ರಾಹುಲ್ ಕನಸು ಭಗ್ನ..!

370

ಇಡೀ ದೇಶ ನಿರೀಕ್ಷಿಸುತ್ತಿದ್ದ ಎಕ್ಸಿಟ್ ಪೋಲ್ ಸಮೀಕ್ಷೆ ಬಂದಿದೆ. ಬಹುತೇಕ ಎಲ್ಲ ಸಮೀಕ್ಷೆಗಳಲ್ಲಿ ಎನ್ ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಅನ್ನೋ ಸ್ಪಷ್ಟ ಚಿತ್ರಣ ನೀಡಿವೆ. ಈ ಮೂಲಕ ನರೇಂದ್ರ ಮೋದಿ ಅವರ ಮುಂದಿನ ಹಾದಿ ಸುಗಮವಾಗಲಿದೆ ಅಂತಿವೆ ಖಾಸಗಿ ಸಂಸ್ಥೆಗಳ ಸಮೀಕ್ಷೆ. ಇದರ ಜೊತೆಗೆ ರಾಜ್ಯದಲ್ಲಿಯೂ ಬಿಜೆಪಿ ಮೇಲುಗೈ ಸಾಧಿಸುವುದರೊಂದಿಗೆ ಮೈತ್ರಿ ಸರ್ಕಾರಕ್ಕೆ ಹೊಡೆತ ಕೊಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಬಿಜೆಪಿ ನೇತೃತ್ವದ ಎನ್ ಡಿಎ ಪಕ್ಷ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಅಂತಾ ಬಹುತೇಕ ಸರ್ವೇಗಳಿಂದ ತಿಳಿದು ಬಂದಿದೆ. ಇದರಿಂದಾಗಿ ಕೇಸರಿ ಪಡೆಯ ನಾಯಕರಲ್ಲಿ ಗೆಲುವಿನ ಖುಷಿ ಎದ್ದು ಕಾಣುತ್ತಿದೆ. ಇದರ ಜೊತೆಗೆ ದೆಹಲಿ ಗದ್ದುಗೆ ಹಿಡಿಯಬೇಕು ಅಂದರೆ ಉತ್ತರ ಪ್ರದೇಶ ಗೆದ್ದರೆ ಅರ್ಧ ಗೆಲುವು ಪಕ್ಕಾ ಅನ್ನೋ ಮಾತಿದೆ. 2014ರಲ್ಲಿ 80ರಲ್ಲಿ ಬರೋಬ್ಬರಿ 71ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಅದು ಕಡಿಮೆ ಆಗುವ ಸಾಧ್ಯತೆ ಅನ್ನುತ್ತಿವೆ ಸಮೀಕ್ಷೆಗಳು.

ಟೈಮ್ಸ್‌ ನೌ ಮತದಾನೋತ್ತರ ಸಮೀಕ್ಷೆ ಪ್ರಕಾರ ಎನ್‌ಡಿಎ 306 ಲೋಕಸಭಾ ಸ್ಥಾನಗಳನ್ನು ಗೆದ್ದು ಮತ್ತೆ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ 132, ಇತರರ 104 ಸ್ಥಾನಗಳನ್ನು ಗೆಲ್ಲಲಿದ್ದಾರೆ. ಸಿವೋಟರ್‌ ಸಮೀಕ್ಷೆ ಪ್ರಕಾರ ಎನ್‌ಡಿ 287, ಯುಪಿಎ 128, ಇತರರು 127 ಕ್ಷೇತ್ರಗಳಲ್ಲಿ ಗೆಲ್ಲಲಿವೆ.

