ರಾಹುಲ್ ಪಾದಯಾತ್ರೆಯಿಂದ ಬೆಚ್ಚಿತಾ ಬಿಜೆಪಿ?

347

ಪ್ರಜಾಸ್ತ್ರ ಡೆಸ್ಕ್

ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಐಕ್ಯತಾ ಯಾತ್ರೆ ನಡೆಸಲಾಗುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಪಾದಯಾತ್ರೆ ಸಾಗುತ್ತಿದೆ. ಒಟ್ಟು 3,570 ಕಿಲೋ ಮೀಟರ್ ಈ ಯಾತ್ರೆ ಸಾಗುತ್ತಿದೆ. 12 ರಾಜ್ಯಗಳಲ್ಲಿ ಸಾಗುವ ಯಾತ್ರೆಯು 150 ದಿನಗಳ ಕಾಲ ನಡೆಯಲಿದೆ.

ಸೆಪ್ಟೆಂಬರ್ 7ರಿಂದ ಪಾದಯಾತ್ರೆ ಶುರುವಾಗಿದ್ದು, 12 ರಾಜ್ಯಗಳು ಹೊರತು ಪಡಿಸಿ ನೆರೆಯ ರಾಜ್ಯಗಳ ರಾಜಕೀಯ ನಾಯಕರು, ಸಿನಿಮಾ, ಕ್ರೀಡಾ ತಾರೆಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಹೀಗೆ ಸಾಗುತ್ತಿರುವ ಪಾದಯಾತ್ರೆಗೆ ಎಲ್ಲಡೆಯಿಂದ ಭವ್ಯವಾದ ಸ್ವಾಗತ, ಸ್ಪಂದನೆ, ಪ್ರೀತಿ, ಭರವಸೆ ಸಿಕ್ಕಿದೆ.

ರಾಹುಲ್ ಗಾಂಧಿ ನಾಯಕತ್ವದಲ್ಲಿ ಹೊರಟಿರುವ ಪಾದಯಾತ್ರೆಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲಕ್ಕೆ ಬಿಜೆಪಿ ಬೆಚ್ಚಿತಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದರೆ, ಕರ್ನಾಟಕದಲ್ಲಿ ಯಾತ್ರೆ ಪ್ರವೇಶ ಮಾಡಿದ ದಿನದಿಂದ ಪತ್ರಿಕೆಗಳಲ್ಲಿ ಜಾಹೀರಾತುಗಳ ಮೂಲಕ ಕಾಂಗ್ರೆಸ್ ಮೇಲೆ ಮುಗಿಬೀಳುತ್ತಿದೆ. ಅದು ಎಷ್ಟರ ಮಟ್ಟಿಗೆ ಮುಂದುವರೆದಿದೆ ಎಂದರೆ, ಗುರುವಾರ ನಾಲ್ಕು ದಿನಪತ್ರಿಕೆಗಳಲ್ಲಿ ಬಂದಿರುವ ವಿಚಾರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ನಾಲ್ಕು ದಿನಪತ್ರಿಕೆಗಳಲ್ಲಿ ಒಂದೇ ತರನಾಗಿ ಬಂದಿರುವ ಸುದ್ದಿ ರೂಪದ ಜಾಹೀರಾತು ಎಂದು ಕಾಂಗ್ರೆಸ್ ನಾಯಕರು ಸೇರಿದಂತೆ ಕಾರ್ಯಕರ್ತರು, ಸಾರ್ವಜನಿಕರು ಸಹ ವಾಗ್ದಾಳಿ ನಡೆಸಿದ್ದಾರೆ. ಇದನ್ನು ಪ್ರಕಟಿಸಿದ ಪತ್ರಿಕೆಗಳನ್ನು ಸೇರಿದಂತೆ ಬಿಜೆಪಿ ವಿರುದ್ಧ ಕಿಡಿ ಕಾರಲಾಗುತ್ತಿದೆ. ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿ ಅಕ್ಷರಶಃ ಕಂಗೆಟ್ಟಿದ್ದು, ಈ ರೀತಿಯ ಅಪಪ್ರಚಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಬಿಜೆಪಿಯ ನಡೆ ಎದ್ದು ಕಾಣುತ್ತಿದೆ.

ಮಾಧ್ಯಮಗಳಲ್ಲಿ ಜಾಹೀರಾತು ಮೇಲೆ ಜಾಹೀರಾತುಗಳನ್ನು ಕೊಡುವ ಮೂಲಕ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯನ್ನು ಕಟ್ಟಿ ಹಾಕಬೇಕು ಎನ್ನುತ್ತಿದೆ. ಇದು ಬರೀ ಕರ್ನಾಟಕದಲ್ಲಿ ಮಾತ್ರವಲ್ಲ. ಎಲ್ಲಿ ಬಿಜೆಪಿ ಹಾಗೂ ಬಿಜೆಪಿ ಮೈತ್ರಿಯ ಸರ್ಕಾರವಿದೆಯೋ ಅಲ್ಲೆಲ್ಲ ಇದೆ ರೀತಿಯ ಜಾಹೀರಾತಿನ ಅಸ್ತ್ರ ಪ್ರಯೋಗಿಸುತ್ತಿದ್ದು, ಇದಕ್ಕೆ ಜನರೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಒಂದು ರೀತಿಯಲ್ಲಿ ರಾಹುಲ್ ಗಾಂಧಿ ನಾಯಕತ್ವದ ಪಾದಯಾತ್ರೆಯಿಂದ ಬಿಜೆಪಿ ಕಕ್ಕಾಬಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!