ಉದ್ಯಮಿಗಳ ಜೋಳಿಗೆ ತುಂಬುವವರ ಕಣ್ಣಿಗೆ ಎಲ್ಲರೂ ದೇಶದ್ರೋಹಿಗಳೆ!

366

ಪ್ರಜಾಸ್ತ್ರ ಸ್ಪೆಷಲ್ ಡೆಸ್ಕ್

ಸಂಸದ ಅನಂತಕುಮಾರ ಹೆಗಡೆ, ಬಿಎಸ್ಎನ್ಎಲ್ ಸಿಬ್ಬಂದಿಗಳೆಲ್ಲ ದೇಶದ್ರೋಹಿಗಳು ಎಂದು ಹೇಳಿದ್ದಾರೆ. ಇದು ಅನೇಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಸದರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಆದ್ರೆ, ಅನಂತಕುಮಾರ ಹೆಗಡೆ ಅವರಂತಹ ರಾಜಕಾರಣಿಗಳ ಬಾಯಿಯಿಂದ ಈ ರೀತಿಯ ಹೇಳಿಕೆಗಳನ್ನ ಬಿಟ್ಟು ಬೇರೇನು ನಿರೀಕ್ಷೆ ಮಾಡಲು ಸಾಧ್ಯ ಹೇಳಿ?

ಇಷ್ಟು ದಿನ ವಿಪಕ್ಷಗಳನ್ನ, ಬಿಜೆಪಿ ವಿರೋಧಿಗಳನ್ನ ದೇಶದ್ರೋಹಿಗಳೆಂದು ಹೇಳುತ್ತಿದ್ದರು. ಈಗ ಸರ್ಕಾರಿ ಸಂಸ್ಥೆಗಳನ್ನ, ಅಲ್ಲಿನ ಸಿಬ್ಬಂದಿಯನ್ನ ದೇಶದ್ರೋಹಿಗಳು ಎಂದು ಹೇಳ್ತಿದ್ದಾರೆ. ‘ಏಕ್ ಭಾರತ್ ಶ್ರೇಷ್ಠ ಭಾರತ್’ ಹೆಸರಿನಲ್ಲಿ ಕೇಂದ್ರ ಸರ್ಕಾರ ಒಂದೊಂದಾಗಿ ಸರ್ಕಾರಿ ಸಂಸ್ಥೆಗಳನ್ನ ಖಾಸಗಿಯವರ ತೆಕ್ಕೆಗೆ ಒಪ್ಪಿಸ್ತಿದೆ. ಇದನ್ನ ಪ್ರಶ್ನೆ ಮಾಡಿದ್ರೆ ದೇಶದ್ರೋಹಿಗಳು ಅನ್ನೋ ಮುದ್ರೆ ಒತ್ತಲು ಅನಂತಕುಮಾರ ಹೆಗಡೆ ಅಂತವರು ತುದಿಗಾಲ ಮೇಲೆ ನಿಂತಿದ್ದಾರೆ.

ಮೂರು ಹಂತದಲ್ಲಿ ಬ್ಯಾಂಕ್ ಗಳ ವಿಲೀನ ಆಯ್ತು, ವಿಶ್ವ ಮಟ್ಟದ ದರ್ಜೆಯ ಗುಣಮಟ್ಟದ ಹೆಸರಿನಲ್ಲಿ 150 ರೈಲು, 50 ರೈಲ್ವೆ ನಿಲ್ದಾಣಗಳನ್ನು ಖಾಸಗಿಯವರಿಗೆ ನೀಡುವ ಚಿಂತನೆ, ಏರ್ ಇಂಡಿಯಾವನ್ನ ಉದ್ಯಮಿಗಳ ಕಿಸೆಗೆ ಹಾಕುವ ತಯಾರಿ ನಡೆಯುತ್ತಿದೆ, ಒನ್ ನೇಷನ್ ಒನ್ ರೇಷನ್ ಕಾರ್ಡ್, ಒನ್ ನೇಷನ್ ಒನ್ ಟ್ಯಾಕ್ಸ್ ಚಿಂತನೆ ಜೋರಾಗಿದೆ. ಹೀಗೆ ಉಳ್ಳವರ ಕೈಗೆ ಸರ್ಕಾರಿ ಸಂಸ್ಥೆಗಳನ್ನ ಕೊಡಲು ಹೊರಟವರು ಶಿಕ್ಷಣವನ್ನ ಖಾಸಗೀಕರಣ ಮಾಡುವ ಹುನ್ನಾರವಿದೆ ಅನ್ನೋ ಆರೋಪ ಸಹ ಕೇಳಿ ಬಂದಿದೆ.

ಸಂಕಷ್ಟದಲ್ಲಿರುವ ಬಿಎಸ್ಎನ್ಎಲ್ ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಿ ಹೇಗೆ ಮೇಲೆತ್ತಬೇಕು ಅನ್ನೋ ಕಾರ್ಯಕ್ಕೆ ಮುಂದಾಗುವ ಬದಲು, ಅಲ್ಲಿರುವ ಸಿಬ್ಬಂದಿಗಳೆಲ್ಲ ದೇಶದ್ರೋಹಿಗಳು ಎಂದು ಹೇಳುವ ಮೂಲಕ ಇದನ್ನು ಸಹ ಉದ್ಯಮಿಗಳ ಜೋಳಿಗೆಗೆ ಹಾಕುವ ಉದ್ದೇಶ ಇರಬಹುದು ಅನ್ನೋ ಅನುಮಾನ ಮೂಡಿಸಿದೆ. ಒಂದು ವೇಳೆ ನಿಜವಾದ್ರೆ ಅಚ್ಚರಿ ಪಡಬೇಕಿಲ್ಲ! ಯಾಕಂದ್ರೆ, ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಸೂತ್ರ ವ್ಯವಸ್ಥಿತವಾಗಿ ಕೆಲಸ ಮಾಡ್ತಿದೆ.




Leave a Reply

Your email address will not be published. Required fields are marked *

error: Content is protected !!