ಸುದ್ದಿ ಮನೆಯೊಳಗಿನ ಪ್ರತಿಭೆಗಳನ್ನ ಗುರುತಿಸೋದ್ಯಾರು?

582

ಈ ಪ್ರಶ್ನೆ ನನ್ನ ಮನಸ್ಸಿನಲ್ಲಿ ಸದಾ ಕೊರೆಯುತ್ತಲೇ ಇದೆ. ಇದರ ಬಗ್ಗೆ ಮಾಧ್ಯಮದ ನನ್ನ ಅನೇಕ ಸ್ನೇಹಿತರೊಂದಿಗೆ ಚರ್ಚಿಸಿದ್ದೇನೆ. ಇದರ ಜೊತೆಗೆ ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಪ್ರಶ್ನೆಗಳನ್ನ ಎತ್ತಿದ್ದೇನೆ. ಅವಕಾಶ ಸಿಕ್ಕಾಗ ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಮಾತ್ನಾಡಿದ್ದೇನೆ. ಸುದ್ದಿ ಮನೆಯೊಳಗಿರುವ ಪ್ರತಿಭೆಗಳನ್ನ ಗುರುತಿಸಿ, ಅವರಿಗೆ ಗೌರವ, ಸನ್ಮಾನ ಮಾಡೋದ್ಯಾರು ಎಂದು. ಯಾಕಂದ್ರೆ ಬಹುತೇಕ ಪ್ರಶಸ್ತಿ, ಸನ್ಮಾನ, ಗೌರವ ಪಡೆದುಕೊಳ್ಳುವವರು ವರದಿಗಾರರು ಹಾಗೂ ಸ್ಕ್ರೀನ್ ಮೇಲೆ ಕಾಣಿಸುವ ನಿರೂಪಕರು. ಇದು ಮುದ್ರಣ ಹಾಗೂ ದೃಶ್ಯ ಮಾಧ್ಯಮ ಎರಡಕ್ಕೂ ಅನ್ವಯಿಸುತ್ತೆ.

ಬೆಳಗ್ಗೆ ಎದ್ದು ಓದುವ ಪತ್ರಿಕೆ ಹಿಂದೆ ನೂರಾರು ಜನರ ಪರಿಶ್ರಮವಿರುತ್ತೆ. ವರದಿ, ಲೇಖನ, ವಿಶೇಷ ಪುರವಣಿಗಳನ್ನ ಓದುವಾಗ ಅಲ್ಲಿಯ ಮಾಹಿತಿಯ ಹೂರಣಕ್ಕೆ ಓದುಗರು ಮೆಚ್ಚುವ ಅಡಿಬರಹ ಕೊಡುವ ಸಹಸಂಪಾದಕ, ಸುದ್ದಿಸಂಪಾದಕ, ಆ ಪುಟಕ್ಕೊಂದು ಅಂದದ ರೂಪ ಕೊಡುವ ಪುಟ ವಿನ್ಯಾಸಗಾರ, ಓದುಗರ ಕಣ್ಮನ ಸೆಳೆಯುವ ಚಿತ್ರಗಳನ್ನ ನೀಡುವ ಫೋಟೋಗ್ರಾಫರ್, ಅಚ್ಚುಕಟ್ಟಾಗಿ ಪ್ರಿಂಟ್ ಹಾಕುವ ಸಿಬ್ಬಂದಿ.. ಹೀಗೆ ಹೇಳ್ತಾ ಹೋದ್ರೆ ನಿಮ್ಗೆ ಕಾಣದ ಜೀವಗಳು ಯಾವುದೇ ಪ್ರಶಸ್ತಿ, ಗೌರವಗಳ ಅಪೇಕ್ಷೆಯಿಲ್ಲದೆ ಕೆಲಸ ಮಾಡ್ತಿವೆ. ಇಂಥವರನ್ನ ಗುರುತಿಸಿ ಅವರ ಕಾರ್ಯಕ್ಕೂ ಒಂದು ಮೆಚ್ಚುಗೆ ಹೇಳಬೇಕು ಅಲ್ವಾ..

