ಇಲ್ಲವಾಗುವುದೆಂದರೆ ಅದು ಭೌತಿಕವಾದ್ದು ಮಾತ್ರವೇ…

1336

ಬಹುತ್ವದ ನೆಲೆಯಲ್ಲಿ ಗಿರೀಶ್ ಕಾರ್ನಾಡ್ ಬದುಕಿದ್ದು ಹೇಗೆ? ಅವರ ನಾಟಕಗಳು ಸಮಾಜದ ಮೇಲೆ ಬೀರಿದ ಪರಿಣಾಮಗಳೇನು ಅನ್ನೋದರ ಕುರಿತು ಸಾಂಸ್ಕೃತಿಕ ಚಿಂತಕರು ಹಾಗೂ ಕವಿಗಳಾದ ಸತ್ಯಮಂಗಲ ಮಹಾದೇವ ಅವರು ಬರೆದ ಲೇಖನ ಇಲ್ಲಿದೆ…

ಗಿರೀಶ್ ಕಾರ್ನಾಡ್ ಎಂದಕೂಡಲೇ ನನಗೆ ನೆನಪಾಗುವುದು ನಾನು ಪಿ.ಯು.ಸಿ.ಯಲ್ಲಿ ಓದುತ್ತಿದ್ದಾಗ ನಮಗೆ ಪಠ್ಯವಾಗಿದ್ದ ಯಯಾತಿ ನಾಟಕ. ಒಮ್ಮೊಮ್ಮೆ ದಾರಿಗುಂಟಾ ಹೋಗುವಾಗ ನಮ್ಮ ದಾರಿ ಒಡೆದು ಎರಡಾಗುವುದಿಲ್ಲವೇ? ನಾವು ಒಂದನ್ನು ಮಾತ್ರ ಆರಿಸಬಹುದು. ಅದರೊಡನೆ ತತ್ಪೂರ್ಥ ನಮ್ಮ ಗುರಿಯೂ ಗೊತ್ತಾಗುತ್ತದೆ ಎಂಬ ಈ ಮಾತುಗಳು ನಾಟಕದ ಪ್ರಾರಂಭದ ಸಾಲುಗಳು ಇವು ನನ್ನ ಇಂದಿಗೂ ಕಾಡುತ್ತವೆ. ಏಕೆಂದರೆ ಬದುಕು ಕತೆಗಳಲ್ಲಿ ವಿಹರಿಸುವುದು ವಾಸ್ಥವದ ಪ್ರಜ್ಞೆಯಲ್ಲೇ ಎಂಬ ಸತ್ಯದ ಅರಿವು ನನಗೆ ಆಗಿದ್ದು ಆ ವಯಸ್ಸಿನಲ್ಲಿಯೇ. ನಾಟಕಗಳಲ್ಲಿ ಕಾರ್ನಾಡ್ ರು ಐತಿಹಾಸಿಕ ಕತೆ ಮತ್ತು ಪಾತ್ರಗಳನ್ನು ವಾಸ್ತವಕ್ಕಿಟ್ಟು ವಿಮರ್ಶೆ ಮಾಡಿ ಅದರ ಬೆಳಕಿನಲ್ಲಿ ಬಂದ ಸತ್ಯವನ್ನು ಕಾಣುವುದು ಕಾಣಿಸುವುದು ಅವರ ಬರಹಗಳಲ್ಲಿ ಕಾಣಬರುವ ಒಂದು ವಿಶಿಷ್ಟತೆ.

