ದೇಶದ ಜನರಿಗಾಗಿ ಈ ಯಾತ್ರೆ ಮಾಡಿದೆ: ರಾಹುಲ್ ಗಾಂಧಿ

281

ಪ್ರಜಾಸ್ತ್ರ ಸುದ್ದಿ

ಶ್ರೀನಗರ: ಬರೋಬ್ಬರಿ 3 ತಿಂಗಳ ಕಾಲ ದೇಶದ ತುಂಬಾ ಕಾಲ್ನಡಿಗೆಯ ಮೂಲಕ ಸಂಚಾರ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ತಂಡದ ಭಾರತ್ ಜೋಡೋ ಯಾತ್ರೆ ಜನವರಿ 30ರಂದು ಕಣಿವೆ ನಾಡಿನಲ್ಲಿ ಮುಕ್ತಾಯಗೊಂಡಿತು. ಮಳೆಯಂತೆ ಸುರಿಯುತ್ತಿರುವ ಮಂಜಿನ ನಡುವೆಯೇ ನಿಂತುಕೊಂಡು ಒಂದು ಅಭೂತಪೂರ್ವ ಗೆಲುವಿಗೆ ಸಾಕ್ಷಿಯಾದರು.

ಸಮಾರೋಪ ಸಮಾರಂಭ ಉದ್ದೇಶಿ ಮಾತನಾಡಿದ ರಾಹುಲ್ ಗಾಂಧಿ, ಈ ಯಾತ್ರೆಯನ್ನು ನನಗಾಗಿ, ಕಾಂಗ್ರೆಸ್ ಪಕ್ಷಕ್ಕಾಗಿ ಮಾಡಲಿಲ್ಲ. ದೇಶದ ಜನರಿಗಾಗಿ ಮಾಡಿದೆ. ದೇಶದ ಬುನಾದಿಯನ್ನು ನಾಶ ಮಾಡುತ್ತಿರುವ ಸಿದ್ಧಾಂತಗಳ ವಿರುದ್ಧದ ಹೋರಾಟವಾಗಿ ಈ ಯಾತ್ರೆ ಮಾಡಿದೆ ಎಂದರು.

ಬಿಜೆಪಿಯವರು ಈ ಯಾತ್ರೆಯ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಇದನ್ನು ಅವರಿಂದ ಮಾಡಲು ಸಾಧ್ಯವಿಲ್ಲ. ಅವರು ಹೆದರಿದ್ದಾರೆ. ನಾವು ಇಲ್ಲಿ ಸಂಚರಿಸಿದ್ದಂತೆ ಬಿಜೆಪಿಯವರು ಇಲ್ಲಿ ಯಾತ್ರೆಯನ್ನು ಮಾಡಿಲಿ ನೋಡೋಣ ಅಂತಾ ಸವಾಲು ಹಾಕಿದರು. 135 ದಿನಗಳ ಯಾತ್ರೆಯ ಮುಕ್ತಾಯ ಕಾರ್ಯಕ್ರಮವನ್ನು ಶೇರ್ ಐ ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಎಡಪಂಥೀಯ ಸುಮಾರು 21 ಪಕ್ಷಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಕೆಲವು ಮುಖಂಡರು ಭದ್ರತೆಯ ವಿಚಾರಕ್ಕೆ ಸಂಬಂಧಿಸಿದಂತೆ ಭಾಗವಹಿಸಲಿಲ್ಲ. ಟಿಎಂಸಿ, ಎಸ್ಪಿ, ಟಿಡಿಪಿ ಸೇರಿ ಕೆಲ ಪಕ್ಷಗಳ ಮುಖಂಡರು ಈ ವೇಳೆ ಭಾಗವಹಿಸಿರಲಿಲ್ಲ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ, ಎಐಸಿಸಿಯ ವಿವಿಧ ಪದಾಧಿಕಾರಿಗಳು, ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್, ಎನ್ ಸಿಪಿ ನಾಯಕ ಶರದ್ ಪವಾರ್, ಆರ್ ಜೆಡಿಯ ತೇಜಸ್ವಿ ಯಾದವ್, ಜೆಡಿಯುನ ನಿತೀಶ್ ಕುಮಾರ್, ಶಿವಸೇನೆಯ ಉದ್ಧವ್ ಠಾಕ್ರೆ, ಸಿಪಿಐ, ಸಿಪಿಎಂ, ವಿಸಿಕೆ, ಪಿಡಿಪಿಯ ಮೆಹಬೂಬ್ ಮುಫ್ತಿ, ಜಾರ್ಖಾಂಡ್ ಮುಕ್ತಿ ಮೋರ್ಚಾದ ಸೈಬು ಸೂರೆನ್ ಸೇರಿದಂತೆ ಹಲವು ಪಕ್ಷಗಳ ಮುಖಂಡರು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.

ಯಾತ್ರೆ ಸಾಗಿ ಬಂದ ಹಾದಿ..

ಸೆಪ್ಟೆಂಬರ್ 7, 2022ರಂದು ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಶುರು ಮಾಡಲಾಯಿತು. ಒಟ್ಟು 3,970 ಕಿಲೋ ಮೀಟರ್ ಗಳ ಹಾದಿಯಲ್ಲಿ 12 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾಯ್ದು ಕಾಶ್ಮೀರವನ್ನು ಜನವರಿ 30ರಂದು ತಲುಪಿ ಸಮಾಪ್ತಿಗೊಳಿಸಲಾಯಿತು.

ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು 100 ಸಭೆಗಳನ್ನು, 13 ಮಾಧ್ಯಮ ಸಂವಾದ, ಪಾದಯಾತ್ರೆಯ ಜೊತೆ ಜೊತೆಗೆ 275 ಸಂವಾದಗಳನ್ನು ನಡೆಸಿದ್ದಾರೆ. ಇದರಲ್ಲಿ ಸಾರ್ವಜನಿಕರನ್ನು ಒಳಗೊಂಡಂತೆ ನಡೆಸಿಕೊಂಡು ಬರಲಾಗಿದೆ. ಈ ಯಾತ್ರೆ ಶತಮಾನಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಅನ್ನೋ ಆಲದ ಮರಕ್ಕೆ ಎಷ್ಟು ಶಕ್ತಿ ನೀಡಿರುತ್ತೆ, ನೀಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!