ನೀವು ಯಾವಾಗಂದ್ರೆ ಆವಾಗ ಆನ್ ಮಾಡಿ ನೋಡುವ ಸುದ್ದಿ ವಾಹಿನಿಯಲ್ಲಿಯೂ ನೂರಾರು ಜನರ ಪರಿಶ್ರಮವಿದೆ. ನೀವು ನೋಡುವ ಟಿವಿ ಸ್ಕ್ರೀನ್ ಹೃನ್ಮನ ಸೆಳೆಯಲು ಹತ್ತಾರು ಕೈಗಳ ಕೆಲಸವಿರುತ್ತೆ. ಡೆಸ್ಕ್ ನಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುವ ಕಾಪಿ ಎಡಿಟರ್ಸ್, ಬಿಪಿ( ಬುಲೆಟಿನ್ ಪ್ರೊಡ್ಯೂಸರ್), 4ಕೆ ಕ್ಯಾಮೆರಾ ವಿಡಿಯೋ ಇರ್ಲಿ, ಮೊಬೈಲ್ ಕ್ಯಾಮೆರಾ ವಿಡಿಯೋ ಇರ್ಲಿ, ಅದ್ಕೊಂದು ಹೊಸ ಟಚ್ ಕೊಟ್ಟು ಸ್ಟೋರಿಗೆ ಜೀವ ತುಂಬುವ ವಿಡಿಯೋ ಎಡಿಟರ್ಸ್, ಸುದ್ದಿ, ವಿಶೇಷ ವರದಿ, ಸಂದರ್ಶನ ಸೇರಿದಂತೆ ಪ್ರತಿ ಕಾರ್ಯಕ್ರಮಕ್ಕೂ ಮೆರಗು ಬರವಂತೆ ಮಾಡುವ ಗ್ರಾಫಿಕ್ಸ್ ಟೀಂ, ಸರಿಯಾದ ಟೈಂಗೆ ಸರಿಯಾದ ರೀತಿಯಲ್ಲಿ ಕಾರ್ಯಕ್ರಮ ಆನ್ ಏರ್ ಆಗುವಂತೆ ನೋಡಿಕೊಳ್ಳುವ ಪ್ರೊಡಕ್ಷನ್ ವಿಭಾಗ, ಪಿಸಿಆರ್ ಸೆಕ್ಷನ್, ಬ್ರೇಕಿಂಗ್ ಅನ್ನೋ ಹಾಟ್ ಶೀಟ್ ನಲ್ಲಿ ಕುಳ್ತಿರುವವರು, ತಮ್ಮ ಕಾರ್ಯ ಕ್ಷೇತ್ರದ ಜೊತೆಗೆ ಸುದ್ದಿ, ಕಾರ್ಯಕ್ರಮ, ಪ್ರೋಮೋಗಳಿಗೆ ವಾಯ್ಸ್ ಕೊಡುವವರು ಸೇರಿದಂತೆ ಕ್ಯಾಬ್ ಡ್ರೈವರ್ ತನಕ ಶ್ರದ್ಧೆಯಿಂದ ಕೆಲಸ ಮಾಡುವವರಿದ್ದಾರೆ.

ಹೀಗೆ ಡೆಸ್ಕ್ ನಲ್ಲಿ ಕೆಲಸ ಮಾಡುವ ಯಾವುದೋ ಒಂದು ಟೀಂ ಇಲ್ಲಂದ್ರೂ ಓದುಗರಿಗೆ, ನೋಡುಗರಿಗೆ ಸರಿಯಾದ ಟೈಂಗೆ ಸುದ್ದಿ ಸಿಗಲ್ಲ. ಹೀಗಾಗಿ ಇಲ್ಲಿ ಉತ್ತಮವಾಗಿ ಕೆಲಸ ಮಾಡುವವರನ್ನ ಗುರುತಿಸಿ ಮಾಧ್ಯಮ ಸಂಸ್ಥೆಗಳು, ಪತ್ರಿಕೋದ್ಯಮ ಕ್ಷೇತ್ರದ ಸಂಘ, ಸಂಸ್ಥೆಗಳು ಗೌರವಿಸಬೇಕು. ಅಂದಾಗ ಇವರಿಗೂ ಹೊಸ ಹುರುಪು ಬರುತ್ತೆ. ಆಫೀಸ್ ನಲ್ಲಿ ಕೆಲಸ ಮಾಡ್ಕೊಂಡು ತೆರೆಮರೆಯಲ್ಲಿದ್ದ ನನ್ನನ್ನು ಗುರುತಿಸಿದ್ರಲ್ಲ ಅನ್ನೋ ಖುಷಿ ಇರುತ್ತೆ. ಇದ್ರಿಂದ ಇನ್ನಷ್ಟು ಸಂತೋಷದಿಂದ ಕೆಲಸ ಮಾಡ್ತಾರೆ. ಆದ್ರೆ, ಇದು ಆಗ್ತಿಲ್ಲ. ಜನರ ಸಂಪರ್ಕದಲ್ಲಿರುವ ವರದಿಗಾರರು ಹಾಗೂ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಆ್ಯಂಕರ್ಸ್ ಗಳಿಗೆ ಮಾತ್ರ ಪ್ರಶಸ್ತಿ, ಪುರಸ್ಕಾರ ಸೀಮಿತವಾಗ್ತಿದೆ. ಇದು ಆಗಬಾರದು. ಯಾಕಂದ್ರೆ, ಇವರುಗಳ ಜೊತೆ ಇನ್ನೂ ಇದ್ದಾರೆ. ಅವರನ್ನೂ ಸಹ ಗುರುತಿಸಬೇಕಾಗಿದೆ.

ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ, ಮಾಧ್ಯಮ ಅಕಾಡಮಿ ಮಟ್ಟದಲ್ಲಿ ಪ್ರಶಸ್ತಿಗಳನ್ನ ನೀಡಲಾಗುತ್ತೆ. ಹೀಗೆ ಪ್ರಶಸ್ತಿ ನೀಡುವ ಸಂಘ, ಸಂಸ್ಥೆಗಳು, ಅಕಾಡಮಿಗಳು ಆಫೀಸ್ ಒಳಗೆ ಕೆಲಸ ಮಾಡುವ ಪ್ರತಿಭೆಗಳನ್ನ ಗುರುತಿಸಬೇಕು. ಹೀಗಾಗಿ ಪತ್ರಿಕೆ, ಸುದ್ದಿ ವಾಹಿನಿಗಳ ಮುಖ್ಯಸ್ಥರಿಗೆ ಪತ್ರದ ಮೂಲಕ, ಇಂಥಾ ವಿಭಾಗಕ್ಕೆ ನಿಮ್ಮ ಆಫೀಸ್ ನಿಂದ ಇಷ್ಟು ಜನರನ್ನ ಆಯ್ಕೆ ಮಾಡಿ ಕಳಿಸಬಹುದು. ಅವರನ್ನ ನಾವು ಗೌರವಿಸುತ್ತೇವೆ ಅಂತಾ ಹೇಳಿದಾಗ, ಆಯಾಯ ಮಾಧ್ಯಮ ಸಂಸ್ಥೆಗಳು ತಮ್ಮಲ್ಲಿನ ಸಿಬ್ಬಂದಿಯನ್ನ ಆಯ್ಕೆ ಮಾಡಿ ಸೂಚಿಸ್ತಾರೆ. ಅಂತವರಿಗೊಂದು ಗೌರವ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.

ವಿಶೇಷ ವರದಿಗೋ, ಕುಟುಕು ಕಾರ್ಯಾಚರಣೆಗೋ, ಅಭಿವೃದ್ಧಿ ಪತ್ರಿಕೋದ್ಯಮ ಕ್ಷೇತ್ರಕ್ಕೋ ವರದಿಗಾರರಿಗೆ ಪ್ರಶಸ್ತಿ ನೀಡುವಾಗ ಕ್ಯಾಮೆರಾಮನ್ ಮರೆಯಬಾರದು. ಯಾಕಂದ್ರೆ, ಇಂಥಾ ಸುದ್ದಿಗಳಿಗೆ ಸಾಕ್ಷ್ಯ ಒದಗಿಸೋದು ಇವರು ತೆಗೆದ ಫೋಟೋ, ವಿಡಿಯೋಗಳು. ಈ ರೀತಿಯ ಚರ್ಚೆಗಳು ಇಂದು ಸಿನಿಮಾ ಜಗತ್ತಿನಲ್ಲಿ ನಡೆಯುತ್ತಿದೆ. ಪತ್ರಿಕೋದ್ಯಮ ಕ್ಷೇತ್ರ ಅನ್ನೋದು ವೃತ್ತಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನ ಹೊಂದಿರುವ ಕ್ಷೇತ್ರ. ಇದು ಉಳಿದೆಲ್ಲ ಕ್ಷೇತ್ರಗಳಿಗಿಂತ ಮುಖ್ಯವಾದದ್ದು ಮತ್ತು ಶ್ರೇಷ್ಠವಾದದ್ದು. ಹೀಗಾಗಿ ಎಲ್ಲರೂ ಪತ್ರಕರ್ತರಾಗಲು ಸಾಧ್ಯವಿಲ್ಲ. ಇಲ್ಲಿ ಬರೀ ಸಂಬಳಕ್ಕಾಗಿ ದುಡಿಯುವವರು ಮಾತ್ರವಿಲ್ಲ. ಅದರಾಚೆಗೂ ಒಳ್ಳೆಯ ಸಮಾಜ ನಿರ್ಮಾಣದ ಪರಿಕಲ್ಪನೆ ಹೊಂದಿರುವ ಪತ್ರಕರ್ತರಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಇವರು ತಮ್ಮ ಬರವಣಿಗೆ, ಸುದ್ದಿ ಸಂಪಾದನೆ, ಲೇಖನ, ಕಾರ್ಯಕ್ರಮದ ಮುಖೇನ ಉತ್ತಮ ಸಂದೇಶ ನೀಡುವ ಕೆಲಸ ಮಾಡ್ತಾರೆ.

