ಸಿಂದಗಿಯಲ್ಲಿ ಅದ್ಧೂರಿಯಾಗಿ ನಡೆದ ಸಹಕಾರಿ ಸಪ್ತಾಹ

514

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದಲ್ಲಿ 70ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮ ಬುಧವಾರ ಅದ್ಧೂರಿಯಾಗಿ ನಡೆಯಿತು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು, ವಿಜಯಪುರ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ವಿಜಯಪುರ ಹಾಗೂ ಸಿಂದಗಿ ಪಟ್ಟಣದ ಸಹಕಾರ ಬ್ಯಾಂಕ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಬಸವೇಶ್ವರ ಸರ್ಕಲ್ ನಿಂದ ವಿವೇಕಾನಂದ ಸರ್ಕಲ್ ತನಕ ಮೆರವಣಿಗೆ ನಡೆಸಲಾಯಿತು. ನಂತರ ಹೆಚ್.ಜಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಧ್ವಜಾರೋಹಣ ನಡೆಸಲಾಯಿತು. ದೀಪ ಬೆಳಗುವ ಮೂಲಕ ಶಾಸಕ ಅಶೋಕ ಮನಗೂಳಿ ಸಹಕಾರಿ ಸಪ್ತಾಹಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಮನಗೂಳಿ, ಗ್ರಾಮೀಣ ಭಾಗದಿಂದ ಹಿಡಿದು ರಾಜ್ಯ ಮಟ್ಟದ ತನಕ ಪ್ರತಿಯೊಬ್ಬರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಸಹಕಾರಿ ಸಂಘಗಳ ಪಾತ್ರ ದೊಡ್ಡದಿದೆ. ಅದರಲ್ಲೂ ರೈತಾಪಿ ವರ್ಗದ ಜನತೆಗೆ ಇದರಿಂದ ಸಾಕಷ್ಟು ಅನುಕೂಲವಿದ್ದು, ಅವರ ಪ್ರಗತಿಗೆ ಸಹಕಾರಿ ಸಂಘಗಳ ಕೊಡುಗೆ ಅಪಾರ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಎಂ.ಎಸ್ ಪಾಟೀಲ, ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ನಿರ್ದೇಶಕಿ ಶೈಲಜಾ ಸ್ಥಾವರಮಠ ಮಾತನಾಡಿದರು. ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಗಮದ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ, ಸಿಂದಗಿ ಪಟ್ಟಣ ಸಹಕಾರ ಬ್ಯಾಂಕ್ ನಿಗಮದ ಉಪಾಧ್ಯಕ್ಷ ಪ್ರಕಾಶ ಕೋರಿ, ಸಿಂದಗಿ ಪಟ್ಟಣ ಸಹಕಾರ ಬ್ಯಾಂಕ್ ನಿಗಮದ ನಿರ್ದೇಶಕ ಶರಣಪ್ಪ ವಾರದ, ಸಿಂದಗಿ ಪಿಎಲ್ ಡಿ ಬ್ಯಾಂಕ್ ಆಡಳಿತಾಧಿಕಾರಿ ಎಂ.ಎಸ್ ರಾಠೋಡ, ಸಹಕಾರ ಅಭಿವೃದ್ಧಿ ಅಧಿಕಾರಿ ಲೀಲಾವತಿಗೌಡ, ನಿವೃತ್ತ ಉಪನ್ಯಾಸಕ ಎಸ್.ಎಸ್ ಪಾಟೀಲ, ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಸೇರಿ ಅನೇಕರು ಉಪಸ್ಥಿತರಿದ್ದರು. ಹೆಚ್.ಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ಆರ್ ಹೆಗ್ಗಣದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಬಿಸನಾಳ ನಿರೂಪಿಸಿದರು.




Leave a Reply

Your email address will not be published. Required fields are marked *

error: Content is protected !!