ಸಿಂದಗಿ ಯುವಕನಿಗೆ 39 ಲಕ್ಷ ರೂ ವಂಚಿಸಿದ್ದ ಆನ್ಲೈನ್ ನಕಲಿ ಸುಂದರಿ ಅಂದರ್

1214

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಅವರು ಗುರುವಾರ ಮಾಹಿತಿ ನೀಡಿದರು. ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 3 ತಿಂಗಳಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 27 ಆನ್ಲೈನ್ ವಂಚನೆ ಪ್ರಕರಣಗಳು ನಡೆದಿದ್ದು, ಅದರಲ್ಲಿ 42 ಲಕ್ಷ ರೂಪಾಯಿ ವಂಚನೆ ನಡೆದಿತ್ತು ಎಂದು ತಿಳಿಸಿದರು.

ಆನ್ಲೈನ್ ವಂಚನೆ ಪ್ರಕರಣದಲ್ಲಿ 32 ಲಕ್ಷದ 32 ಸಾವಿರ ರೂಪಾಯಿ ವಸೂಲಿ ಮಾಡಲಾಗಿದೆ. ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕನಿಗೆ, ಆನ್ಲೈನ್ ಮೂಲಕ ಬರೋಬ್ಬರಿ 39 ಲಕ್ಷ ರೂಪಾಯಿ ತನಕ ಮೋಸ ಮಾಡಲಾಗಿದೆ. ಈ ಸಂಬಂಧ ಯುವಕ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ವಂಚಕಿ ಮಂಜುಳಾ ಕೆ.ಆರ್ ಹಾಗೂ ಈಕೆಯ ಗಂಡ ಸ್ವಾಮಿ ಬಸವರಾಜುನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆನ್ಲೈನ್ ಸುಂದರಿ ಬೆನ್ನು ಹತ್ತಿದ ವಿಜಯಪುರ ಪೊಲೀಸರಿಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿಯ ಲಿಂಕ್ ತೋರಿಸಿತ್ತು. ಫೇಸ್ ಬುಕ್ ನಲ್ಲಿ ಸುಂದರವಾದ ಯುವತಿಯ ಫೇಕ್ ಫೋಟೋ ಹಾಕಿದವಳ ಅಸಲಿ ಬಣ್ಣ ಪೊಲೀಸರಿಗೆ ಅಲ್ಲಿ ತಿಳಿದಿದೆ. ವಂಚನೆ ಹಣದಲ್ಲಿಯೇ ಐಷಾರಾಮಿ ಜೀವನ ನಡೆಸುತ್ತಿದ್ದಳು. ಕಾರು, ಬೈಕ್, 100 ಗ್ರಾಂ ಚಿನ್ನಾಭರಣ ಖರೀದಿಸಿದ್ದಾಳೆ. ಅಲ್ಲದೇ ಫೈನಾನ್ಸ್ ಕಂಪನಿ ತೆರೆದು ಜನರಿಗೆ ಸಾಲ ನೀಡಿದ್ದಾಳೆ. ಇವಳ ಬ್ಯಾಂಕ್ ಅಕೌಂಟ್ ಮುಟ್ಟುಗೋಲು ಹಾಕಿಕೊಂಡು 6 ಲಕ್ಷ ರೂಪಾಯಿ, ಕಾರು, ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸುಂದರ ಫೋಟೋ ಹಾಕಿ ಫ್ರೆಂಡ್ಸ್ ರಿಕ್ವೆಸ್ಟ್ ಕಳಿಸಿದ ತಕ್ಷಣ ಮಾರು ಹೋಗುವ ಯುವಕರಿಗೆ ಸಾಕಷ್ಟು ಸಲಹೆ ನೀಡುತ್ತಿದ್ದರೂ ಕೇಳದೆ ಹೋಗುತ್ತಿರುವುದು ನಿಜಕ್ಕೂ ದುರಂತ. ತಾನು ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದು, ಶೀಘ್ರದಲ್ಲೇ ಜಿಲ್ಲಾಧಿಕಾರಿ ಆಗುತ್ತೇನೆ ಎಂದು ಹೇಳಿ ಲಕ್ಷ ಲಕ್ಷ ಮೋಸ ಮಾಡಿದವಳು ಕಂಬಿ ಸೇರಿದ್ದಾಳೆ. ಮೋಸ ಹೋದ ಯುವಕನ ಪರಿಸ್ಥಿತಿ ದೇವರೆ ಬಲ್ಲ. ಇನ್ನು ಮುಂದೆ ಆದರೂ ಗೊತ್ತು ಪರಿಚಯ ಇಲ್ಲದವರಿಗೆ ಹಣ ನೀಡುವ ಮೊದಲು ಹತ್ತು ಸಾರಿ ಯೋಚಿಸಿ.




Leave a Reply

Your email address will not be published. Required fields are marked *

error: Content is protected !!