ಚಾರ್ಲಿ: ಒಂದು ಸುಂದರ ಪ್ರೇಮ ಕಲಾಕೃತಿ

674

ಡಾ.ವಿನಯ ನಂದಿಹಾಳ ಅವರ ಮೂವಿ ಮಾತು ಅಂಕಣ ಬರಹ ಭಾಗ-2

ಪ್ರತಿಯೊಬ್ಬರು ಹೀಗೆಯೇ ಬದುಕಬೇಕೆಂಬ ಕಟ್ಟಳೆಗಳು ಸಮಾಜದಿಂದ ನಿರಂತರವಾಗಿ ತೋರಿ ಬರುತ್ತಿರುತ್ತವೆ. ಅವುಗಳಿಗೆ ಅನುಗುಣವಾಗಿ ಜೀವನ ನಡೆಸಬೇಕಾದ ಅನಿವಾರ್ಯತೆಯನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಂಡಿರುತೇವೆ. ಬದುಕು ಅಂದರೆ ಹೀಗೆಯೇ, ಇಷ್ಟು ವಯಸ್ಸಿನವರೆಗೆ ಓದು, ನಂತರ ಕೆಲಸ, ಆ ನಂತರ ಮದುವೆ ಮಕ್ಕಳು ಎನ್ನುವುದೊಂದು ಸಾಮಾನ್ಯ ಮಾದರಿ. ಇದು ತುಂಬ ರೂಢಿಗತವಾದದ್ದು ಮತ್ತು ಕೃತಕವಾದದ್ದು. ಇದನ್ನು ಅನುಸರಿಸಿ ಜೀವನ ಕಳೆದು ಬಿಡುವುದು ಸಹಜ ಕಾರಣಕ್ಕೆ ಇಲ್ಲಿ ಯಾವುದೇ ಪ್ರಶ್ನೆಗಳಿರುವುದಿಲ್ಲ. ಜೀವನಶೋಧದ ಅವಶ್ಯಕತೆ ಇರುವುದಿಲ್ಲ ಜೊತೆಗೆ ಕಾಂಪ್ರಮೈಸ್ ಎನ್ನುವುದು ಮುಖ್ಯಸ್ಥಾಯಿ ಭಾವವಾಗಿರುತ್ತದೆ. ಇಂತಹ ಬದುಕನ್ನು ಮೀರಿ ಭಿನ್ನವಾಗಿ ಬದುಕುವ ಮತ್ತು ಬೆಳೆಯುವ ಕ್ರಿಯೆ ಯಾವಾಗಲೂ ಚಾಲೆಂಜಿಂಗಾಗಿಯೇ ಇರುತ್ತದೆ. ಇಂತಹ ಚಾಲೆಂಜ್ ಅನ್ನು ಸ್ವೀಕರಿಸಿ ಅದನ್ನು ದಿಟ್ಟವಾಗಿ ಎದುರಿಸುವಂತಹ ವ್ಯಕ್ತಿತ್ವಗಳು ನಮ್ಮ ನಡುವೆ ಇರುತ್ತವೆ. ಅವರು ಹಲವು ಕಾರಣಗಳಿಗಾಗಿ ವಿಶೇಷವಾಗಿ ನಮಗೆ ಕಾಣುತ್ತಾರೆ. ಅಂತಹ ವಿಶೇಷ ವ್ಯಕ್ತಿತ್ವದ ಮಾದರಿಗಳನ್ನು ತೋರಿಸುವ ಚಿತ್ರ ಚಾರ್ಲಿ. ಸಿನಿಮಾಗಳು ಸಹ ಒಂದು ಸಿದ್ಧ ಮಾದರಿಯನ್ನು ತೊರೆದು ಹೊಸ ಮಾದರಿಯನ್ನು ಕೊಟ್ಟಾಗ ಅದು ನಮಗೆ ವಿಶೇಷವಾಗಿ ಕಾಣುತ್ತದೆ. ಅಂತಹ ವಿಶೇಷ ಇದಾಗಿದೆ.

