ಜವಾರಿ ಮಣ್ಣೆತ್ತು ರೂಪಿಸುವ ಶಿಕ್ಷಕ!

1115

ಉತ್ತರ ಕರ್ನಾಟಕ ಭಾಗದಲ್ಲಿ ಗ್ರಾಮೀಣ ಸೊಗಡಿನ ಹಬ್ಬಗಳು ನಿಜಕ್ಕೂ ಅದ್ಬುತ. ನೆಲಮೂಲದ ಹಬ್ಬಗಳ ಹಿಂದೆ ಗ್ರಾಮ್ಯ ಬದುಕಿದೆ. ಭೂಮಿಯೊಂದಿಗೆ ನೇರ ಸಂಬಂಧವಿಟ್ಟುಕೊಂಡವನು ನೇಗಿಲಯೋಗಿ ಮಾತ್ರ. ಹೀಗಾಗಿ ಭೂತಾಯಿಗೆ ಸಂಬಂಧಿಸಿದ ಹಬ್ಬಗಳು ಬರವಿಲ್ಲ. ಕಾರುಹುಣ್ಣಿಮೆ ಬಳಿಕ ಬರುವ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ.

ಶತಮಾನಗಳಿಂದ ಮಣ್ಣೆತ್ತನ್ನ ಪೂಜಿಸುವ ಮೂಲಕ, ರೈತಕುಲದವರೆಲ್ಲ ಭೂತಾಯಿಯನ್ನ ಸ್ಮರಿಸಿಕೊಳ್ತಾರೆ. ಕೃಷಿ ಕಾಯಕದಲ್ಲಿ ತನಗೆ ಹೆಗಲು ಕೊಡುವ ಎತ್ತುಗಳನ್ನ ಪೂಜಿಸುವ ಹಬ್ಬವಿದು. ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಕಲಗುರಗಿ ಭಾಗದಲ್ಲಿ ಹೆಚ್ಚಾಗಿ ಈ ಸಂಪ್ರದಾಯವಿದೆ. ಹೀಗೆ ಮಣ್ಣಿನಿಂದ ತಯಾರಾಗುವ ಬಸವನನ್ನ ಮಾಡೋದು ಬಹುತೇಕ ಕುಂಬಾರ ಸಮುದಾಯದವರು.

ಮಣ್ಣಿನ ಬಸವನ ತಯಾರಿ ಮಾಡ್ತಿರುವ ಶಿಕ್ಷಕ ಶ್ರೀಕಾಂತಪ್ಪ ಕುಂಬಾರ

ಪಿಓಪಿ ಅಬ್ಬರದ ನಡುವೆ ಸಂಪೂರ್ಣ ಮಣ್ಣಿನಿಂದ ಮಾಡಿದ ಎತ್ತುಗಳನ್ನ ಕಳೆದ 40 ವರ್ಷಗಳಿಂದ ಮಾಡಿಕೊಂಡು ಬರ್ತಿರುವವರು ಶ್ರೀಕಾಂತಪ್ಪ ನಾಗಪ್ಪ ಕುಂಬಾರವರು. ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದವರಾದ ಶ್ರೀಕಾಂತಪ್ಪ ಕುಂಬಾರವರು ವೃತ್ತಿಯಲ್ಲಿ ಶಿಕ್ಷಕರಾದ್ರೂ, ಕುಲಕಸಬು ಪ್ರೀತಿಯಿಂದ ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಮಣ್ಣೆತ್ತಿನ ಹಬ್ಬ ಶುರುವಾಗುವ ಕೆಲ ದಿನಗಳ ಮೊದ್ಲೇ ಈ ಕಾರ್ಯಕ್ಕೆ ಅಣಿಯಾಗ್ತಾರೆ. ಶಾಲೆಗೆ ಹೋಗುವ ಮೊದ್ಲು ಮತ್ತು ಬಂದ ನಂತರ ಬಸವಣ್ಣನ ತಯಾರಿಕೆಯಲ್ಲಿ ತೊಡಗಿಕೊಳ್ತಾರೆ.

ಮಣ್ಣಿನ ಬಸವ ರೂಪುಗೊಳ್ಳುವುದು ಹೇಗೆ?

ಕೆರೆಮಣ್ಣು, ಕುದುರೆ ಲದ್ದಿ ಹಾಗೂ ಬೂದಿಯನ್ನ ಮಿಶ್ರಣ ಮಾಡಿ ನೀರಿನಲ್ಲಿ ಮಣ್ಣನ್ನ ಕಲಿಸಲಾಗುತ್ತೆ. ನಂತರ ಅದನ್ನ ತುಳಿಯಲಾಗುತ್ತೆ. ಈ ಮಣ್ಣನ್ನ ಗಟ್ಟಿಮಾಡುವಷ್ಟರಲ್ಲಿ ಇಡೀ ಮೈಸೋತು ಹೋಗುತ್ತೆ. ಅತ್ಯಂತ ಜಿಗುಟಾದ ಮಣ್ಣನ್ನ ತೆಗೆದುಕೊಂಡು ಮೊದ್ಲು ಕಾಲುಗಳನ್ನ ತಯಾರಿಸ್ತಾರೆ. ಅದು ಸ್ವಲ್ಪ ಒಣಗಿದ ಬಳಿಕ ಮುಖ ಭಾಗ, ನಂತರ ಕಣ್ಣು, ಕಿವಿ, ಕೋಡು ಮಾಡಿ ಬಸವಣ್ಣ ತಯಾರಿಸಲಾಗುತ್ತೆ. ಹೀಗೆ ತಯಾರಾಗುವ ಎತ್ತುಗಳು ದಿನಕ್ಕೆ ಹತ್ತು ಜೋಡಿ ಮಾಡಬಹುದು ಅಂತಾರೆ.

