ಮಾತು ನಿಲ್ಲಿಸದ ‘ಮೂಕಜ್ಜಿ’

514

ಡಾ.ವಿನಯ ನಂದಿಹಾಳ ಅವರ ಮೂವಿ ಮಾತು ಅಂಕಣ ಬರಹ ಭಾಗ-5

ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಅನೇಕ ದೃಷ್ಟಿಯಿಂದ ವಿಶಿಷ್ಟವಾಗಿದೆ. ಈ ಕಾದಂಬರಿಯನ್ನು ಪಿ. ಶೇಷಾದ್ರಿಯರು ಅದೇ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಕಾದಂಬರಿಗಳನ್ನು ದೃಶ್ಯ ಮಾಧ್ಯಮಕ್ಕೆ ಅಳುವಡಿಸುವಲ್ಲಿ ಇವರು ಪ್ರವೀಣರು ಎಂಬುವುದನ್ನು ‘ಬೆಟ್ಟದಜೀವ’ ಎನ್ನುವಂತಹ ಚಿತ್ರಗಳಿಂದ ಅರಿಯಬಹುದು. ಸಿನಿಮಾಗಳಿಗಂತ ಸಿದ್ಧವಾದ ಕಥೆಗಳನ್ನು ಬೆಳ್ಳಿ ತೆರೆಯ ಮೇಲೆ ತರಲು ನಿರ್ದೇಶಕರಿಗೆ ಸ್ವತಂತ್ರ ಇರುತ್ತದೆ. ಆದರೆ ಈಗಾಗಲೇ ರಚಿತವಾಗಿ ಜನಮಾಸದಲ್ಲಿ ಬೇರೂರಿದ ಕಾದಂಬರಿಯನ್ನು ಸಿನಿಮಾ ಮಾಡುವುದು ನಿರ್ದೇಶಕರಿಗೆ ಒಂದು ದೊಡ್ಡ ಸವಾಲು.

ಅದರಲ್ಲಿಯೂ ‘ಮೂಕಜ್ಜಿಯ ಕನಸುಗಳು’ ಅಂತಹ ರಚನೆಯನ್ನು ದೃಶ್ಯ ಮಾಧ್ಯಮಕ್ಕೆ ತರವುದು ಇನ್ನೂ ಕಷ್ಟ. ಯಾಕೆಂದರೆ ಈ ಕಾದಂಬರಿಗೆ ನಿರ್ದಿಷ್ಟವಾದ ಕೇಂದ್ರ ಎಂಬುದಿಲ್ಲ. ಇದೇ ಇದರ ಕಥೆ, ಇಲ್ಲಿಂದ ಪ್ರಾರಂಭವಾಗಿ ಹೀಗೆ ಬೆಳೆದು ಇಲ್ಲಿಗೆ ಮುಗಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಲವು ಘಟನೆಗಳ ಒಟ್ಟು ಮೊತ್ತವಾಗಿ ಈ ಕಾದಂಬರಿ ಕಾಣುತ್ತದೆ. ಈ ಕಾದಂಬರಿಗೆ ಕಥಾನಾಯಕನಿಲ್ಲ; ನಾಯಕಿಯಿಲ್ಲ. ಮೂಕಜ್ಜಿಯೂ ಇಲ್ಲಿ ಕಥಾನಾಯಕಿಯಲ್ಲ. ಸಾಂಪ್ರದಾಯಿಕತೆಯಿಂದ ಹೆರಗಟ್ಟಿದ ಮನಸ್ಸುಗಳನ್ನು ತುಸು ತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು. ಅಂಥ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಬಂದರೆ, ನಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯಿತು. ಆದರೂ ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ. ಅವಳ ಮೊಮ್ಮಗನಾದ ಸುಬ್ಬರಾಯನಂಥವರು ಹಲವರಿದ್ದಾರೆ ಎಂದು ಕಾರಂತರು ಮುನ್ನುಡಿಯಲ್ಲಿ ಹೇಳಿದ್ದಾರೆ. ಇಂತಹ ಅಜ್ಜಿಯನ್ನು ಪಿ. ಶೇಷಾದ್ರಿಯವರು ಸಮರ್ಥವಾಗಿ ತೆರೆಯ ಮೇಲೆ ತಂದಿದ್ದಾರೆ. ಈ ಕಥಾ ನಿರ್ವಹಣೆಯಲ್ಲಿ ಹಲವು ತಂತ್ರಗಳನ್ನು ಅಳವಡಿಸಿಕೊಂಡು ಮೂಲ ಕೃತಿಯ ಮರುಸೃಷ್ಟಿಯಲ್ಲಿ ಮೂಕಜ್ಜಿ ಹೀಗೆಯೇ ಇದ್ದರು ಎಂಬ ಭಿತ್ತಿಯನ್ನು ಬಿತ್ತಿದ್ದಾರೆ.