ಈ ಯಯಾತಿ ನಾಟಕ ಆಗತಾನೆ ಯೌವ್ವನದ ಹೊಸ್ತಿಲಲ್ಲಿದ್ದ ನಮಗೆ ಯೌವ್ವನವನ್ನು ಕೊಟ್ಟು ಮರಳಿ ಪಡೆಯುವ ಒಂದು ವಿಲಕ್ಷಣ ಮನೋವ್ಯಾಪಾರವನ್ನು ಕಾಣಿಸಿದ್ದರಿಂದ, ನಮಗೆ ಯೌವನ ಎಂದರೇನು ? ಎಂದು ಯೋಚಿಸುವಷ್ಟು ಮಟ್ಟಿಗೆ ನನ್ನನ್ನು ಚಿಂತೆಗೀಡುಮಾಡಿತ್ತು. ನಂತರ ಪದವಿ ತರಗತಿಗತಿಯಲ್ಲಿ ಕಾರ್ನಾಡ್ ರ ‘ತುಘಲಕ್’ ನಾಟಕ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಆಗುವ ಪಲ್ಲಟಗಳು ಹೇಗೆ ಸಮಾಜದ ಮೇಲೆ ಪ್ರಭಾವಬೀರುತ್ತವೆ ಮತ್ತು ಮನುಷ್ಯನ ನಡುವಿನ ಈ ದೇವರ ಕುರಿತಾದ ನಿಲುವುಗಳಲ್ಲಿ ಆತ ವಿಹರಿಸುವ ಮನೋವೈಜ್ಞಾನಿಕ ಚಿತ್ರಣ ನನಗೆ ತುಘಲಕ್ ನಾಟಕ ಪಾಠವನ್ನು ಓದಿದ್ದರಿಂದ ನಂತರ ನೋಡಿದ್ದರಿಂದ ಮನದಟ್ಟಾಗಿದ್ದು.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ನಾಟಕಕಾರ. ಅವರ ಈ ನಾಟಕಗಳ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಬಂದಾಗ ಅದು ಕಾರ್ನಾಡ್ ರಿಗೆ ಅಥವಾ ಕನ್ನಡಕ್ಕೆ ಮಾತ್ರ ಬಂದ ಪ್ರಶಸ್ತಿಯಾಗಿರಲಿಲ್ಲ ಕನ್ನಡ ನಾಟಕಗಳಲ್ಲಿ ದುಡಿಯುವ ನಟರ ಆತ್ಮಾಭಿಮಾನವನ್ನು ಹೆಚ್ಚಿಸಿತು ಎಂಬುದು ವಿಶಿಷ್ಟವಾದದ್ದು. ಬಹುಮುಖ ಪ್ರತಿಭೆಯ ಕಾರ್ನಾಡ್ ರಲ್ಲಿ ಒಬ್ಬ ನಾಟಕಕಾರ ಮಾತ್ರ ಇರಲಿಲ್ಲ ಸದಾ ಕ್ರಿಯಾಶೀಲನಾದ ಒಬ್ಬ ಒಳ್ಳೆಯ ನಟ ಕೂಡ ಇದ್ದ ಎನ್ನುವುದಕ್ಕೆ ಅವರು ಅಭಿನಯಿಸಿದ ಚಿತ್ರ ಸಂತಶಿಶುನಾಳ ಶರೀಫ ಚಿತ್ರ ಸಾಕ್ಷಿಯಾಗಿದೆ ಈ ಚಿತ್ರದಲ್ಲಿನ ಗುರು ಗೋವಿಂದ ಭಟ್ಟರಕ್ರಾಂತಿಕಾರಕ ನಿಲುವಿನ ಪಾತ್ರದಲ್ಲಿ ಅವರು ಅಭಿನಯಿಸಿದ್ದು ನಾವು ಗುರುಗೋವಿಂದಭಟ್ಟರನ್ನು ನೋಡಿದಷ್ಟೇ ಇಂದಿಗೂ ಅನುಭವಸಾಧ್ಯವಾಗುವಂತೆ ಮಾಡಿದೆ. ಪಾತ್ರಗಳನ್ನು ಮಾಡುವುದು ಎಂದರೆ ಅಭಿನಯಿಸುವುದು ಮಾತ್ರವಲ್ಲ ಆ ಪಾತ್ರವೇ ತಾನಾಗುವಾಗ ಆ ಪಾತ್ರವು ಹೊಂದಬೇಕಾದ ನೈತಿಕತೆಯನ್ನು ಪಾತ್ರಧಾರಿಯೂ ಹೊಂದಬೇಕಾಗುತ್ತದೆ ಆಗ ಮಾತ್ರ ಆ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಡಾ.ರಾಜ್ ಕುಮಾರ್ ನಂತರದಲ್ಲಿ ಅಂತಹ ಕೆಲವೇ ಪಾತ್ರಗಳನ್ನು ಕಾರ್ನಾಡ್ ಅಭಿನಯಿಸಿದ್ದು ಈ ಚಲನಚಿತ್ರದಲ್ಲಿ ಎಂದು ನಾನು ಭಾವಿಸುತ್ತೇನೆ.

