‘ದೋಸ್ತಿ’ಗೆ ವರ್ಷದ ಹರ್ಷವೋ.. ಸಂಘರ್ಷವೋ..!

433

ಇದೀಗ ಇಡೀ ದೇಶದ ಚಿತ್ತ ನಾಳೆಯ ‘ಲೋಕ’ ಸಮರದ ಫಲಿತಾಂಶದತ್ತ ನೆಟ್ಟಿದೆ. ಈಗಾಗ್ಲೇ ಎಲ್ಲ ನಾಯಕರುಗಳು, ನಾಳೆಯ ರಿಸಲ್ಟ್ ಬಳಿಕ ಮುಂದೇನು ಅನ್ನೋ ಪ್ಲಾನ್ ನಡೆಸಿದ್ದಾರೆ. ಈ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಬಹುದೊಡ್ಡ ಪರಿಣಾಮವನ್ನುಂಟು ಮಾಡುವುದು ಪಕ್ಕಾ. ಇಲ್ಲಿ ಇನ್ನೊಂದು ವಿಶೇಷ ಏನಪ್ಪ ಅಂದ್ರೆ, ನಾಳೆ ಮೈತ್ರಿ ಸರ್ಕಾರಕ್ಕೆ ಒಂದು ವರ್ಷ ತುಂಬಲಿದೆ. ಹೀಗಾಗಿ ದೋಸ್ತಿ ಸರ್ಕಾರಕ್ಕೆ ಸಿಹಿಯೋ ಕಹಿಯೋ ಅನ್ನೋ ಕುತೂಹಲ ಮೂಡಿದೆ.

ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. 2014ರ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ವು. ಆದರೆ, ಇದೀಗ ರಾಜ್ಯದ ಚಿತ್ರಣ ಬದಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ಹೀಗಾಗಿ 21 ರಲ್ಲಿ ಕಾಂಗ್ರೆಸ್ ಹಾಗೂ 7 ರಲ್ಲಿ ಜೆಡಿಎಸ್ ಸ್ಪರ್ಧಿಸಿವೆ. 27ರಲ್ಲಿ ಸ್ಪರ್ಧಿಸಿರುವ ಬಿಜೆಪಿ, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡಿದೆ. ಹೀಗಾಗಿ ಈ ಫಲಿತಾಂಶ ಮೈತ್ರಿ ಸರ್ಕಾರ ಹಾಗೂ ಬಿಜೆಪಿಗೆ ಶಕ್ತಿ ತುಂಬುತ್ತಾ.. ಉಲ್ಟಾ ಆಗುತ್ತಾ ಅನ್ನೋ ಟೆನ್ಷನ್ ಶುರುವಾಗಿದೆ.

ಕಲಬುರಗಿ, ಮಂಡ್ಯ, ತುಮಕೂರು, ಮೈಸೂರು, ಶಿವಮೊಗ್ಗ, ವಿಜಯಪುರ, ಬಳ್ಳಾರಿ ಕ್ಷೇತ್ರಗಳು ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದು, ಇಲ್ಲಿ ಘಟಾನುಘಟಿ ನಾಯಕರುಗಳು ನಿಂತಿದ್ದಾರೆ. ಸ್ಟಾರ್ ನಾಯಕರ ಹಣೆಬರಹ ಏನಾದ್ರೂ ಉಲ್ಟಾ ಆಯ್ತೋ ಹೊಸ ಅಲೆ ಬೀಸುವುದು ನಿಶ್ಚಿತ. ಆಗ ಬಿಜೆಪಿ ಸರ್ಕಾರ ಬರುತ್ತಾ? ವಿಧಾನಸಭೆ ವಿಸರ್ಜನೆ ಮಾಡಿ ಮತ್ತೆ ಚುನಾವಣೆಗೆ ಹೋಗಲಾಗುತ್ತಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.

