ಹಳೆಬೇರು ಹೊಸ ಚಿಗುರಿನ ಕಾರ್ನಾಡ್

667

ಗಿರೀಶ್ ಕಾರ್ನಾಡ್ ಅವರ ನಾಟಕಗಳ ಕುರಿತಾಗಿ ಖ್ಯಾತ ರಂಗಭೂಮಿ ನಿರ್ದೇಶಕರು ಹಾಗೂ ಸಾಹಿತಿಗಳಾದ ಯೋಗೇಶ ಮಾಸ್ಟರ್ ಅವರು ಬರೆದ ಲೇಖನ ಇಲ್ಲಿದೆ…

ಪುರಾಣ, ಐತಿಹ್ಯ ಮತ್ತು ಚರಿತ್ರೆಗಳ ಬೇರುಗಳಿಂದ ಸಮಕಾಲಿನ ವಿದ್ಯಮಾನಗಳನ್ನು, ದುಗುಡ ಮತ್ತು ತಲ್ಲಣಗಳನ್ನು ತಮ್ಮ ನಾಟಕಗಳ ಮೂಲಕ ಅವಲೋಕಿಸುತ್ತಿದ್ದ ಕಾರ್ನಾಡ್ ಸಲ್ಲುವುದೇ ಅವರ ಈ ಪ್ರಯೋಗಶೀಲತೆಯಿಂದಾಗಿ. ಎಲ್ಲಾ ಭಾಷೆಗಳಲ್ಲೂ ಹವ್ಯಾಸ ರಂಗಭೂಮಿಯು ಪ್ರಯೋಗಗಳಿಗೆ ಮತ್ತು ವರ್ತಮಾನದ ವಿದ್ಯಮಾನಗಳಿಗೆ ತೆರೆದುಕೊಳ್ಳುತ್ತಿದ್ದಾಗ ಕನ್ನಡ ರಂಗಭೂಮಿಯು ಯಾವ ರೀತಿಯಲ್ಲಿಯೂ ಹಿಂದೆ ಬೀಳಲಿಲ್ಲ. ಬದಲಾಗಿ ತನ್ನ ಪ್ರಯೋಗಶೀಲತೆ ಮತ್ತು ವಿಶ್ಲೇಷಣಾತ್ಮಕ ದೃಷ್ಟಿಕೋನಗಳಿಂದ ತನ್ನನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು. ಗಿರೀಶ್ ಕಾರ್ನಾಡ್ ಅವರ ಕೊಡುಗೆಯೂ ಈ ಗುರುತಿಸಿಕೊಳ್ಳುವಿಕೆಗೆ ಕಾಣ್ಕೆಗಳನ್ನು ಪ್ರಧಾನವಾಗಿಯೇ ನೀಡಿತು.

ಯಯಾತಿ ನಾಟಕದ ದೃಶ್ಯ

ಗಿರೀಶ್ ಕಾರ್ನಾಡ್ ನಾಟಕದಲ್ಲಿನ ಅಭಿರುಚಿ ಮತ್ತು ತಾದ್ಯಾತ್ಮತೆಯನ್ನು ತಮ್ಮ ತಂದೆ ತಾಯಿಯರಿಂದಲೇ ಪಡೆದಿದ್ದು. ಸಿರಸಿಯಲ್ಲಿದ್ದಾಗ ತಮ್ಮ ಶಾಲಾದಿನಗಳಲ್ಲಿಯೇ ನಾಟಕ ಮಂಡಲಿಗಳ ಪ್ರಭಾವಕ್ಕೆ ಒಳಗಾಗಿದ್ದರು. ಅದರಲ್ಲೂ ತಮ್ಮ ಹಳ್ಳಿಯಲ್ಲಿ ಯಕ್ಷಗಾನ ಮತ್ತು ಇತರ ಬಗೆಯ ನಾಟಕಗಳನ್ನು ಆಸಕ್ತಿಯಿಂದ ಗಮನಿಸಿದ್ದರು. ಅವುಗಳನ್ನು ಪ್ರಶಂಸಿಸುವುದರ ಮೂಲಕ ತಮ್ಮೊಳಗೆ ರಂಗಕರ್ಮಿಯನ್ನು ಆವಾಹಿಸಿಕೊಂಡಿದ್ದರು. ಮುಂದೆ ನಾಟಕಕಾರನಾಗಲು ಆಕ್ಸ್ ಫರ್ಡ್ ಯೂನಿವರ್ಸ್ ಸಿಟಿ ಪ್ರೆಸ್ಗೆ ರಾಜೀನಾಮೆ ನೀಡಿ ಮದ್ರಾಸಿನ ಹವ್ಯಾಸಿ ರಂಗತಂಡಗಳೊಂದಿಗೆ ತೊಡಗಿಸಿಕೊಂಡರು.

