ಹುಬ್ಬಳ್ಳಿ-ಧಾರವಾಡದಲ್ಲಿ ಮತ್ತೆ ಲ್ಯಾಂಡ್ ಮಾಫಿಯಾ?

2616

ಪ್ರಜಾಸ್ತ್ರ ವಿಶೇಷ ವರದಿ

ಹುಬ್ಬಳ್ಳಿ/ಧಾರವಾಡ: ಅವಳಿ ನಗರಕ್ಕೆ ಒಂದು ಕಾಲದಲ್ಲಿ ಒಳ್ಳೆಯ ಹೆಸರಿತ್ತು. ಶಿಕ್ಷಣಕ್ಕೆ ಧಾರವಾಡ ಆದ್ರೆ, ವಾಣಿಜ್ಯಕ್ಕೆ ಹುಬ್ಬಳ್ಳಿ ಹೆಸರು ಮಾಡಿತ್ತು. ಆದ್ರೆ, ಇತ್ತೀಚೆಗೆ ಮತ್ತೆ ಅವಳಿ ನಗರದಲ್ಲಿ ಲ್ಯಾಂಡ್ ಮಾಫಿಯಾ ಹಾಗೂ ಅಕ್ರಮ ಚಟುವಟಿಕೆಗಳ ಹಾವಳಿ ಜೋರಾಗುತ್ತಿದೆ ಅನ್ನೋ ಮಾತುಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ.

ಈ ಹಿಂದೆ ಲ್ಯಾಂಡ್ ಮಾಫಿಯಾ, ಮೀಟರ್ ಬಡ್ಡಿ ದಂಧೆ, ಬೆದರಿಕೆ ಪ್ರಕರಣ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳ ಮೂಲಕ ಧಾರವಾಡ ಜಿಲ್ಲೆಯ ಜನರಲ್ಲಿ ರೌಡಿ ಶೀಟರ್ ಫ್ರೂಟ್ ಇರ್ಫಾನ್ ಭಯ ಮೂಡಿಸಿದ್ದ. 11 ತಿಂಗಳ ಹಿಂದೆ ಈತನ ಮರ್ಡರ್ ಆಗುವ ಮೂಲಕ, ಒಂದಿಷ್ಟು ಶಾಂತಿ ನೆಲೆಸಿದೆ ಅನ್ನುವಷ್ಟರಲ್ಲಿ ಇದೀಗ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಯಾಕಂದ್ರೆ, ಈ ಬಾರಿ ಸಂಘಟನೆ, ಸಾಮಾಜಿಕ ಹೋರಾಟದ (ಮುಖವಾಡ) ನೆಪದಲ್ಲಿ ವ್ಯವಸ್ಥಿತ ಲ್ಯಾಂಡ್ ಮಾಫಿಯಾ ಚಿಗುರೊಡೆಯುತ್ತಿದೆ ಎಂಬ ಧ್ವನಿ ದಟ್ಟವಾಗಿ ಕೇಳಿ ಬರ್ತಿದೆ. ಯಾಕಂದ್ರೆ, ಹತ್ಯೆಯಾದ ಫ್ರೂಟ್ ಇರ್ಫಾನ್ ಮಾದರಿಯಲ್ಲಿ ಕೆಲವರು ಅಕ್ರಮ ದಂಧೆ ಶುರು ಮಾಡ್ತಿದ್ದಾರಂತೆ. ಅವನ ಬಾಕಿ ಉಳಿದಿರುವ ಅಕ್ರಮ ವ್ಯವಹಾರಗಳನ್ನ ಮುಂದುವರೆಸಿಕೊಂಡು ಹೋಗಲು ವೇದಿಕೆ ಸಜ್ಜು ಮಾಡ್ತಿದ್ದಾರಂತೆ. ಒಂದು ವೇಳೆ ಪೊಲೀಸರು ಮೊಳಕೆಯಲ್ಲಿ ಇದನ್ನ ಚಿವುಟಿ ಹಾಕದೆ ಹೋದ್ರೆ, ಮತ್ತೆ ಕೊಲೆಗಳು, ಬೆಟ್ಟಿಂಗ್ ದಂಧೆ, ಮೀಟರ್ ಬಡ್ಡಿ, ಜೂಜಾಟ ದಂಧೆ ಎಗ್ಗಿಲ್ಲದೆ ಸಾಗುವ ದಿನಗಳು ದೂರವಿಲ್ಲ.

ಫ್ರೂಟ್ ಇರ್ಫಾನ್ ಮಾದರಿಯಲ್ಲಿ ಲ್ಯಾಂಡ್ ಮಾಫಿಯಾ?