ನಾಳೆ ಟೆನ್ಷನ್ (ಸಾಂದರ್ಭಿಕ ಚಿತ್ರ)

ಈಗಾಗ್ಲೇ, ಕೈ ಮತ್ತು ದಳಪತಿಗಳ ನಡುವೆ ಜಟಾಪಟಿ ನಡೆದಿದೆ. ಒಬ್ಬರ ಮೇಲೆ ಒಬ್ಬರು ಆರೋಪ, ಪ್ರತ್ಯಾರೋಪ ಮಾಡ್ತಾ, ಅಸಮಾಧಾನ ಹೊರ ಹಾಕ್ತಿದ್ದಾರೆ. ಇದರ ನಡುವೆಯೇ ನಿನ್ನೆ, ಕಾಂಗ್ರೆಸ್ ನಾಯಕ ರೋಷನ್ ಬೇಗ್ ಮುಸ್ಲಿಂರು ಅಗತ್ಯ ಬಿದ್ದರೆ ಬಿಜೆಪಿಗೆ ಬೆಂಬಲ ನೀಡಬೇಕು ಅಂತಾ ಹೇಳಿದ್ದಾರೆ. ಇದು ದೋಸ್ತಿ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಅತ್ತ ರಮೇಶ ಜಾರಕಿಹೊಳಿ ಸೈಲೆಂಟ್ ಕೈಗೆ ಟೆನ್ಷನ್ ನೀಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೇಸರಿ ಪಡೆಯ ನಾಯಕರು, ಆಪರೇಷನ್ ಕಮಲದ ಸುಳಿವು ನೀಡ್ತಿದ್ದಾರೆ. 20 ರಿಂದ 25 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಅಂತಾ ಉಮೇಶ್ ಜಾಧವ್ ಹೇಳಿದ್ದಾರೆ. ಇದು ದೋಸ್ತಿ ಸರ್ಕಾರ ಪತನಕ್ಕೆ ನೇರ ಕಾರಣವಾಗುತ್ತೆ.

ಈಗಾಗ್ಲೇ ಎಕ್ಸಿಟ್ ಪೋಲ್ ಸರ್ವೇ ಪ್ರಕಾರ ಕೇಂದ್ರದಲ್ಲಿ ಮತ್ತೆ ಎನ್ ಡಿಎ ಸರ್ಕಾರ ಬರುತ್ತೆ ಅಂತಾ ತಿಳಿದಿದೆ. ಹಾಗೇ, ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಹ ಸಿಗಲಿವೆ ಅನ್ನೋದು ಸಮೀಕ್ಷೆಯಿಂದ ತಿಳಿದು ಬಂದಿದೆ. ಒಂದು ವೇಳೆ ಬಿಜೆಪಿ 20 ಪ್ಲಸ್ ಸ್ಥಾನಗಳನ್ನು ಪಡೆದುಕೊಂಡದ್ದೆ ಆದಲ್ಲಿ, ದೋಸ್ತಿಗೆ ಪೆಟ್ಟು ಬೀಳುವುದು ಸತ್ಯ. ಹೀಗಾಗಿ ಬಿಜೆಪಿ ತೋಡುವ ಖೆಡ್ಡಾಗೆ ಬೀಳದಂತೆ ಕಾಂಗ್ರೆಸ್ ಶಾಸಕರನ್ನ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಿದೆ. ಇನ್ನು ಇದು ಎಕ್ಸಿಟ್ ಪೋಲ್.. ಎಕ್ಸೆಟ್ ಪೋಲ್ ಅಲ್ಲ ಅಂತಾ ಹೇಳಿರುವ ಸಿಎಂ ಕುಮಾರಸ್ವಾಮಿ, ಇದರಿಂದ ಮೈತ್ರಿ ಸರ್ಕಾರಕ್ಕೆ ವಿಘ್ನ ಇಲ್ಲ ಎಂದಿದ್ದಾರೆ. ಈ ಎಲ್ಲ ಅಂಶಗಳನ್ನ ಗಮನಿಸಿದಾಗ, ವರ್ಷದ ಹರ್ಷದಲ್ಲಿ ಇರುವ ದೋಸ್ತಿ ಸರ್ಕಾರ ಭದ್ರವಾಗಿರುತ್ತಾ ಛಿದ್ರವಾಗುತ್ತಾ ಅನ್ನೋ ಪ್ರಶ್ನೆಗೆ ಆದಷ್ಟು ಬೇಗ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!