ವಯೋ ಸಹಜ ಅನಾರೋಗ್ಯದಿಂದ ಇಂದು ಅವರು ನಮ್ಮನ್ನು ಅಗಲಿದ್ದಾರೆ. ಇಂದು ಅವರನ್ನು ನೆನಪಿಸಿಕೊಳ್ಳುವುದು ಮತ್ತು ನಂತರ ಅವರ ನೆನಪಿನಲ್ಲಿ ಉಳಿಯುವುದು ಒಂದು ಪ್ರಕ್ರಿಯೆ. ಅವರು ಸಾಧಿಸಿದ ಸಾಧನೆಗಳು ಕನ್ನಡವನ್ನು ಜಾಗತಿಕಮಟ್ಟದಲ್ಲಿ ಬೆಳಗಿಸಿದವು ಎಂಬುದು ನಮ್ಮ ಕನ್ನಡದ ಹೆಮ್ಮೆ. ಆದರೆ ಅವರ ವಿಭಿನ್ನ ವ್ಯಕ್ತಿತ್ವಗಳನ್ನು ಅರ್ಥಮಾಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇನೆ. ಕಾರ್ನಾಡ್ ರ ಮತ್ತೊಂದು ವ್ಯಕ್ತಿತ್ವ ಸಾಮಾಜಿಕ ಕಾರ್ಯಕರ್ಯಕರ್ತನಾಗಿ ದುಡಿಯುವುದು. ವಿಚಾರಗಳಿಗೆ ದಕ್ಕೆಯಾದಾಗ ನೆಲ,ಜಲ,ಅಹಾರ ಕುರಿತಾದ ಯಾವುದೇ ಸಮಸ್ಯೆಗಳಿರಲಿ ಅವರು ತಮ್ಮ ಅನಾರೋಗ್ಯ ಸ್ಥಿತಿಯಲ್ಲೂ ಬಂದು ಭಾಗವಹಿಸಿ ನಾನು ‘ಅರ್ಬನ್ ನಕ್ಸಲ್’ ಎಂದು ಬೋರ್ಡ್ ಹಾಕಿಕೊಳ್ಳುವ ಎದೆಗಾರಿಕೆಯ ಸಾಹಿತಿಯಾಗಿದ್ದಿದ್ದು ಇವತ್ತಿಗೆ ಇತಿಹಾಸವಾಗಿದೆ.

‘ಆಡಾಡತಾ ಆಯುಶ್ಯ’ ಅವರ ಆತ್ಮಕಥನ. ವ್ಯಕ್ತಿಯೊಬ್ಬನು ದೈಹಿಕವಾಗಿ ಕಣ್ಮರೆಯಾಗುವುದರೊಂದಿಗೆ ಒಂದು ತಲೆಮಾರಿನ ಮನೋಸ್ಪಂದನೆಯೂ ಇಲ್ಲವಾಗುತ್ತದೆ. ಏಕೆ ಈ ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತಿದ್ದೇನೆ ಎಂದರೆ ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಗಳು ವಿಚಾರಗಳನ್ನು ಸಹಿಸಿದ ಉಗ್ರತೆಯಿಂದ ಆದದ್ದು ಎಂಬುದು ನಿರ್ವಿವಾದ. ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಭಿನಾಭಿಪ್ರಾಯಗಳನ್ನು ಹೇಳಿಕೊಳ್ಳುವ ವಾತಾವರಣ ಇಲ್ಲವಾಗಿದೆ ಎಂದರೆ ಅದು ರೋಗಗ್ರಸ್ಥ ಸಮಾಜ ಎಂದು ನನ್ನ ಭಾವನೆ. ಇಂತಹ ರೋಗಗ್ರಸ್ಥ ಸಮಾಜದ ನಡುವೆ ಒಂದು ಗಟ್ಟಿದನಿಯಾಗಿ ನಿಲ್ಲುವುದು ಎಂದರೆ ಪ್ರಾಣವನ್ನೇ ಪಣಕ್ಕಿಟ್ಟು ತಾನು ನಂಬಿದ ಸಿದ್ದಾಂತವನ್ನು ಬದುಕುವುದು ಬರಹಗಾರನಿಗೆ ಇರುವ ಒಂದು ಸವಾಲು. ಇಂತಹ ಸವಾಲುಗಳನ್ನು ಸ್ವೀಕರಿಸಿ ಬದುಕುವುದು ಮತ್ತು ಬದುಕಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ.

ನನ್ನ ಈ ಮಾತುಗಳಲ್ಲಿ ನಾವು ಹೆಚ್ಚು ಅವರ ಸಾಧನೆಗಳನ್ನು ಬಣ್ಣಿಸಿಲ್ಲ ಕಾರಣ ಅವುಗಳು ತಾವು ಓದಿಕೊಳ್ಳಬಹುದು ಆದರೆ ಒಬ್ಬ ಸಾಹಿತಿ, ನಾಟಕಕಾರ ತನ್ನ ಸಮಕಾಲೀನ ಸಮಾಜಕ್ಕೆ ಸ್ಪಂದಿಸಿ ಬದುಕಬೇಕಾದ ಮಾದರಿಯನ್ನು ನಾನು ಕಾರ್ನಾಡ್ ರಲ್ಲಿ ನೋಡಲು ಯತ್ನಿಸಿದ್ದೇನೆ. ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ದೇಶ ಭಾವಕ್ಯತೆಯನ್ನು ತನ್ನ ಉಸಿರನ್ನಾಗಿಸಿಕೊಳ್ಳಬೇಕಾದ ತುತರ್ು ಬಂದೊದಗಿದೆ. ವಿವಿಧತೆಯಲ್ಲಿ ಏಕತೆ ಹಿಂದೆಯೂ ಇತ್ತು ಮತ್ತು ಈಗಲೂ ಇದೆ ಆದರೆ ಅದನ್ನು ನಾಶಮಾಡುವ ಮತ್ತು ಏಕವ್ಯಕ್ತಿತ್ವದ ಒಂದು ಮಗ್ಗುಲಲ್ಲಿ ದೇಶವನ್ನು ಕಾಣಬೇಕೆಂಬ ಹುಸಿರಾಷ್ಟ್ರೀಯವಾದಗಳು ವಿಜೃಂಬಿಸುತ್ತಿರುವ ಈ ಕಾಲಘಟ್ಟದಲ್ಲಿ ಅಂತಹ ಮನಸ್ಥಿತಿಗಳನ್ನು ಎದುರಿಸುವ ಬಹುತ್ವದ ಮನಸ್ಥಿತಿಯ ಗಿರೀಶ್ ಕಾರ್ನಾಡ್ ಅವರ ವ್ಯಕ್ತಿತ್ವ ನಮಗೆ ಆದರ್ಶವಾಗಿ ಕಾಣುತ್ತದೆ.

