ನಾಳೆ ಸಿಂದಗಿಗೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಆಗಮನ

231

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಸಿಂದಗಿ: 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಯಾತ್ರೆ, ಸಮಾವೇಶ ಭರಪೂರ ನಡೆದಿವೆ. ಹೀಗಾಗಿ ಎಲ್ಲಿ ನೋಡಿದರೂ ಬರೀ ರಾಜಕೀಯದ ಮಾತುಗಳು. ಕಾಂಗ್ರೆಸ್ ಪ್ರಜಾಧ್ವನಿ ಅನ್ನೋ ಬಸ್ ಯಾತ್ರೆ ನಡೆಸಿದೆ. ಇದು ಫೆಬ್ರವರಿ 11ರಂದು ಸಿಂದಗಿಗೆ ಆಗಮಿಸುತ್ತಿದೆ. ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಅನೇಕ ನಾಯಕರು ಆಗಮಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಸಿಂದಗಿ ಮತಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಅಹಿಂದ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣಕ್ಕೆ ಕಾಂಗ್ರೆಸ್ ಹಿಂದುಳಿದ ವರ್ಗದ ನಾಯಕರಿಗೆ ಟಿಕೆಟ್ ನೀಡುತ್ತಾ ಬಂದಿತ್ತು. ಆದರೆ, ಕಳೆದ ಕೆಲವು ಚುನಾವಣೆಗಳನ್ನು ಗಮನಿಸಿದರೆ ಕಾಂಗ್ರೆಸ್ ತೆಕ್ಕೆಯಿಂದ ಸಿಂದಗಿ ಮತಕ್ಷೇತ್ರ ದೂರ ಸರಿದಿದೆ. ಅದನ್ನು ವಾಪಸ್ ಪಡೆಯುವ ನಿಟ್ಟಿನಲ್ಲಿ ಇಲ್ಲಿನ ನಾಯಕರು ಸಜ್ಜಾಗಿದ್ದಾರೆ. ಆದರೆ, ಮತದಾರರ ಪ್ರಕಾರ ಸ್ಥಳೀಯ ನಾಯಕರಲ್ಲಿ ಒಗ್ಗಟ್ಟಿನ ಮಂತ್ರ ಗಟ್ಟಿಯಾಗಿಲ್ಲ. ಬಹಿರಂಗವಾಗಿ ಆಗಾಗ ಒಟ್ಟಿಗೆ ಕಾಣಿಸಿಕೊಂಡರೂ ತೆರೆಯ ಹಿಂದಿನ ಚದುರಂಗದಾಟ ಬೇರೆ ಇದೆ ಎನ್ನುತ್ತಿದ್ದಾರೆ.

ಇನ್ನು ಚುನಾವಣೆ ಬಂದ ಸಂದರ್ಭದಲ್ಲಿ ಕೇಳಿ ಬರುವ ಮೂಲ ಮುಖಂಡರಿಗೆ, ಬೆಂಬಲಿಗರಿಗೆ, ಕಾರ್ಯಕರ್ತರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಪಕ್ಷಕ್ಕಾಗಿ ಎಷ್ಟೇ ದುಡಿದರೂ ಕಡೆಗಣಿಸಲಾಗುತ್ತಿದೆ ಎಂದು ಹೇಳಿ ಬೇರೆ ಪಕ್ಷಗಳತ್ತ ಮುಖ ಮಾಡುವುದು. ಅದರಂತೆ ತಾಲೂಕಿನ ಕಾಂಗ್ರೆಸ್ ನಲ್ಲಿ ಪಕ್ಷಾಂತರ ಪರ್ವ ನಡೆದಿದೆ. ಟಿಕೆಟ್ ಯಾರಿಗೆ ಸಿಕ್ಕರೂ ಗೆಲುವಿಗೆ ಒಟ್ಟಿಗೆ ಶ್ರಮಿಸೋಣ ಅನ್ನೋ ಮನಸ್ಸು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿಲ್ಲ. ಪಕ್ಷ ಕೇಂದ್ರಿತ ಬೆಂಬಲಿಗರು, ಕಾರ್ಯಕರ್ತರಕ್ಕಿಂತ ವ್ಯಕ್ತಿ ಕೇಂದ್ರಿತ ಬೆಂಬಲಿಗರು, ಕಾರ್ಯಕರ್ತರ ಮುಸುಕಿನ ಗುದ್ದಾಟ ಹೆಚ್ಚಿದೆ ಅನ್ನೋದು ಜನರ ಮಾತು.

ಶನಿವಾರ ಸಿಂದಗಿಗೆ ಆಗಮಿಸುತ್ತಿರುವ ಸಿದ್ದರಾಮಯ್ಯನವರು ಇಲ್ಲಿಯ ನಾಯಕರಿಗೆ ಯಾವ ರೀತಿಯ ಸಲಹೆ, ಸೂಚನೆಗಳನ್ನು ನೀಡುತ್ತಾರೆ? ಆಂತರಿಕ ಮುನಿಸು, ಅಸಮಾಧಾನಗಳನ್ನು ಎಷ್ಟರ ಮಟ್ಟಿಗೆ ದೂರ ಮಾಡಿ 2023ರಲ್ಲಿ ಕಾಂಗ್ರೆಸ್ ಗೆಲ್ಲಲು ಶಕ್ತಿ ತುಂಬುತ್ತಾರೆ ಅನ್ನೋ ಪ್ರಶ್ನೆಯಿದೆ. ಯಾಕಂದ್ರೆ ಚುನಾವಣೆ ದಿನಾಂಕ ಅಧಿಕೃತವಾಗಿ ಘೋಷಣೆಯಾದ ಮೇಲೆ ಮಾಸ್ ಲೀಡರ್ ಗಳು ಪದೆಪದೆ ಇಲ್ಲಿ ಕಾಣಿಸಿಕೊಳ್ಳೋದು ಕಷ್ಟಸಾಧ್ಯ. ಹೀಗಾಗಿ ಸ್ಥಳೀಯ ನಾಯಕರ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳುತ್ತೆ. ಈ ಕಾರಣಕ್ಕೆ ಸ್ಥಳೀಯರ ನಾಯಕರ ನಡುವಿನ ಭಿನ್ನಾಭಿಪ್ರಾಯ ದೂರ ಆಗಬೇಕಿದೆ. ಪ್ರಜಾಧ್ವನಿ ಯಾತ್ರೆ ಬಂದು ಹೋದ ಮೇಲೆ ಕೈ ಪಾಳೆಯದಲ್ಲಿ ಏನು ಬದಲಾವಣೆಯಾಗುತ್ತೆ ಅನ್ನೋ ಕುತೂಹಲ ತಾಲೂಕಿನ ಜನರಲ್ಲಿದೆ.




Leave a Reply

Your email address will not be published. Required fields are marked *

error: Content is protected !!