ತಲೆದಂಡ ನಾಟಕದ ದೃಶ್ಯ

ಅಲ್ಲಿಂದ ಮುಂದೆ ಗಿರೀಶ್ ತಮಗಿದ್ದ ಮನೋವೈಜ್ಞಾನಿಕ ವಿಶ್ಲೇಷಣೆಯ ಸಾಮರ್ಥ್ಯ, ಇತಿಹಾಸವನ್ನು ಮರುಪರಿಶೀಲಿಸುವ ದೃಷ್ಟಿಕೋನ ಎಲ್ಲವೂ ಕೂಡಾ ಭಿನ್ನ ಆಯಾಮಗಳಿಂದ ಪುರಾಣ, ಕಾವ್ಯ ಮತ್ತು ಇತಿಹಾಸದ ಘಟನೆಗಳನ್ನು ಒರೆಗೆ ಹಚ್ಚಿ ನೋಡುವಂತೆ ಮಾಡಿತು. ಅದರ ಪ್ರತಿಫಲನವನ್ನು ಯಯಾತಿ, ತುಘಲಕ್, ಹಯವದನ, ನಾಗಮಂಡಲ, ಅಗ್ನಿ ಮತ್ತು ಮಳೆ, ತಲೆದಂಡ ಮತ್ತು ಟಿಪ್ಪು ಕಂಡ ಕನಸು; ಈ ಎಲ್ಲಾ ನಾಟಕಗಳಲ್ಲಿ ಢಾಳಾಗಿ ಕಾಣುತ್ತದೆ.
ಕಾನರ್ಾಡರ ನಾಟಕಗಳಲ್ಲಿ ವಿಷಯ ಮತ್ತು ವಿದ್ಯಮಾನಗಳ ದಾಖಲೆಗಳಲ್ಲಿರುವ ವಿಚಾರವನ್ನು ಹೆಕ್ಕಿ ತೆಗೆಯುವ ಗುಣವಿದ್ದು, ಮುಂದೆ ಅವು ಪ್ರಸ್ತುತ ಅರಿವಿನಿಂದ ಗತಕಾಲದ ಬದುಕು ಮತ್ತು ಸಮಾಜದ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನದಂತೆ ತೋರುತ್ತದೆ. ಅಲ್ಲಿ ಬಂಡಾಯವೇನಿರುತ್ತಿರಲ್ಲ. ಆದರೆ, ಅವರು ಬೀರುವ ಕ್ಷ-ಕಿರಣವು ಆ ನೆಲೆಗಟ್ಟಿನಿಂದ ನೋಡಿರದಿದ್ದವರಿಗೆ ಬಂಡಾಯವೇನೋ ಎಂಬಂತೆ ತೋರುತ್ತದೆ.

ಸಮಾಜದಲ್ಲಿನ ಪೂರ್ವಾಗ್ರಹ ಪೀಡಿತ ಮನಸ್ಥಿತಿಗಳನ್ನು ಪುರಾತನ ಕೃತಿಗಳ ಬೇರಿನಿಂದಲೇ ಪ್ರಶ್ನೆಗಳನ್ನು ಚಿಗುರಿಸುವಂತೆ ಮಾಡುತ್ತಿದ್ದ ಕಾರ್ನಾಡ್ ಗೆ ವಿವಾದಗಳು ಬೆನ್ನತ್ತುತ್ತಿದ್ದವು. ಅವರ ಸ್ಪಷ್ಟ ನಿಲುವುಗಳು ಅವರ ತುಲುನಾತ್ಮಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನ ಹಾಗೂ ಅಭಿಪ್ರಾಯದಿಂದ ವ್ಯಕ್ತಿಗತವಾಗಿ ರೂಪುಗೊಳ್ಳುತ್ತಿದ್ದವು. ಹಾಗಾಗಿಯೇ ಅವರು ರವೀಂದ್ರನಾಥ ಟ್ಯಾಗೋರರನ್ನು ಒಳ್ಳೆಯ ನಾಟಕಕಾರನನ್ನಾಗಿ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ.
ಅವರ ರಂಗಭೂಮಿಯ ಪರಿಣಿತಿ ನಂತರ ಸಿನಿಮಾಗೆ ವಿಸ್ತರಿಸಿಕೊಂಡರೂ ಸಿನಿಮಾ ಕೂಡಾ ರಂಗಭೂಮಿಯ ರಂಗಿನಿಂದಲೇ ರಂಗೇರಿತ್ತು. ಸಹಜತೆ ಮತ್ತು ನಾಟಕೀಯತೆಗಳೆರಡನ್ನೂ ಕೂಡಾ ಸಮತೂಕದಿಂದ ನಿರ್ವಹಿಸಿದ್ದರು ಕಾರ್ನಾಡ್.