ಧಾರವಾಡದ ಸಪ್ತಾಪುರ-ಜಯನಗರ ವ್ಯಾಪ್ತಿಯ ತಲಾ ಎರಡು ಎಕರೆಯಲ್ಲಿ ಈಗಾಗಲೇ ಮನೆ ನಿರ್ಮಿಸಿಕೊಂಡವರನ್ನ ಕಾನೂನು ವಾಜ್ಯದ ಹೆಸರಿನಲ್ಲಿ ಬೆದರಿಸುವುದು ಹಾಗೂ ಹಣ ವಸೂಲಿ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಹತ್ಯೆಯಾಗಿ ಹೋದ ಪ್ರೂಟ್ ಇರ್ಫಾನ್ ಮಾದರಿಯಲ್ಲಿ ಕೆಲ ರೌಡಿಗಳು, ಸ್ವಯಂ ಘೋಷಿತ ಸಾಮಾಜಿಕ ಹೋರಾಟಗಾರರು ಅಕ್ರಮ ವ್ಯವಹಾರಕ್ಕೆ ಮುಂದಾಗುತ್ತಿದ್ದಾರಂತೆ.

ಪ್ರತಿ ಪ್ಲಾಟ್ ಗೆ ಒಂದು ಲಕ್ಷ ಬೇಡಿಕೆ?

ಧಾರವಾಡದ ಮಾಳಾಪುರ ವ್ಯಾಪ್ತಿಯಲ್ಲಿ ಬರುವ 4 ಎಕರೆಗೂ ಹೆಚ್ಚು ಆಸ್ತಿಯಲ್ಲಿ ಮೂಲ ಮಾಲಕರು ಹಾಗೂ ಅವರ ಜಿಪಿಎ ಹೋಲ್ಡರ್ ಗಳು ಶೇಕಡಾ 90% ಪ್ಲಾಟ್ ಗಳನ್ನ ಬಾಂಡ್ ಮೇಲೆ ಅಕ್ರಮ ಸಕ್ರಮ ಮಾಡಿ‌ ಮಾರಾಟ ಮಾಡಿರುತ್ತಾರೆ. ಆದರೆ, ಅನೇಕರಿಗೆ ಖರೀದಿಸಿದ ಬಾಂಡ್ ಸಹ ನೀಡಿಲ್ಲ. ಇದನ್ನು ತಿಳಿದ ಕೆಲವರು ಮೋಸ ಹೋದವರನ್ನ ಕರೆದುಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಅದೇ ಆಸ್ತಿಯನ್ನು ತಮ್ಮ ಸ್ನೇಹಿತರಿಗೆ ಮೂಲ ಮಾಲೀಕರಿಂದ ಮತ್ತೊಮ್ಮೆ ಮಾರಾಟ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಮೊದಲು ಪ್ಲಾಟ್ ಖರೀದಿಸಿದವರಿಗೆ(ಬಾಂಡ್ ಮೂಲಕ) ಅದೆ ಆಸ್ತಿ ಪಡೆಯಲು ಮತ್ತೆ 1 ಲಕ್ಷ ರೂಪಾಯಿ ಕೇಳುತ್ತಿದ್ದಾರಂತೆ.

ಅಧಿಕಾರಿಗಳಿಗೂ ಧಮ್ಕಿ?

ಸಂಘಟನೆಯೊಂದರ ಹೆಸರಿನಲ್ಲಿರುವ ಸರ್ವೆ ಆಫೀಸ್, ಸಬ್ ರಿಜಿಸ್ಟ್ರಾರ್ ಕಚೇರಿ, ತಹಸೀಲ್ದಾರ್ ಕಚೇರಿ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೆದರಿಸುವ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ ತನ್ನ ಕಾರ್ಯವನ್ನು ಸಾಧಿಸಿಕೊಳ್ಳಲು, ಅಧಿಕಾರಿಗಳ ಮುಂದೆ ರಾಜಾರೋಷವಾಗಿ ಕುಳಿತುಕೊಂಡು ಪ್ರಭಾವಿ ರಾಜಕಾರಣಿಯೊಬ್ಬರಿಗೆ ದೂರವಾಣಿ ಕರೆ ಮಾಡಿ, ಔಟ್ ಸ್ಪೀಕರ್ ಇಟ್ಟು ತಾನೆಷ್ಟು ಅವರಿಗೆ ಆಪ್ತ ಎಂದು ತೋರಿಸುವ ಮೂಲಕ ಧಮ್ಕಿ ಹಾಕುತ್ತಿದ್ದಾರಂತೆ. ಇಂತವರಿಗೆ ಆ ಪ್ರಭಾವಿ ರಾಜಕಾರಣಿಗಳು ಏಕೆ ಸೊಪ್ಪು ಹಾಕುತ್ತಿದ್ದಾರೆ ಎಂಬುದು ಅಧಿಕಾರಿಗಳ ಅಸಮಾಧಾನಕ್ಕೂ ಕಾರಣವಾಗುತ್ತಿದೆ ಎಂಬ ಆರೋಪಗಳಿವೆ.

