ಯುದ್ಧ ಯಾರಿಗೂ ಬೇಡ ಬುದ್ಧ ಬೇಕು: ಅಂಶಿ ಪ್ರಸನ್ನಕುಮಾರ

111

ಪ್ರಜಾಸ್ತ್ರ ಸುದ್ದಿ

ಮೈಸೂರು: ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರು ನಮಗೆ ಬೆಳಕು ತೋರಿದ್ದಾರೆ. ಹೀಗಾಗಿ ಯುದ್ಧ ಯಾರಿಗೂ ಬೇಡ. ಬುದ್ಧ ಬೇಕು ಎಂದು ಕನ್ನಡಪ್ರಭ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ‌ ಅಂಶಿ ಪ್ರಸನ್ನಕುಮಾರ್ ಹೇಳಿದರು.

ಶನಿವಾರ ಸಂಜೆ ಬುದ್ಧ ವಿಹಾರ ಸಭಾಭವನದಲ್ಲಿ ಖ್ಯಾತ ಗಾಯಕ ಲಕ್ಷ್ಮಿರಾಮ್ ಸಾರಥ್ಯದಲ್ಲಿ ತನುಮನ ಸಂಸ್ಥೆ ವತಿಯಿಂದ ನಡೆದ 2567ನೇ ಬುದ್ಧ ಪೂರ್ಣಿಮೆ, ಜಗ ನಡೆಯಲಿ ಬುದ್ಧನ ಕಡೆ ಸಂಗೀತ ಕಾರ್ಯಕ್ರಮ ಹಾಗೂ ಬುದ್ಧನಾಡ ಭೂಷಣ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬುದ್ಧ, ಬಸವಣ್ಣನವರು ನೀಡಿದ ಸಮಾನತೆಯ ತತ್ವ ಸಿದ್ಧಾಂತಗಳನ್ನು ಅಂಬೇಡ್ಕರ್ ಅವರು ಸಂವಿಧಾನತ್ಮಕವಾಗಿ ಮಾಡಿದರು. ಹೀಗಾಗಿ ಈ ಮೂವರು ನನಗೆ ದಾರಿದೀಪ ಎಂದರು. ಲಕ್ಷ್ಮಿರಾಮ್ ಅವರ ಈ ಕಾರ್ಯ ಮೆಚ್ಚುವಂತದ್ದು ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ನಾವು ಈಗ ಯಾವ ಭಾರತದಲ್ಲಿ ಇದ್ದೇವೆ ಅನ್ನೋದು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಮನುಷ್ಯ, ಮನುಷ್ಯತ್ವ ಇರುವ ಭಾರತದಲ್ಲಿ ಇಲ್ಲ. ಹೀಗಾಗಿ ಅಭದ್ರತೆ ಕಾಡುತ್ತಿದೆ ಎಂದರು. ಮಾನವೀಯತೆ, ಕಾಯಕ, ಅನುಭಾವ ದೊಡ್ಡದು. ಮಹಾತ್ಮರ ಆದರ್ಶಗಳನ್ನು ಕೊಂದ ಜಗತ್ತು ಜಾತಿ, ಧರ್ಮ, ಮತಾಂಧತೆ ಕಡೆ ಹೊರಟಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಎಪಿಎಂಸಿ ಮಾಜಿ ಉಪಾಧ್ಯಕ್ಷ ಚಿಕ್ಕಜವರಪ್ಪ, ನಾವು ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಪಾಲನೆ ಮಾಡಬೇಕಿದೆ. ಇದನ್ನು ಎಷ್ಟರ ಮಟ್ಟಿಗೆ ಜಾರಿಗೆ ತರುತ್ತೇವೆ ಅನ್ನೋದು ಸಹ ಮುಖ್ಯವಾಗುತ್ತೆ ಎಂದರು. ಲಕ್ಷ್ಮಿರಾಮ್ ನಡೆಸುತ್ತಿರುವ ಜಗ ನಡೆಯಲಿ ಬುದ್ಧನ ಕಡೆ ಸಂಗೀತ ಕಾರ್ಯಕ್ರಮ ಎಲ್ಲಡೆ ಪಸರಿಸಲಿ ಅಂತಾ ಹೇಳಿದರು.

ಈ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಬುದ್ಧನಾಡ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆ ಮೇಲೆ ಹಿನಕಲ್ ಸೋಮಣ್ಣ, ಎಸ್.ಪಿ ನಾರಾಯಣಸ್ವಾಮಿ, ಹೆಚ್.ಎಸ್ ಮಲ್ಲೇಶ್, ಚೆನ್ನವಡೆಯನಪುರ ಸಿದ್ದರಾಜು, ಎಂ.ಮಂಜುನಾಥ್, ಎಸ್.ಸಂತೋಷ್ ಸೇರಿ ಅನೇಕರು ಉಪಸ್ಥಿತಿರಿದ್ದರು.




Leave a Reply

Your email address will not be published. Required fields are marked *

error: Content is protected !!