ಶ್ರೀಕಾಂತಪ್ಪನವರ ಕಾರ್ಯಕ್ಕೆ ಪತ್ನಿ ಹಾಗೂ ಮಗನ ಸಾಥ್

ಕುಂಬಾರರು ಮಡಿಕೆಗಳನ್ನ ಮಾಡಿಕೊಂಡು ಬರುತ್ತಿದ್ದ ಕಾರಣದಿಂದ ಮಣ್ಣಿನ ಎತ್ತುಗಳನ್ನ ಮಾಡುವ ಕಾಯಕ ಶುರುವಾಗಿದೆ ಅಂತಾರೆ. ಹೀಗೆ ತಯಾರಾಗುವ ಎತ್ತುಗಳನ್ನ ಮೊದಲು ಮಠ ಹಾಗೂ ಗೌಡರ ಮನೆಗಳಿಗೆ ಕೊಡಲಾಗುತ್ತೆ. ನಂತರ ಇವುಗಳನ್ನ ಮಾರಾಟ ಮಾಡಲಾಗುತ್ತೆ. ಶಿಕ್ಷಕ ಶ್ರೀಕಾಂತಪ್ಪ ಅವರು ಹೇಳುವಂತೆ, ಅವರು ಸಣ್ಣವರಿದ್ದಾಗ 1 ರೂಪಾಯಿಗೆ ಜೋಡಿ ಎತ್ತುಗಳ ಮಾರಾಟವಾದ್ರೆ ಇಂದು 50 ರೂಪಾಯಿಗೆ ಮಾರಾಟವಾಗ್ತಿದೆ.

ಒಲಿದ ಪುರಸ್ಕಾರಗಳು:

ಶಿಕ್ಷಕ ಶ್ರೀಕಾಂತಪ್ಪ ಕುಂಬಾರವರ ಸೇವೆಗೆ ಹಲವು ಪ್ರಶಸ್ತಿಗಳು ಸಂದಿವೆ. 2018ರಲ್ಲಿ ನವದೆಹಲಿಯಲ್ಲಿ ನಡೆದ ಕಲಾಮೇಳದಲ್ಲಿ ಖ್ಯಾತ ಸಾಹಿತಿ ಕುಂ ವೀರಭದ್ರಪ್ಪನವರು ‘ಭಾರತ ಗೌರವ’ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ. ಬಸವ ರತ್ನ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳು ದೊರೆತಿವೆ. ಇವರ ಕಾಯಕಕ್ಕೆ ಪತ್ನಿ ಅನ್ನಪೂರ್ಣ ಹಾಗೂ ಮಗ ನಾಗರಾಜ ಸಾಥ್ ನೀಡ್ತಿದ್ದಾರೆ.

2018ರಲ್ಲಿ ನವದೆಹಲಿಯಲ್ಲಿ ಪಡೆದ ‘ಭಾರತ ಗೌರವ’

ಕಳೆದ 20,30 ವರ್ಷಗಳ ಹಿಂದೆ ಸಿಂದಗಿಯ ನೀಲಗಂಗಮ್ಮಾ ದೇವಸ್ಥಾನದ ಬಳಿಯ ಕುಂಬಾರ ಓಣಿಯ ಪ್ರತಿ ಮನೆಯಲ್ಲಿ ಮಣ್ಣೆತ್ತುಗಳು ಸಿಗ್ತಿದ್ವು. ನಗರದ ಪ್ರತಿ ಓಣಿ ಓಣಿಗಳಲ್ಲಿ ಮೂರ್ನಾಲ್ಕು ಅಡಿ ಎತ್ತರದ ಮಣ್ಣೆತ್ತು ಪ್ರತಿಷ್ಠಾಪಿಸಿ ಪೂಜೆ ಮಾಡ್ತಿದ್ರು. ಐದು ದಿನದ ಬಳಿಕ ವಿಸರ್ಜನೆ ಮಾಡಲಾಗ್ತಿತ್ತು. ಆದ್ರೆ, ಇಂದು ಕಾಲ ಬದಲಾಗಿದೆ. ಸಿಂದಗಿಯಲ್ಲಿ ಹುಡುಕಿದ್ರೆ ಒಂದಿಬ್ಬರ ಮನೆಗಳಲ್ಲಿ ಮಣ್ಣೆತ್ತುಗಳನ್ನ ಮಾಡ್ತಾರೆ. ಸುತ್ತಲಿನ ರಾಜ್ಯಗಳಿಂದ ಬಣ್ಣದ ಎತ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೀಗಾಗಿ ಗ್ರಾಮ್ಯ ಸೊಗಡು ನಿಧಾನವಾಗಿ ಮರೆಯಾಗ್ತಿರೋದು ನೋವಿನ ಸಂಗತಿ.

ಎರಡು ವರ್ಷಗಳ ಹಿಂದೆ ಶ್ರೀಕಾಂತಪ್ಪ ಕುಂಬಾರವರು ಮಾಡಿದ ಬಸವಣ್ಣ



Leave a Reply

Your email address will not be published. Required fields are marked *

error: Content is protected !!