ಮೂಕಜ್ಜಿಯು ಬಾಲ್ಯದಲ್ಲಿ ವಿಧವೆಯಾದವಳು. ಈ ಆಪತ್ತಿನಿಂದಾಗಿ ಅವಳು ಮೌನ ತಾಳುತ್ತಾಳೆ. ಹೀಗಾಗಿ ಮೂಕಾಂಬಿಕೆ ಎಂಬ ಅವಳ ಹೆಸರಿಗೆ ಮೂಕಿ ಎಂಬ ಅನ್ವರ್ಥನಾಮ ಸೇರಿಕೊಳ್ಳುತ್ತದೆ. ಮಕ್ಕಳಿಗಾಗಿ ಮತ್ತೇ ಮಾತನಾಡಲು ಪ್ರಾರಂಭಿಸುವ ಮೂಕಜ್ಜಿ ಇತಿಹಾಸದ ಶಿಲಾಯುಗ, ಮಧ್ಯಯುಗ, ರಾಜ್ಯಸ್ಥಾಪನೆಗಳು, ಅವುಗಳ ವಿನಾಶ, ದೇವರ ಸೃಷ್ಟಿ, ಪುರಾಣ, ಚರಿತ್ರೆ, ಹುಟ್ಟು-ಸಾವು, ಆಚರಣೆ, ವಿವಿಧ ನಂಬಿಕೆಗಳು, ಕಾಮ, ಪ್ರೇಮ, ನಡುವಳಿಕೆ, ವಂಚನೆ, ಪ್ರಣಯ, ತ್ಯಾಗ, ಸಂಪ್ರದಾಯದ ಬಂಧನಗಳು, ಮನುಷ್ಯರ ಮೂಲ ಪ್ರವೃತಿಗಳಾದ ದ್ವೇಷ, ಅಸೂಯೆ ಇಂತಹ ಹಲವು ವಿಷಯಗಳನ್ನು ಮಾತನಾಡುತ್ತಾಳೆ. ಹಿಂದೆ ಆಗಿದ್ದ ಭೂತದ ಘಟನೆಗಳು, ಮುಂದೆ ಘಟಿಸಬಹುದಾದ ಸಂಭವಗಳನ್ನು ಮೂಕಜ್ಜಿ ತನ್ನ ಅತೀಂದ್ರ ಶಕ್ತಿಯಿಂದ ನಿರೂಪಿಸುತ್ತಾಳೆ. ಅದು ಅವಳ ಜೀವನಾನುಭವಾಗಿದೆ. ಆ ಶಕ್ತಿ ತಾನು ಜೀವನದಲ್ಲಿ ಅನುಭವಿಸಿದ ಕೇಳಿದ ಅಂಶಗಳಿಂದ ಪ್ರಾಪ್ತವಾಗಿರಬಹುದು. ಆಳವಾದ ಬೇರು ಮರದ ಸಮೃದ್ದಿಯ ಸಂಕೇತ ಇದ್ದ ಹಾಗೆ ಇಲ್ಲಿ ಆಲದ ಮರ ಮತ್ತು ಮೂಕಜ್ಜಿ ಆಗಿದ್ದಾರೆ. ಇದು 1968ರ ಸಮಯದಿಂದ ಸುಮಾರು 70-80 ವರ್ಷಗಳ ಕಾಲ ನಡೆಯುವ ಕಥೆಯನ್ನು ಚಿತ್ರಿಸಲು ನಿರ್ದೇಶಕರಿಗೆ ಮುಖ್ಯವಾಗಿ ಬೇಕಾದದ್ದು ಆಧುನಿಕತೆಯ ಅತಿಯಾದ ಸ್ಪರ್ಶವಿರದ ಲೋಕೇಶನ್. ಅಂತಹ ಜಾಗವನ್ನು ಹುಡುಕಿ ಮೂಕಜ್ಜಿಗೆ ಬೇಕಾದ ಪರಿಸರವನ್ನು ಸಮರ್ಥವಾಗಿ ನಿರ್ಮಿಸಿಕೊಂಡಿದ್ದಾರೆ. ಕುಂದಾಪುರ ಸುತ್ತಮುತ್ತಲಿನ ಕಾಡು, ಮನೆ, ಹೊಳೆ, ಆ ಆಲದ ಮರ ಇವೆಲ್ಲವು ಚಿತ್ರವನ್ನು ನೋಡುವ, ಒಳಗೆ ಇಳಿಯುವ ಮೂಡಿಗೆ ಸೆಟ್ ಮಾಡುತ್ತವೆ. ಛಾಯಾಗ್ರಾಹಕ ಜಿ.ಎಸ್ ಭಾಸ್ಕರ್ ಇವೆಲ್ಲವನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ದೃಶ್ಯಗಳು ಒಮ್ಮೊಮ್ಮೆ ಪೇಟಿಂಗ್ ತರ ಕಂಡರೆ, ಮತ್ತೊಮ್ಮೆ ಬೇಗ ಮುಗಿಸುವ ಅವರಸದಲ್ಲಿದ್ದಾರೆ ಎನಿಸುತ್ತದೆ.

