2017ರಲ್ಲಿ ಬಿಜೆಪಿ ವಿರುದ್ಧ ಸಮರ.. 2022ರಲ್ಲಿ ಬಿಜೆಪಿ ಶಾಸಕರು..

133

ಪ್ರಜಾಸ್ತ್ರ ಸುದ್ದಿ

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸತತ 7 ಬಾರಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಐತಿಹಾಸಿಕ ದಾಖಲೆ ಬರೆದಿದೆ. 2022ರ ಚುನಾವಣೆಯಲ್ಲಿ ಸಾಕಷ್ಟು ಹೊಸ ಮುಖಗಳು ವಿಧಾನಸಭೆ ಪ್ರವೇಶ ಮಾಡುತ್ತಿವೆ. ಅದರಲ್ಲಿ ಬಹುಮುಖ್ಯವಾಗಿ 2017ರಲ್ಲಿ ಬಿಜೆಪಿ ವಿರುದ್ಧ ತೊಡೆ ತಟ್ಟಿದ ಯುವಕರು ಈಗ ಬಿಜೆಪಿ ಶಾಸಕರು.

ಗುಜರಾತಿನಲ್ಲಿ ಪಟೇದಾರ್ ಹಾಗೂ ಠಕೂರ್ ಸಮುದಾಯದ ಜನರು ಸಹ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ರಾಜಕೀಯವಾಗಿ ಇವರು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಜೊತೆಗೆ ದಲಿತರು ಹಾಗೂ ಹಿಂದುಳಿದ ವರ್ಗ ಜನರು. 2017ರಲ್ಲಿ ಬಿಜೆಪಿ ವಿರುದ್ಧ ಸಿಡಿದೆದ್ದ ಪಟೇದಾರ ಸಮುದಾಯದ ಯುವಕ ಹಾರ್ದಿಕ್ ಪಟೇಲ್, ಹಿಂದುಳಿದ ವರ್ಗದ ಅಲ್ಪೇಶ್ ಠಾಕೂರ್ ಬಿಜೆಪಿ ಸೇರಿ ಶಾಸಕರಾಗಿದ್ದಾರೆ.

ಅಲ್ಪೇಶ್, ಜಿಗ್ನೇಶ್, ಹಾರ್ದಿಕ್

ಪಟೇದಾರ್ ಸಮುದಾಯಕ್ಕೆ ಬಿಜೆಪಿಯಿಂದ ಆಗುತ್ತಿರುವ ಅನ್ಯಾಯದ ಬಗ್ಗೆ 2017ರಲ್ಲಿ ಬಹುದೊಡ್ಡ ಹೋರಾಟ ನಡೆಯಿತು. ಈ ವೇಳೆ ಸರಿಯಾಗಿ ಮೀಸೆ ಮೂಡದ 25 ವರ್ಷ ಸಹ ದಾಟದ ಹಾರ್ದಿಕ್ ಪಟೇಲ್ ಹೆಸರು ಚಾಲ್ತಿಗೆ ಬಂತು. ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯಿತು. ಈ ಯುವಕ ಕಾಂಗ್ರೆಸ್ ಸೇರಿದ. ನಂತರ ದೊಡ್ಡ ಸ್ಥಾನವನ್ನೇ ಕಾಂಗ್ರೆಸ್ ನೀಡಿತು. ಆದರೆ, ಹಲವು ಕಾರಣಗಳನ್ನು ನೀಡಿ ಜೂನ್, 2022ರಲ್ಲಿ ಬಿಜೆಪಿ ಸೇರಿದ 29 ವರ್ಷದ ಹಾರ್ದಿಕ್ ಪಟೇಲ್ ಡಿಸೆಂಬರ್ ನಲ್ಲಿ ಶಾಸಕನಾಗಿ ಹೊರ ಹೊಮ್ಮಿದ.

ಇನ್ನು ಹಿಂದುಳಿದ ವರ್ಗದ ಅಲ್ಪೇಶ್ ಠಾಕೂರ್, ರಾಧಾನ್ ಪುರ್ ಕ್ಷೇತ್ರದಿಂದ 2017ರಲ್ಲಿ ಗೆಲುವು ದಾಖಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಡಾ.ಹಿಂಪಾಸು ಪಟೇಲ್ ವಿರುದ್ಧ ದೊಡ್ಡ ಅಂತರದ ವಿಜಯ ಸಾಧಿಸಿದರು. ಈ ಕ್ಷೇತ್ರದಲ್ಲಿ ಠಾಕೂರ್ ಸಮುದಾಯದ ಪ್ರಾಬಲ್ಯ ಹೊಂದಿದೆ.

2011ರಲ್ಲಿ ಕ್ಷತ್ರೀಯ ಠಾಕೂರ್ ಸೇನಾ ಮೂಲಕ ಹಲವು ಹೋರಾಟಗಳನ್ನು ಮಾಡಿಕೊಂಡು ಬಂದ ಅಲ್ಪೇಶ್, 2017ಕ್ಕೂ ಪೂರ್ವದಲ್ಲಿ ಹಾಗೂ ನಂತರ ಬಿಜೆಪಿ ವಿರುದ್ಧ ಹೋರಾಡಿದವರು. ಪ್ರಧಾನಿ ಮೋದಿ ಮುಖದ ಕಾಂತಿಗಾಗಿ ದುಬಾರಿಯಾದ ಮಸ್ರೂಮ್(ಅಣಿಬೆ) ಬಳಕೆ ಮಾಡುತ್ತಾರೆ. ಇದಕ್ಕಾಗಿ ದಿನಕ್ಕೆ 4 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ ಎಂದು ಆರೋಪಿಸಿದ್ದರು. 2017ರಲ್ಲಿ ಕಾಂಗ್ರೆಸ್ ಸೇರಿ 2019ರಲ್ಲಿ ಹೊರ ಬಂದು ಬಿಜೆಪಿ ಸೇರಿ ಈಗ ಮತ್ತೊಮ್ಮೆ ಶಾಸಕರಾಗಿದ್ದಾರೆ. ಬಿಜೆಪಿ ವಿರುದ್ಧದ ಹೋರಾಟದ ಮೂಲಕ ಬೆಳಕಿಗೆ ಬಂದವರು ಈಗ ಅದೆ ಪಕ್ಷದಿಂದ ಶಾಸಕರಾಗಿದ್ದಾರೆ.

ಇನ್ನು ಇದೆ ಸಮಯದಲ್ಲಿ ಬೆಳಕಿಗೆ ಬಂದ ದಲಿತ ಸಮುದಾಯದ ಜಿಗ್ನೇಶ್ ಮೇವಾನಿ ಸ್ವತಂತ್ರ ಅಭ್ಯರ್ಥಿಯಾಗಿ ಶಾಸಕರಾದರು. ನಂತರ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿತು. ಜಿಗ್ನೇಶ್, ಹಾರ್ದಿಕ್, ಅಲ್ಪೇಶ್ ಬಿಜೆಪಿ ವಿರುದ್ಧ ದೊಡ್ಡ ಅಲೆ ಸೃಷ್ಟಿಸಿದ್ದರು. ಈಗ ಜಿಗ್ನೇಶ್ ತಮ್ಮ ತತ್ವ ಸಿದ್ಧಾಂತದಿಂದಾಗಿ ಏಕಾಂಗಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!