ಸಿಂದಗಿ ಮರ್ಯಾದೆ ತೆಗೆಯುತ್ತಿರುವ ರಸ್ತೆಗಳು..!

578

ಪ್ರಜಾಸ್ತ್ರ ವಿಶೇಷ

ಸಿಂದಗಿ: ದಿನದಿಂದ ದಿನಕ್ಕೆ ಎಲ್ಲವೂ ಬದಲಾಗುತ್ತಿದೆ. ಆದರೆ, ಪಟ್ಟಣದಲ್ಲಿ ಮಾತ್ರ ಉಲ್ಟಾ. ಮೂಲಭೂತ ಸಮಸ್ಯೆಗಳಿಂದ ಸಿಂದಗಿ ಪಟ್ಟಣ ಇಂದಿಗೂ ಪರಿತಪಿಸುತ್ತಿದೆ. ವಿದ್ಯುತ್, ನೀರು, ಸೇರಿದಂತೆ ಸರಿಯಾದ ರಸ್ತೆಗಳಿಲ್ಲದ ಪರಿಣಾಮ ನಿವಾಸಿಗಳ ಗೋಳು ಹೇಳಲಾಗದು. ಬೇಸಿಗೆಯಲ್ಲಿ ಧೂಳಿನ ಮಜ್ಜನ. ಮಳೆಗಾಲದಲ್ಲಿ ಕೆಸರಿನ ಜಳಕ.

ವಿವೇಕಾನಂದ ಸರ್ಕಲ್ ನಿಂದ ಟಿಪ್ಪು ಸುಲ್ತಾನ್ ಸರ್ಕಲ್, ಬಸ್ ನಿಲ್ದಾಣದಿಂದ ಬಸ್ ಡಿಪೋ, ಕೆಇಬಿಯಿಂದ ಅಂಬೇಡ್ಕರ್ ಸರ್ಕಲ್, ಅಂಬಿಗೇರ ಚೌಡಯ್ಯ ಸರ್ಕಲ್ ನಿಂದ ಹಳೆ ಬಜಾರ್ ರಸ್ತೆ, ಕನಕದಾಸ ಸರ್ಕಲ್ ನಿಂದ ಸರ್ಕಾರಿ ಕಾಲೇಜುವರೆಗೂ ಇರುವ ಪ್ರಮುಖ ರಸ್ತೆಗಳ ತುಂಬಾ ಎಲ್ಲಿ ನೋಡಿದರೂ ಗುಂಡಿಗಳು ಬಿದ್ದಿವೆ. ಮಳೆ ನೀರು, ಕೆಸರು ತುಂಬಿಕೊಂಡು ಜನರ ಜೀವದ ಜೊತೆ ಆಟವಾಡುತ್ತಿವೆ.

ರಸ್ತೆ ತುಂಬಾ ನೀರು ನಿಂತುಕೊಂಡಿದ್ದು ಹಂದಿಗಳು ಮತ್ತಷ್ಟು ಗಲೀಜು ಮಾಡುತ್ತಿವೆ. ಇದರಿಂದಾಗಿ ಏರಿಯಾ ದುರ್ನಾತದಿಂದ ತುಂಬಿಕೊಂಡಿದೆ. ಹೀಗಾಗಿ ಜನರುಓಡಾಡುವುದು ಕಷ್ಟವಾಗಿದೆ.

ಕಾಶಿಲಿಂಗ ದೇವುರು, ಶಿವ ಶಂಕರ ಬಡಾವಣೆ ನಿವಾಸಿ

ಇನ್ನು 23 ವಾರ್ಡ್ ವ್ಯಾಪ್ತಿಯ ಒಳಗೆ ಬರುವ ಬಡಾವಣೆಗಳ ಸ್ಥಿತಿ ಇನ್ನೊಂದು ರೀತಿಯ ದರ್ಶನ ಮಾಡಿಸುತ್ತೆ. ಬಹುಶಃ ರಾಜ್ಯದಲ್ಲಿ ಅತ್ಯಂತ ಅವ್ಯವಸ್ಥೆಯ ಪಟ್ಟಣ ಯಾವುದು ಅನ್ನೋ ಸರ್ವೇ ಮಾಡಿದರೆ ಅದು ಸಿಂದಗಿಗೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಿದ್ದಾರೆ ಸ್ಥಳೀಯರು. ಒಳಚರಂಡಿ ಕಾಮಗಾರಿ, ನೀರಿನ ಕಾಮಗಾರಿ, ವಿದ್ಯುತ್ ಕಂಬಗಳ ರಿಪೇರಿ ಹೀಗೆ ಕೆಲಸ ನಡೆಯುತ್ತಿವೆ ಅನ್ನೋ ನೆಪದಲ್ಲಿ ಬೇಕಾಬಿಟ್ಟಿ ಅಗೆಯುವುದು, ಬೇಕಾಬಿಟ್ಟಿ ಮುಚ್ಚುವುದು ನಡೆದಿದೆ ಸ್ಥಳೀಯರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಒಳಚರಂಡಿ ಕಾಮಗಾರಿಯಿಂದ ಎಲ್ಲ ಕಡೆ ರಸ್ತೆ ಅಗೆಯಲಾಗಿದೆ. ಆದರೆ, ಮಳೆ ನೀರು, ಚರಂಡಿ ನೀರು ಸರಾಗವಾಗಿ ಹೋಗುವಂತೆ ಮಾಡಿಲ್ಲ. ಇದರಿಂದಾಗಿ ರಸ್ತೆಗಳು ಹಾಳಾಗಿವೆ. ಎಲ್ಲೆಡೆ ಕೆಸರು ತುಂಬಿಕೊಂಡಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಬೇಕು.

ಶಿವಣ್ಣ ಗಣಿಹಾರ, ಕುರಿಹಟ್ಟಿ ಮಡ್ಡಿ, ಹೆಗ್ಗೆರಪ್ಪ ಗುಡಿ

ಉಪ ಚುನಾವಣೆ ಸಂದರ್ಭದಲ್ಲಿ ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರು ಪಟ್ಟಣದ ರಸ್ತೆ ನೋಡಿ ಮೊದಲು ರಸ್ತೆಗಳನ್ನು ಸರಿ ಮಾಡಬೇಕು. ಮಾಡುತ್ತೇವೆ ಎಂದಿದ್ದರು. ಈ ಬಗ್ಗೆ ಶಾಸಕ ರಮೇಶ ಭೂಸನೂರ ಆಗಲಿ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಆಗಲಿ ಗಮನವೇ ಹರಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತವಾಗುತ್ತಿದೆ. ವಾರ್ಡ್ ಸದಸ್ಯರು ನೋಡಿದರೆ ಅವಿಶ್ವಾಸ ಗೊತ್ತುವಳಿಯಲ್ಲೇ ಕಳೆದು ಹೋಗಿದ್ದಾರೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರು ಬಿಟ್ಟು ಊರೊಳಗೆ ಪಾದಯಾತ್ರೆ ಮಾಡಿದರೆ ಅಭಿವೃದ್ಧಿ ಪರ್ವ ಕಾಣಿಸಲಿದೆ.




Leave a Reply

Your email address will not be published. Required fields are marked *

error: Content is protected !!