ಚಾರ್ಲಿ ಇದೊಂದು ಪ್ರೇಮಕಥಾ ವಸ್ತುವನ್ನು ಹೊಂದ್ದಿದ ಮಲೆಯಾಳಂ ಚಿತ್ರ. ನಮ್ಮ ದೇಶದಲ್ಲಿ ರೂಪಗೊಳ್ಳುವ ಚಿತ್ರಗಳಲ್ಲಿ ಸುಮಾರು 90ರಷ್ಟು ಚಿತ್ರಗಳು ಪ್ರೇಮಕಥೆಯನ್ನೇ ಹೊಂದಿರುತ್ತವೆ. ಅಂತಹ ಹಲವು ಚಿತ್ರಗಳ ಮಧ್ಯದಲ್ಲಿ ಇದು ವಿಶೇಷವಾಗಿ ನಿಲ್ಲಲು ಎರಡು ಮುಖ್ಯ ಕಾರಣಗಳೆಂದರೆ. ಒಂದು, ನಿರ್ದೇಶಕ ಪ್ರೇಮವನ್ನು ನಿರ್ವಚಿಸಿದ ಪರಿ ಮತ್ತು ತಾನು ಅಂದುಕೊಂಡಿದ್ದ ತಾತ್ವಿಕ ಅಂಶವನ್ನು ಅತ್ಯಂತ ಖಚಿತ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದು. ಇನ್ನೊಂದು ಚಿತ್ರಕಥೆಗೆ ಪೂರಕವಾಗಿ ತಾಂತ್ರಿಕ ಅಂಶಗಳು ಮೇಳೈಸಿರುವುದು.

ಕಥೆಯ ವಿಷಯಕ್ಕೆ ಬರುವುದಾದರೆ ಚಾರ್ಲಿ ಒಬ್ಬ ಮ್ಯಾಜಿಸಿಯನ್. ಅವನು ನಿರಂತರ ಸಂಚಾರಿ. ತಾನು ಯಾವ ಜಾಗದಲ್ಲಿ ಇರುತ್ತೇನೆ ಎನ್ನುವುದು ತನಗೆ ಗೊತ್ತಿರದ ವ್ಯಕ್ತಿತ್ವ. ಸದಾ ಹಸನ್ಮುಖ ಹೊಂದಿರುವ ಇವನು, ಜೀವನದ ಬಗ್ಗೆ ಜೀವಿಸುವುದರ ಬಗ್ಗೆ ಇತರರಗಿಂತ ಭಿನ್ನ ತಿಳುವಳಿಕೆ ಹೊಂದಿರುವವನು. ಸದಾ ಆನಂದವಾಗಿ ಇರಬೇಕು ಎನ್ನುವುದನ್ನು ಪ್ರತಿಪಾದಿಸುವವನು. ಇವನು ಆಡುವ ಮಾತುಗಳೆಲ್ಲವು ಸಾಮಾನ್ಯ ಎನ್ನುವಂತಹದಿದ್ದರೂ ಸಹ ಆಳವಾದ ಅನುಭಾವಿಕ ನಲೆಯನ್ನು ಹೊಂದಿರುವುವಾಗಿವೆ. ಇದನ್ನು ಅವನು ಹೇಗೆ ಸಾಧಿಸಿದ ಎನ್ನುವುದರ ಬಗ್ಗೆ ಚಿತ್ರದಲ್ಲಿ ಸ್ಪಷ್ಟತೆ ಇಲ್ಲ. ಆದರೆ ಅವನೊಬ್ಬ ಹ್ಯೂಮನಿಸ್ಟ್ ಎನ್ನುವುದು ತಿಳಿಯುತ್ತದೆ. ಇವನು ಹಿಂದೆ ವಾಸಿಸುತ್ತಿದ್ದ ಮನೆಗೆ ಬರುವ ಟೆಸ್ಸಾ ಇವನ ಅಸಂಪೂರ್ಣ ಕಥೆಯೊಂದು ಬೆನ್ನು ಬಿದ್ದು, ಆ ಕಥೆ ಹಾಗೂ ಅದರ ರಚನೆಕಾರ ಚಾರ್ಲಿಯ ಹುಡುಕಾಟ ಮಾಡುವುದೇ ಇಡೀ ಚಿತ್ರದ ಕೇಂದ್ರ ವಸ್ತು. ಈ ಹುಡುಕಾಟ ತೆರೆದಿಡುವ ಮಾನವೀಯ ಅಂಶಗಳು ಚಿತ್ರವನ್ನು ಬಹಳಷ್ಟು ಎತ್ತರಕ್ಕೆ ಒಯ್ಯುತ್ತವೆ. ಟೆಸ್ಸಾ ಸ್ವಾತಂತ್ರ್ಯವಾದ ಬದುಕನ್ನು ಅಪೇಕ್ಷಿಸುವ ಮತ್ತು ಕಲೆ ಬಗ್ಗೆ ಆಸಕ್ತಿಯುಳ್ಳವಳಾಗಿದ್ದಾಳೆ. ಈ ಹುಡುಕಾಟದಲ್ಲಿ ಅವಳಿಗೆ ದೊರಕುವ ಪ್ರತಿಯೊಬ್ಬರು ಚಾರ್ಲಿಯ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಪರಿಚಯಿಸುವರು. ಇದರಿಂದಾಗಿ ಚಾರ್ಲಿ ಬಗ್ಗೆ ಇರುವ ಕುತೂಹಲ ಇಮ್ಮಡಿಗೊಂಡು ಪ್ರೇಮವಾಗಿ ಪರಿವರ್ತನೆಯಾಗುವುದು. ಈ ವಿಷಯ ಚಾರ್ಲಿಗೂ ಸಹ ತಿಳಿಯುತ್ತದೆ. ಈ ಹುಡುಕಾಟದಲ್ಲಿ ಚಾರ್ಲಿ ಮತ್ತು ಟೆಸ್ಸಾ ಒಬ್ಬರಿಗೊಬ್ಬರು ಸಿಗುತ್ತಾರೆಯೇ ಎನ್ನುವುದೇ ಈ ಚಿತ್ರದ ತಿರಳು. ಇಲ್ಲಿ ಬರಿ ಭೌತಿಕವಾಗಿ ಸಿಗುವುದಲ್ಲ, ಅದನ್ನು ಮೀರಿ ಆತ್ಮಸಾಂಗತ್ಯವನ್ನು ಸ್ಥಾಪಿಸುವುದಾಗಿದೆ.

