ಡಾ.ಜಿ.ಎಸ್ ಭೂಸಗೊಂಡ ಅವರಿಗೆ ಕಲಾನ್ವೇಷಕ ಪ್ರಶಸ್ತಿ

247

ಪ್ರಜಾಸ್ತ್ರ ಸುದ್ದಿ

ಧಾರವಾಡ: ಕಳೆದ 41 ವರ್ಷಳಿಂದ ಕಲಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪಾರ ಸಾಧನೆ ಮಾಡಿರುವ ಡಾ.ಜಿ.ಎಸ್ ಭೂಸಗೊಂಡ ಅವರಿಗೆ, ಇಲ್ಲಿನ ರಾಷ್ಟ್ರೀಯ ದೃಶ್ಯಕಲಾ ಅಕಾಡಮಿ ಕಲಾನ್ವೇಷಕ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರೊ.ಎಸ್.ಸಿ ಪಾಟೀಲ ಆರ್ಟ್ ಗ್ಯಾಲರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡಿನ ಐವರು ಕಲಾ ಸಾಧಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರಲ್ಲಿ ವಿಜಯಪುರ ಜಿಲ್ಲೆಯ ತಿಕೋಟ ಮೂಲದ ಜಿ.ಎಸ್ ಭೂಸಗೊಂಡ ಸಹ ಒಬ್ಬರಾಗಿದ್ದಾರೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಡಿ.ಬಿ ನಾಯಕ, ಕವಿವಿಯ ಕನ್ನಡ ಸಂಶೋಧನಾ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ.ಆರ್.ಎಂ ಷಡಕ್ಷರಯ್ಯ, ನಿಯೋಜಿತ ಕರ್ನಾಟಕ ಲಲಿತಕಲಾ ವಿಶ್ವವಿದ್ಯಾಲಯದ ವಿಶ್ರಾಂತ ವಿಶೇಷಾಧಿಕಾರಿ ಪ್ರೊ.ಎಸ್ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದು. ವಿಶ್ವವಿಖ್ಯಾತ ಲಿಯೋನಾರ್ಡೊ ಡಾ ವಿಂಚಿ ಕುರಿತು ಹಂಪಿ ವಿವಿಯ ದೃಶ್ಯಕಲಾ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಮೋಹನರಾವ್ ಜಿ. ಪಂಚಾಳೆ ವಿಶೇಷ ಉಪನ್ಯಾಸ ನೀಡಿದರು.

ಡಾ.ಜಿ.ಎಸ್ ಭೂಸಗೊಂಡ ಅವರ ಕುರಿತು:

ಕಳೆದ 41 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ದೃಶ್ಯಕಲಾ ಕ್ಷೇತ್ರದಲ್ಲಿ ನಿರಂತರ ಅಧ್ಯಯನ ಮಾಡುತ್ತಾ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ಡಾಕ್ಟರೇಟ್ ಆಫ್ ಲಿಟರೇಚರ್’ ಪದವಿಯನ್ನು ಪಡೆದು, ಕೋಟ್ಯಾಳದ ಅಜ್ಞಾತ ಕಲಾವಿದ ಚಂದ್ರವರ್ಮ ಬಿರುದಾಂಕಿತ ಬಿ.ಆರ್. ಕೋಟ್ಯಾಳಕರ ಅವರನ್ನು ಕಲಾಜಗತ್ತಿಗೆ ಪರಿಚಯಿಸಿದರು.44 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ, ಲೇಖನಗಳನ್ನು ಬರೆದಿದ್ದಾರೆ. 75ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಯಲ್ಲಿ ನಡೆದ ಅನೇಕ ರಾಷ್ಟ್ರೀಯ ಉತ್ಸವಗಳ ಮುಖ್ಯ ವೇದಿಕೆ ಅಲಂಕಾರದ ರೂವಾರಿಯಾಗಿಯೂ ಕೆಲಸ ಮಾಡಿದ್ದಾರೆ. ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಿದ್ದರಿಂದ ರಾಜ್ಯ ಮತ್ತು ರಾಷ್ಟç ಮಟ್ಟದ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

ಇಲ್ಲಿಯವರೆಗೆ ಉಚಿತವಾಗಿ 106 ಯೋಗಾ ಶಿಬಿರಗಳನ್ನು ಸಂಘಟಿಸಿ ರಾಜ್ಯಾದ್ಯಂತ ಸೇವೆ ಮಾಡಿ ಸಾರ್ಥಕತೆ ಪಡೆದವರು. ಅವರಿಗೆ “ಕಲಾನ್ವೇಷಕ” ರಾಷ್ಟ್ರೀಯ ಪ್ರಶಸ್ತಿ ಬಂದಿದ್ದಕ್ಕೆ ಅವರ ಅಪಾರ ಶಿಷ್ಯ ಬಳಗ, ಸ್ನೇಹಿತರ ಬಳಗ ಶುಭಹಾರೈಸಿ ಸಂತಸ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!