ಮೂಕಜ್ಜಿ ಎಂದ ತಕ್ಷಣ ನಾವು ಸಾಮಾನ್ಯವಾಗಿ ಕಟ್ಟಿಕೊಂಡ ಒಂದು ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಅಂತಹ ಪ್ರತಿರೂಪದಂತೆ ಹಿರಿಯ ನಟಿ ಬಿ.ಜಯಶ್ರೀಯವರು ಈ ಚಿತ್ರದಲ್ಲಿ ಕಾಣುತ್ತಾರೆ. ಅವರು ಕುಳಿತುಕೊಳ್ಳುವ ರೀತಿ, ಕಣ್ಣಿನಲ್ಲಿ ತೀಕ್ಷ್ಣವಾಗಿ ಭಾವ ವ್ಯಕ್ತ ಪಡಿಸುವ ಪರಿ, ಅವರು ಮಾತನಾಡುವ ಶೈಲಿ ಮತ್ತು ಅವರು ನಡೆಯುವ ನಡಿಗೆ ಇವೆಲ್ಲವು ಅವರನ್ನು ನಾವು ಮೂಕಜ್ಜಿ ಎಂದು ಒಪ್ಪಿಕೊಳ್ಳಲು ಒತ್ತಾಯಿಸುತ್ತವೆ. ಇಡೀ ಬದುಕನ್ನೇ ರಂಗಭೂಮಿಯಲ್ಲಿ ಜೀವಿಸಿದ ಬಿ.ಜಯಶ್ರೀ ಅವರ ನಟನೆಗೆ ಅವರೆ ಸಾಟಿ. ಒಟ್ಟು ಇದು ಅಜ್ಜಿ-ಮೊಮ್ಮಗನ ಸಂವಾದದ ಸ್ವರೂಪವೇ ಆಗಿದೆ. ಮೂಕಜ್ಜಿಯಷ್ಟೆ ಸಶಕ್ತ ಪಾತ್ರ ಸುಬ್ರಾಯನದು, ಅದನ್ನು ಅರವಿಂದ ಕುಪ್ಲಿಕರ್ ಸಮರ್ಥವಾಗಿ ನಿರ್ವಹಿಸಿದ್ದಾರೆ. ಈ ತರಹದ ಪ್ರಯೋಗಾತ್ಮಕ ಪಾತ್ರಗಳಿಗೆ ಜೀವ ತುಂಬುವುದರಲ್ಲಿ ಅರವಿಂದ ಕುಪ್ಲಿಕರ್ ಎತ್ತಿದ ಕೈ. ಅಜ್ಜಿಯ ಜೊತೆಗೆ ಸಂವಾದಿಸುವಾಗ ಹೆಚ್ಚಿನದು ತಿಳಿದುಕೊಳ್ಳಬೇಕೆಂಬ ಕುತೂಹಲವನ್ನು ಕಣ್ಣಿನಲ್ಲಿ ಹೊರ ಹಾಕುವ ಪರಿ ಅವರು ಎಂತಹ ನಟನೆಂಬುದನ್ನು ಸಾಭಿತು ಮಾಡುತ್ತವೆ.