ಚಾರ್ಲಿ ಪಾತ್ರದಲ್ಲಿ ನಟಿಸಿರುವ ದುಲ್ಕರ್ ಸಲ್ಮಾನ್ ಮತ್ತು ಟೆಸ್ಸಾ ಪಾತ್ರದಲ್ಲಿ ನಟಿಸಿರುವ ಪಾರ್ವತಿ ತಿರುವಟ್ಟು ಇವರಿಬ್ಬರು ಸ್ಕ್ರಿಪ್ಟ್ ಆಯ್ಕೆಯಲ್ಲಿ ಅತ್ಯಂತ ಪ್ರಬುದ್ದರು ಎನ್ನುವುದನ್ನು ಈ ಚಿತ್ರದ ಮೂಲಕ ಮತ್ತೆ ಸಾಬೀತು ಮಾಡಿದ್ದಾರೆ. ಅದರಲ್ಲಿಯೂ ಪಾರ್ವತಿಯ ಆಯ್ಕೆಗಳು ಅದ್ಭುತವಾಗಿರುತ್ತವೆ. ಟೆಸ್ಸಾ ಎಲ್ಲ ವಿಷಯವನ್ನು ಸಹಜವಾಗಿ ತೆಗೆದುಕೊಳ್ಳುವ, ರೂಢಿಗಳನ್ನು ಗಂಭೀರವಾಗಿ ಮುರಿಯುವ ಒಂದು ಸಂಕೀರ್ಣ ಪಾತ್ರ. ಜೋಡಿಯಲ್ಲದ ಚಪ್ಪಲಿ ಹಾಕುವ, ಸುಲಭವಾಗಿ ಸಿಮ್ ಕಾರ್ಡ್ ಮುರಿದು ಹಾಕುವ, ಇಂದಿನದರ ಬಗ್ಗೆ ಮಾತ್ರ ಯೋಚಿಸುವ ವ್ಯಕ್ತಿತ್ವ ಈ ಪಾತ್ರದು. ನಿರಂತರ ಅನ್ವೇಷಣೆ ಮತ್ತು ಕಲೆ ಇವೆರಡು ಆತ್ಮೀಯ ಸಂಗಾತಿಗಳು ಇವಳಿಗೆ. ಚಾರ್ಲಿ ಸಹ ಅಷ್ಟೇ ಸಂಕೀರ್ಣತೆಯಿಂದ ಕೂಡಿರುವ ಪಾತ್ರ. ನಿಜಕ್ಕೂ ಹೀಗೆ ಬದುಕಬಹುದಾ ಎನಿಸುವಂತಹದು. ಬದುಕಬಹುದು ಎಂದು ಕನ್ವಿನ್ಸ್ ಮಾಡುವ ಶಕ್ತಿ ಹೊಂದಿರುವಂತಾಗಿದೆ. ಈ ಪಾತ್ರಗಳು ಅದ್ಭುತ ಎನಿಸಿಕೊಳ್ಳಲು ಮುಖ್ಯ ಕಾರಣ ಬರವಣಿಗೆ ಆಗಿದೆ.