ಇದರ ಜೊತೆಗೆ ಪತ್ರಿಕೆ, ಸುದ್ದಿ ವಾಹಿನಿಗಳು ತಂತಮ್ಮ ಸಂಸ್ಥೆಯ ವರ್ಷಾಚರಣೆ ಟೈಂನಲ್ಲಿ ತಮ್ಮಲ್ಲಿರುವ ಬೆಸ್ಟ್ ಸಿಬ್ಬಂದಿಯನ್ನ ಗುರುತಿಸಿ ಸನ್ಮಾನಿಸಬೇಕು. ಆಗ ಇತರರಿಗೂ ಸ್ಪೂರ್ತಿಯಾಗುತ್ತೆ. ವರ್ಷದಿಂದ ವರ್ಷಕ್ಕೆ ಬೇರೆ ಬೇರೆಯವರನ್ನ ಆಯ್ಕೆ ಮಾಡುವುದ್ರಿಂದ ಸಿಬ್ಬಂದಿ ನಡುವೆ ಉತ್ತಮ ಕೆಲಸಕ್ಕೆ ಸ್ಪರ್ಧೆಯಾಗುವ ಸಾಧ್ಯತೆ ಇರುತ್ತೆ. ಇದು ಸಂಸ್ಥೆಯ ಬೆಳವಣಿಗೆಗೂ ಕಾರಣವಾಗುತ್ತೆ. ಅವರಿಗೆ ಕೊಟ್ಟರು, ಇವರಿಗೆ ಕೊಡ್ಲಿಲ್ಲ ಅನ್ನೋ ಮಾತುಗಳು ಬರುತ್ತವೆ ಅನ್ನೋ ಯಾವ ನೆಪಗಳನ್ನ ಸಂಸ್ಥೆಯ ಮುಖ್ಯಸ್ಥರು ಹೇಳಬಾರದು. ಯಾಕಂದ್ರೆ, ತಮ್ಮ ವೃತ್ತಿ ಬದುಕಿನಲ್ಲಿ ಇಂತಹದೊಂದು ಪ್ರಶಸ್ತಿ ಬಂದಿದೆ ಅಂದಾಗ ಡೆಸ್ಕ್ ನಲ್ಲಿ ಕೆಲಸ ಮಾಡಿದಕ್ಕೂ ಸಾರ್ಥಕವಾಯ್ತು ಅನ್ನೋ ಭಾವ ಅವರಲ್ಲಿರುತ್ತೆ. ಈ ಮೂಲಕ ಸುದ್ದಿಮನೆಯಲ್ಲಿ ಸದ್ದಿಲ್ಲದೆ ಕೆಲಸ ಮಾಡುವ ಪ್ರತಿಭೆಗಳನ್ನ ಗೌರವಿಸಬೇಕಿದೆ. ಹೀಗಾಗಿ ಬದಲಾವಣೆ ಬಯಸುವ ರಂಗದಿಂದಲೇ ಮೊದ್ಲು ಬದಲಾವಣೆಯಾಗಬೇಕಿದೆ…




Leave a Reply

Your email address will not be published. Required fields are marked *

error: Content is protected !!