ತುಘಲಕ್ ನಾಟಕದ ದೃಶ್ಯ

ವಂಶವೃಕ್ಷ, ಕಾಡು, ತಬ್ಬಿಲಿಯು ನೀನಾದೆ ಮಗನೇ, ಒಂದಾನೊಂದು ಕಾಲದಲ್ಲಿ, ಚೆಲುವಿ, ಕಾನೂರು ಹೆಗ್ಗಡತಿ, ಉತ್ಸವ್; ಹೀಗೆ ಪಟ್ಟಿ ಬೆಳೆಯುತ್ತದೆ.
ಕನ್ನಡದ ದನಿಯನ್ನು ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಾಟಕಕಾರರಾಗಿ ಮತ್ತು ಸಿನಿಮಾಕಾರರಾಗಿ ಧ್ವನಿಸಿದ್ದ ಕಾರ್ನಾಡ್ ಬಹುಸಂಸ್ಕೃತಿಯ ಪ್ರತಿಪಾದಕರಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರದ ಗಟ್ಟಿ ದನಿಯಾಗಿದ್ದರು. ಹಾಗಾಗಿಯೇ ಸಹಜವಾಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಗತಿಪರ ಚಳವಳಿಯ ಮುಖ್ಯವಾದ ಧ್ವನಿಯಾಗಿಯೂ ನಮ್ಮೊಡನಿದ್ದರು.
ಭಾರತದ ಬಹುಮುಖಿ ಸಂಸ್ಕೃತಿಗೆ ಮಾನ್ಯತೆಯನ್ನು ನೀಡಿದ್ದ ಕಾರ್ನಾಡ್ ಭೈರವಿಯಲ್ಲಿ ಕೂಚುಪುಡಿ ನೃತ್ಯಪಟುವಾಗಿ, ಪಂಚಾಕ್ಷರಿ ಗವಾಯಿಯಲ್ಲಿ ಗವಾಯಿಗಳ ಗುರುಗಳಾಗಿ, ಸಂತ ಶಿಶುನಾಳ ಶರೀಫ್ ಚಿತ್ರದಲ್ಲಿ ಗುರು ಗೋವಿಂದ ಭಟ್ಟರಾಗಿ, ಶಂಕರಾಭರಣಂನ ಹಿಂದಿ ಅವತರಣಿಕೆಯಲ್ಲಿ ಸಂಗೀತಕಾರ ಶಂಕರಶಾಸ್ತ್ರಿಯಾಗಿ ಕಾಣಿಸಿಕೊಂಡಿರುವುದು ಕೆಲವು ಉದಾಹರಣೆಗಳು. ಅದರಲ್ಲೆಲ್ಲಾ ಹಿಂದೂ ಅಥವಾ ಭಾರತೀಯ ಸಂಸ್ಕೃತಿಯ ವಿವಿಧ ಮುಖಗಳನ್ನು ಮಾನ್ಯ ಮಾಡಿರುವುದೇ ಆಗಿತ್ತು. ಆದರೆ, ಏಕಸಂಸ್ಕೃತಿಯನ್ನು ಹೇರಿತ್ತಾ, ಹಿಂದೂ ಧರ್ಮವನ್ನು ರಾಜಕೀಯಗೊಳಿಸುವಂತ ವಿದ್ಯಮಾನಗಳನ್ನು ಅವರು ವಿರೋಧಿಸಿದಾಗ ಅವರ ಕೆಲಸ, ದೃಷ್ಟಿ, ಸಾಧನೆಗಳನ್ನು ತಿಳಿಯದವರು ಅತಾರ್ಕಿಕವಾದ ನಿಂದನೆಗಳನ್ನು ಮಾಡಿದ್ದರು.

ಅವರ ಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಮತ್ತು ಅಸಂಖ್ಯಾತ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಿಗಿಂದ ಮಿಗಿಲಾಗಿ ನಮಗೆ ಅವರು ಆಪ್ತವಾಗುವುದು ಅವರ ಅಭಿವ್ಯಕ್ತಿ ಸ್ವಾತಂತ್ರದ ಗಟ್ಟಿದನಿಯಿಂದ. ಪ್ರಗತಿಪರ ಮತ್ತು ಮುಕ್ತ ಸಂವಾದದ ಒಂದು ಧ್ವನಿ ಇಂದು ಮೌನವಾಗಿದೆ. ನಮಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಳವಳಿಯಲ್ಲಿ ಒಂದು ಕೂಗು ಇಲ್ಲವಾಯಿತು ಎಂಬ ಕೊರಗು ಸಧ್ಯಕ್ಕೆ ಕಾಡುತ್ತಿದೆ.

ಯೋಗೇಶ ಮಾಸ್ಟರ್, ಲೇಖಕರು

TAG


Leave a Reply

Your email address will not be published. Required fields are marked *

error: Content is protected !!