ಈ ಚಿತ್ರದ ನಿರ್ದೇಶಕರಾದ ಮಾರ್ಟಿನ್ ಪ್ರಕ್ಕಟ್ ಒಂದು ಸುಂದರ ಪೇಂಟಿಂಗ್ ಅನ್ನು ನಮ್ಮ ಮುಂದೆ ಇಟ್ಟಿದ್ದಾರೆ. ತಮ್ಮ ಕಲ್ಪನೆಯ ಕೂಸನ್ನು ಅತ್ಯಂತ ಕುಶಲತೆಯಿಂದ ಒಪ್ಪಿಸಲು ಯಶಸ್ವಿಯಾಗಿದ್ದಾರೆ. ತಮ್ಮ ನೇಟಿವಿಟಿಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅದಕ್ಕೆ ಪೂರಕವಾಗಿ ಪೋಷಕ ನಟರೆಲ್ಲರು ಪಾತ್ರಗಳಲ್ಲಿ ಜೀವಿಸಿದ್ದಾರೆ. ಇದರಲ್ಲಿಯ ಮನೆ, ಸಮುದ್ರ, ಕಾಡು, ಪುಸ್ತಕಗಳೆಲ್ಲವೂ ಪಾತ್ರಗಳಾಗುತ್ತವೆ. ಮೌನದಲ್ಲಿಯೇ ತಮ್ಮ ಸಂವೇದನೆಯನ್ನು ಅಭಿವ್ಯಕ್ತಗೊಳಿಸುತ್ತವೆ. ಈ ಚಿತ್ರ ತುಂಬ ಕಲರ್ ಫುಲ್ ಆಗಿದೆ. ಬಣ್ಣಗಳ ಪ್ರಮಾಣ ಅಧಿಕವಾದರು ಸಹ ಅವು ಎಲ್ಲಿಯೂ ನೋಡುಗನಿಗೆ ಅತಿ ಎನಿಸದೆ ನೇರವಾಗಿ ಮನಸ್ಸಿನ ಆಳಕ್ಕೆ ಇಳಿಯುತ್ತವೆ. ಇದಕ್ಕೆ ಸಿನಿಮಾಟೋಗ್ರಾಫರ್ ಜಾಮೋನ್ ಟಿ ಜಾನ್ ಕಾರಣ. ಇವರು ಇಲ್ಲಿ ಬಣ್ಣಗಳ ಜೊತೆ ಆಟ ಆಡಿದ್ದಾರೆ. ಮನೆಯನ್ನು ಕತ್ತಲು, ಬೆಳಕಿನ ಶೇಡ್ ನಲ್ಲಿ ತೋರಿಸುವುದಾಗಲಿ, ಜಾತ್ರೆ ಏರಿಯಲ್ ಮತ್ತು ಲಾಂಗ್ ಶಾಟ್ ಆಗಲಿ ಅದ್ಭುತ ಎನ್ನುವ ಹಾಗಿದೆ. ಇವುಗಳಿಗೆಲ್ಲ ಕಳಶವಿಟ್ಟಂತೆ ಗೋಪಿ ಸುಂದರ ಅವರ ಹಿನ್ನಲೆ ಸಂಗೀತ ಮತ್ತು ಹಾಡುಗಳಿವೆ. ಪ್ರತಿಯೊಂದು ಭಾವವನ್ನು ವ್ಯಕ್ತಪಡಿಸುವಾಗ ಹಿನ್ನೆಲೆಯಲ್ಲಿ ಬರುವ ಸಂಗೀತ ಮಂತ್ರಮುಗ್ಧರನ್ನಾಗಿ ಮಾಡುತ್ತೆ. ಹಾಡುಗಳು ಪದೇ ಪದೇ ಕೇಳುವಂತಿವೆ. ಈ ಚಿತ್ರದ ಬಗ್ಗೆ ಹೇಳಲು ಇನ್ನೂ ಸಾವಿರ ಮಾತುಗಳಿವೆ. ಸಧ್ಯಕ್ಕೆ ಇಷ್ಟು ಸಾಕು ಎನಿಸುತ್ತದೆ. ಒಮ್ಮೆ ಈ ಚಿತ್ರ ನೋಡಿ.

ನಿಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು vinay99164@gmail.com





Leave a Reply

Your email address will not be published. Required fields are marked *

error: Content is protected !!