ಮುಂದೆ ಕುಳಿತು ಮ್ಯಾಚ್ ನೋಡ್ತಿದ್ದವರ ಎದೆಬಡಿತ ಡಬಲ್ ಆಗಿತ್ತು. ಹೀಗೆ ವಿಜಯಲಕ್ಷ್ಮಿ ಆ ಕಡೆ ಈ ಕಡೆ ಮಾಡಿ ಕೊನೆಗೆ ನಟ್ಟನಡುವೆ ನಿಂತಳು. ಹೀಗಾಗಿ ಸೂಪರ್ ಓವರ್ ಆಡಿಸಬೇಕಾಯ್ತು. ಇದು ಸಹ ಸಾಕಷ್ಟು ರೋಚಕತೆಯಿಂದ ಕೂಡಿತ್ತು.

ಸೂಪರ್ ಓವರ್ ನಲ್ಲಿ ಮಿಲಿಯಮ್ಸನ್ 1 ಸಿಕ್ಸ್, ಫೋರ್ ಸಮೇತ 11 ಬಾರಿಸಿದ, ಗುಪ್ಟಿಲ್ 5 ರನ್ ಬಾರಿಸಿದ. 1 ಎಕ್ಸ್ ಟ್ರಾ ರನ್ ಬಂದು, 1 ಓವರ್ ನಲ್ಲಿ 18 ರನ್ ಟಾರ್ಗೆಟ್ ನೀಡಿದ್ರು. ರೋಹಿತ್ ಶರ್ಮಾ ಹಾಗೂ ರಾಹುಲ ಅಂಗಳಕ್ಕೆ ಬಂದ್ರು. ಮೊದಲ ಬೌಲ್ ನಲ್ಲಿ ರೋಹಿತ 1 ರನ್ ಬಾರಿಸಿದ. 2ನೇ ಬೌಲ್ ರಾಹುಲ ಫೋರ್ ಬಾರಿಸಿದ. 3ನೇ ಬೌಲ್ 1 ರನ್ ಬಾರಿಸಿದ. ಉಳಿದ 3 ಬೌಲ್ ನಲ್ಲಿ 12 ರನ್ ಬೇಕಾಯ್ತು. ಆಗ ರೋಹಿತ ಸಿಕ್ಸ್ ಬಾರಿಸಿದ. 2 ಬೌಲ್ ಗಳಿಗೆ 6 ರನ್ ಬೇಕಾಯ್ತು. ಆಗ 2 ರನ್ ಓಡಿದ. ಕೊನೆಯ ಬೌಲ್ ನಲ್ಲಿ 4 ರನ್ ಬೇಕಾಗಿತ್ತು. ರೋಹಿತ ಅದ್ಬುತ ಸಿಕ್ಸ್ ಬಾರಿಸಿ 1 ಓವರ್ ಗೆ 20 ರನ್ ಚಚ್ಚಿ ಗೆಲುವಿನ ಪತಾಕೆ ಹಾರಿಸಿದ. ಹೀಗೆ ಎರಡೆರಡು ಬಾರಿ ರೋಚಕತೆನ್ನ ಮೂಡಿಸಿದ ಪಂದ್ಯವಿದು. ಎರಡೂ ಬಾರಿಯೂ ಕಿವೀಸ್ ಗೆಲುವು ಸಾಧಿಸಿತು ಅನ್ನುವಷ್ಟರಲ್ಲಿ ಸೋಲು ಅನುಭವಿಸಿತು.

ಸಿಡನ್ ಪಾರ್ಕ್ ಇವತ್ತು ಇಷ್ಟೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗುತ್ತೆ ಎಂದು ಯಾರೂ ಊಹಿಸಿರ್ಲಿಲ್ಲ. ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯನ್ನ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದ ಪಂದ್ಯವಿದು. ಸೂಪರ್ ಓವರ್ ನಲ್ಲಿ ಸೂಪರ್ ಗೆಲುವು ದಾಖಲಿಸಿದ ಟೀಂ ಇಂಡಿಯಾ 5 ಪಂದ್ಯಗಳ ಟಿ-20 ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ 2 ಪಂದ್ಯಗಳ ಮೊದ್ಲೇ ಸರಣಿ ವಶ ಪಡಿಸಿಕೊಂಡಿತು.




Leave a Reply

Your email address will not be published. Required fields are marked *

error: Content is protected !!