ಕುವೆಂಪು ಹೇಳಿದ ಫೂರ್ಣದೃಷ್ಟಿಯ ಪರಿಕಲ್ಪನೆಯಲ್ಲಿ ಸಮಾಜದ ಉಳಿವು ಅಡಗಿದೆ ವಿಭಾಗಮಾಡಿ ನೋಡುವ ನಮ್ಮ ಮನಸ್ಸುಗಳಲ್ಲಿ ಸ್ವಾರ್ಥ, ರಾಜಕಾರಣ ಲಾಲಸೆ, ತುಂಬಿರುತ್ತದೆ. ಆದರೆ ಸಮಾಜವನ್ನು ಇಡಿಯಾಗಿ ಗ್ರಹಿಸಿದಾಗ ಪೂರ್ಣಭಾರತದ ಪರಿಕಲ್ಪನೆ ನಮಗೆ ಬರುತ್ತದೆ. ಕಾರ್ನಾಡ್ ರ ವ್ಯಕ್ತಿತ್ವ ಕೆಲವು ನಿಲುವುಗಳು ವಿವಾದಕ್ಕೆ ಈಡಗಿದ್ದು ಈ ಕಾರಣಗಳಿಗಾಗಿಯೇ. ಬಹುತ್ವದ ಸಮಾಜ ನಿರ್ಮಾಣ ಮಾಡುವಲ್ಲಿ ಕಾರ್ನಾಡ್ ರಂತಹ ವ್ಯಕ್ತಿತ್ವಗಳು ಸದಾ ಚಿಗುರುತ್ತಿರಲಿ ಎಂದು ಹಾರೈಸುತ್ತೇನೆ.

ರಾಷ್ಟ್ರಕವಿ ರವಿಂದ್ರನಾಥ ಟ್ಯಾಗೂರ್ ಅವರ ಒಂದು ಸಾಲು ನೆನಪಾಗುತ್ತದೆ. ಎಲ್ಲಿ ಮನಸ್ಸು ನಿತ್ಯವೂ ಹೊಸ ಯೋಚನೆ ಹಾಗೂ ಕ್ರಿಯೆಗಳೆಡೆಗೆ ಚಲಿಸುತ್ತಿರುವುದೋ, ಆ ಸ್ವಾತಂತ್ರ್ಯದ ಸ್ವರ್ಗಕ್ಕೆ ಓ ನನ್ನ ತಂದೆಯೇ ಈ ನನ್ನ ನಾಡನ್ನು ನಡೆಸು ಎಂಬ ಈ ಮಾತುಗಳು ಸದಾ ನನ್ನ ಎಚ್ಚರದಲ್ಲಿ ನಾನು ಧ್ಯಾನಿಸುತ್ತೇನೆ. ಕಳೆೆದುಕೊಳ್ಳುವುದು ಎಂದರೆ ಭೌತಿಕವಾದದ್ದು ಮಾತ್ರ ಗಳಿಸಿಕೊಂಡದ್ದು ಮಾನಸಿಕವಾದದ್ದು ಮಾತ್ರ ಎಂಬುದು ನನ್ನ ವಿಶ್ವಾಸ. ಈ ನನ್ನ ಪುಟ್ಟ ಬರಹದೊಂದಿಗೆ ಕಾನರ್ಾಡರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ.

ಸತ್ಯಮಂಗಲ ಮಹಾದೇವ, ಕವಿ ಹಾಗೂ ಸಾಂಸ್ಕೃತಿಕ ಚಿಂತಕರು



Leave a Reply

Your email address will not be published. Required fields are marked *

error: Content is protected !!