ಎಬಿಪಿ ಸಮೀಕ್ಷೆ ಪ್ರಕಾರ, ಎನ್‌ಡಿಎ 336, ಯುಪಿಎ-55, ಇತರೆ 148 ಕ್ಷೇತ್ರಗಳಲ್ಲಿ ಗೆಲ್ಲಲಿವೆ. ಪೋಲ್ ಆಫ್ ಪೋಲ್ಸ್‌ ಸಮೀಕ್ಷೆ ಪ್ರಕಾರ 296, ಯುಪಿಎ 127, ಇತರರು 120 ಸ್ಥಾನಗಳನ್ನು ಗೆಲ್ಲಲಿದ್ದಾರೆ. ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಎನ್‌ಡಿಎಗೆ 339-365, ಯುಪಿಎಗೆ 77-108, ಇತರರು 69-95 ಸ್ಥಾನಗಳನ್ನು ಗಳಿಸಲಿದ್ದಾರೆ. ನ್ಯೂಸ್ ಎಕ್ಸ್-ನೇಟಾ  ಪ್ರಕಾರ, ಎನ್‌ಡಿಎ 242, ಯುಪಿಎ 162, ಇತರರು 136 ಸ್ಥಾನಗಳನ್ನು ಗೆದ್ದುಕೊಳ್ಳಲಿದ್ದಾರೆ. ಹೀಗಾಗಿ ಇವರ ಪ್ರಕಾರ ಎನ್‌ಡಿಎಗೆ ಬಹುಮತ ಇಲ್ಲ. 

ಟೈಮ್ಸ್‌ ನೌ-ವಿಎಂಆರ್ ಸಮೀಕ್ಷೆ ಪ್ರಕಾರ, ಉತ್ತರ ಪ್ರದೇಶ 80 ಕ್ಷೇತ್ರಗಳ ಪೈಕಿ ಎನ್‌ಡಿಎ 58, ಮಹಾಘಟಬಂಧನ್ 20, ಯುಪಿಎ 2 ಹಾಗೂ ಮಹಾರಾಷ್ಟ್ರದಲ್ಲಿ 48 ಕ್ಷೇತ್ರಗಳ ಪೈಕಿ ಎನ್‌ಡಿಎ 38, ಯುಪಿಎ 10 ಸ್ಥಾನಗಳನ್ನು ಗೆಲ್ಲಲಿವೆ. ಬಿಹಾರದಲ್ಲಿ ಎನ್‌ಡಿಎ 30, ಯುಪಿಎ 10 ಸೀಟುಗಳನ್ನು ಗೆಲ್ಲಲಿವೆ ಅನ್ನೋ ಸಮೀಕ್ಷೆ ನೀಡಿವೆ. (ಸಮೀಕ್ಷೆ ಮಾಹಿತಿ ಕೃಪೆ: ವಿಕೆ ಪೇಪರ್)

ಇದೆಲ್ಲ ನೋಡಿದ್ರೆ, ರಾಹುಲ್ ಕನಸು ಈ ಬಾರಿ ನನಸಾಗಲ್ಲ ಅಂತಾ ಹೇಳಲಾಗ್ತಿದೆ. ಆದರೆ, ಮತದಾನೋತ್ತರ ಸಮೀಕ್ಷೆ ಎಷ್ಟರ ಮಟ್ಟಿಗೆ ನಿಜವಾದ ಫಲಿತಾಂಶ ನೀಡುತ್ತೆ ಅನ್ನೋ ಪ್ರಶ್ನೆ ಸದಾ ಇದ್ದೆ ಇದೆ. ಯಾಕಂದ್ರೆ, ಅನೇಕ ಸಾರಿ ಸಮೀಕ್ಷೆಗಳನ್ನ ಮೀರಿ ಮತದಾರ ಪ್ರಭು ತೀರ್ಪು ನೀಡಿದ್ದಾನೆ. ಹೀಗಾಗಿ ಈ ಬಾರಿ ಏನ್ ಬೇಕಾದರೂ ಆಗಬಹುದು ಅನ್ನೋ ಮಾತನ್ನ ತಳ್ಳಿ ಹಾಕುವಂತಿಲ್ಲ.




Leave a Reply

Your email address will not be published. Required fields are marked *

error: Content is protected !!