ನಾಗಿ ಪಾತ್ರ ಮಾಡಿರುವ ಪ್ರಗತಿ ಪ್ರಭು ಸ್ಕ್ರಿನ್ ಮೇಲೆ ಇರುವಷ್ಟ ಹೊತ್ತು ಬೇರೆ ಪಾತ್ರಗಳು ಗಮನಕ್ಕೆ ಬರದಷ್ಟು ಆವರಿಸಿಕೊಂಡು ಬಿಡುತ್ತಾರೆ. ನಂದಿನಿ ವಿಠ್ಠಲ, ರಾಜೇಶ್ವರಿ ವರ್ಮಾ, ಕಾವ್ಯ ಶಾ, ಪ್ರಭುದೇವ ಇವರೆಲ್ಲ ತಮ್ಮ ಅಭಿನಯದ ಮೂಲಕ ಚಿತ್ರಕ್ಕೆ ಮೆರೆಗು ತಂದಿದ್ದಾರೆ. ಇತಿಹಾಸಪೂರ್ವ, ಲೈಂಗಿಕತೆ ಇಂತಹ ಅಂಶಗಳನ್ನು ಗೊಂಬೆಗಳ ಮೂಲಕ ಪ್ರಸ್ತುತ ಪಡಿಸಿದ ನಿರ್ದೇಶಕನ ಜಾಣ್ಮೆಗೆ ಹಿಡಿದ ಕೈಗನ್ನಡಿಗಳಾಗಿವೆ. ಇಂತಹ ಜಾಣ್ಮಗೆ ಸಾಥ್ ನೀಡಿದ್ದು ಖ್ಯಾತ ಕೊಳಲುವಾದಕ ಪ್ರವೀಣ ಗೋಡ್ಖಿಂಡಿಯವರ ಸಂಗೀತ. ಪ್ರತಿಯೊಂದು ದೃಶ್ಯದಲ್ಲಿಯೂ ತಮ್ಮ ಏರಿಳಿತದ ಮೂಲಕ ತಮ್ಮ ಪ್ರಸ್ತುತೆಯನ್ನು ಇವರು ಸಾಭೀತು ಮಾಡಿದ್ದಾರೆ. ಸಿನಿಮಾದಲ್ಲಿ ಬಳಸಿರುವ ಕುಂದಾಪುರ ಕನ್ನಡ ಆಪ್ತವಾಗಿದೆ. ಕೇಳಲು ಹಿತವೆನಿಸುತ್ತದೆ. ತಾಂತ್ರಿಕತೆ ದೃಷ್ಟಿಯಿಂದ ಅದ್ಭುತವಾಗಿ ಮೂಡಿ ಬಂದಿದ್ದರು. ಕಥೆಯಲ್ಲಿ ಏನೋ ಒಂದು ಮಿಸ್ ಆಗಿದೆ ಎನಿಸದಿರದು.

ಚಿತ್ರಕಥೆ ಮಾಡಿಕೊಳ್ಳವಲ್ಲಿ ನಿರ್ದೇಶಕರು ಹಲವಾರು ವಿಷಯಗಳನ್ನು ಕೈ ಬಿಟ್ಟಿದ್ದಾರೆ. ಅದು ಹಲವು ಕಾರಣಗಳಿಗಿರಬಹುದು. ಮೂಕಜ್ಜಿ ಪ್ರಶ್ನೆಗಳ ಆಗರ. ಅವು ಸಾರ್ವತ್ರಿಕ ಮತ್ತು ಕಾಲತೀತ. ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಜರೂರಾಗಿ ಅವಶ್ಯವಿದ್ದ ಹಲವು ಪ್ರಶ್ನೆಗಳನ್ನು ನಿರ್ದೇಶಕರು ಯಾಕೆ ಕೈ ಬಿಟ್ಟಿದ್ದಾರೆ ಎಂಬುದುವು ತಿಳಿಯುವುದಿಲ್ಲ. ಕಾದಂಬರಿ ಎತ್ತುವ ಹಲವು ಪ್ರಶ್ನೆಗಳು ಸಧ್ಯದ ಸ್ಥಿತಿಯಲ್ಲಿ ಎಲ್ಲರೂ ಕೇಳಬೇಕಾದಂತಹುವು. ಅವು ಯಾವವು ಎನ್ನುವುದು ಕಾದಂಬರಿ ಓದಿ ಸಿನಿಮಾ ನೋಡಿದವರಿಗೆ ಅರ್ಥವಾಗುತ್ತದೆ. ಕಾದಂಬರಿ ಓದದೇ ಇರುವವರಿಗೆ ಸಿನಿಮಾ ಒಂದೇ ಬಾರಿಗೆ ಅರ್ಥವಾಗುವುದು ಸ್ವಲ್ಪ ಕಷ್ಟ. ಏನೇ ಇದ್ದರೂ ಇಂತಹ ಕ್ಲಾಸಿಕ್ ಪಾತ್ರವನ್ನು ತೆರೆ ಮೇಲೆ ತಂದ ಚಿತ್ರತಂಡದ ಪ್ರತಿಯೊಬ್ಬರೂ ಅಭಿನಂದನಾರ್ಹರು. ಈ ಸಿನಿಮಾ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವುದು ಖುಷಿಯ ಸಂಗತಿ.

ನಿಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು vinay99164@gmail.com




Leave a Reply

Your email address will not be published. Required fields are marked *

error: Content is protected !!