ಇಲ್ಲೆಲ್ಲ ಭೂ ಮಾಫಿಯಾ ಅಬ್ಬರ?

ಕೆಲಗೇರಿಯ ವ್ಯಾಪ್ತಿಯ ರೆಡ್ ಬೆಲ್ಟ್ ಏರಿಯಾ, ಮಾಳಾಪುರದ ಮುಸ್ಲಿಂ ಸಮಾಜದ ಸ್ಮಶಾನ ಗಟ್ಟಿ ಹತ್ತಿರ, ಮೆಹಬೂಬ ನಗರ, ತೇಜಸ್ವಿ ನಗರ, ಕಲಘಟಗಿ ರಸ್ತೆ, ಗೋವಾ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಭೂ ಮಾಫಿಯಾ ದಿನದಿಂದ ದಿನಕ್ಕೆ ಸಕ್ರಿಯವಾಗುತ್ತಿದೆ ಅನ್ನೋ ಆರೋಪಗಳು ಜೋರಾಗಿವೆ.

ಲೂಟಸ್ ಆ್ಯಪ್ ಮೂಲಕ ಬೆಟ್ಟಿಂಗ್, ಲ್ಯಾಂಡ್ ಮಾಫಿಯಾ?

ಧಾರವಾಡ ಜಿಲ್ಲೆಯಲ್ಲಿ ಲ್ಯಾಂಡ್ ಮಾಫಿಯಾ ಹಾಗೂ ವ್ಯವಸ್ಥಿತ ಕ್ರಿಕೆಟ್ ಬೆಟ್ಟಿಂಗ್ ಗೆ ಲೂಟಸ್ ಎಂಬ ಮೊಬೈಲ್ ಆ್ಯಫ್ ಕೆಲಸ ಮಾಡುತ್ತಿದೆ ಎಂಬ ಗುಸು-ಗುಸು ಮಾತುಗಳು ಕೇಳಿಬರುತ್ತಿವೆ. ಮೇಲ್ನೋಟಕ್ಕೆ ಇದೊಂದು ಮನರಂಜನೆ ಆ್ಯಪ್ ಆಗಿದ್ದರೂ, ಅದರಿಂದಲೇ ಕ್ರಿಕೆಟ್ ಬೆಟ್ಟಿಂಗ್ ನಡೆಸಲಾಗ್ತಿದೆ ಎಂದು ಆ್ಯಪ್ ಸದಸ್ಯತ್ವದಿಂದ ಹೊರಗೆ ಬಂದಿರುವ ಹಾಗೂ ಹೆಸರು ಹೇಳಲು ಇಚ್ಛಿಸದ ಕೆಲವರು ಮಾಹಿತಿ ನೀಡಿದ್ದಾರೆ. ಈ ಬೆಟ್ಟಿಂಗ್ ನಲ್ಲಿ ಬಂದ ಹಣದಿಂದಲೇ ಲ್ಯಾಂಡ್ ಮಾಫಿಯಾದಲ್ಲಿ ಬಳಕೆಯಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.

ಲ್ಯಾಂಡ್ ಮಾಫಿಯಾ, ಅಧಿಕಾರಿಗಳಿಗೆ ಬೆದರಿಕೆ ಸೇರಿ ಅಕ್ರಮ ದುನಿಯಾಗೆ ಸೈಲೆಂಟ್ ಆಗಿ ಎಂಟ್ರಿ ಕೊಡ್ತಿರುವ ಸಾಮಾಜಿಕ ಹೋರಾಟಗಾರರ ಸೋಗಿನ ಹೊಸ ಮುಖಗಳ ಬಗ್ಗೆ ಈ ಭಾಗದ ಜನಪ್ರತಿನಧಿಗಳು, ಪೊಲೀಸರು ಯಾಕೆ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ ಅನ್ನೋ ಹಲವು ಪ್ರಶ್ನೆಗಳು ಜನರಲ್ಲಿ ಮೂಡಿದ್ದು, ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದಾ ಕಾದು ನೋಡಬೇಕಿದೆ.




Leave a Reply

Your email address will not be published. Required fields are marked *

error: Content is protected !!